ಚಿತ್ರದುರ್ಗ ಸಾಹಿತ್ಯ ಸಮ್ಮೇಳನ -ಒಂದು ನೋಟ

ಚಿತ್ರದುರ್ಗ ಸಾಹಿತ್ಯ ಸಮ್ಮೇಳನ -ಒಂದು ನೋಟ

ಬರಹ

ಮತ್ತೊಂದು ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಸಮ್ಮೇಳನದ ಅಧ್ಯಾಯದಲ್ಲಿ ಅಮೃತೋತ್ಸವದ ಸಂಭ್ರಮವನ್ನು ತುಂಬಬೇಕಿದ್ದ ಈ ಸಮ್ಮೇಳನ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಾಗಲೀ, ಸಮ್ಮೇಳನದ ಚರಿತ್ರೆಯ ಪುಟದಲ್ಲಾಗಲೀ ಅಥವಾ ವಿಶೇಷವಾಗಿ ಕನ್ನಡಾಸಕ್ತರ ಮನದಲ್ಲಾಗಲೀ ಹೊಸದನ್ನೇನನ್ನೂ ಸ್ಪುಟಗೊಳಿಸಲಿಲ್ಲ. ಆದರೆ ಸುಮ್ಮನೆ ಒಂದು ಸಮ್ಮೇಳನ ಜರುಗಿತೇ ಎಂದು ಕೇಳಿದರೆ ಹಾಗೂ ಇಲ್ಲ. ಒಂದಷ್ಟು ಮಂದಿಗೆ ಪಾಠ ಕಲಿಸಿತು.

ಮುಖ್ಯವಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನವರಿಗೆ ಹಾಗೂ ಸಮ್ಮೇಳನದ ಸಂಭ್ರಮವನ್ನು ಕಲ್ಪಿಸಿಕೊಂಡು ಹೋಗುವ ಆಸಕ್ತರಿಗೆ. ನಾನು ಋಣಾತ್ಮಕ ನೆಲೆಯಿಂದೇನೂ ಚರ್ಚಿಸುತ್ತಿಲ್ಲ. ಬಹಳ ಸೂಕ್ಷ್ಮವಾಗಿ ಗ್ರಹಿಸಿಯೇ ಈ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಇನ್ನು ಮುಂದೆ ಸಮ್ಮೇಳನಕ್ಕೆ ಹೊರಡುವ ಮುನ್ನ ‘ಒಂದಷ್ಟು ಅವ್ಯವಸ್ಥೆ ಇದ್ದೇ ಇರುತ್ತದೆ, ಅದಕ್ಕೆ ಹೊಂದಿಕೊಂಡೇ ಹೋಗಬೇಕು. ಯಾವುದನ್ನೂ ಪ್ರಶ್ನಿಸಬಾರದು, ಇದ್ದದ್ದನ್ನು ಅನುಭವಿಸಿ ಬರಬೇಕು. ಎಷ್ಟಿದ್ದರೂ ನಾವು ಕನ್ನಡಿಗರಲ್ವೇ? ನಮ್ಮ ಭಾಷೆಯ ಹಬ್ಬ ಅಲ್ವೇ?’ ಎನ್ನುವ ಮನಸ್ಥಿತಿಗೆ ಬಂದಾಗಿದೆ.
ಚಿತ್ರದುರ್ಗದ ಊರಿನವರ ಸಂಭ್ರಮವನ್ನು ನಿಜಕ್ಕೂ ನಾವು ಮೆಚ್ಚಲೇಬೇಕು. ತಮ್ಮೂರಿಗೆ ಬಂದ ಅತಿಥಿಗಳನ್ನು ಕಾಣಬೇಕೆಂಬ ಸಂಭ್ರಮವೇ ಸಮ್ಮೇಳನದ ತುಂಬಾ ಜನರಿರುವಂತೆ ಮಾಡಿತು. ಅಷ್ಟು ಬಿಟ್ಟರೆ, ವ್ಯವಸ್ಥೆಯ ನೆಲೆಯಲ್ಲೂ ಸಮ್ಮೇಳನ ಯಶಸ್ವಿಯಾಗಲಿಲ್ಲ ; ಗೋಷ್ಠಿಯ ಚರ್ಚೆಯ ವಿಷಯದಲ್ಲೂ ಸಹ. ಗೋಷ್ಠಿಗಳಿಗೆ ಜನ ಹರಿದು ಬರುವುದು ಇದೇನೂ ಹೊಸತಲ್ಲ. ಬಾಗಲಕೋಟೆಯ ಸಮ್ಮೇಳನದಲ್ಲಿ ಇದಕ್ಕಿಂತಲೂ ಹೆಚ್ಚು ಜನ ಭಾಗವಹಿಸಿದ್ದರು. ಜತೆಗೆ ಅದು ಪುಸ್ತಕ ಮಾರಾಟಕ್ಕೆ ಪೂರಕವಾಗಿತ್ತು.

ಸಮ್ಮೇಳನದಂಥ ಗೋಷ್ಠಿಗಳು ಕೇವಲ ನಾಮ್‌ಕೆವಾಸ್ಥೆಯೇ ಹೊರತು ಅದರಿಂದ ಹೊರಹೊಮ್ಮುವ ಫಲಿತ ಅಷ್ಟಕ್ಕಷ್ಟೇ. ಅದನ್ನು ಯಾರೂ ನಿರೀಕ್ಷಿಸುವುದಿಲ್ಲ, ಬಿಡಿ. ಕನ್ನಡ ಸಮ್ಮೇಳನವನ್ನು ಜಾತ್ರೆಯೆಂದು ಪರಿಗಣಿಸಿದ ಮೇಲೆ ಈ ಸಾಹಿತ್ಯ ನೆಲೆಯ ಚರ್ಚೆಗೆ ನಾವು ಎರಡನೇ ಸ್ಥಾನ ಕಲ್ಪಿಸಿದ್ದೇವೆ. ಆದರೂ, ಇಂಥದೊಂದು ಸಮ್ಮೇಳನದಲ್ಲಿ ನಾಡು-ನುಡಿಗೆ ಸಂಬಂಧಿಸಿದ ಪ್ರಚಲಿತ ವಿದ್ಯಮಾನಗಳು ಚರ್ಚೆಗೊಳ್ಳಬೇಕು ಹಾಗೂ ಜನಸಾಮಾನ್ಯರಿಗೆ ಸ್ವಲ್ಪವಾದರೂ ತಲುಪಿಸಬೇಕೆಂಬ ಆಶಯ ಇನ್ನೂ ಇದ್ದೇ ಇದೆ. ಆ ನಿರೀಕ್ಷೆಯ ದಿನಗಳನ್ನು ಎಲ್ಲರೂ ಕಾಯುತ್ತಲೇ ಇರುತ್ತಾರೆ, ರಾಮನಿಗೆ ಶಬರಿ ಕಾದಂತೆ.

ಚಿತ್ರದುರ್ಗ ಸಮ್ಮೇಳನಕ್ಕೆ ಕೊರತೆ ಆದದ್ದು ಯಾವುದು ? ಎಂಬ ಪ್ರಶ್ನೆ ಇಟ್ಟುಕೊಂಡು ಒಂದು ಸುತ್ತು ಹಾಕಿಬಂದರೆ ಕೊರತೆ ಕಾಣಿಸದು. ಹಣದ ದೃಷ್ಟಿಯಲ್ಲಿ ನೋಡಿದರೆ ಸುಮಾರು ೭ ಕೋಟಿ ಯಷ್ಟು ಹಣ ಸಂಗ್ರಹವಾಗಿತ್ತು. ಸರಕಾರ ಕಾಸು ಕೊಡಲು ಕಂಜೂಸು ಮಾಡಿರಲಿಲ್ಲ. ರಾಜ್ಯ ಸರಕಾರದ ಪ್ರಮುಖ ಸ್ತಂಭಗಳಲ್ಲಿ ಒಂದಾದ ಕರುಣಾಕರರೆಡ್ಡಿ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ಸಲಹೆ-ಸೂಚನೆ ಕೊಟ್ಟು ಹೆಗಲು ಕೊಡಲು ಸಿರಿಗೆರೆ, ಮುರುಘಾ ಮಠಗಳಿದ್ದವು. ಜತೆಗೆ ಸ್ಥಳೀಯ ಶಾಸಕರಷ್ಟೇ ಅಲ್ಲ ; ಕರುಣಾಕರ ರೆಡ್ಡಿ ಸೇರಿದರೆ ಮೂರು ಮಂದಿ ಸಚಿವರು ಈ ಜಿಲ್ಲೆಯ ಬೆನ್ನಿಗಿದ್ದರು. ಆದರೂ ಎಡವಿದ್ದು ಅಚ್ಚರಿ.
ನಾಲ್ಕೂ ದಿನ ಸಮ್ಮೇಳನದ ಸುತ್ತಮುತ್ತ ತಿರುಗಾಡಿದಾಗ ಕಂಡ ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ಹೊಣೆ ಹೊತ್ತ ಬಹುತೇಕ ಮಂದಿಗೆ ‘ಸಮ್ಮೇಳನ ಯಶಸ್ವಿಯಾಗುವುದು ಬೇಕಿರಲಿಲ್ಲ’. ಕಾರಣ ಏನು ಗೊತ್ತೆ ? ಯಶಸ್ಸನ್ನು ಯಾರು ಮುಡಿಗೇರಿಸಿಕೊಳ್ಳಬೇಕೆಂಬ ತಿಕ್ಕಾಟ.

ಸಿರಿಗೆರೆ ಸ್ವಾಮೀಜಿಗಳಿಗೆ ದಾವಣಗೆರೆಯಲ್ಲಿ ಅವರ ಮಠದ ತರಳಬಾಳು ಹುಣ್ಣಿಮೆ ಉತ್ಸವ ನಡೆಯುತ್ತಿತ್ತು. ಅವರಲ್ಲಿ ತೊಡಗಿಕೊಂಡಿದ್ದರು. ಮುರುಘಾಮಠದ ಸ್ವಾಮೀಜಿಗಳು ಊಟದ ಮನೆಯ ನೇತೃತ್ವ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಕರುಣಾಕರ ರೆಡ್ಡಿಯವರದ್ದೂ ಆಗಾಗ್ಗೆ ಭೇಟಿಯಷ್ಟೇ. ಸ್ಥಳೀಯ ಶಾಸಕರಂತೂ ಅತ್ತ ಸುಳಿಯಲೇ ಇಲ್ಲ. ಇನ್ನು ಅತ್ಯುತ್ಸಾಹದ ಜಿಲ್ಲಾಧಿಕಾರಿ. ಅವರ ಸಿದ್ಧತಾ ಉತ್ಸಾಹವೇನೋ ಸಮ್ಮೇಳನದ ಸಂಭ್ರಮಕ್ಕೆ ತಳಿರು ತೋರಣ ಕಟ್ಟಿರಬಹುದು. ಆದರೆ ಪರೀಕ್ಷೆಯಲ್ಲಿ ಫೇಲಾದವರ ಪೈಕಿ ಅವರೂ ಒಬ್ಬರು.

ಹಣವಿತ್ತು, ಸಂಘಟಕರಿದ್ದರು. ಆದರೆ, ಯಾರೊಬ್ಬರೂ ಹೊಣೆ ಹೊರಲು ಸಿದ್ಧರಿರಲಿಲ್ಲ. ಕಾರಣ ಈಗಾಗಲೇ ಹೇಳಿದಂತೆ ‘ಅವರಿಗೆ ಹೆಸರು ಬರುವುದಾದರೆ ನಾವೇಕೆ ದುಡಿಯಬೇಕು?’ ಎಂಬ ಮೂಲಭೂತ ಪ್ರಶ್ನೆ. ಒಂದುವೇಳೆ ಸಮ್ಮೇಳನ ಯಶಸ್ಸು ಕಂಡರೆ ಸಾಮಾನ್ಯವಾಗಿ ಅದರ ಯಶಸ್ಸು ಮಠಗಳಿಗೆ ಪ್ರಾಪ್ತವಾಗಬಹುದು. ನಾವ್ಯಾಕೆ ಕೆಲಸ ಮಾಡಬೇಕೆಂಬುದು ಸ್ವಾಗತ ಸಮಿತಿ ಅಧ್ಯಕ್ಷರ ಪ್ರಶ್ನೆಯಾಗಿತ್ತು. ಸ್ವಾಮೀಜಿಗಳೂ, ನಮ್ಮನ್ನು ಬಿಟ್ಟು ಮಾಡಲಿ ನೋಡೋಣ ಎಂದೇ ಸುಮ್ಮನಿದ್ದರು. ಮುರುಘಾ ಮಠದ ಸ್ವಾಮೀಜಿಗಳೇನೋ ಶ್ರಮ ಹಾಕಿದರು, ಆದರೆ ಅದು ಫಲ ಕೊಡಲು ಬಿಡದ ಬಹಳಷ್ಟು ಮಂದಿ ಕ್ರಿಯಾಶೀಲರಾಗಿದ್ದರು.
‘ಸಮ್ಮೇಳನವನ್ನು ಮುಂದೂಡುವ’ ಎಂದು ಜಿಲ್ಲಾಸಮಿತಿಯವರು ಪ್ರಸ್ತಾಪಿಸಿದಾಗ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ‘ಸಾಧ್ಯವಿಲ್ಲ. ಒಂದುವೇಳೆ ನಿಮ್ಮಿಂದ ಆಗದಿದ್ದರೆ ಹೇಳಿ. ಬೇರೆ ಜಿಲ್ಲೆಗೆ ವಹಿಸುತ್ತೇವೆ’ ಎಂದು ಗುಡುಗಿದ್ದೂ ಸ್ಥಳೀಯರನ್ನು ಕೆರಳಿಸಿತ್ತು. ಆ ಭಾವನೆ ಸಹ ಯಶಸ್ಸಿಗೆ ತೊಡಕಾಯಿತು ಎನ್ನುವುದರಲ್ಲಿ ತಪ್ಪೇನೂ ಇಲ್ಲ.

ಸಮ್ಮೇಳನದ ಯಶಸ್ಸು ಎಂದರೆ ಮೆರವಣಿಗೆಯ ನಿರ್ವಹಣೆ ಹಾಗೂ ಊಟದ ವ್ಯವಸ್ಥೆ. ಒಂದುವೇಳೆ ವಸತಿಯ ಸಮಸ್ಯೆ ಬಂದರೂ ಪ್ರತಿನಿಧಿಗಳು, ಜನರು ಹೇಗೋ ನಿಭಾಯಿಸಿಕೊಂಡು ಹೋಗಬಲ್ಲರು. ಆದರೆ ಊಟದ ಸಮಸ್ಯೆಯನ್ನು ಸಹಿಸುವುದಿಲ್ಲ. ಇದು ಎಲ್ಲರಿಗೂ ತಿಳಿದ ವಿಷಯವೆ. ಆದರೂ ಮೊದಲ ದಿನ ಊಟಕ್ಕೆ ಪಡಿಪಾಟಲು ಪಟ್ಟಿದ್ದು ಸುಳ್ಳಲ್ಲ. ಈ ಸಂದರ್ಭದಲ್ಲಿ ಕೇಳಿಬಂದ ಆರೋಪ ‘ನಗರಸಭೆಯವರು ಸಹಕರಿಸುತ್ತಿಲ್ಲ’. ಇದಕ್ಕೂ ಕಾರಣವಿತ್ತು. ಶಾಸಕರಿಗೂ-ಮರುಘಾ ಮಠಕ್ಕೂ ಸಂಬಂಧ ಚೆನ್ನಾಗಿಲ್ಲ. ಅದಿಲ್ಲಿ ದ್ವೇಷವಾಗಿ ಮಾರ್ಪಟ್ಟಿತ್ತು. ಒಟ್ಟೂ ಜನ ಅವ್ಯವಸ್ಥೆಗೆ ಹಿಡಿಶಾಪ ಹಾಕಿದರು. ಮಾಧ್ಯಮಗಳಲ್ಲೂ ಬಿತ್ತರವಾಯಿತು.
ನಿಜವಾಗಲೂ ಸಮ್ಮೇಳನದ ಬಗ್ಗೆ ಘಟಾನುಘಟಿ ಸಂಘಟಕರಿಗೆ ಕಾಳಜಿ ಇದ್ದಿದ್ದರೆ ತಕ್ಷಣವೇ ರಾತ್ರಿ ಸ್ವಾಗತ ಸಮಿತಿ ಸಭೆ ಕರೆದು ಚರ್ಚಿಸಿ ಸಮಸ್ಯೆಗೆ ಪರಿಹಾರ ಹುಡುಕಬೇಕಿತ್ತು. ಅದನ್ನು ಒಬ್ಬರೂ ಮಾಡಲಿಲ್ಲ. ಸೌಜನ್ಯಕ್ಕಾದರೂ 'ಅವ್ಯವಸ್ಥೆ ಸರಿಪಡಿಸುತ್ತೇವೆ’ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಲಿಲ್ಲ. ಪರಿಣಾಮ ಎರಡನೇ ದಿನವೂ ಅವ್ಯವಸ್ಥೆ ಬಿಗಡಾಯಿಸಿತು. ಪ್ರತಿನಿಧಿಗಳನ್ನು ನೋಂದಾಯಿಸಿಕೊಂಡು ಕಿಟ್ ಕೊಡಬೇಕಾದವರು ಶನಿವಾರ ಕೊಡುವುದಾಗಿ ಹೇಳಿದರು. ಇದು ಪ್ರತಿನಿಧಿಗಳನ್ನೂ ಕೆರಳಿಸಿತು. ಒಂದು ಸಾಮಾನ್ಯ ಸಂಗತಿ ಕೇಳಿ. ಕಿಟ್‌ನಲ್ಲಿ ಹಲ್ಲುಜ್ಜಲು ಪೇಸ್ಟ್, ಚಿಕ್ಕ ಬ್ರಷ್, ಬರೆಯಲು ಚಿಕ್ಕ ಪುಸ್ತಕ, ಆಮಂತ್ರಣ ಪತ್ರಿಕೆ ಹಾಗೂ ಊಟ-ತಿಂಡಿ ಕೂಪನ್ ಗಳಿರುತ್ತವೆ. ಹೇಗೋ ಹಲ್ಲುಜ್ಜಿಯಾರು, ಅದು ದೊಡ್ಡ ಸಂಗತಿಯಲ್ಲ. ಊಟಕ್ಕೆ ಏನು ಮಾಡಬೇಕು ? ಕೂಪನ್ ಇಲ್ಲದೇ ಊಟಕ್ಕೆ ಬಿಡುವುದಿಲ್ಲ. ಇವರಲ್ಲಿ ಕೂಪನ್ ಗಳಿಲ್ಲ. ಜತೆಗೆ ಯಾವ ಪರಿಜ್ಞಾನವೂ ಇಲ್ಲದೇ ಸಮ್ಮೇಳನ ಕಡೆಯ ದಿನ ಶನಿವಾರ ಕಿಟ್ ಕೊಡುವುದಾಗಿ ಹೇಳಿದರೆ ಯಾರು ತಾನೇ ಸುಮ್ಮನಿರುತ್ತಾರೆ?

ಇನ್ನು ಪುಸ್ತಕ ಮೇಳದ ಕಥೆ. ಕನಿಷ್ಠ ಜ್ಞಾನವೂ ಇಲ್ಲದವರಂತೆ ದೂಳಿನ ರಾಶಿಯ ಮಧ್ಯೆ ಪುಸ್ತಕ ಮಳಿಗೆಗೆ ಅವಕಾಶ ಕಲ್ಪಿಸುವುದು ಎಷ್ಟು ಸರಿ ? ಸಮ್ಮೇಳನಕ್ಕೆ ಗೋಷ್ಠಿಗಳೇ ಸೊಗಸಲ್ಲ ; ಪುಸ್ತಕ ಮೇಳವೇ ಸೊಗಸು. ಸಮ್ಮೇಳನದ ನೆನಪಿನಲ್ಲಿ ಒಂದಿಷ್ಟು ಪುಸ್ತಕ ಸಂಸ್ಕೃತಿ ವಿಸ್ತರಿಸುವ ಕೆಲಸವಾಗುತ್ತಿದೆ. ಅದಕ್ಕೆ ನಾವು ವೇದಿಕೆ ನಿರ್ಮಾಣ, ಊಟದ ವ್ಯವಸ್ಥೆಗೆ ಕೊಟ್ಟಷ್ಟೇ ಪ್ರಾಮುಖ್ಯ ನೀಡಬೇಕು. ಲಕ್ಷಾಂತರ ರೂ. ಬಂಡವಾಳ ಹಾಕಿಕೊಂಡು ಪ್ರಕಟಿಸಿದ ಪುಸ್ತಕಗಳೆಲ್ಲಾ ಎರಡು ದಿನಗಳಲ್ಲಿ ದೂಳಾಗುವುದಾದರೆ ಯಾರು ಇಷ್ಟಪಡುತ್ತಾರೆ ? ಅಂಥ ವ್ಯವಸ್ಥೆಯೇ ಅಲ್ಲಾಯಿತು. ‘ಪ್ರಕಾಶಕರನ್ನು ಕಸದಂತೆ ಕಂಡವರಿಗೆ ಧಿಕ್ಕಾರ’ ಎಂದು ಮಳಿಗೆಯೊಂದರ ಎದುರು ತೂಗು ಹಾಕಲಾಗಿತ್ತು. ಇಷ್ಟೊಂದು ಉದಾಸೀನ ಸಹಿಸಿಯೂ ಸಮ್ಮೇಳನಗಳಲ್ಲಿ ಭಾಗವಹಿಸುವ ದರ್ದು ಯಾವ ಪುಸ್ತಕ ವ್ಯಾಪಾರಿಗೂ ಇರುವುದಿಲ್ಲ ಎನ್ನುವುದನ್ನು ಸಂಘಟಕರು ಅರ್ಥ ಮಾಡಿಕೊಳ್ಳಬೇಕು.

ಮೂರನೇ ದಿನ ಕೊಂಚ ಎಚ್ಚೆತ್ತುಕೊಂಡರೂ ಅವ್ಯವಸ್ಥೆ ಆಗುವಷ್ಟು ಆಗಿತ್ತು. ನಾಲ್ಕನೇ ದಿನ ಸಮಾರೋಪಕ್ಕೆ ಆಗಮಿಸುವ ಮುನ್ನ ಮಾಧ್ಯಮ ಕೇಂದ್ರಕ್ಕೆ ಹಾಜರಾದ ಸ್ವಾಗತ ಸಮಿತಿ ಅಧ್ಯಕ್ಷ ಕರುಣಾಕರ ರೆಡ್ಡಿಯವರು, ‘ಯಾವ ಅವ್ಯವಸ್ಥೆಯೂ ಆಗಿಲ್ಲ. ಎಲ್ಲವೂ ಸರಿಯಾಗಿದೆ. ದೂರುಗಳೆಲ್ಲವೂ ಮಾಧ್ಯಮಗಳ ಸೃಷ್ಟಿ’ ಎಂದು ಫರ್ಮಾನು ಹೊರಡಿಸಿ ಹೊರಟರು. ಅವರ ಹೊಣೆಯಷ್ಟೇ, ಕೊನೆಗೊಂದು ತೀರ್ಪು ಪ್ರಕಟಿಸುವುದು. ಆ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದರು. ಮಾಧ್ಯಮಗಳಲ್ಲಿ ಬಂದ ಊಟದ ವ್ಯವಸ್ಥೆಯ ಪಡಿಪಾಟಲು ಚಿತ್ರ, ಕಿಟ್‌ಗಾಗಿ ಪ್ರತಿಭಟನೆಯ ಚಿತ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಘೇರಾವ್ ಹಾಕಿದ್ದು, ಜಿಲ್ಲಾ ಕಸಾಪ ಅಧ್ಯಕ್ಷರ ಕಾರಿಗೆ ಕಲ್ಲು ತೂರಿದ್ದು...ಎಲ್ಲವೂ ರೆಡ್ಡಿಯವರ ದೃಷ್ಟಿಯಲ್ಲಿ ಮಾಧ್ಯಮ ಸೃಷ್ಟಿ. ಛೇ...ನಾಚಿಕೆಯಾಗಬೇಕು. ಇಂಥವರ ಸರಕಾರ ಮಾಧ್ಯಮಗಳಿಗೆ ಧರ್ಮಾಧಿಕಾರಿಯನ್ನು ನೇಮಿಸುತ್ತದಂತೆ !

ಲೋಪ ಗೊತ್ತಾದಕೂಡಲೇ ಅದನ್ನು ಸರಿಪಡಿಸುವತ್ತ ಗಮನಹರಿಸಿದ್ದರೆ ಚಿತ್ರದುರ್ಗ ಇಷ್ಟೊಂದು ಕಹಿ ನೆನಪುಗಳನ್ನು ಉಳಿಸುತ್ತಿರಲಿಲ್ಲ. ಆದರೆ ಅದಾವುದೂ ಆಗದಿರುವುದೇ ಎಲ್ಲರಿಗೂ ಬೇಸರ ತಂದದ್ದು. ಕೇಂದ್ರ ಪರಿಷತ್ತಿನ ಪದಾಧಿಕಾರಿಯೊಬ್ಬರು, ‘ಬರೆಯಬೇಡಿ. ಏನನ್ನೂ ಉಗಿಯುವಂತಿಲ್ಲ ; ಎಲ್ಲವನ್ನೂ ನುಂಗಿಕೊಳ್ಳಬೇಕು. ಇದು ಮುಗಿದರೆ ಸಾಕಪ್ಪಾ ಎಂದಾಗಿದೆ’ ಎಂದಿದ್ದರು. ಇವೆಲ್ಲದರ ಒಟ್ಟೂ ಪರಿಣಾಮ ಪರಿಷತ್ತಿಗೆ ಬುದ್ಧಿ ಬಂತು.

ಸುಮ್ಮನೆ ಪೂರ್ವಾಪರಗಳನ್ನು ತಿಳಿಯದೇ ಸಮ್ಮೇಳನ ನಡೆಸುವ ಗುತ್ತಿಗೆ ವಹಿಸುವ ಕೆಲಸಕ್ಕೆ ಕಡಿವಾಣ ಹಾಕಿದೆ. ಪರಿಶೀಲನಾ ಸಮಿತಿ ರಚಿಸಿ, ಸಮ್ಮೇಳನ ನಿರ್ವಹಿಸುವವರ ಸಾಮರ್ಥ್ಯ ತಿಳಿದು ನಂತರ ನಿರ್ಧರಿಸುವ ತೀರ್ಮಾನಕ್ಕೆ ಬಂದಿರುವುದು ಸೂಕ್ತವಾದುದೇ. ಅದರೆ ಈ ಅವಕಾಶವೂ ಇನ್ಯಾವುದೋ ಜಾತಿ ರಾಜಕಾರಣಕ್ಕೆ, ದ್ವೇಷ ರಾಜಕಾರಣಕ್ಕೆ ಬಳಕೆಯಾಗಬಾರದು.
ಪ್ರತಿಷ್ಠೆಯ ಸಂಘರ್ಷ ಒಂದು ಸವಿನೆನಪಾಗಿ ಉಳಿಯಬಹುದಾದ ಸಾಧ್ಯತೆಯನ್ನು ಹೇಗೆ ಕೊಂದುಬಿಡುತ್ತದೆ ಎಂಬುದಕ್ಕೆ ಈ ಸಮ್ಮೇಳನ ಜ್ವಲಂತ ಉದಾಹರಣೆ. ಆಕಸ್ಮಾತ್ ಜನರೂ ಬರದಿದ್ದರೆ ಎಲ್ಲರ ಮುಖಕ್ಕೂ ಮಸಿ ಬಳಿಯುತ್ತಿತ್ತು, ಅದಾಗದಿದ್ದುದು ಸಂಘಟಕರ ಅದೃಷ್ಟ. ಮುಂದೆಂದೂ ಹೀಗಾಗದಿರಲಿ ಎಂಬುದೇ ಆಶಯ.
( ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನವಿದು)