ಗೀತಾಮೃತ - 57

ಗೀತಾಮೃತ - 57

*ಅಧ್ಯಾಯ ೧೫*

*ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನ ಚಾದಿರ್ನ ಚ ಸಂಪ್ರತಿಷ್ಠಾ/*

*ಅಶ್ವತ್ಥಮೇನಂ ಸುವಿರೂಢಮೂಲಮಸಂಗಶಸ್ತ್ರೇಣ ದೃಢೇನ ಛಿತ್ತ್ವಾ//೩//*

 ಈ ಜಗದ್ರೂಪೀ ವೃಕ್ಷದ ಸ್ವರೂಪವು ಹೇಗೆ ಹೇಳಿದೆಯೋ ಹಾಗೆ ಇಲ್ಲಿ ವಿಚಾರಕಾಲದಲ್ಲಿ ಕಂಡುಬರುವುದಿಲ್ಲ.ಏಕೆಂದರೆ,ಇದರ ಆದಿಯಾಗಲೀ,ಅಂತ್ಯವಾಗಲೀ ಸಿಗುವುದಿಲ್ಲ.ಹಾಗೆಯೇ ಒಳ್ಳೆಯ ಪ್ರಕಾರದಿಂದ ಇದರ ಸ್ಥಿತಿ ಯೂ ಇಲ್ಲ.ಅದಕ್ಕಾಗಿ ಅಹಂತೆ,ಮಮತೆ ಮತ್ತು ವಾಸನಾರೂಪವಾದ ಅತಿ ದೃಢಮೂಲಗಳುಳ್ಳ ಜಗತ್ ರೂಪೀ ಅಶ್ವತ್ಥವೃಕ್ಷವನ್ನು ದೃಢವಾದ ವೈರಾಗ್ಯರೂಪೀ ಶಸ್ತ್ರದ ಮೂಲಕ ಕತ್ತರಿಸಿ ಹಾಕಿ _

*ತತ: ಪದಂ ತತ್ಪರಿಮಾರ್ಗಿತವ್ಯಂ ಯಸ್ಮಿನ್ಗತಾ ನ ನಿವರ್ತಂತಿ ಭೂಯ:/*

*ತಮೇವ ಚಾದ್ಯಂ ಪುರುಷಂ ಪ್ರಪದ್ಯೇ ಯತ: ಪ್ರವೃತ್ತಿ: ಪ್ರಸೃತಾ ಪುರಾಣೀ//೪//*

ಅದರನಂತರ ಯಾವುದರಲ್ಲಿ ಹೋಗಿರುವಂತಹ ಪುರುಷನು ಮತ್ತೆ ಜಗತ್ತಿನಲ್ಲಿ ಮರಳಿ ಬರುವುದಿಲ್ಲವೋ ಆ ಪರಮಪದರೂಪೀ ಪರಮೇಶ್ವರನನ್ನು ಚೆನ್ನಾಗಿ ಅರಸಬೇಕು.ಮತ್ತು ಯಾವ ಪರಮೇಶ್ವರನಿಂದ ಪುರಾತನವಾದ ಜಗದ್ರೂಪೀ ವೃಕ್ಷದ ಪರಂಪರೆಯು ವಿಸ್ತಾರವನ್ನು ಪಡೆದಿದೆಯೋ ಅದೇ,ಆದಿಪುರುಷ ನಾರಾಯಣನಿಗೆ ನಾನು ಶರಣಾಗಿದ್ದೇನೆ _ ಈ ಪ್ರಕಾರವಾಗಿ ದೃಢನಿಶ್ಚಯಮಾಡಿ ಕೊಂಡು ಆ ಪರಮೇಶ್ವರನ ಮನನ ಮತ್ತು ನಿದಿಧ್ಯಾಸನ ಮಾಡಬೇಕು.

***

*ಮಮೈವಾಂಶೋ ಜೀವಲೋಕೇ ಜೀವಭೂತ: ಸನಾತನ:/*

*ಮನ:ಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ//೭//*

   ಈ ದೇಹದಲ್ಲಿ ಇರುವ ಸನಾತನವಾದ ಜೀವಾತ್ಮನು ನನ್ನದೇ ಆದ ಅಂಶವಾಗಿದ್ದಾನೆ ಮತ್ತು ಅವನೇ ಈ ಪ್ರಕೃತಿಯಲ್ಲಿ ಸ್ಥಿತನಾಗಿದ್ದು ಮನಸ್ಸು ಮತ್ತು ಐದೂ ಇಂದ್ರಿಯಗಳನ್ನು ಆಕರ್ಷಿಸುತ್ತಾನೆ.

     *ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ಕ್ರಾಮತೀಶ್ವರ:/*

*ಗೃಹೀತ್ವೈತಾನಿ ಸಂಯಾತಿ  ವಾಯುರ್ಗಂಧಾನಿವಾಶಯಾತ್//೮//*

       ವಾಯುವು ಗಂಧದ ಸ್ಥಾನದಿಂ ಹೇಗೆ ಗಂಧವನ್ನು ಗ್ರಹಣಮಾಡಿ ತೆಗೆದುಕೊಂಡು  ಹೋಗುತ್ತನೆಯೋ ಹಾಗೆಯೇ ,ದೇಹಾದಿಗಳ ಸ್ವಾಮಿಯಾದ ಜೀವಾತ್ಮನೂ ಕೂಡ ಯಾವ ಶರೀರವನ್ನು ತ್ಯಾಗಮಾಡುತ್ತಾನೋ ಅದರಿಂದ ಈ ಮನಸಹಿತವಾದ ಇಂದ್ರಿಯಗಳನ್ನು ಗ್ರಹಣಮಾಡಿಕೊಂಡು ಯಾವ ಶರೀರವನ್ನು ಪಡೆಯುತ್ತಾನೆಯೋ ಅದರಲ್ಲಿ ಪ್ರವೇಶಿಸುತ್ತಾನೆ.

***

 *ಶ್ರೋತ್ರಂ ಚಕ್ಷು: ಸ್ಪರ್ಶನಂ ಚ ರಸನಂ ಘ್ರಾಣಮೇವ ಚ/*

*ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ//೯//*

ಈ ಜೀವಾತ್ಮನು ಕಿವಿ,ಕಣ್ಣು,ಚರ್ಮ,ನಾಲಿಗೆ,ಮೂಗು ಮತ್ತು ಮನಸ್ಸನ್ನು ಆಶ್ರಯಿಸಿಕೊಂಡು ಅರ್ಥಾತ್ ಇವುಗಳೆಲ್ಲದರ ಆಸರೆಯಿಂದಲೇ ವಿಷಯಗಳನ್ನು ಅನುಭವಿಸುತ್ತಾನೆ.

     *ಉತ್ರ್ಕಾಮಂತಂ ಸ್ಥಿತಂ ವಾಪಿ ಭುಂಜಾನಂ ವಾ ಗುಣಾನ್ವಿತಮ್/*

*ವಿಮೂಢಾ ನಾನುಪಶ್ಯಂತಿ ಪಶ್ಯಂತಿ ಜ್ಞಾನಚಕ್ಷುಷ://೧೦//*

ಶರೀರವನ್ನು ಬಿಟ್ಟು ಹೋಗುವವನನ್ನು ಅಥವಾ ಶರೀರದಲ್ಲಿ ಸ್ಥಿತನಾಗಿರುವವನನ್ನು ಅಥವಾ ಶರೀರದಲ್ಲಿ ಸ್ಥಿತನಾಗಿರುವವನನ್ನು ಅಥವಾ ವಿಷಯಗಳನ್ನು ಭೋಗಿಸುವವನನ್ನು  _ ಈ ಪ್ರಕಾರವಾಗಿ ಮೂರೂ ಗುಣಗಳಿಂದ ಕೂಡಿದವನನ್ನು ಸಹ ಅಜ್ಞಾನಿಗಳು ಅದರ ಯಥಾರ್ಥ ಸ್ವರೂಪವನ್ನು ತಿಳಿಯಲಾರರು.ಕೇವಲ ಜ್ಞಾನರೂಪೀ ನೇತ್ರಗಳುಳ್ಳ ವಿವೇಕಶೀಲರಾದ ಜ್ಞಾನಿಗಳೇ ತತ್ವದಿಂದ ತಿಳಿಯುತ್ತಾರೆ.

***

 *ಯತಂತೋ ಯೋಗಿನಶ್ಚೈನಂ  ಪಶ್ಯಂತ್ಯಾತ್ಮನ್ಯವಸ್ಥಿತಮ್/*

*ಯತಂತೋಪ್ಯಕೃತಾತ್ಮಾನೋ ನೈನಂ ಪಶ್ಯಂತ್ಯಚೇತಸ://೧೧//*

ಪ್ರಯತ್ನಶೀಲರಾದ ಯೋಗೀ ಜನರೇ ತಮ್ಮ ಹೃದಯದಲ್ಲಿ ಸ್ಥಿತನಾಗಿರುವ ಈ ಆತ್ಮನನ್ನು ತತ್ವದಿಂದ ಬಲ್ಲರು; ಆದರೆ ಯಾರು ತಮ್ಮ ಅಂತ:ಕರಣವನ್ನು ಶುದ್ಧಿಮಾಡಿಕೊಂಡಿಲ್ಲವೋ ಅಂತಹ ಅಜ್ಞಾನೀ ಜನರಾದರೋ,ಯತ್ನ ಮಾಡುತ್ತಿದ್ದರೂ ಸಹ ಈ ಆತ್ಮನನ್ನು ತಿಳಿಯುವುದಿಲ್ಲ.

*ಯದಾದಿತ್ಯಗತಂ ತೇಜೋ ಜಗದ್ಭಾಸಯತೇಖಿಲಮ್/*

*ಯಚ್ಚಂದ್ರಮಸಿ ಯಚ್ಚಾಗ್ನೌತತ್ತೇಜೋ ವಿದ್ದಮಾಮಕಮ್//೧೨//*

ಸೂರ್ಯನಲ್ಲಿ ಸ್ಥಿತವಾದ ಯಾವ ತೇಜಸ್ಸು ಸಂಪೂರ್ಣ ಜಗತ್ತನ್ನು ಪ್ರಕಾಶಗೊಳಿಸುತ್ತದೆಯೋ,ಯಾವ ತೇಜವು ಚಂದ್ರನಲ್ಲಿದೆಯೋ ಮತ್ತು ಯಾವ ತೇಜವು ಅಗ್ನಿಯಲ್ಲಿದೆಯೋ ಅದನ್ನು ನೀನು ನನ್ನದೇ ತೇಜಸ್ಸೆಂದು ತಿಳಿ.

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ ಕೃಪೆ : ಇಂಟರ್ನೆಟ್ ತಾಣ