ನದಿ
ಬೆಟ್ಟದ ಬುಡದಲ್ಲಿ ಹುಟ್ಟುತ್ತಾ ಚಿಮ್ಮುತ್ತ
ತೊಟ್ಟಾಗಿ ತೊರೆಯಾಗುತಲಿ
ಪುಟ್ಟ ರೂಪವ ತಾಳಿ ಗೆಳೆಯರ ಪಥದಲ್ಲಿ
ಒಟ್ಟಾಗುತಗಲವಾಗುತಲಿ [೧]
ಒಲ್ಲದೆ ಪಥದಲ್ಲಿರುವ ವಸ್ತುಗಳನ್ನು
ಮೆಲ್ಲನೆ ದಡಕೆ ನೂಕುತಲಿ
ಕಲ್ಲು ಮಣ್ಣುಗಳನ್ನು ತೀರದಿ ಹರವುತ್ತ
ಚೆಲ್ಲುತ್ತ ನೀರನಿಕ್ಕಡೆಗೆ [೨]
ಹಾರುತ್ತ ಬೀಳುತ್ತಲೇಳುತ್ತಾ ನಲಿಯುತ್ತ
ದಾರಿಯ ಹಸನು ಮಾಡುತ್ತಾ
ವಾರಿಯನು ಪಶುಪಕ್ಷಿಗಳಿಗೆಲ್ಲ ನೀಡುತ್ತ
ಕಾರುಣ್ಯವನು ತೋರುವುದು [೩]
ಮಳೆಗಾಲ ಬಂದರೆ ಕೋಪದಿ ಬುಸುಗುಟ್ಟಿ
ಇಳೆಯನ್ನು ಮುಳುಗಿಸಲೆಳಸಿ
ಬೆಳೆಗಳ ತರುಬುತ್ತ ನಾಶವ ಗೈವುದು
ಪ್ರಳಯ ಕಾಲದ ರುದ್ರನಂತೆ [4]
ತಪಿಸುವ ಬೇಸಗೆಯಲಿ ನೀರುಣಿಸುತ್ತ
ಉಪಕರಿಸುತ್ತಲಿ ಬಳಿಕಾ
ತಪಕೆ ಮೈಯೊಡ್ದುತ ಬಳಲುತ್ತಾ ಮಳೆಗಾಗಿ
ತಪವನ್ನೇ ಮಾಡುತ್ತಲಿಹುದು [೫]
ವಿಧಿಯನ್ನು ಮೀರದೆ ಇದುವೇ ಭಾಗ್ಯವು
ಇದುಯೆನ್ನ ಕರ್ತವ್ಯವೆಂದು
ಮುದದಿಂದ ಮುಂದಕ್ಕೆ ಮುಂದುವರಿಯುತ್ತ ಜ
ಲಧಿಯೊಡಗೂಡುತ್ತಲಿಹುದು [೬]
[ಈ ಕವನ ಸಾಂಗತ್ಯ ಛಂದಸ್ಸಿನಲ್ಲಿದೆ .]
Comments
ಉ: ನದಿ
In reply to ಉ: ನದಿ by ಭಾಗ್ವತ
ಉ: ನದಿ