ಏನಿದು ಬಿಳಿ, ಗುಲಾಬಿ, ಕೆಂಪು ಮತ್ತು ಹಸಿರು ಬಂಗಾರ?
ಬಂಗಾರವೆಂದರೆ ಹಳದಿ ಲೋಹ. ಹಳದಿ ಲೋಹದ ಮೋಹ ಭಾರತೀಯ ಮಹಿಳೆಯರಿಗೆ ಈಗಿನದ್ದಲ್ಲ, ಪುರಾತನ ಕಾಲದಿಂದಲೂ ಇದೆ. ಬಂಗಾರಕ್ಕೆ ಈಗ ಬಂಗಾರದ ಬೆಲೆ ಬಂದಿದೆ!!. ಕೊರೋನಾ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಬಳಿಕ ಬಂಗಾರದ ದರ ಗಗನಕ್ಕೆ ಏರಿದೆ. ಬಂಗಾರದ ಬಣ್ಣ ಹಳದಿ. ಆದರೆ ಇದೇನು ಬಿಳಿ, ಗುಲಾಬಿ, ಕೆಂಪು, ಹಸಿರು ಬಂಗಾರ?
ಆಶ್ಚರ್ಯವಾದರೂ ಸತ್ಯ ಸಂಗತಿಯನ್ನು ನಾನಿಂದು ನಿಮಗೆ ಹೇಳ ಬಯಸುವೆ.
ಬಂಗಾರ ಯಾವತ್ತೂ ಹಳದಿ ಬಣ್ಣದಲ್ಲೇ ಇರುತ್ತದೆ. ಆದರೆ ಈ ಹಳದಿ ಲೋಹಕ್ಕೆ ಬೇರೆ ಲೋಹಗಳನ್ನು ಸೇರಿಸಿ ಅದರ ಬಣ್ಣವನ್ನು ಬದಲಾಯಿಸುತ್ತಾರೆ.
ಬಿಳಿ ಬಂಗಾರ: ಹಲವರು ಪ್ಲಾಟಿನಂ ಲೋಹವನ್ನು ಬಿಳಿ ಬಂಗಾರವೆಂದು ಕರೆಯುದುಂಟು. ಆದರೆ ನಾವಿಲ್ಲಿ ಹೇಳುತ್ತಿರುವುದು ನೈಜ ಬಂಗಾರದ ಬಗ್ಗೆ. ನಿಜಕ್ಕೂ ನೋಡಲು ಹೋದರೆ ಬಿಳಿ ಬಣ್ಣದ ಬಂಗಾರವಿರುವುದಿಲ್ಲ. ಬೇರೆ ಬೇರೆ ಬಣ್ಣದ ಬಂಗಾರದ ಉತ್ಪಾದನೆ ಕೃತಕವಾಗಿ ಮಾಡಲಾಗುತ್ತದೆ. ಅಪರಂಜಿ ಚಿನ್ನ ಅಂದರೆ ೨೪ ಕ್ಯಾರೆಟ್ ಬಂಗಾರಕ್ಕೆ ನಿಕ್ಕೆಲ್, ಮ್ಯಾಂಗನೀಸ್ ಅಥವಾ ಪೆಲಾಡಿಯಂ (palladium) ಲೋಹಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿದರೆ ಬಂಗಾರದ ಬಣ್ಣ ಬಿಳಿಯಾಗಿ ಪರಿವರ್ತನೆಯಾಗುತ್ತದೆ. ಒಂದು ಅಥವಾ ಎರಡು ಬಗೆಯ ಲೋಹಗಳನ್ನು ಬೆರೆಸಿದಾಗ ಬಣ್ಣ ಮತ್ತು ಗುಣದಲ್ಲೂ ಬದಲಾವಣೆ ಕಾಣಬಹುದು. ನಾವು ಯಾವ ಲೋಹವನ್ನು ಬಂಗಾರದೊಡನೆ ಬೆರೆಸಲು ಬಳಸುತ್ತೇವೆಯೋ ಎನ್ನುವುದರ ಮೇಲೆ ಅದರ ಗುಣ ಲಕ್ಷಣಗಳು ನಿರ್ಧಾರವಾಗುತ್ತವೆ. ಉದಾಹರಣೆಗೆ ನಿಕ್ಕೆಲ್ ಎಂಬ ಲೋಹವನ್ನು ಬೆರೆಸಿದರೆ ಅಪರಂಜಿ ಬಂಗಾರದ ಗಟ್ಟಿತನ ಅಧಿಕವಾಗುತ್ತದೆ. ಅದು ಬಲಶಾಲಿಯಾಗುತ್ತದೆ. ಈ ರೀತಿ ಮಾಡುವುದರಿಂದ ಅದನ್ನು ಉಂಗುರ ಹಾಗೂ ಸೂಜಿಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಅದೇ ರೀತಿ ಪೆಲಾಡಿಯಂ ಎಂಬ ಲೋಹವನ್ನು ಬೆರೆಸಿದರೆ ಅದು ಇನ್ನಷ್ಟು ಮೃದುವಾಗುತ್ತದೆ. ಇದನ್ನು ಬಳಸಿ ಹವಳಗಳನ್ನು ಅಥವಾ ಮುತ್ತುಗಳನ್ನು ಕಟ್ಟ ಬಹುದು. ಹೀಗೆ ವಿವಿಧ ಲೋಹಗಳನ್ನು ಬಳಸುವುದರಿಂದ ಬಂಗಾರದ ಬಣ್ಣದ ಜೊತೆಗೆ ಅದರ ಗುಣ ಲಕ್ಷಣಗಳೂ ಬದಲಾಗುತ್ತವೆ.
ಗುಲಾಬಿ ಮತ್ತು ಕೆಂಪು ಬಂಗಾರ: ಮೇಲೆ ತಿಳಿಸಿದ ರೀತಿಯಲ್ಲೇ ಇಲ್ಲಿ ಬಳಸಿದ ಲೋಹ ತಾಮ್ರ. ತಾಮ್ರವನ್ನು ನಾವು ಎಷ್ಟು ಪ್ರಮಾಣದಲ್ಲಿ ಬಳಸುತ್ತೇವೆ ಎಂಬುವುದರ ಮೇಲೆ ಅದರ ವರ್ಣ ನಿರ್ಧಾರವಾಗುತ್ತದೆ. ಅಧಿಕ ಪ್ರಮಾಣದಲ್ಲಿ ತಾಮ್ರವನ್ನು ಬಂಗಾರದೊಂದಿಗೆ ಮಿಶ್ರ ಮಾಡಿದರೆ ಆ ಮಿಶ್ರಣದ ಬಣ್ಣ ಗಾಢವಾಗುತ್ತಾ ಹೋಗುತ್ತದೆ. ೭೫ ಶೇಕಡಾ ಚಿನ್ನ ಹಾಗೂ ೨೫ ಶೇಕಡಾ ತಾಮ್ರ ಬಳಸಿದರೆ ಅದರ ಬಣ್ಣವು ಗುಲಾಬಿ ವರ್ಣವಾಗುತ್ತೆ. ಅದೇ ರೀತಿ ಎರಡೂ ಲೋಹಗಳನ್ನು ಸರಿ ಸಮಾನ ಪ್ರಮಾಣದಲ್ಲಿ ಬಳಸಿದರೆ ಕೆಂಪಾದ ಬಂಗಾರ ಸಿಗುತ್ತದೆ. ಸುಮಾರು ೧೯ನೇ ಶತಮಾನದಲ್ಲಿ ರಷ್ಯಾದಲ್ಲಿ ಗುಲಾಬಿ ಬಂಗಾರದ ಆಭರಣಗಳು ಫ್ಯಾಷನ್ ಆಗಿದ್ದವು. ಕ್ರಮೇಣ ಇದು ಪ್ರಪಂಚದಾದ್ಯಂತ ಹರಡಿತು. ಈಗ ಎಲ್ಲೆಡೆ ಗುಲಾಬಿ ಬಂಗಾರವನ್ನು ನೆಕ್ಲೇಸ್, ಬ್ರಾಸ್ ಲೇಟ್, ಕಿವಿಯ ಓಲೆಗಳು ಮತ್ತು ಉಂಗುರಗಳನ್ನು ತಯಾರಿಸಲು ಅಧಿಕವಾಗಿ ಬಳಸುತ್ತಾರೆ.
ಹಸಿರು ಬಂಗಾರ: ಇದೊಂದು ರೀತಿಯ ರಜತ ಮತ್ತು ತಾಮ್ರದ ಮಿಶ್ರಣದಿಂದ ತಯಾರಾದ ಬಂಗಾರ. ೧೮ ಕ್ಯಾರೇಟ್ ನ ಈ ಹಸಿರು ಬಂಗಾರವನ್ನು ತಯಾರಿಸಲು ೭೫ ಶೇ. ಬಂಗಾರ ಮತ್ತು ೨೫ ಶೇ. ರಜತವನ್ನು ಉಪಯೋಗಿಸುತ್ತಾರೆ. ಆಗ ಹಸಿರು ಮಿಶ್ರಿತ ಹಳದಿ ಲೋಹ ಸಿಗುತ್ತದೆ. ಬಹುತೇಕ ಹಸಿರು ಬಂಗಾರದ ಲೋಹಗಳು ಮೃದುವಾಗಿರುತ್ತವೆ. ಇದನ್ನು ಅಲಂಕಾರಿಕ ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.
ಚಿತ್ರಗಳು: ಅಂತರ್ಜಾಲ ಕೃಪೆ.
ಚಿತ್ರ ೧. ಕೆಂಪು ಬಂಗಾರಕ್ಕೆ ಬಳಸುವ ತಾಮ್ರ ಲೋಹ
ಚಿತ್ರ ೨. ಹಸಿರು ಬಂಗಾರದ ಹರಳುಗಳು