'ಗಝಲ್' ಎಂಬ ಮೋಹಕ ಕಲೆ...
ಗಝಲ್ ೧
ಮೋಡ ಕರಗಿದರೆ ಸಾಕೆ ಮಳೆಯು ಹೆರಬೇಡವೆ ಸಖಿ
ಕಾಡು ಉಳಿದರೆ ಹಾಗೆ ಹಸಿರ ತರಬೇಡವೆ ಸಖಿ
ಕೇಡು ಮಾಡಿದರೆ ಹಣತೆಗೆ ಬೆಳಕನು ಹಚ್ಚುವವರು ಯಾರು
ಹಾಡು ಹೇಳಿದರೆ ಹೇಗೆ ಲಯವು ಬರಬೇಡವೆ ಸಖಿ
ಜಾಡು ಹಿಡಿದು ಹೊರಟಿರುವ ಇರುವೆಗಳ ನೀನು ಕಂಡೆಯಾ
ಪಾಡು ಮುಂದಿನ ದಿನಗಳಿಗೆ ಆಹಾರವ ಹೊರಬೇಡವೆ ಸಖಿ
ಬೇಡು ಒಳ್ಳೆಯದನು ಜೀವನ ಬೆಳಗಲು ಬೇಡ ಆತುರವು
ನೋಡು ಎಲ್ಲದರಲೂ ಅವಸರದ ಪ್ರೀತಿಯ ಹೇರಬೇಡವೆ ಸಖಿ
ಸೇಡು ಇರದೆಲೆ ಬದುಕುವ ರೀತಿಯನು ಅರಿತುಕೋ ಈಶಾ
ಆಡು ಮುಟ್ಟದ ಸೊಪ್ಪಿಲ್ಲ ಎನ್ನುತಲೇ ತನ್ನವರ ದೂರಬೇಡವೆ ಸಖಿ
***
ಗಝಲ್-೨
ಮಾತು ಮುರಿಯಲಿಲ್ಲ ಅವನು ಬೇಡಿಯೇ ಇದ್ದ
ಸೋತು ಹೋಗಲಿಲ್ಲ ಮುಂದೆ ನೋಡಿಯೇ ಇದ್ದ
ಬಾಳು ಕರಗಲಿಲ್ಲ ಮತ್ಯಾಕೆ ನಡೆದು ಹೋದ
ದಾಳ ಕದಲಲಿಲ್ಲ ಆದರೂ ಆಡಿಯೇ ಇದ್ದ
ಜಾಲು ಕಾಣಲಿಲ್ಲ ಮಲಗಿದರೂ ಕಂಬನಿ ಜಾರದೆ
ತೇಲಿ ಹಾಡಲಿಲ್ಲ ಹೆಣಗಳೆಡೆ ಓಡಿಯೇ ಇದ್ದ
ನೂಲು ಹರಿಯಲಿಲ್ಲ ಬಟ್ಟೆಗೆ ಸಿಟ್ಟದು ಬಾರದೆ
ಶಾಲು ಕೊಡಲಿಲ್ಲ ಹಾಗೆಂದು ಕಾಡಿಯೇ ಇದ್ದ
ಎಷ್ಟು ಹೊರಲಿಲ್ಲ ಸತ್ತವರು ಬರುವರೇ ಈಶಾ
ಕಷ್ಟ ಸಾಯಲಿಲ್ಲ ಬದುಕಲ್ಲಿ ಬಾಡಿಯೇ ಇದ್ದ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ; ಇಂಟರ್ನೆಟ್ ತಾಣ
