ಪದಬಂಧ

ಪದಬಂಧ

ಬರಹ

ಪದಬಂಧ
=====

ಪದಗಳ ಆಟವೇ
ಪದಬಂಧ
ಎನಿತೋ ವರುಷದ
ಸಂಬಂಧ

ಸುಳಿವಿನ ರಾಶಿಯು
ಗೋಜಲೋ ಗೊಜು
ಗಾಳಕೆ ಸಿಕ್ಕರೆ
ಮೋಜೋ ಮೊಜು

ಪದಗಳು ಸಿಗದಿರೆ
ಬಲು ತಿಕ್ಕಾಟ
ಸಿಕ್ಕರೆ ಇವುಗಳು
ಇದೆ ಗೆದ್ದಾಟ

ಮುಖವಾಡದ ಪದಗಳ
ಅಟ್ಟಹಾಸ!
ಕಳಚಿರೆ ಇವನು
ಅರೆ! ಸುಹಾಸ!

ತಿಣುಕಿದೆ ಏಕೋ?
ಅಯ್ಯೋ ಪೆದ್ದೆ!
ಎಲ್ಲವೂ ಸಿಕ್ಕರೆ
ನೀನೇ ಗೆದ್ದೆ

ಆಡಿವೆ ಏಕೆ,
ಕಣ್ಣು ಮುಚ್ಚಾಲೆ?
ಬರದಿಹೆ ಪ್ರೀತಿಯ
ಕರೆಯೋಲೆ!

ಇವಕೆ ವಿರಹವು
ಕಾಡಿವೆಯಂತೆ
ಇನ್ನೊಂದನು ಮುತ್ತಿಕ್ಕಲು
ಕಾದಿವೆಯಂತೆ

ಚಿತ್ರ ವಿಚಿತ್ರ ಇದೆ
ಈ ಜಾಡು
ಅದುವೇ ಜಾಣ್ಮೆಯು
ಜೋಡಣೆ ಮಾಡು

ತೆಗೆದರೂ ಪದಗಳ
ಮೆಲ್ಲಗೆ ಹೆಕ್ಕಿ,
ಪ್ರೀತಿಯು ಉಕ್ಕಿ,
ಗುದ್ದಿವೆ, ಢಿಕ್ಕಿ!

ಕಲಸು ಮೇಲೋಗರ
ಪದ ಚಿತ್ರಾನ್ನ
ಸರಿ ಪಡಿಸಲು ಇದನು
ಸಿಹಿ ಮೊಸರನ್ನ

ರಕುತವ ಹಂಚಿದ
ಜೋಡಿಗಳಂತೆ,
ಸಮ ಅಕ್ಷರದ
ಅವಳಿಗಳಂತೆ!

ಸುಲುಭದ ಆಟವೆ?
ಇದು ಕಗ್ಗಂಟು
ಗೆಲ್ಲಲು ಮೆದುಳೇ
ನಿನಗೆ ನಿಘಂಟು

ಎಲ್ಲವು ಸಿಕ್ಕರೆ
ಇದೆ ಹಾಡಂತೆ
ಹಾಡಿನ ಸ್ವರಗಳು
ಗಮ"ಪದ" ವಂತೆ

ಇದುವೇ ಒಂದು
ಜಾಣರ ಆಟ
ಚಿಣ್ಣರಿಗಾಗಲಿ
ಇದು ಪರಿಪಾಟ

ಬಲು ಮಧುರ
ಪದಬಂಧದ ಬಂಧ
ಇರಲಿ ಅಮರ
ಈ ಅನುಬಂಧ

-ಶ್ರೀನಿವಾಸ್