ಗಝಲ್ ಗಳ ಲೋಕ

ಗಝಲ್ ಗಳ ಲೋಕ

ಕವನ

೧.

ಅಮಾವಾಸ್ಯೆ ಕಳೆದು ಹುಣ್ಣಿಮೆಯ ದಿನ ಪೂರ್ಣ ಚಂದ್ರನು ಕಂಡನಂತೆ

ತತ್ವಜ್ಞಾನಿಯು ಬರಡಾಗಿರುವ ನೆಲದಲ್ಲೀಗ ಏಕೋ ಏನೊ ನಿಂದನಂತೆ

 

ವೈಷಮ್ಯ ಇರುವ ಗೂಡಿನೊಳಗೆ ದೀಪಗಳಿಂದು ಉರಿಯುವುದೇ ಹೇಳು

ಕಷ್ಟಗಳ ನಡುವೆಯೇ ತಿಳಿದವನು ಹಸಿರುಗಳ ನಡುವೆಯೇ ಹೋದನಂತೆ

 

ಊರಿಗೊಬ್ಬ ಪುಢಾರಿಯಿದ್ದರೂ ಪ್ರಜಾಸತ್ತೆ ಉಳಿದಿದೆ ನೀ ನೋಡಲಿಲ್ಲವೆ

ಹಳೆಯ ಪುಟಗಳಲ್ಲಿಯ ಪದಗಳ ರೀತಿಯಲ್ಲೇ ಅವನಿಂದು ಉಂಡನಂತೆ

 

ಪದಗಳ ನಡುವೆಯೇ ಸರಸವಾಡುವ ಜನರು ಎಲ್ಲಿಗೆ ಹೋದರೊ

ಕದವನ್ನು ಮುಚ್ಚುತಲೆ ನೀರನ್ನು ಕುಡಿದು ಮಲಗಿದ ಜಿಪುಣನಂತೆ

 

ಹೊಲಿದ ಅಂಗಿಯದು ಕಾರಣವಿಲ್ಲದೆ ಹರಿದಾಗ ಎಲ್ಲಿ ಹೋದನೋ ಈಶಾ

ತಪ್ಪುಗಳು ಇಲ್ಲದಿದ್ದರೂ ಅತಿಯಾಸೆ ಗತಿಗೇಡೆಂದು ಗೊಂಬೆಯ ತಂದನಂತೆ

***

೨.

ಸರಕಾರಗಳು ಜನ ಸಾಮಾನ್ಯರಿಗೆ ಜಾಲಿಮರ ಆಗಬಾರದು 

ಅಧಿಕಾರಿಗಳು ಕೆಲಸವ ಬಿಟ್ಟು ಏಸಿಯೊಳಗೆ ಕೂರಬಾರದು 

 

ಪ್ರಜಾಪ್ರಭುತ್ವ ಇರುವುದು ಯಾಕಾಗಿಯೋ ಈ ದೇಶದೊಳಗೆ ನಾನರಿಯೆ

ಸಂವಿಧಾನವನು ಬಿಟ್ಟು ತಮ್ಮದೇ ಸ್ವಾರ್ಥಗಳ ನಾಡಿನಲ್ಲಿ ಹೇರಬಾರದು 

 

ಹಕ್ಕುಗಳ ಬಗ್ಗೆ ಧ್ವನಿಯೆತ್ತುವರ ಗಂಟಲ ನಾಳವನ್ನೇ ಸೀಳುತಿಹರು ಏಕೆ

ಬ್ರಿಟಿಷ್‌ರ ಆಳ್ವಿಕೆಯನು ಮತ್ತೊಮ್ಮೆ ನಮ್ಮವರು ನಮಗೆ ಕೊಡಬಾರದು 

 

ತಪ್ಪುಗಳ ನಡೆಗಳು ಕೆಲವೊಮ್ಮೆ ರಾಷ್ಟ್ರವ ಅಧೋಗತಿಗೆ ತಳ್ಳುತ್ತವೆ ನೋಡು

ಮೇಲೆ ಕುಳಿತವನು ನಿಷ್ಠನಾಗಿರದೆ ನೆಲವನು ಬೇರೆಯವರಿಗೆ ಮಾರಬಾರದು 

 

ಬಡಜನರ ಒಳಗಿನ ಗೋಳನ್ನು ಯಾರು ಕೇಳುವರೆಂದು ಪ್ರಶ್ನಿಸುತ್ತಿರುವೆ ಈಶಾ

ಕಡೂ ಬಡತನದ ಜೀವಗಳನ್ನು ಗೌರವಿಸದವರಿಗೆ ನಾವು ಓಟು ಹಾಕಬಾರದು 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್