ಒಂದು ಒಳ್ಳೆಯ ನುಡಿ (212) - ಹಳ್ಳಿ ಜೀವನ

ಒಂದು ಒಳ್ಳೆಯ ನುಡಿ (212) - ಹಳ್ಳಿ ಜೀವನ

ಸುತ್ತ-ಮುತ್ತಲೂ ಹಚ್ಚ ಹಸಿರಿನ ನಡುವೆ ಪುಟ್ಟ ಗುಡಿಸಲಿನಲ್ಲಿ ಬದುಕುವುದು ಎಷ್ಟು ಖುಷಿ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಹಳ್ಳಿಯಲ್ಲಿ ಸಿಗುವಷ್ಟು ಸಂತೋಷ ನಮ್ಮ ಪೇಟೆಯಲ್ಲಿ ಸಿಗಲಿಕ್ಕಿಲ್ಲ. ಹಳ್ಳಿಗರು ತೋರುವ ಪ್ರೀತಿಗೆ ಬೆಲೆ ಕಟ್ಟಲಾಗದು. ಕಷ್ಟವಿದ್ದಾಗ ಒಬ್ಬರಿಗೊಬ್ಬರು ಸಹಾಯ ಮಾಡಿ ಅನ್ಯೋನ್ಯತೆಯಿಂದ ಬಾಳುತ್ತಾರೆ. ಏನೇ ಹೇಳಿದರೂ ಹಳ್ಳಿ ಜೀವನ ತುಂಬಾ ಚಂದ. ಸಂಜೆಯ ವೇಳೆ ಬೀಸುವ ತಂಪಾದ ಗಾಳಿಗೆ ಕೂತರೆ ಇಡೀ ದಿನದ ಜಂಜಾಟವನ್ನು ಮರೆತು ಬಿಡುತ್ತಾರೆ. ಮನೆಯವರೆಲ್ಲಾ ಒಟ್ಟಿಗೆ ಗದ್ದೆ ಕೆಲಸಕ್ಕೆ ಹೋಗುತ್ತಾರೆ.

ಇನ್ನು ಮಳೆಗಾಲದಲ್ಲಿ ಹಳ್ಳಿಗರ ಖುಷಿಗೆ ಪಾರೇ ಇಲ್ಲ ಬಿಡಿ... ಮಳೆ ಬಂದ ತಕ್ಷಣ ಅತ್ತ ಗಂಡಸರು ಎತ್ತುಗಳನ್ನು ಹೊಡೆಯುತ್ತಾ ಗದ್ದೆ ಉಳುತ್ತಿದ್ದರೆ ಇತ್ತ ಹೆಂಗಸರೆಲ್ಲಾ ಒಟ್ಟಿಗೆ ಸೇರಿ ಪೈರು ನಾಟಿ ಮಾಡುತ್ತಿರುತ್ತಾರೆ. ನಾಟಿ ಮಾಡುವಾಗ ಅವರು ಮನರಂಜನೆಗೆ ಹಾಡುವ ಜಾನಪದ ಗೀತೆಗಳನ್ನು ಕೇಳುವುದೇ ಒಂದು ಖುಷಿ. ಸಂಜೆ ಹೊತ್ತು ಎಲ್ಲರೂ ಮನೆಯಲ್ಲಿ ಒಟ್ಟು ಸೇರಿ ಆಟ ಆಡುತ್ತಾರೆ. ಏನೂ ಕಲಿಯದಿದ್ದರೂ ಅವರು ವಿಜ್ಞಾನ, ರಾಜಕೀಯದ ಬಗ್ಗೆ ಬಹಳ ತಿಳಿದುಕೊಂಡಿದ್ದಾರೆ. ಇನ್ನೂ ಮಕ್ಕಳೆಲ್ಲಾ ಶಾಲೆಗೆ ಹೋಗಿ ಬಂದು ಅಕ್ಕ-ಪಕ್ಕದ ಗೆಳೆಯರ ಜೊತೆ ಬೀದಿಯಲ್ಲಿ ಆಡುತ್ತಾರೆ. ಹಳ್ಳಿ ಮನೆಗಳಲ್ಲಿ ಪ್ರೀತಿ ತುಂಬಿರುತ್ತದೆ. ಅವರಲ್ಲಿರುವ ಒಗ್ಗಟ್ಟನ್ನು ಯಾರೂ ಬಿಡಿಸಲು ಸಾಧ್ಯವಿಲ್ಲ. ರಾತ್ರಿ ಹೊತ್ತು ಎಲ್ಲರೂ ಒಟ್ಟಿಗೆ ಕೂತು ಇರುವುದರಲ್ಲಿಯೇ ಹಂಚಿ ಊಟ ಮಾಡುತ್ತಾರೆ. ಹಳ್ಳಿಯಲ್ಲಿ ಸಿಗುವಷ್ಟು ಪ್ರೀತಿ, ಮಮತೆ ಬೇರೆ ಎಲ್ಲಿಯೂ ಸಿಗಲಿಕ್ಕಿಲ್ಲ. 

-ಆಯುಷಿ ನಾಯಕ್

ಚಿತ್ರ ಕೃಪೆ: ಇಂಟರ್ನೆಟ್ ತಾಣ