ಕಲಬುರ್ಗಿ, ಗೌರಿ, ಪಾನ್ಸರೆ ಹಂತಕರಿಗೂ ಶಿಕ್ಷೆಯಾಗಲಿ

ಕಲಬುರ್ಗಿ, ಗೌರಿ, ಪಾನ್ಸರೆ ಹಂತಕರಿಗೂ ಶಿಕ್ಷೆಯಾಗಲಿ

ದಶಕದ ಹಿಂದೆ ದೇಶವನ್ನೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ನಡೆದ ವಿಚಾರವಾದಿಗಳು ಹಾಗೂ ಮೂಢನಂಬಿಕೆ ವಿರೋಧಿ ಹೋರಾಟಗಾರರ ಹತ್ಯೆಗಳು ಜನಮಾನಸದಿಂದ ಇನ್ನೂ ದೂರವಾಗಿಲ್ಲ. ಮಹಾರಾಷ್ಟ್ರದ ಡಾ. ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪಾನ್ಸರೆ, ಕರ್ನಾಟಕದ ಡಾ, ಎಂ ಎಂ ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು. ಈ ಸರಣಿ ಹತ್ಯೆಗಳು ಶುರುವಾಗಿದ್ದು ಪುಣೆಯ ಡಾ. ದಾಭೋಲ್ಕರ್ ಹತ್ಯೆಯೊಂದಿಗೆ. ಅವರನ್ನು ೨೦೧೩ರ ಒಂದು ಮುಂಜಾನೆ ವಾಯು ವಿಹಾರದ ಸಮಯದಲ್ಲಿ ಬೈಕ್ ನಲ್ಲಿ ಬಂದ ಹಂತಕರು ಗುಂಡಿಕ್ಕಿ ಕೊಂದಿದ್ದರು. ಆ ಪ್ರಕರಣದ ತೀರ್ಪು ಸುದೀರ್ಘ ೧೧ ವರ್ಷಗಳ ವಿಚಾರಣೆ ಬಳಿಕ ಈಗ ಹೊರಬಿದ್ದಿದ್ದು, ಇಬ್ಬರು ಹಂತಕರಿಗೆ ಜೀವಾವಧಿ ಶಿಕ್ಷೆಯಾಗಿದೆ. ಮೂವರು ಆರೋಪಿಗಳು ಸಾಕ್ಷ್ಯಗಳ ಕೊರತೆಯಿಂದ ಖುಲಾಸೆಯಾಗಿದ್ದಾರೆ. ಸಿಬಿಐ ಈ ಪ್ರಕರಣದ ತನಿಖೆ ನಡೆಸಿತ್ತು. ತಡವಾಗಿಯಾದರೂ ಪುಣೆ ವಿಶೇಷ ಕೋರ್ಟ್ ನಲ್ಲಿ ಆರೋಪ ಸಾಬೀತುಪಡಿಸುವಲ್ಲಿ ಸಿಬಿಐ ಯಶಸ್ವಿಯಾಗಿದೆ. ಅದರೊಂದಿಗೆ ವಿಚಾರಭೇಧವನ್ನು ಅರಗಿಸಿಕೊಳ್ಳಲಾಗದೆ ಎಡಪಂಥೀಯ ವಿಚಾರವಾದಿಗಳನ್ನು ಹತ್ಯೆಗೈಯುವ ಮೂಲಕ ಘೋರವಾಗಿ ಸೇಡು ತೀರಿಸಿಕೊಳ್ಳುತ್ತಿದ್ದ ತಂಡದ ಕೆಲವರಿಗಾದರೂ ತಕ್ಕ ಶಾಸ್ತಿಯಾಗಿದೆ.

ಈ ಪ್ರಕರಣದ ಬಳಿಕ ಮುಂಬೈನಲ್ಲಿ ಇದೇ ರೀತಿಯಲ್ಲಿ ೨೦೧೫ರಲ್ಲಿ ಗೋವಿಂದ ಪಾನ್ಸರೆ, ಧಾರವಾಡದಲ್ಲಿ ಅದೇ ವರ್ಷ ಡಾ ಎಂ ಎಂ ಕಲಬುರ್ಗಿ ಹಾಗೂ ೨೦೧೭ರಲ್ಲಿ ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಬೈಕ್ ನಲ್ಲಿ ಆಗಮಿಸಿದ ಹಂತಕರು ಗುಂಡಿಟ್ಟು ಹತ್ಯೆಗೈದಿದ್ದರು. ಆ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲೇ ಇವೆ. ಇವು ಬೇಗ ಇತ್ಯರ್ಥವಾಗಿ ಹಂತಕರಿಗೆ ಶಿಕ್ಷೆಯಾಗಬೇಕು. ಮಹಾರಾಷ್ಟ್ರದ ೨ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಿದ್ದರೆ, ಕರ್ನಾಟಕದ ೨ ಪ್ರಕರಣಗಳನ್ನು ವಿಶೇಷ ತನಿಖಾ ತಂಡ (ಎಸ್ ಐ ಟಿ) ತನಿಖೆ ನಡೆಸಿದೆ. ೪ ಪ್ರಕರಣಗಳಲ್ಲಿ ಸಾಮ್ಯತೆ ಇರುವುದನ್ನು ಹಾಗೂ ಮೂಲಭೂತವಾದಿಗಳ ಒಂದೇ ತಂಡ ಈ ಕೃತ್ಯ ಎಸಗಿರುವುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕಲಬುರ್ಗಿ ಹಾಗೂ ಗೌರಿ ಕೇಸಲ್ಲಿ ಈಗಾಗಲೇ ಅನೇಕ ಆರೋಪಿಗಳು ಬಂಧಿತರಾಗಿ ಜೈಲಿನಲ್ಲಿದ್ದಾರೆ. ಆದರೆ ಅವರ ವಿರುದ್ಧದ ಆರೋಪಗಳು ಇನ್ನೂ ಸಾಬೀತಾಗಿಲ್ಲ. ದಾಭೋಲ್ಕರ್ ಕೇಸಿನ ಇತ್ಯರ್ಥವು ತನಿಖಾಧಿಕಾರಿಗಳಿಗೆ ಅನುಕೂಲ ಮಾಡಿಕೊಡಬಹುದು. ಗಮನಾರ್ಹವೆಂದರೆ ದಾಭೋಲ್ಕರ್ ಹಂತಕರ ವಿರುದ್ಧದ ಉಗ್ರ ಕೇಸ್ ವಜಾಗೊಂಡಿದೆ. ಆದರೂ ರಾಜ್ಯದ ಕೇಸಿನ ಹಂತಕರಿಗೆ ಶಿಕ್ಷೆ ಆಗುವಂತೆ ನಿಗಾ ವಹಿಸಲಿ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೧-೦೫-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ