ಒಡ್ಡೋಲಗ
ಕವನ
ಬನ್ನಿರಿ ನೋಡಿರಿ ಆನಂದಿಸಿರಿ
ಪ್ರಚಾರ ಧ್ವನಿವರ್ಧಕದ ವೈಖರಿ|
ಝಗಮಗಿಸುವ ವೇದಿಕೆಯ ನೋಟದೈಸಿರಿ
ಹದಿನಾಲ್ಕು ಲೋಕಗಳ ಸೃಷ್ಟಿಯ ಲಹರಿ||
ಚೆಂಡೆ ಮದ್ದಳೆ ತಾಳಗಳ ಮೋದ
ಭಾಗವತರ ಆಲಾಪನೆಯ ನಿನಾದ|
ಸಂಗೀತ ಪೆಟ್ಟಿಗೆಯ ಶ್ರುತಿಯ ನಾದ
ಶುದ್ಧ ಕನ್ನಡಮ್ಮನ ನುಡಿ ವಾದ||
ರಾಜ ಕಿರೀಟ ಪುಂಡು ವೇಷಗಳ ಪ್ರವೇಶ
ಭಲ್ಲಿರೇನಯ್ಯ ಒಡ್ಡೋಲಗ ಗತ್ತು ಗಾಂಭೀರ್ಯ|
ಧೀಂಕಿಟ ಕಿಟತಕ ತರಿಕಿಟ ಕಿಟತಕ ಹೆಜ್ಜೆ
ಕರ್ಣಾನಂದವ ನೀಡುವ ಗೆಜ್ಜೆ ಸುನಾದ||
ಚಕ್ಷುಗಳ ಸೆಳೆಯುವ ವೇಷಭೂಷಣ
ಪದಲಾಲಿತ್ಯದ ಅಪೂರ್ವ ಸಂಗಮ|
ದಪ್ಪ ಮೀಸೆಯ ಹೊತ್ತ ರಕ್ಕಸರ ಗಡಣ
ಕೊಂಬು ಕಹಳೆಯಲಿ ಮಹಿಷನ ಅಬ್ಬರ||
ವಿಚಿತ್ರ ಹೆಜ್ಜೆ ಮೊಗದ ಭಾವದಲಿ
ಬರುವರು ಹಾಸ್ಯ ಉಣಬಡಿಸುತಲಿ/
ಪದಪುಂಜಗಳ ವೈಖರಿಯಲಿ
ತೇಲಿಸುವರು ಸೇರಿಹ ಪ್ರೇಕ್ಷಕರ//
ವೈಯ್ಯಾರದ ಚೆಲುವು ಚಂದ್ರಿಕೆಯರ ನಾಟ್ಯ
ಪುರಾಣ ಇತಿಹಾಸ ಸಂಸ್ಕೃತಿಗಳ ಪ್ರತಿಬಿಂಬ|
ನಮ್ಮ ನೆಲದ ಗಂಡುಕಲೆ ಯಕ್ಷಗಾನ ಪ್ರದರ್ಶನ
ತನು ಮನವ ಸೆಳೆವ ಬಲೆ ಉಲ್ಲಾಸದ ಸೆಲೆ||
ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
