ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೧)
ಭೂಮಿಯಲ್ಲಿ ಕೃಷಿ ಮಾಡಬೇಕಾದರೆ ಮಣ್ಣು ಫಲವತ್ತಾಗಿರಬೇಕು. ಫಲವತ್ತತೆ ಇಲ್ಲದ ಭೂಮಿಯಲ್ಲಿ ಮಾಡುವ ಕೃಷಿ ಲಾಭದಾಯಕವಲ್ಲ. ಕೃಷಿ ಮಾಡುವವರೆಲ್ಲರೂ ಮಣ್ಣು ಎಂದರೇನು, ಅದರ ಬೌತಿಕ ಗುಣಧರ್ಮಗಳೇನು, ಫಲವತ್ತೆತೆ ಹೆಚ್ಚಿಸುವ , ಉಳಿಸುವ ಕ್ರಮಗಳು ಯಾವುವು? ಮಣ್ಣು ಹೇಗೆ ಚೈತನ್ಯ ಪಡೆಯುತ್ತದೆ? ಮಣ್ಣಿನಲ್ಲಿ ಏನೆಲ್ಲಾ ಜೈವಿಕತೆ ಇದೆ, ಮಣ್ಣು ಹೇಗೆ ತನ್ನ ಸ್ಥಿತಿಯನ್ನು ಬದಲಿಸುತ್ತದೆ? ಮುಂತಾದ ಎಲ್ಲಾ ವಿಷಯಗಳನ್ನು ತನ್ನ ಜ್ಞಾನ ಭಂಡಾರದಲ್ಲಿ ತುಂಬಿಸಿ ಅದನ್ನು ಅರ್ಥ ಮಾಡಿಕೊಂಡೇ ಕೃಷಿಗೆ ಇಳಿದರೆ ಅದು ನೈಜ ಕೃಷಿ ಎನ್ನಿಸಬಲ್ಲದು.
ಮಣ್ಣಿನ ದ್ರವ್ಯರಾಶಿಯು ಸ್ವತಂತ್ರ ರೀತಿಯಿಂದ ವರ್ತಿಸುವ ಒಂದೊಂದು ಕಣಗಳ ಮಿಶ್ರಣವಾಗಿರುವುದಿಲ್ಲ. ಮಣ್ಣಿನಲ್ಲಿ ಖನಿಜ ಪದಾರ್ಥಗಳು ಹಾಗೂ ಸಾವಯವ ಪದಾರ್ಥಗಳು ನಿಕಟವರ್ತಿಯಾಗಿ ಸಂಬಂಧ ಪಡೆದಿರುತ್ತವೆ. ಖನಿಜ ಕಣಗಳು ಕಣ್ಣಿಗೆ ಸಹಜವಾಗಿ ಕಾಣಬಹುದಾದಂತಹ ಗಾತ್ರದಿಂದ ಹಿಡಿದು ಅತಿಗಾಮಿ ಸೂಕ್ಷ್ಮದರ್ಶಕ ಯಂತ್ರದಿಂದಲೂ ಸಹ ಕಾಣಲಾರದಷ್ಟು ಸೂಕ್ಷ್ಮಗಾತ್ರದವರೆಗೆ ಇರಬಹುದಾಗಿದೆ. ಇವುಗಳೊಡನೆ ಪ್ರತಿಸ್ಫಟಿಕ ಹಾಗೂ ಅಸ್ಥಿರವಾದ ಸಾವಯವ ಪದಾರ್ಥವು ಹ್ಯೂಮಸ್ ರೂಪದಲ್ಲಿ ಕೂಡಿಕೊಂಡಿರುತ್ತದೆ. ಹೀಗೆ ಮಣ್ಣು ಪ್ರತಿಸ್ಪಟಿಕಯುಕ್ತವಾಗಿದ್ದು ಎಲ್ಲ ತೆರನಾದ ಗಾತ್ರಗಳುಳ್ಳ ಖನಿಜ ಕಣಗಳ ಸಮೂಹವಾಗಿರುತ್ತದೆ. ಖನಿಜ ಕಣಗಳು ಗುಂಪುಗೂಡಿ ಪ್ರತಿಸ್ಫಟಿಕ ಸಂಕೀರ್ಣ ಪದಾರ್ಥಗಳಿಂದ ಬಿಗಿಯಲ್ಪಟ್ಟಿರುತ್ತವೆ. ಮಣ್ಣಿನ ದ್ರವ್ಯರಾಶಿಯು ತನ್ನ ಎಲ್ಲ ಸಂಯುಕ್ತದ ಪ್ರತಿಯೊಂದು ಭಾಗಗಳ ಗುಣಧರ್ಮಗಳನ್ನೂ ಪ್ರಕಟಿಸುವುದಲ್ಲದೆ ಈ ಎಲ್ಲ ಗುಣಧರ್ಮಗಳ ಒಟ್ಟು ಪರಿಣಾಮದಿಂದ ಅಧಿಕ ಗುಣಧರ್ಮಗಳನ್ನು ವ್ಯಕ್ತಪಡಿಸುತ್ತದೆ. ಮಣ್ಣಿನ ಹಲವು ಭೌತಿಕ ಗುಣಧರ್ಮಗಳು ಹೀಗಿವೆ:
ಮಣ್ಣಿನ ಸ್ವರೂಪ : ಮಣ್ಣಿನ ಸ್ವರೂಪವನ್ನು ಮಣ್ಣಿನ ವಿವಿಧ ಗಾತ್ರದ ಕಣಗಳ ಪರಸ್ಪರ ಸಂಬಂಧದಲ್ಲಿ ಹೇಳುವುದುಂಟು. ದೊಡ್ಡ ಗಾತ್ರದ ಕಣಗಳು ಅಧಿಕ ಸಂಖ್ಯೆಯಲ್ಲಿರುವ ಮಣ್ಣಿನ ಉರುಟು ಸ್ವರೂಪದ ಅಥವಾ ಆ ಹಗುರ ಸ್ವರೂಪದ ಮಣ್ಣು ಎಂದು, ಸಣ್ಣ ಗಾತ್ರ ಕಣಗಳು ಅಧಿಕ ಸಂಖ್ಯೆಯಲ್ಲಿರುವ ಮಣ್ಣಿನ ನಯವಾದ ಸ್ವರೂಪ ಅಥವಾ ಜಡ ಸ್ವರೂಪದ ಮಣ್ಣು ಎಂತಲೂ ಕರೆಯುವರು. ಸರ್ವಸಾಮಾನ್ಯವಾಗಿ ಮಣ್ಣಿನ ಸ್ವರೂಪವು ಮಹತ್ವದ ಗುಣಧರ್ಮವಾಗಿದ್ದು ಫಲವತ್ತತೆಯು ಅದಕ್ಕೆ ಅನುಗುಣವಾಗಿರುತ್ತದೆ. ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಕ್ರಿಯೆಗಳು ಅದರ ಸ್ವರೂಪಕ್ಕೆ ಹೆಚ್ಚಾಗಿ ಹೊಂದಿಕೊಂಡಿರುತ್ತವೆ. ಒಂದು ನಿರ್ದಿಷ್ಟ ಘನಕ್ಷೇತ್ರ ಅಥವಾ ತೂಕದ ಜಿನುಗು ಕಣಗಳು ಅಷ್ಟೇ ಘನಕ್ಷೇತ್ರ ಅಥವಾ ತೂಕದ ಉರುಟು ಕಣಗಳಿಗಿಂತಲೂ ಹೆಚ್ಚು ಆವರಣ ಕ್ಷೇತ್ರವನ್ನು ಹೊಂದಿರುತ್ತವೆ. ಒಂದು ಗ್ರಾಮ್ ತೂಕದ ಮರಳಿನ ಕಣಗಳ ಒಟ್ಟು ಆವರಣ ಕ್ಷೇತ್ರವು ೮೯ ಚದರ ಅಂಗುಲ. ರೇವೆ ಕಣಗಳ ಆವರಣ ಕ್ಷೇತ್ರ ೨೯೪ ಚದರ ಅಂಗುಲ ಹಾಗೂ ಎರೆಕಣಗಳ ಆವರಣ ಕ್ಷೇತ್ರ ೬೫೩ ಚದರ ಅಂಗುಲಗಳಾಗುವುದೆಂದು ಕಂಡುಬಂದಿದೆ. ಜಿನುಗು ಮಣ್ಣಿನಲ್ಲಿ ಆವರಣ ಕ್ಷೇತ್ರವು ಹೆಚ್ಚಿಗೆ ಇರುವುದರಿಂದ ನೀರಿನೊಂದಿಗೆ ಅದರ ಸಂಪರ್ಕ ಹೆಚ್ಚು ಕ್ಷೇತ್ರದ ಮೇಲೆ ಆಗುತ್ತದೆ. ಆದ್ದರಿಂದ ಎರೆಮಣ್ಣು ಹೆಚ್ಚು ನೀರನ್ನು ಹೀರಿಕೊಳ್ಳಬಲ್ಲದು ಮತ್ತು ತನ್ನಲ್ಲಿರುವ ಆಹಾರ ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಕರಗಿಸಿ, ಸಸ್ಯಗಳಿಗೆ ಒದಗಿಸಬಲ್ಲದು. ಜಿನುಗು ಮಣ್ಣಿನಲ್ಲಿ ಕಣಗಳ ಸಂಖ್ಯೆ ಬಹಳ ಇರುವುದು ಕಾರಣ ಉರುಟು ಮಣ್ಣಿಗಿಂತಲೂ ಹೆಚ್ಚು ಸಸ್ಯಾಹಾರವು ಸಂಗ್ರಹಿಸಲ್ಪಟ್ಟಿರುತ್ತದೆ.
ಮಣ್ಣಿನ ಕಣಗಳನ್ನು ಅವುಗಳ ಗಾತ್ರದ ಮೇಲಿಂದ ಕೆಳಗಿನಂತೆ ವರ್ಗೀಕರಿಸಬಹುದು. ಪ್ರತಿಯೊಂದು ನಿರ್ದಿಷ್ಟ ಗಾತ್ರದ ಕಣಗಳಿಗೆ ಮಣ್ಣಿನ ವಿಂಗಡಣೆ ಎನ್ನುವರು.
ಮಣ್ಣಿನ ವಿಂಗಡಣೆ ಕಣಗಳ ವ್ಯಾಸ (ಮಿ.ಮಿ.)
೧. ಸಣ್ಣ ಗರಸು ಅಥವಾ ಬಹಳ ಉರುಟು ಮರಳು ೨.೦ - ೧.೦
೨. ಉರುಟು ಮರಳು ೧.೦ - ೦.೫
೩. ಮಧ್ಯಮ ಮರಳು ೦.೫೦ - ೦.೨೫
೪. ಜಿನುಗು ರಮಳು ೦.೨೫ - ೦.೩೦
೫. ಅತಿ ಜಿನುಗು ಮರಳು ೦.೧೦ - ೦.೦೫
೬. ರೇವ ೦ .೦೫ - ೦.೦೦೨
೭. ಜೇಡಿ ಅಥವಾ ಎರೆ - ೦.೦೦೦೨ಕ್ಕಿಂತ ಕಡಿಮೆ
ಮಣ್ಣು ವಿಜ್ಞಾನದ ಅಂತರರಾಷ್ಟಿçÃಯ ಸಂಘವು ಮಣ್ಣಿನ ಕಣಗಳ ವರ್ಗೀಕರಣವನ್ನು ಕೆಳಗಿನಂತೆ ಮಾಡಿದೆ.
ವಿಂಗಡಣೆ ಕಣಗಳ ವ್ಯಾಸ (ಮಿ.ಮಿ.)
೧. ಗರಸು (ದಪ್ಪ ಮರಳು) ೨.೦ ಹಾಗೂ ಹೆಚ್ಚು
೨. ಉರುಟು ಮರಳು ೨.೦೦ - ೦.೨೦
೩. ಜಿನುಗು (ಸಣ್ಣ) ಮರಳು ೦.೨೦ - ೦.೦೨
೪. ರೇವೆ ೦.೦೨ - ೦.೦೦೨
೫. ಎರೆ ಅಥವಾ ಜೇಡಿ ೦.೦೦೨ಕ್ಕಿಂತ ಕಡಿಮೆ
ಮಣ್ಣಿನ ವಿಂಗಡಣೆಗಳ ಗುಣಧರ್ಮಗಳು ; ಮಣ್ಣಿನ ವಿಂಗಡಣೆಗಳಾದ ಗರಸು, ಮರಳು, ರೆವೆ ಹಾಗೂ ಎರೆ ಕಣಗಳ ಗುಣಧರ್ಮ ಬೆರೆ ಬೇರೆ ಇರುತ್ತದೆ.
ಗರಸು ಹಾಗೂ ಮರಳು ಮಣ್ಣು
* ಇವುಗಳಿಗೆ ಕಡಿಮೆ ತೇವ ಸಂಗ್ರಹಿಸುವ ಸಾಮರ್ಥ್ಯವಿರುತ್ತದೆ.
* ಸಸ್ಯ ಪೋಷಕಾಂಶಗಳು ಕಡಿಮೆ ಇರುತ್ತವೆ.
* ಅಂಥ ಮಣ್ಣುಗಳಲ್ಲಿ ಅಲ್ಪಾವಧಿಯ ಬೆಳೆಗಳನ್ನು ಮಾತ್ರ ಬೆಳೆಯಬಹುದು.
* ಸಂಸಕ್ತಿ ಹಾಗೂ ಮೆದುತ್ವ ಗುಣಗಳಿರುವುದಿಲ್ಲ.
* ಉತ್ತಮ ಉಷ್ಣವಾಹಕಗಳಾಗಿರುತ್ತವೆ.
* ಇವು ಭೂಮಿಯ ಮೇಲೆ ಆಚ್ಛಾದನೆಯಂತೆ ಕೆಲಸ ಮಾಡುವುದರಿಂದ ಮಳೆಯ ನೀರಿನ ಓಟವನ್ನು ತಡೆಗಟ್ಟುತ್ತದೆ. ಹಾಗೂ ಮಣ್ಣಿನಲ್ಲಿರುವ ತೇವವು ಬಾಷ್ಪೀಭವನ ಕ್ರಿಯೆಯಿಂದ ಹಾಳಾಗುವುದನ್ನು ತಪ್ಪಿಸುತ್ತದೆ.
* ಈ ಮಣ್ಣಿನಲ್ಲಿ ನೀರಿನ ಇಂಗುವಿಕೆ ಚೆನ್ನಾಗಿರುತ್ತದೆ.
ರೇವೆ :
* ಬೆರಳುಗಳ ಮಧ್ಯೆ ತಿಕ್ಕಿದರೆ ರೇವೆ ಹಿಟ್ಟಿನಂತೆ ಅನಿಸುತ್ತದೆ.
* ರೆವಕಣಗಳು ಅರ್ಧಂಬರ್ಧ ವಾತಕ್ರಿಯೆ ಒಳಗೊಂಡಿರುವುದರಿAದ ವಾತ ಕ್ರಿಯೆ ಮುಂದುವರಿದAತೆ ಸಸ್ಯಾಹಾರಗಳು ಬಿಡುಗಡೆಯಾಗುತ್ತವೆ.
* ರೇವೆ ಕಣಗಳು ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಿಸುತ್ತವೆ. ಆದರೆ ಅವು ನೀರಿನಿಂದ ಉಬ್ಬುವುದಿಲ್ಲ.
* ರೇವೆ ಕಗಣಗಳಿಗೆ ಅತಿ ಕಡಿಮೆ ಮೆದುತ್ವ ಗುಣವಿರುವುದರಿಂದ ತೇವವಾದೊಡನೆ ಜಿಗುಟಾಗುವುದಿಲ್ಲ.
* ಮಣ ್ಣನಲ್ಲಿ ನೀರು ಆಳವಾಗಿ ಇಂಗುವುದಲ್ಲದೆ ಭೂಮಿಯಲ್ಲಿ ಹವೆಯಾಡುವಿಕೆಯೂ ಉತ್ಕೃಷ್ಟವಾಗಿರುತ್ತದೆ.
ಎರೆ (ಜೇಡಿ) :
* ಎರೆ ಕಣಗಳು ಸಾವಯವ ಪದಾಥವನ್ನು ಹೊಂದಿರುತ್ತವೆ.
* ಹಸಿಯಾದೊಡನೆ ಎರೆ ಕಣಗಳು ಉಬ್ಬುತ್ತವೆ. ಪೊಟ್ಯಾಸಿಯಂ, ಲೀಥಿಯಂ ಹಾಗೂ ಅಮೋನಿಯಂಗಳು ಆ ಮಣ್ಣಿನಲ್ಲಿದ್ದರೆ ಪ್ರಸರಣ ಹೊಂದುವ ಕ್ರಿಯೆ ಸ್ಪಷ್ಟವಾಗಿರುತ್ತದೆ.
* ಎರೆ ಕಣಗಳನ್ನು ಸೂಕ್ಷ್ಮದರ್ಶಕ ಯಂತ್ರದಿಂದ ಮಾತ್ರ ನೋಡಬಹುದು. ಅವು ಅತಿ ಜಿನುಗಾಗಿರುತ್ತವೆ. ಆದ್ದರಿಂದ ಅಂಥ ಮಣ್ಣಿನಲ್ಲಿ ಆವರಣ ಕ್ಷೇತ್ರ ಹೆಚ್ಚಾಗಿರುತ್ತದೆ.
* ಅನುಸಕ್ತಿ (ಅಂಟುಕೊಳ್ಳುವಿಕೆ) ಹಾಗೂ ಸಂಸಕ್ತಿಗಳು ಎರೆ ಕಣಗಳ ಗುಣಗಳಾಗಿವೆ. ಆದ್ದರಿಂದ ಮಣ್ಣಿನಲ್ಲಿ ಒಳ್ಳೆಯ ರಚನೆ ಉಂಟಾಗುತ್ತದೆ. ಹಸಿಯಾದ ಎರೆ ಮಣ್ಣನ್ನು ಬಳ್ಳಿಯಂತೆ ಹೊಸೆಯಬಹುದು.
* ಎರೆ ಭೂಮಿಯಲ್ಲಿ ಇಂಗುವಿಕೆಯು ಇತರ ಮಣ್ಣುಗಳಿಗಿಂತ ಕಡಿಮೆ ಇರುತ್ತದೆ. ಮಣ್ಣಿನಲ್ಲಿ ಸೋಡಿಯಂ ಹೆಚ್ಚಾಗಿದ್ದರೆ ಇಂಗುವಿಕೆಗೆ ತೊಂದರೆ ಉಂಟಾಗುತ್ತದೆ.
ಮಣ್ಣಿನ ಸ್ವರೂಪ ವರ್ಗಗಳು : ಮೂರು ವಿಂಗಡಣೆಗಳಾದ ಮರಳು, ರೇವೆ ಹಾಗೂ ಎರೆ ಕಣಗಳ ಪರಸ್ಪರ ಮಿಶ್ರಣಗಳಿಂದ ಉಂಟಾದ ಮಣ್ಣಿನ ಖನಿಜ ಭಾಗದ ರಚನೆಗೆ ಮಣ್ಣಿನ ಸ್ವರೂಪ ಎನ್ನುವರು. ಈ ಮೂರು ವಿಂಗಡಣೆಗಳ ಮಿಶ್ರಣ ಪ್ರಮಾಣ ಅನೇಕ ತೆರನಾಗಿರಬಹುದಾದ ಕಾರಣ ರಚನೆಗಳು ಅನೇಕ ವಿಧವಾಗಿರುತ್ತವೆ. ವರ್ಗೀಕರಣದ ಸಲುವಾಗಿ ಮಣ್ಣಿನ ವಿಜ್ಞಾನಿಗಳು ಪ್ರತಿಯೊಂದು ಮಿಶ್ರಣದಲ್ಲಿನ ಯಾವ ವಿಂಗಡಣೆ ಎಷ್ಟು ಇರಬೇಕೆಂಬುದನ್ನು ಸಮಾಲೋಚನೆ ಮಾಡಿ ತೀರ್ಮಾನಿಸಿರುತ್ತಾತೆ. ಈ ಮಿತಿಯೊಳಗಿರುವ ಪ್ರತಿಯೊಂದು ಮಿಶ್ರಣಕ್ಕೆ ಒಂದು ಸ್ವರೂಪ ವರ್ಗದ ಹೆಸರು ಕೊಟ್ಟಿರುತ್ತಾರೆ.
ಮಣ್ಣಿನ ಕ್ಷಿತಿಜದ (ವಲಯ) ಸ್ವರೂಪವು ಶಾಶ್ವತವಾದ ಗುಣವಾಗಿದೆ. ಏಕೆಂದರೆ, ಸ್ವರೂಪವು ದೀರ್ಘಕಾಲದ ವರೆಗೆ ಬದಲಾಗದೇ ಉಳಿಯುತ್ತದೆ.ಮಣ್ಣಿನ ವರ್ಗೀಕರಣ ಮಾಡುವುದಕ್ಕೋಸ್ಕರ ಮಣ್ಣಿನ ಸ್ವರೂಪದ ಬಗ್ಗೆ ಮೂಲಭೂತವಾಗಿ ವಿಚಾರ ಮಾಡಲೇಬೇಕಾಗುತ್ತದೆ. ಸ್ವರೂಪ ವಿಶ್ಲೇಷಣೆಯ ಆ ಮಣ್ಣು ಎಷ್ಟರ ಮಟ್ಟಿಗೆ ವಾತಕ್ರಿಯೆಗೊಂಡಿದೆ ಎಂಬುದನ್ನು ಸೂಚಿಸುತ್ತದೆ. ಸ್ವರೂಪ ವರ್ಗದ ಹೆಸರು ಒಂದು ಮಣ್ಣಿನ ಫಲವತ್ತತೆಯ ಬಗ್ಗೆ ಪ್ರಸ್ತಾಪಿಸುತ್ತದೆ.
(ಇನ್ನೂ ಇದೆ)
ಚಿತ್ರ ವಿವರ:
ಚಿತ್ರ ೧: ಮೇಲು ಭಾಗದಿಂದ ಸುಮಾರು ೨೫ ಅಡಿ ತನಕದ ಮಣ್ಣಿನ ರಚನೆ.
ಚಿತ್ರ ೨: ಸಾಧಾರಣ ಫಲತ್ತತೆ ಉಳ್ಳ ಕೆಂಪು ಮಣ್ಣು
ಚಿತ್ರ ೩: ಕರಾವಳಿ ತೀರದ ಸಡಿಲ ಮಣ್ಣು
ಚಿತ್ರಗಳು ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ