ಕಿರು ಸಂದೇಶ ಮೂಲಕ "ಪದಾರ್ಥ" ತಿಳಿಯಿರಿ

ಕಿರು ಸಂದೇಶ ಮೂಲಕ "ಪದಾರ್ಥ" ತಿಳಿಯಿರಿ

ಬರಹ


ಕಾಸರಗೋಡಿನ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ
ನಿಘಂಟು ಸೇವೆ ನೀಡುವ ಸಾಹಸಕ್ಕೆ ಮುಂದಾಗಿದ್ದಾರೆ.SMSGYAN ಎಂಬ ಪದದ ಬಳಿಕ ಅರ್ಥ
ತಿಳಿದುಕೊಳ್ಳಲು ಬಯಸುವ ಶಬ್ದವನ್ನು  09894974926 ಸಂಖ್ಯೆಗೆ ಎಸ್ ಎಂ ಎಸ್ ಮಾಡಿದರೆ,
ಶಬ್ದಾರ್ಥ ಮರು ಸಂದೇಶವಾಗಿ ಬರುತ್ತದೆ. ಜಾಹೀರಾತು ಮೂಲಕ ಆದಾಯ ಗಳಿಸಿ, ಉಚಿತ ಸೇವೆ
ನೀಡಲಾಗುತ್ತಿದೆ.ಇನ್ನೋಜ್ ಟೆಕ್ನಾಲಜಿ ಎಂಬ ಕಂಪೆನಿಯ ಸ್ಥಾಪನೆಗೆ ಒಂದು ಲಕ್ಷ
ಹೂಡಿಕೆಯನ್ನು ಮಾಡಲಾಗಿದೆ.
-------------------------------------------------------

ಮಿನಿ ಅಣುಸ್ಥಾವರಗಳು
    ಇಪ್ಪತ್ತು ಸಾವಿರ ಜನಸಂಖ್ಯೆಗೆ ಸೂಕ್ತವಾದ ಅಣುಸ್ಥಾವರವನ್ನು ನ್ಯೂಮೆಕ್ಸಿಕೋದ ನ್ಯೂ ಅಲಮಾಸ್ ರಾಷ್ಟ್ರೀಯ ಪ್ರಯೋಗಶಾಲೆಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.ಇಂತಹ ಸ್ಥಾವರಕ್ಕೆ ಇಪ್ಪತ್ತೈದು ಮಿಲಿಯನ್ ಡಾಲರು ಖರ್ಚು ಬರಬಹುದು ಎಂದು ಅಂದಾಜಿಸಲಾಗಿದೆ. ಭದ್ರತೆ ಮತ್ತು ಅಪಘಾತದಿಂದ ಅನಾಹುತವಾಗುವುದನ್ನು ತಪ್ಪಿಸಲು, ಇಂತಹ ಸ್ಥಾವರವನ್ನು ನೆಲಮಟ್ಟದಿಂದ ಕೆಳಗೆ, ಕಾಂಕ್ರೀಟು ಗೂಡಿನ ಒಳಗೆ ಸ್ಥಾಪಿಸಲಾಗುತ್ತದೆ. ಇದಕ್ಕೆ ಆರೇಳು ವರ್ಷಗಳಿಗೊಮ್ಮೆ ಇಂಧನ ತುಂಬಿದರೆ ಸಾಕಾಗುತ್ತದೆ. ಅಣ್ವಸ್ತ್ರಕ್ಕೆ ಬಳಸುವ ಇಂಧನ ಇದರಲ್ಲಿ ಬಳಕೆಯಾಗುವುದಿಲ್ಲ.ನೆಲದಲ್ಲಿ ಹೂತಿರುವುದರಿಂದ ಮತ್ತು ಕಾಂಕ್ರೀಟಿನ ಗೋಳದೊಳಗೆ ಅವಿತಿರುವುದರಿಂದ ಕದ್ದು ಹೋಗುವ ಅಪಾಯವೂ ಇಲ್ಲ. ಇಡೀ ಅಣುಸ್ಥಾವರವು ಫ್ಯಾಕ್ಟರಿ ಸೀಲಾಗಿ ಬರುತ್ತದೆ ಮತ್ತು ಇದು ಒಂದು ಟ್ರಕ್‌ನಲ್ಲಿ ಹಿಡಿಸುವಷ್ಟು ಗಾತ್ರದ್ದಾಗಿರುತ್ತದೆ. ಇನ್ನೈದು ವರ್ಷಗಳಲ್ಲಿ ಇಂತಹ ಸ್ಥಾವರಗಳಿಗೆ ಭಾರೀ ಬೇಡಿಕೆ ಬರಬಹುದು ಎನ್ನುವ ಆಶಾವಾದ ಇದೆ.
--------------------------------------------------
ಅಮೆರಿಕಾದಿಂದಲೂ ಹೊರಗುತ್ತಿಗೆ
    ಅಮೆರಿಕಾದ ಕೆಲಸಗಳು ನಮ್ಮಂತಹ ದೇಶಗಳಿಗೆ ಹೊರಗುತ್ತಿಗೆ ಆಗುವುದು ಸಾಮಾನ್ಯ ಕ್ರಮ. ಆದರೆ ಅಮೆರಿಕಾದ ಕೆಲವು ಕಂಪೆನಿಗಳೂ ಕೊರಿಯನ್ನರಿಗೆ ಇಂಗ್ಲಿಷ್ ಭಾಷೆ ಕಲಿಸುವಂತಹ ಕೆಲಸವನ್ನು ಅಂತರ್ಜಾಲ ಮೂಲಕ ಮಾಡುತ್ತಿವೆ. ಇಲ್ಯೂಷಿಯನ್ ಟೆಕ್ನಾಲಜಿ ಎನ್ನುವ ಸಣ್ಣ ಕಂಪೆನಿಯು ಅಮೆರಿಕಾದ ಹಳ್ಳಿಗಾಡಿನಿಂದ ಕೆಲಸ ಮಾಡುತ್ತಿದೆ.ಟೆನ್ ಸ್ಲೀಪ್ ಎಂಬ ಹಳ್ಳಿಯ ಮುನ್ನೂರಕ್ಕೂ ಹೆಚ್ಚು ಜನರಿಗೆ ನೌಕರಿ ನೀಡಿರುವ ಕಂಪೆನಿಯು, ಇಂಗ್ಲಿಷ್ ಭಾಷೆಯನ್ನು ಕೊರಿಯನ್ನರಿಗೆ ಕಲಿಸುವ ಕೆಲಸವನ್ನು ಹೊರಗುತ್ತಿಗೆಯಾಗಿ ನಿರ್ವಹಿಸುತ್ತಿದೆ.ಸ್ಕೈಪ್ ಎಂಬ ವ್ಯಕ್ತಿಯಿಂದ ವ್ಯಕ್ತಿಗೆ ವಿಡಿಯೋ,ಧ್ವನಿ ಸೇವೆಯನ್ನು ನೀಡುವ ತಂತ್ರಾಂಶವನ್ನು ಬಳಸಿಕೊಂಡು ಈ ತರಬೇತಿ ನೀಡಲಾಗುತ್ತಿದೆ.ಹದಿನೈದು ಸಾವಿರ ಕೊರಿಯನ್ನರು ಸೇವೆ ಪಡೆದುಕೊಳ್ಳಲು ನೋಂದಾಯಿಸಿಕೊಂಡಿದ್ದಾರೆ.
--------------------------------------------------
ದಾನಿಗಳಿಗೆ ನೆರವಾಗುವ ಅಂತರ್ಜಾಲ ತಾಣಗಳುashok
    ಅಂತರ್ಜಾಲದಲ್ಲಿ ಸಮುದಾಯಗಳನ್ನು ಸೃಷ್ಟಿಸುವ ತಾಣಗಳಿಗೇನೂ ಬರವಿಲ್ಲ. ಅರ್ಕುಟ್, ಮೈಸ್ಪೇಸ್,ಫೇಸ್‌ಬುಕ್ ಹೀಗೆ ಅಂತಹ ತಾಣಗಳ ಪಟ್ಟಿ ದಿನೇ ದಿನೇ ಬೆಳೆಯುತ್ತಿದೆ. ಇಂತಹ ತಾಣಗಳು ಜನರನ್ನು ಬೆಸೆಯುವ, ಸಮಾನಾಸಕ್ತಿ ಹೊಂದಿದ ಜನರಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಒದಗಿಸುತ್ತವೆ. ಈಗ ಈ ಪಟ್ಟಿಗೆ ಹೊಸತಾಗಿ ಬರುತ್ತಿರುವ ತಾಣಗಳು ದಾನಿಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿವೆ. ದೇಣಿಗೆಯಿಂದ ನಡೆಯುವ ಸಂಸ್ಥೆಗಳ ಪಟ್ಟಿಯನ್ನು  ಒದಗಿಸುವ ಮೂಲಕ ದಾನಿಗಳಿಗೆ ನೆರವಾಗುವ ಉದ್ದೇಶವನ್ನು ಹೊಂದಿದ ತಾಣಗಳೂ ಇವೆ.ದಾನಿಗಳು ತಮ್ಮ ದೇಣಿಗೆಯನ್ನು ಪರಿಸರ ರಕ್ಷಣೆಯಲ್ಲಿ ತೊಡಗಿರುವ ಸಂಸ್ಥೆಗಳಿಗೋ ಇಲ್ಲ ಮಾನವ ಹಕ್ಕುಗಳ ಬಗ್ಗೆ ಹೋರಾಟ ನಡೆಸುವ ಕಂಪೆನಿಗಳಿಗೋ ದೇಣಿಗೆ ನೀಡಲು ಬಯಸಿದರೆ, ಅಂತಹ ಕೆಲಸ ಮಾಡುವ ಕಂಪೆನಿಗಳ ಪಟ್ಟಿಯನ್ನು ಲಭ್ಯವಾಗಿಸುವುದು ಇವುಗಳ ಉದ್ದೇಶ.
    Ammado.com ಇಂತಹ ತಾಣ. ಇಲ್ಲಿ ದಾನಿ ಬಯಸಿದರೆ, ಆತ ತನ್ನ ಮಾಮೂಲು ವಿವರಗಳ ಜತೆಗೆ ತನ್ನ ದಾನದ ವಿವರವನ್ನೂ ಇತರರಿಗೆ ಜಾಹೀರು ಪಡೆಸಬಹುದು. ತನ್ನ ದಾನದ ಹಣದಲ್ಲಿ ಪರಿಸರಕ್ಕೆ ಸಂಬಂಧಿಸಿದ ಸಂಸ್ಥೆಗೆ ನೀಡಿದ ಕೊಡುಗೆ ಒಟ್ಟು ದಾನದ ಎಷ್ಟು ಭಾಗ ಎನ್ನುವುದನ್ನು ತಾಣದಲ್ಲಿ ತೋರಿಸಲು ಸೌಕರ್ಯವಿದೆ.ಇದೇ ರೀತಿ ಮಾನವ ಹಕ್ಕಿಗೆ ಹೋರಾಟ ನಡೆಸುವ ಸಂಸ್ಥೆಗೆ ನೀಡಿದ ದೇಣಿಗೆಯ ಪ್ರಮಾಣ ಇವನ್ನೆಲ್ಲಾ ಪ್ರಕಟಿಸಬಹುದು.
-------------------------------------------
ಕಾಂಕ್ರೀಟು ಕಾಡಿನಲ್ಲಿ ತರಕಾರಿ ಬೆಳೆಯಲು ಯತ್ನaak
    ನಗರಗಳಿಗೆ ಬೇಕಾದ ತರಕಾರಿಗಳನ್ನು ನಗರಗಳ ವಸತಿ ಸಂಕೀರ್ಣಗಳ ಟೆರೇಸಿನಲ್ಲೇ ಬೆಳೆಯುವಂತಿದ್ದರೆ ಎಷ್ಟು ಚೆನ್ನ! ಈ ಬಗ್ಗೆ ಅಮೆರಿಕಾದ ಹಲವು ವಿವಿಗಳು ಅಧ್ಯಯನ ಮಾಡುತ್ತಿವೆ. ಟೊಮೆಟೋ ಅಂತಹ ತರಕಾರಿಯನ್ನು ವರ್ಷಪೂರ್ತಿ ಬೆಳೆಯಲು ಸಾಧ್ಯವೆಂದು ಪ್ರಯೋಗಗಳು ತೋರಿಸಿಕೊಟ್ಟಿವೆ.ಈ ಬೆಳೆಯನ್ನು  ಮಣ್ಣಿನಲ್ಲಿ ಬೆಳೆಯದೆ,ನೀರಿನಲ್ಲಿ ಬೆಳೆಯಲಾಗುತ್ತದೆ. ನೀರಿಗೆ ಪೋಷಕಾಂಶಗಳನ್ನೂ ಸೇರಿಸಿ ಕೊಡಬಹುದಾದ್ದರಿಂದ,ಗಿಡಗಳು ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತವೆ. ಆದರೆ ಹೀಗೆ ಬೆಳೆ ತೆಗೆಯುವಾಗ, ಗಿಡಗಳಿಗೆ ಸೂರ್ಯನ ಶಾಖ ಬೀಳದಂತೆ ಗಾಜಿನ ಮನೆಯಲ್ಲಿ ಬೆಳೆಯಬೇಕಾಗುತ್ತದೆ. ಬೆಳಕನ್ನು ಕೃತಕವಾಗಿ ನೀಡಿ,ಶಾಖವನ್ನೂ, ತೇವವನ್ನೂ ಅಗತ್ಯ ಬಿದ್ದಂತೆ ಬದಲಾಯಿಸುವ ವ್ಯವಸ್ಥೆ ಇಂತಹ ಗಾಜಿನ ಮನೆಯಲ್ಲಿ ಬೇಕಾಗುತ್ತದೆ.
    ಈ ನಿಟ್ಟಿನಲ್ಲಿ ಕ್ಯಾಲಿಫೋರ್ನಿಯಾ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯದ ಸಂಶೋಧಕರಾದ ಫ್ಯುಜಿಮೋಟೋ ಅವರು ಇಂತಹ ಕೃಷಿಯನ್ನು ನಗರಗಳ ಅಪಾರ್ಟ್‌ಮೆಂಟ್,ಕಟ್ಟಡಗಳ ಮಾಡಿನ  ಮೇಲೆ, ಖಾಲಿ ಜಾಗಗಳಲ್ಲಿ ನಡೆಸಬಹುದು. ಇಂತಹ ಕೃಷಿಗೆ ಸಾಮಾನ್ಯವಾಗಿ ಬೇಕಾದ್ದಕ್ಕಿಂತ ನೀರಿಗಿಂತ ಕಡಿಮೆ ನೀರು ಸಾಕಾಗುತ್ತದೆ. ಹೀಗೆ ತರಕಾರಿ ಬೇಕಾದಲ್ಲೇ ಬೆಳೆದರೆ, ಅವುಗಳ ಸಾಗಾಣಿಕೆಗೆ ಬೇಕಾದ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯ ತಾನೇ?ಆದರೆ ಇಂತಹ ಯೋಜನೆಗಳು ಆರ್ಥಿಕವಾಗಿ ಬಿಳಿಯಾನೆಗಳು ಎಂದು ಮೂಗು ಮುರಿಯುವವರೂ ಇದ್ದಾರೆ. ಇಂತಹ ಬೆಳೆ ತೆಗೆಯಲು ನಗರದ ದುಬಾರಿ ಜಾಗ, ನೀರು ಮತ್ತು ವಿದ್ಯುತ್ ಖರ್ಚು ಮಾಡಬೇಕಾಗಿ ಬರುವುದರಿಂದ ತರಕಾರಿ ಬಹು ದುಬಾರಿಯಾದೀತು ಎಂದವರ ಅಭಿಪ್ರಾಯ.ಯುರೋಫ್ರೆಶ್ ಇಂಕ್ ಎನ್ನುವ ಕಂಪೆನಿಯು ಇನ್ನೂರೆಪ್ಪತ್ತು ಎಕರೆ ಜಾಗದಲ್ಲಿ ಬೆಳೆ ತೆಗೆಯಲು ಇಂತಹ ಆಧುನಿಕ ತಂತ್ರಜ್ಞಾನ ಬಳಸುತ್ತಿದೆ.ಕಾರ್ನೆಲ್ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳಿಂದ ಹೀಗೆಯೇ ಬೆಳೆ ತೆಗೆಯುತ್ತದೆ.ಕೊಲಂಬಿಯಾ ವಿಶ್ವವಿದ್ಯಾಲಯವು ಇಂತಹ ಯೋಜನೆಯನ್ನು "ಬಹುಅಂತಸ್ತಿನ ಬೆಳೆ" ಎಂದು ಹೆಸರಿಸಿದ್ದಾರೆ.
----------------------------------------------------------

ವಾಕ್ ಇನ್ ಪರೀಕ್ಷೆ
    ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ತನ್ನ ವಿದ್ಯಾರ್ಥಿಗಳಿಗೆ ಖುಷಿ ಬಂದಾಗ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವನ್ನೂ ಒದಗಿಸಿದೆ. ಸೆಮಿಸ್ಟರಿನ ನಿಗದಿತ ಅವಧಿಯನ್ನು ಮುಗಿಸಿದ ಬಳಿಕ ವಿದ್ಯಾರ್ಥಿಯು ತನಗೆ ಬೇಕೆನಿಸಿದಾಗ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಆನ್‌ಲೈನಿನಲ್ಲಿ ಈ ಪರೀಕ್ಷೆ ತೆಗೆದುಕೊಳ್ಳಲು ಹಾಲ್‌ಟಿಕೆಟ್ ಕೂಡಾ ಆನ್‌ಲೈನಿನಲ್ಲಿಯೇ ತೆಗೆದುಕೊಳ್ಳಬಹುದು.ಆದರೆ ಸದ್ಯ ಕೆಲವೇ ಕೇಂದ್ರಗಳಲ್ಲಿ,ಎರಡು ಕೋರ್ಸುಗಳಲ್ಲಿ ಮಾತ್ರಾ ಇಂತಹ ಅವಕಾಶ ಲಭ್ಯ. ವಿದ್ಯಾರ್ಥಿ ಇಂತಹ ಕೇಂದ್ರಗಳಿಗೆ ಹೋಗಿ ಪರೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ.
-----------------------------------------------------------------
*ಅಶೋಕ್‌ಕುಮಾರ್ ಎ

ಉದಯವಾಣಿ

ಇ-ಲೋಕ-   24/11/2008

ಅಶೋಕ್ ಪ್ರಪಂಚ