ನಿಷ್ಪಾಪಿ ಸಸ್ಯಗಳು (ಭಾಗ ೨೫) - ಉತ್ತರಾಣಿ ಗಿಡ
“ಮಂತ್ರವಲ್ಲದ ಅಕ್ಷರವಿಲ್ಲ, ಔಷಧವಲ್ಲದ ಬೇರಿಲ್ಲ, ಅಯೋಗ್ಯನಾದ ಮನುಷ್ಯನಿಲ್ಲ” ಎಂಬ ಮಾತನ್ನು ಕೇಳಿರುವಿರಾ? ಯಾಕೆ ಈ ಮಾತೆಂದರೆ ಪ್ರಕೃತಿಯಲ್ಲಿ ನಾವು ನೋಡುವ ಯಾವುದೇ ಸಸ್ಯವೂ ಒಂದು ಔಷಧೀಯ ಸಸ್ಯವಾಗಿದೆ ಎಂದು ನಮಗೀಗ ಅರಿವಾಗತೊಡಗಿದೆಯಲ್ಲವೇ? ಇಂದು ನಾವು ಗದ್ದೆಯ ಬದುಗಳಲ್ಲಿ ತೋಟದ ನಡುವೆ, ಬರಡು.. ಬಯಲು.. ಬಂಜರು.. ಸಾಗುವಳಿ ಭೂಮಿಯಲ್ಲೆಲ್ಲ ಕಳೆಗಿಡದಂತೆ ಬೆಳೆಯುವ ಉತ್ತರಾಣಿ ಎಂಬ ಸಸ್ಯದ ಬಗ್ಗೆ ತಿಳಿದುಕೊಳ್ಳೋಣ. ಈ ಗಿಡವನ್ನು ನೀವೆಲ್ಲರೂ ನೋಡಿರಬಹುದು ಆದರೆ ಗಮನಿಸದೆ ಉಳಿದಿರಬಹುದು.
ಮಳೆ ಬಂದ ಕೂಡಲೇ ಚಿಗುರಿಕೊಳ್ಳುವ ಈ ಸಸ್ಯ ಕೆಂಪು ಮತ್ತು ತಿಳಿಹಸಿರು, ಬಿಳಿ ಬಣ್ಣದ ಹೂಗಳನ್ನು ಬಿಡುವುದರಿಂದ ಎರಡು ಮೂರು ಜಾತಿಗಳೆಂದು ಗುರುತಿಸುತ್ತಾರೆ. ಗಂಟುಗಳಿಂದ ಕೂಡಿರುವ ಕಡ್ಡಿಯಂತಹ ಕಾಂಡವು ಕವಲೊಡೆಯುತ್ತಾ ನೇರ ನಿಲ್ಲಲು ಪ್ರಯತ್ನಿಸಿ ಸೋಲುತ್ತದೆ. ಎರಡು ಮೂರು ಅಡಿಗಳೆತ್ತರ ಬೆಳೆದರೂ ಒಂದಿಷ್ಡು ಬಗ್ಗಿಯೇ ಈ ಸಸ್ಯವಿದ್ದು ಕಡಿಮೆ ಎಲೆಗಳನ್ನು ಪಡೆದಿದ್ದು ಕಾಂಡದ ಮೇಲೆ ಅಭಿಮುಖ ಜೋಡಣೆಯಾಗಿರುತ್ತದೆ. ಎಲೆಗಳು ದುಂಡನಿದ್ದು ಕಾಂಡದ ಪ್ರತಿ ತುದಿಯಲ್ಲೂ ಉದ್ದನೆಯ ಪುಷ್ಪಮಂಜರಿಯ ದೇಟಿನ ಮೇಲೆ ತೊಟ್ಟಿಲ್ಲದ ಹೂಗಳ ಜೋಡಣೆಯಾಗಿರುತ್ತದೆ. ನವೆಂಬರ್, ಡಿಸೆಂಬರ್ ಗಳಲ್ಲಿ ಹೂ, ಕಾಯಿಗಳು ಕಾಣಿಸಿಕೊಂಡಾಗ ಗುರುತಿಸಲು ಸುಲಭವಾಗುತ್ತದೆ.. ಇದರ ಪ್ರತಿ ಹೂವಿನಲ್ಲಿಯೂ ಉದುರದೆ ಇರುವ ಮುಳ್ಳಿನಂತಹ ಹೂ ಸೂಚಿಗಳಿದ್ದು ನಾವು ಗಿಡದ ನಡುವೆ ಹೋದರೆ ಬಟ್ಟೆಗೆ ಅಂಟಿಕೊಳ್ಳುತ್ತವೆ. ಪ್ರಾಣಿಗಳ ಮೇಲೂ ಸಿಕ್ಕಿಕೊಳ್ಳುವ ಈ ಉಪಾಯದಿಂದ ಗಿಡದ ಬೀಜ ಪ್ರಸಾರಕ್ಕೊಂದು ಸಾಧ್ಯತೆಯಾಗುತ್ತದೆ. ಉತ್ತರಾಣಿಯ ತೆನೆಯನ್ನು ಅಂಗೈಯೊಳಗಿಟ್ಟು ಅತ್ತಿತ್ತ ಸವರಿದರೆ ಸಣ್ಣಗೆ ಚುಚ್ಚಿದ ಅನುಭವವಾಗುತ್ತದೆ. ಯಜುರ್ವೇದದಲ್ಲಿ ಉಲ್ಲೇಖಿಸಲ್ಪಟ್ಟ ಉತ್ತರಾಣಿ ಕೆಲವು ಪೂಜೆಗಳಿಗೆ ಅವಶ್ಯಕವಾಗಿದ್ದು, ವಿನಾಯಕ ಚತುರ್ಥಿ ಗೆ ಉತ್ತರಾಣಿ ಪೂಜೆಗೆ ಪ್ರಮುಖ ವಸ್ತುವಾಗಿದೆ.
ಕಾಣಲು ಬರೇ ಕಳೆ ಸಸ್ಯವಾದ ಉತ್ತರಾಣಿಯು ಪಾರಂಪರಿಕ ಔಷಧ ಪದ್ಧತಿಯಲ್ಲಿ ಅಪರೂಪದ ಗುಣ ವಿಶೇಷ ಹೊಂದಿರುವ ಸಸ್ಯವಾಗಿದೆ. ಅನುಭವಿ ವೈದ್ಯರು ವಯಸ್ಸಿನ ಪರಿಣಾಮವಾಗಿ ಉಂಟಾದ ಅನಾರೋಗ್ಯಕಡಿಮೆಗೊಳಿಸುವ ಕಾಯಸಿದ್ಧಿ ಔಷಧಿಯಾಗಿ ಬಳಸುತ್ತಾರೆ. ಹುಚ್ಚುನಾಯಿ ಕಚ್ಚಿದಾಗ ಉತ್ತರಾಣಿಯ ಬೀಜ ಜೌಷಧಿಯಾಗಿ ಸಹಕಾರಿಯಾಗಿದೆ. ಉತ್ತರಾಣಿ ಕಡ್ಡಿಯನ್ನು ಹಲ್ಲುಜ್ಜಲು ಬಳಸುತ್ತಾರೆ. ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಇದರ ಎಲೆಯ ರಸವನ್ನು ಲೇಪಿಸಿದರೆ ತಕ್ಷಣ ರಕ್ತಸ್ರಾವ ನಿಲ್ಲುವುದಲ್ಲದೇ ಗಾಯ ಒಣಗಲೂ ಉತ್ತಮ ಮದ್ದಾಗಿದೆ. ಎಲೆಯ ಎಣ್ಣೆ ತಯಾರಿಸಿಯೂ ಹಚ್ಚಬಹುದು. ಶರೀರದಲ್ಲಿ ರಸಾದಿ ಧಾತುಗಳನ್ನು ಶುದ್ಧೀಕರಿಸುವುದರಿಂದ ಇದನ್ನು ಅಪಾಮಾರ್ಗ ಎಂದೂ ಕರೆಯುತ್ತಾರೆ. ಕಾಲಿನಲ್ಲಿ ಉಂಟಾಗುವ 'ಆಣಿ' ಗೆ, ತಲೆನೋವು, ಕಿವಿನೋವು, ಕಿವಿಯಲ್ಲಿ ಸದಾ ಶಬ್ದ ಬಂದಂತಾಗುವುದು, ಕೆಮ್ಮು, ಭೇದಿ, ಮೂತ್ರಪಿಂಡ ಶುದ್ಧಗೊಳಿಸಲು, ತುರಿಕೆ, ಕುಷ್ಠ, ಹೊಟ್ಟೆನೋವು, ಅಜೀರ್ಣ, ಅಸ್ತಮಾ, ಸತತ ಜ್ವರ.. ಶೀತ, ಗಡ್ಡೆ ಕರಗಲು, ಮೂಲವ್ಯಾಧಿ, ಪಾಂಡುರೋಗ, ಅತಿಸಾರ, ಚರ್ಮದ ಸಮಸ್ಯೆಗೆ, ನಿದ್ರಾ ಹೀನತೆ, ರಕ್ತಹೀನತೆ, ಹೃದಯದ ಆರೋಗ್ಯಕ್ಕೆ ಸಹಕಾರಿಯಷ್ಟೇ ಅಲ್ಲ ಜೇನು, ಚೇಳು, ಹಾವಿನ ವಿಷಕ್ಕೂ ಉಪಯೋಗಿಸುತ್ತಾರೆ. ಉತ್ತರಾಣಿಯ ರಸದಲ್ಲಿ ವಿಷನಾಶಕ ಗುಣ ಇರುವುದರಿಂದ ಕೈಗಳಿಗೆ ರಸ ಹಚ್ಚಿಕೊಂಡರೆ ಚೇಳನ್ನೂ ಹಿಡಿಯಬಹುದು ಎನ್ನುವ ಮಾತಿದೆ. ಔಷಧಿಗೆ ಹೆಚ್ಚಾಗಿ ಕೆಂಪು ಉತ್ತರಾಣಿಯನ್ನೇ ಬಳಸುತ್ತಾರೆ. ಸುಖ ಪ್ರಸವಕ್ಕೂ ಉತ್ತರಾಣಿ ಸಹಕಾರಿಯಾಗಿದೆ. ಮಾತ್ರವಲ್ಲದೆ ಪಶು ರೋಗ ಚಿಕಿತ್ಸೆಯಲ್ಲಿ ಪಶುಗಳು ಸೂಜಿ, ದಬ್ಬಳ ನುಂಗಿದ್ದ ಸಂದರ್ಭದಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.
ಉತ್ತರಾಣಿಯ ಉಪಯೋಗ ಹಾಗೂ ಔಷಧಿಗಳನ್ನು ಗರ್ಭಿಣಿಯರಿಗೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆಕಿರ್ಯಾಂಥಸ್ ಆಸ್ಪೆರಾ (Achyranthes aspera) ಎಂಬ ವೈಜ್ಞಾನಿಕ ಹೆಸರಿರುವ ಈ ಉತ್ತರಾಣಿ ಅಮರಾಂಥೇಸಿ (Amaranthaceae) ಕುಟುಂಬಕ್ಕೆ ಸೇರಿದೆ. ಉತ್ತರೇನಿ, ಮಯೂರಕ, ಶೈಖರಿಕ, ಕುಬ್ಜ, ಮಯೂರ ಶಿಖಾ, ಶಿಕಾರಿ ಎಂದು ಕರೆಸಿಕೊಳ್ಳುವ ಈ ಸಸ್ಯವು ಸಂಸ್ಕೃತ ದಲ್ಲಿ ಖರಮಂಜರಿ ಎಂಬ ಸುಂದರವಾದ ಹೆಸರನ್ನು ಪಡೆದಿದೆ. ಆಡುಭಾಷೆಯಲ್ಲಿ ಉತ್ತರಣೆ, ಉತ್ರಾಣಿ ಎನ್ನುವರು.
ಉತ್ತರಾಣಿಯ ಫೋಟೋಗಾಗಿ ನಾನು ಹಳ್ಳಿಯಲ್ಲಿರುವ ಹಲವು ಮಂದಿಯನ್ನು ಸಂಪರ್ಕಿಸಿದರೂ ಪೋಟೋಕ್ಕಿಂತ ಅದರ ಪರಿಚಯವೇ ಇರದವರು ಬಹಳಷ್ಟು ಜನರಿದ್ದರು. ಈಗ ಎಲ್ಲೆಡೆಯೂ ಕಳೆ ಸಸ್ಯಗಳೆಂದು ಕರೆಸಿಕೊಳ್ಳುವ ಇಂತಹ ನಿಷ್ಪಾಪಿ ಸಸ್ಯಗಳ ಮೇಲೆ ಹಾನಿಕಾರಕ ರಾಸಾಯನಿಕಗಳ ಸಿಂಪಡಿಕೆ ನಡೆದು ವಂಶವೇ ನಿರ್ವಂಶ ವಾಗುತ್ತಿರುವುದಲ್ಲದೇ ಹುಲ್ಲು ಕತ್ತರಿಸಲು ಸಣ್ಣ ಯಂತ್ರಗಳೂ ಬಂದು ಮನುಷ್ಯ ನಿರ್ಮಲವಾಗಿ ಬದುಕಲು ಸಹಾಯ ಮಾಡುತ್ತಿವೆ. ಮಳೆ ಬಂದು ಹೋದ ಕೂಡಲೇ ಅಗತ್ಯವಿರದ ಸಸ್ಯಗಳ ನಿರ್ಮೂಲನೆ ಮಾಡಿ ತನಗೆ ದುಡ್ಡು ತಂದುಕೊಡುವ ಗಿಡಗಳತ್ತ ಚಿತ್ತ ನೆಟ್ಟ ಮಾನವನಿಗೆ ಉತ್ತರಾಣಿ ಏನು ಮಾಡೀತು! ಕನಿಷ್ಟ ಅದರ ಪರಿಚಯವನ್ನಾದರೂ ಮಾಡಿಕೊಂಡು ಸಸ್ಯವಿದ್ದಲ್ಲಿ ಉಳಿಸಿಕೊಳ್ಳುವ ಪ್ರಯತ್ನವನ್ನಾದರೂ ಮಾಡೋಣ... ಏನಂತೀರಾ?
ಚಿತ್ರ- ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ