ಗತಿಸಿರುವ ಭಾವದೊಳು

ಗತಿಸಿರುವ ಭಾವದೊಳು

ಕವನ

ಗತಿಸಿರುವ ಭಾವದೊಳು

ಮಥಿಸಿ ನಡೆಯಲು ಬಹುದೆ

ಕಾತರದ ಕನಸುಗಳ ಕಾಣ ಬಹುದೆ

ಜೀವನದ ಮೌಲ್ಯಗಳ 

ಒಳಗೆ ತೂರುತ ನಡೆಯೆ

ಕ್ಷಣಿಕ ವ್ಯಾಮೋಹಗಳ ನೆನೆಯಬಹುದೆ

 

ಚಿತ್ತವಿಲ್ಲದೆ ಗುಡಿಯ

ಸುತ್ತುತಲೆ ಸಾಗಿಹುದು

ಚಿತ್ತ ಭ್ರಾಂತಿಯ ಒಳಗೆ ನಡೆಯ ಬಹುದೆ

ಆತುರದ ಹುಡುಕಾಟ

ಜೀವನದಿ ಎಳೆದಾಟ

ಪ್ರೀತಿ ತಪ್ಪಿದ ಬದುಕ ಕಾಣ ಬಹುದೆ

 

ಚಿಂತೆ ಇರುತಲಿ ಮನದಿ

ಇರದಂತೆ ತೋರಿಸುತ

ಸಾಗುವ ಬದುಕನು ಇಲ್ಲಿ ಸವಿಯಬಹುದೆ

ಬಾಳು ಕರಗುತಲಿರಲು

ಕರಗದಂತೇ ಇರುವೆ

ತಾಯ ಮಡಿಲಿನ ಭಾಗ್ಯ ಸಿಗಲು ಬಹುದೆ

***

ಗಝಲ್

ಇನ್ನೊಬ್ಬರ ಮನವನೆಂದೂ ಕೆಣಕದಿರು ನೀನು

ಪ್ರತಿಯೊಬ್ಬರ ಜೀವನದಲಿ ಬಾಗದಿರು ನೀನು

 

ಹಸಿವಾಯಿತೆಂದು ಮಣ್ಣು ತಿನ್ನುವರೆ ಹೇಳು 

ಕಟ್ಟಿರುವೆಗಳ ಜೊತೆಗೆ ಮಲಗದಿರು ನೀನು

 

ನಡೆವ ದಾರಿಯನು ಗಮನಿಸದೆ ಹೋಗುವರೆ

ಕಲ್ಲುಮುಳ್ಳುಗಳ ನಡುವಲ್ಲಿ ನಿಲ್ಲದಿರು ನೀನು

 

ಸೌಂದರ್ಯ ಇದೆಯೆಂದು  ಬಂದಂತೆ ತಿರುಗುವುದೆ

ಉತ್ಸವದ ಮೂರ್ತಿಯಂತೆ ಬದುಕದಿರು ನೀನು

 

ಪ್ರತಿಯೊಬ್ಬರನು ಗೌರವಿಸು ಬರುವನು ಈಶಾ

ಪಂಡಿತನು ನಾನೆಂದು ಬೀಗದಿರು ನೀನು.

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್