ಗಡಿ ಕನ್ನಡಿಗರಿಗೆ ಆಮಿಷವೊಡ್ದುವ ಬುದ್ಧಿ ಕೈಬಿಡಿ

ಗಡಿ ಕನ್ನಡಿಗರಿಗೆ ಆಮಿಷವೊಡ್ದುವ ಬುದ್ಧಿ ಕೈಬಿಡಿ

ಕರ್ನಾಟಕದ ಗಡಿಭಾಗದ ಹಳ್ಳಿಗಳ ಜನರಿಗೆ ಉಚಿತ ಆರೋಗ್ಯ ವಿಮಾ ಸೇವೆ ಯೋಜನೆಯನ್ನು ಜಾರಿ ಮಾಡಿರುವ ಮಹಾರಾಷ್ಟ್ರ ಸರಕಾರದ ನಿಲುವು ಖಂಡನಾರ್ಹ. ಬೆಳಗಾವಿ ಸಂಬಂಧಿತವಾಗಿ ಮಹಾರಾಷ್ಟ್ರ- ಕರ್ನಾಟಕ ಯಾವುದೇ ತಗಾದೆ ತೆಗೆಯದೇ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂಬ ಕೇಂದ್ರ ಗೃಹ ಸಚಿವರ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ಏರ್ಪಟ್ಟ ಮೇಲೂ ಅಲ್ಲಿನ ಸರಕಾರ ಉದ್ದಟತನ ಪ್ರದರ್ಶಿಸಿರುವುದು ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಬಗೆದ ದ್ರೋಹ.

ಕರ್ನಾಟಕದ ೮೬೫ ಹಳ್ಳಿ-ಪಟ್ಟಣಗಳ ಜನರನ್ನು ಬಲವಂತವಾಗಿ ತನ್ನತ್ತ ಸೇರಿಸಿಕೊಳ್ಳಲು, ಅವರಿಂದ ಘೋಷಣಾ ಪತ್ರ ಪಡೆದುಕೊಳ್ಳಲು ಮಹಾರಾಷ್ಟ್ರ ನಡೆಸುತ್ತಿರುವ ಪ್ರಯತ್ನಗಳೆಲ್ಲ ಅತ್ಯಂತ ಮೂರ್ಖತನದಿಂದ ಕೂಡಿವೆ. ಬೆಳಗಾವಿ ಗಡಿ ವಿವಾದ ಕುರಿತ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದನ್ನು ಸುಪ್ರೀಂ ಕೋರ್ಟ್ ಮುಂದೂಡುತ್ತಾ ಬಂದಿದ್ದರೂ, ಆ ಹಳ್ಳಿ-ಪಟ್ಟಣಗಳ ಮೇಲೆ ಸಾರ್ವಭೌಮತ್ವ ಸಾಧಿಸಲು ಆರೋಗ್ಯ ವಿಮೆಯಂಥ ಸಾಕ್ಷ್ಯಗಳನ್ನು ಹೊಂದಿಸಿಕೊಳ್ಳುತ್ತಿರುವುದು ಮಹಾರಾಷ್ಟ್ರದ ಪರಮನೀಚ ಬುದ್ಧಿಯನ್ನು ಬೆತ್ತಲು ಮಾಡಿದೆ.

ಉಚಿತ ಯೋಜನೆ ಎಂದಾಕ್ಷಣ ಸಾಮಾನ್ಯವಾಗಿ ನಾಗರಿಕರು ಅದರತ್ತ ಸಹಜವಾಗಿ ಆಕರ್ಷಿತರಾಗುತ್ತಾರೆ. ಆದರೆ, ಗಡಿಭಾಗದ ಹಳ್ಳಿಗಳ ಕನ್ನಡಿಗರು ಮಹಾರಾಷ್ಟ್ರದ ಯಾವ ಆಮಿಷಕ್ಕೂ ಬಲಿಯಾಗಬಾರದು. ಸಾರ್ವಜನಿಕವಾಗಿ, ಸಾಮೂಹಿಕವಾಗಿ ಅದನ್ನು ತಿರಸ್ಕರಿಸುವ ಛಾತಿಯನ್ನು ಪ್ರದರ್ಶಿಸಬೇಕು. ಆ ವ್ಯಾಪ್ತಿಯ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳು, ಕನ್ನಡ ಸಂಘಟನೆಗಳೂ ಇದರ ವಿರುದ್ಧ ಜಾಗೃತಿ ಮೂಡಿಸುವುದು ಅತ್ಯವಶ್ಯ. ರಾಜ್ಯ ಸರಕಾರದ ಯಶಸ್ವಿನಿ ಯೋಜನೆ ಅಲ್ಲಿನ ಜನರನ್ನು ಸಮರ್ಪಕವಾಗಿ ತಲುಪಿಸಲೂ ಕ್ರಮ ಕೈಗೊಳ್ಳಬೇಕಿದೆ.

ಮಹಾರಾಷ್ಟ್ರ ಇಂಥ ಸಂಚನ್ನು ರೂಪಿಸುತ್ತಿದೆ ಎಂದು ‘ವಿಜಯ ಕರ್ನಾಟಕ' ಒಂದು ತಿಂಗಳ ಹಿಂದೆ ವಿಸ್ತ್ರತ ವರದಿ ಮಾಡಿ, ರಾಜ್ಯ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಆದರೆ, ಎಲ್ಲ ಪಕ್ಷಗಳೂ ಚುನಾವಣೆಯಲ್ಲಿ ಮುಳುಗಿದ್ದು, ಗಡಿಯ ಚಿಂತೆ ಯಾರಿಗೂ ಇಲ್ಲ ಎನ್ನುವಂತೆ ಜಾಣಮೌನ ಪ್ರದರ್ಶಿಸಿರುವುದು ನಮ್ಮ ರಾಜಕಾರಣಿಗಳ ನಿರ್ಲಕ್ಷ್ಯ ಸ್ವಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರ್ವಪಕ್ಷಗಳೂ ಒಗ್ಗಟ್ಟಿನಿಂದ ಮಹಾರಾಷ್ಟ್ರದ ನಿಲುವನ್ನು ಖಂಡಿಸಬೇಕಿದೆ.

ಬೆಳಗಾವಿ ಸೇರಿದಂತೆ ಗಡಿಭಾಗದ ಪ್ರದೇಶಗಳಲ್ಲಿ ಶಿಕ್ಷಣ, ರಸ್ತೆ, ಸಂಪರ್ಕ, ಕುಡಿವ ನೀರು, ವಸತಿ, ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಅಲ್ಲಿನ ಜನರ ವಿಶ್ವಾಸ ಕಾಯ್ದುಕೊಳ್ಳುವ ಕಾರ್ಯ ಸಮರ್ಪಕವಾಗಿ ಆಗಬೇಕಿದೆ. ಗಡಿ ಜಿಲ್ಲೆಗಳನ್ನು ಹೀಗೆ ನಿರ್ಲಕ್ಷಿಸುತ್ತಾ ಕುಳಿತರೆ ನೆರೆರಾಜ್ಯಗಳು ಅವುಗಳ ಮೇಲೆ ಹಕ್ಕು ಸ್ಥಾಪಿಸಲು ಇನ್ನಿಲ್ಲದ ಷಡ್ಯಂತ್ರ ರೂಪಿಸುತ್ತದೆ. ಈ ವಕ್ರಬುದ್ಧಿಯನ್ನು ಬೆಳಗಾವಿ ಮೇಲೆ ಕಣ್ಣು ಹಾಕಿರುವ ಮಹಾರಾಷ್ಟ್ರ ರಾಯಚೂರಿನ ಮೇಲೆ ಆಸೆಗಣ್ಣು ನೆಟ್ಟಿರುವ ತೆಲಂಗಾಣದಂಥ ರಾಜ್ಯಗಳು ಕೈಬಿಡಬೇಕು. ಅದರಲ್ಲೂ ಕೇಂದ್ರದ ಬಿಜೆಪಿ ನೇತೃತ್ವದ ಆಡಳಿತದ ಮಾತಿಗೆ ಕವಡೆ ಕಾಸು ಕಿಮ್ಮತ್ತು ನೀಡದ ಮಹಾರಾಷ್ಟ್ರ ಶಿವಸೇನೆ-ಬಿಜೆಪಿ ಮೈತ್ರಿ ಸರಕಾರ ತನ್ನ ಗೋಮುಖ ವ್ಯಾಘ್ರ ಬುದ್ಧಿ ನಿಲ್ಲಿಸಬೇಕು. ಕರ್ನಾಟಕದಂಚಿನ ಹಳ್ಳಿಗಳು ಎಂದಿಗೂ ನಮ್ಮವೇ. ಅಲ್ಲಿನವರ ಹಿತ ಕಾಯ್ದುಕೊಳ್ಳುವುದು ನಮ್ಮ ಆದ್ಯತೆಯ ವಿಚಾರವೇ ಆಗಿದೆ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೫-೦೪-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ