ಬಾಗಲಕೋಟೆಯ ಸುತ್ತ ಮುತ್ತ - ೧
ಬಾಗಲಕೋಟೆಯಿಂದ ಗೆಳೆಯ ಅನಿಲ್ ಢಗೆ 'ಬಾಲೇ, ಒಂದೆರಡು ದಿನ ಇದ್ದೋಗ್ವಿಯಂತೆ', ಎಂದು ಬಹಳ ದಿನದಿಂದ ಕರೆಯುತ್ತಿದ್ದ. ಅಲ್ಲಿವರೆಗೆ ಬಂದು ಸುಮ್ನೆ ಮನೆಯಲ್ಲಿ ಕೂತ್ಕೊಳ್ಳುದು ನನ್ನಿಂದ ಆಗದು, ಅಲ್ಲಿಲ್ಲಿ ಅಡ್ದಾಡಬೇಕು ಎಂದು ನಾನಂದಾಗ, 'ದುನಿಯಾ ತೋರಿಸ್ತೀನಿ ಮಗನ, ದುನಿಯಾ. ನೀ ಬಾ ಮೊದ್ಲ' ಎಂದು ಕೊಚ್ಚಿಕೊಂಡ. ೨೦೦೪ರ ಜೂನ್ ತಿಂಗಳ ಅದೊಂದು ಶುಕ್ರವಾರ ಮುಂಜಾನೆ ೫ಕ್ಕೆ ಬಾಗಲಕೋಟೆಯ ನವನಗರದಲ್ಲಿಳಿದು ಈ ದುನಿಯಾ ತೋರಿಸುವವನಿಗೆ ಫೋನಾಯಿಸಿದರೆ, 'ಯಾರ, ಯಾರ' ಎಂದು ತೊದಲತೊಡಗಿದ. ಒಂದೆರಡು ಝಾಡಿಸಿದೊಡನೇ 'ಯಾವಾಗ್ ಬಂದಿಲೇ, ಬಂದೆ ತಡಿ', ಎನ್ನುತ್ತಾ ೫ ನಿಮಿಷದಲ್ಲಿ ಹಾಜರಾದ.
ಆ ದಿನ ನಾವು ಭೇಟಿ ನೀಡಬೇಕೆಂದಿದ್ದು ಬದಾಮಿ, ಬನಶಂಕರಿ, ಮಹಾಕೂಟ, ಹುಲಿಗೆಮ್ಮನಕೊಳ್ಳ, ಪಟ್ಟದಕಲ್ಲು, ಸಿದ್ಧನಕೊಳ್ಳ ಮತ್ತು ಐಹೊಳೆಗೆ. ಇವುಗಳಲ್ಲಿ ಬದಾಮಿ, ಪಟ್ಟದಕಲ್ಲು ಮತ್ತು ಐಹೊಳೆಗಳನ್ನು ಬಿಟ್ಟರೆ ಉಳಿದ ಸ್ಥಳಗಳ ಬಗ್ಗೆ ಅನಿಲನೇ ನನಗೆ ತಿಳಿಸಿದ್ದು. ಬದಾಮಿಗೆ ೫ಕಿಮಿ ದೂರವಿರುವಾಗ ನಮ್ಮ ಬೈಕಿನ ಟಯರ್ ಪಂಕ್ಚರ್! ಒಂದು ನರಪಿಳ್ಳೆಯೂ ಕಾಣಿಸುತ್ತಿರಲಿಲ್ಲ. ಅನಿಲ್ ಫುಲ್ ಮೂಡ್ ಆಫ್. 'ಆನಿ ಕುಂತಂಗೆ ಕುಂತಿ, ಪಂಕ್ಚರ್ ಆಗದೇ ಇನ್ನೇನ' ಎಂದು ನನಗೇ ಬಯ್ಯತೊಡಗಿದ್ದ. ಟಯರ್ ಕಳಚಲು ಪ್ರಯತ್ನ ಮಾಡತೊಡಗಿದೆವು. ನಮ್ಮಿಂದೆಲ್ಲಿ ಅದು ಸಾಧ್ಯ? ಅರ್ಧ ಗಂಟೆ ಕಳೆದಿರಬಹುದು, ಒಂದು ಗೂಡ್ಸ್ ರಿಕ್ಷಾ ನಮ್ಮತ್ತ ಬರತೊಡಗಿತು. ಅದನ್ನು ನಿಲ್ಲಿಸಿ, ಬೈಕನ್ನು ಅದರ ಹಿಂದೆ ಏರಿಸಿ, ನಾವೂ ಏರಿ, ಬದಾಮಿಯೆಡೆ ಹೊರಟೆವು.
ಈ ಬದಾಮಿ ಕೊಳಕು ಊರು. ಗುಹಾದೇವಸ್ಥಾನಗಳು ಇರುವ ಪ್ರಾಂಗಣ ಬಿಟ್ಟರೆ ಉಳಿದೆಲ್ಲಾ ಕಡೆ ಅಸಹ್ಯ. ಇಲ್ಲಿರುವ ಮಂಗಗಳು ಬಹಳ 'ನೊಟೋರಿಯಸ್'. ಕೈಯಲಿದ್ದನ್ನು ಕಸಿದುಕೊಳ್ಳುವುದು, ವಾಹನದೊಳಗೆ ನೂರಿ ಬ್ಯಾಗ್ ಇತ್ಯಾದಿಗಳನ್ನು ಲಪಟಾಯಿಸುವುದು, ಇತ್ಯಾದಿಗಳಲ್ಲಿ ಇವುಗಳು ಪರಿಣಿತ. ಈ ಗುಹಾದೇವಸ್ಥಾನಗಳ ಬಗ್ಗೆ ಎಲ್ಲರಿಗೂ ಗೊತ್ತಿರುವಂತದ್ದೇ. ಒಂದಕ್ಕಿಂತ ಒಂದು ಚೆನ್ನಾಗಿರುವ ಗುಹಾದೇವಸ್ಥಾನಗಳು. ಇದೊಂದು ದೊಡ್ಡ ಕೆಂಪುಬಣ್ಣದ ಬಹೂ ದೂರದವರೆಗೂ ಹಬ್ಬಿರುವ ಬೆಟ್ಟ. ಈ ಬೆಟ್ಟದ ಒಂದು ಪಾರ್ಶ್ವದಲ್ಲಿ ಈ ದೇವಸ್ಥಾನಗಳನ್ನು ಕೆತ್ತಲಾಗಿದೆ. ಬೆಟ್ಟದ ಮೇಲಕ್ಕೆ ತೆರಳಲು ಮೆಟ್ಟಿಲುಗಳಿವೆ. ಈಗ ಅಲ್ಲೊಂದು ಗೇಟನ್ನು ಹಾಕಿ ಬೀಗ ಜಡಿಯಲಾಗಿದೆ. ಕೆಲವು ವರ್ಷಗಳ ಹಿಂದೆ ವಿದೇಶಿ ಮಹಿಳೆಯೊಬ್ಬಳನ್ನು, ಬೆಟ್ಟದ ಮೇಲೆ ಅತ್ಯಾಚಾರಗೈದು ಕೊಲೆ ಮಾಡಲಾಗಿದ್ದರಿಂದ, ಈ ಮುನ್ನೆಚ್ಚರಿಕೆಯ ಕ್ರಮ. ಮೇಲೊಂದು ತುಪಾಕಿಯಿದ್ದು, ಅದನ್ನು ನೋಡುವ ಇರಾದೆ ಇದ್ದ ನನಗೆ, ಬೀಗ ಜಡಿದದ್ದನ್ನು ನೋಡಿ ನಿರಾಸೆ. ಮೇಲೆ ಹೋಗಲೇಬೇಕೆಂಬ ಇಚ್ಛೆ ಇದ್ದಲ್ಲಿ, ಗುಹಾದೇವಸ್ಥಾನಗಳು ಇರುವ ಪ್ರಾಂಗಣದಿಂದ ಹೊರಬಂದು, ಬೆಟ್ಟದ ಬುಡದಲ್ಲೇ ಸ್ವಲ್ಪ ದೂರ ನಡೆದು ನಂತರ ಯಾವುದೇ ಶಿಖರ ಏರುವಂತೆ ಒಂದೆರಡು ತಾಸು ನಡೆದು ಮೇಲೆ ತುಪಾಕಿ ಇದ್ದಲ್ಲಿ ತಲುಪಬಹುದು. ಆದರೆ ನನ್ನಲ್ಲಿ ಅಷ್ಟು ಸಮಯವಿರಲಿಲ್ಲ.
ಗುಹಾದೇವಸ್ಥಾನಗಳ ಎದುರಿಗೇ ಅಗಸ್ತ್ಯ ತೀರ್ಥವೆಂಬ ವಿಶಾಲ ಕೆರೆ ಇದೆ. ಅದರ ತಟದಲ್ಲೊಂದು ದೇವಸ್ಥಾನ. ಚೆನ್ನಾಗಿ ಮಳೆ ಬಿದ್ದಾಗ, ಗುಹಾದೇವಸ್ಥಾನಗಳಿರುವ ಬೆಟ್ಟದ ಮೇಲೆ ಬೀಳುವ ಮಳೆನೀರು ಕೆಳಗೆ ಹರಿದು ಈ ಕೆರೆಯನ್ನು ಸೇರುವಾಗ ಜಲಪಾತವೊಂದನ್ನು ನಿರ್ಮಿಸುತ್ತದೆ. ಎರಡು ಕವಲುಗಳಲ್ಲಿ ಬೆಟ್ಟದ ತುದಿಯಿಂದ ೫೦-೭೦ ಅಡಿಯಷ್ಟು ಕೆಳಗೆ ಧುಮುಕುವ ಈ ಜಲಧಾರೆಗೆ 'ಅಕ್ಕ - ತಂಗಿ' ಎಂದು ಹೆಸರು.
ಬನಶಂಕರಿ ತಲುಪಿ ದೇವಸ್ಥಾನ ನೋಡಿದಾಗ ಅಚ್ಚರಿಯಾಯಿತು. ಮಾರ್ವೆಲಸ್ ದೇವಸ್ಥಾನ. ಜನಜಂಗುಳಿಯೇ ಅಲ್ಲಿ ನೆರೆದಿತ್ತು. ಕಷ್ಟಪಟ್ಟು ದೇವಳದೊಳಗೆ ನುಗ್ಗಿ, ದೇವಿಯ ದರ್ಶನ ಪಡೆದು ಹೊರಬರುವಷ್ಟರಲ್ಲಿ ಸಾಕಾಗಿಹೋಗಿತ್ತು. ಬನಶಂಕರಿಯಲ್ಲಿರುವ ಪುಷ್ಕರಿಣಿ ವಿಶಾಲವಾಗಿದ್ದು, ನೀರು ಮಾತ್ರ ಇಲ್ಲ. ಹಿಂದೆ ಸುತ್ತಮುತ್ತಲ ಹಳ್ಳಿಗಳಿಗೆ ನೀರಿನ ಸೆಲೆಯಾಗಿದ್ದ ಈ ಪುಷ್ಕರಿಣಿ ಇಂದು ನೀರಿಲ್ಲದೆ ಭಣಗುಡುತ್ತಿದೆ. ದೇವಸ್ಥಾನದಿಂದ ಹೊರಗೆ ಬಂದ ಕೂಡಲೇ ಅಲ್ಲಿ ರೊಟ್ಟಿ ಮಾರುತ್ತಿದ್ದ ಮುದುಕಿಯರು ನಮಗೆ ರೊಟ್ಟಿ ಕೊಳ್ಳುವಂತೆ ದುಂಬಾಲುಬಿದ್ದರು. ಅವರವರಲ್ಲೇ ಜಗಳವಾಡುತ್ತಾ, ಬಯ್ಯುತ್ತಾ, ಕಚ್ಚಾಡುತ್ತಾ, 'ಇಲ್ ತಗೊರ್ರಿ, ನನ್ನಲ್ಲಿ ತಗೊರ್ರಿ' ಎಂದು ಬೊಬ್ಬಿಡುತ್ತಿದ್ದರು. ನನಗಂತೂ ಹಸಿವಾಗತೊಡಗಿತ್ತು. ನನ್ನ ಮುಖದ ಮುಂದೆ ಹತ್ತಿಪ್ಪತ್ತು ರೊಟ್ಟಿಗಳು, ಆರೇಳು ಕೈಗಳು, ಯಾರಲ್ಲಿ ಕೊಳ್ಳುವುದೆಂಬುದೇ ಸಮಸ್ಯೆಯಾಗಿತ್ತು. ಅಂತೂ ಕಡೆಗೆ ಅನಿಲ ಅವರನ್ನೆಲ್ಲಾ ಜೋರಾಗಿ ಗದರಿಸಿ, ನಮ್ಮನ್ನು ಮೊದಲು ಮಾತನಾಡಿಸಿದವಳಲ್ಲಿ ೬ ರೊಟ್ಟಿ ಮತ್ತಷ್ಟು ಶೇಂಗಾ ಚಟ್ಣಿ ಖರೀದಿಸಿ, 'ಲಪುಟ್ (ಕಿಲಾಡಿ) ಮುದ್ಕ್ಯಾರು' ಎನ್ನುತ್ತಾ ಬಂದ.
ನಂತರ ಪಟ್ಟದಕಲ್ಲಿನ ಹಾದಿಯಲ್ಲಿ ತೆರಳಿದೆವು. ದಾರಿಯಲ್ಲೇ ಸಿಗುವ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿದೆವು. ಬಹಳ ಪ್ರಶಾಂತವಾದ ಸ್ಥಳ. ಅಲ್ಲಲ್ಲಿ ಮರಗಿಡಗಳು. ವಿರಮಿಸಲು ಹೇಳಿ ಮಾಡಿಸಿದಂತಹ ಸ್ಥಳ. ಬದಾಮಿ - ಪಟ್ಟದಕಲ್ಲು ರಸ್ತೆಯಲ್ಲಿ, ಶಿವಯೋಗಿ ಮಂದಿರದ ಬಳಿಕ ಕವಲೊಡೆಯುವ ರಸ್ತೆಯಲ್ಲಿ ೨ಕಿಮಿ ತೆರಳಿದರೆ ಮಹಾಕೂಟ. ಬನಶಂಕರಿಯಲ್ಲಿ ಬಿಸಿಲಿನ ಝಳದಿಂದ ಪಾರಾದರೆ ಸಾಕಪ್ಪಾ ಎಂದೆನಿಸುತ್ತಿದ್ದರೆ ಇಲ್ಲಿ, ಇಲ್ಲೇ ಇದ್ದುಬಿಡೋಣ ಎನ್ನುವಷ್ಟು ತಂಪಾಗಿತ್ತು. ಸುತ್ತು ಸ್ವಲ್ಪ ಕಾಡಿನಂತಿದ್ದು, ಮಹಾಕೂಟ ಪ್ರಶಾಂತವಾದ ಸ್ಥಳದಲ್ಲಿದೆ. ಪೂಜೆ ನಡೆಯುವ ದೇವಸ್ಥಾನದ ಎಡಕ್ಕೆ ಸಣ್ಣದೊಂದು ಪುಷ್ಕರಿಣಿ. ಅಲ್ಲಿ ಬನಶಂಕರಿಯ ಪುಷ್ಕರಿಣಿಯಲ್ಲಿ ಹನಿ ನೀರಿಲ್ಲದಿದ್ದರೂ, ಇಲ್ಲಿ ಮಾತ್ರ ಹೇರಳ ನೀರು. ಅದಾಗಲೇ ನಾಲ್ಕಾರು ಮಂದಿ ಸ್ನಾನ ಮಾಡತೊಡಗಿದ್ದರು. ಸುತ್ತಲೂ ಹಳೇ ಕಾಲದ ದೇವಳಗಳು ಮತ್ತು ದೇವ ದೇವಿಯರ ಮೂರ್ತಿಗಳು. ಮಹಾಕೂಟ ನನಗೆ ಬಹಳ ಹಿಡಿಸಿತು. ಅಲ್ಲೇ ಸಮೀಪದಲ್ಲಿ ಹಳೇ ಮಹಾಕೂಟವೆಂಬ ಸ್ಥಳವೊಂದಿದೆ ಎಂದು ಉಡುಪಿಗೆ ಮರಳಿದ ಬಳಿಕ ನನಗೆ ತಿಳಿದುಬಂತು. ಮುಂದಿನ ಸಲ ಅಲ್ಲಿಗೆ ಹೋಗಬೇಕು.
ಮರಳಿ ಮುಖ್ಯ ರಸ್ತೆಗೆ ಬಂದು ಪಟ್ಟದಕಲ್ಲಿನೆಡೆ ಅನಿಲ ಬೈಕನ್ನು ಓಡಿಸಿದ. 'ಪಟ್ಟದಕಲ್ಲು - ೪' ಎಂಬ ದೂರಸೂಚಿ ಇರುವಲ್ಲಿ ಮಣ್ಣಿನ ರಸ್ತೆಯೊಂದು ಕವಲೊಡೆದಿತ್ತು. ಅದು ೩ಕಿಮಿ ದೂರವಿರುವ ಹುಲಿಗೆಮ್ಮನಕೊಳ್ಳಕ್ಕೆ ಹೋಗುವ ದಾರಿಯಾಗಿತ್ತು. ಅಲ್ಲಿ ಬೈಕು ನಿಲ್ಲಿಸಿದ ಅನಿಲ, 'ಇಲ್ಲೊಂದು ಮಸ್ತ್ ಪ್ಲೇಸ್ ಐತಿ, ಹೋಗೋಣೆನ್?' ಎಂದು ನನ್ನಲ್ಲಿ ಕೇಳಿದ. ಅಲ್ಲೊಬ್ಬಳು ಬಸ್ಸಿಗಾಗಿ ಕಾಯುತ್ತಿದ್ದಳು. ಆಕೆಯಲ್ಲಿ 'ಅಲ್ಲೇನೈತಿ' ಎಂದು ಕೇಳಿದಾಗ, 'ಏ ಹೋಗ್ ಬರ್ರಿ, ಗುಡ್ದದ್ ಮಧ್ಯಾ ಗುಹೆ ಐತ್ರಿ, ದೇವಿ ಅದಾಳ್ರಿ, ನೀರ್ ಬೀಳ್ತೈತ್ರಿ', ಎಂದಳು. ನನ್ನ ಕಿವಿಗೆ 'ನೀರ್ ಬೀಳ್ತೈತ್ರಿ' ಎಂದು ಕೇಳಿದ್ದೇ ತಡ, 'ನಡೀಪ್ಪಾ ಮಾರಾಯ' ಎಂದು, ಅನಿಲನಲ್ಲಿ ಬೈಕನ್ನು ಹುಲಿಗೆಮ್ಮನಕೊಳ್ಳದೆಡೆ ಚಲಾಯಿಸುವಂತೆ ಅವಸರ ಮಾಡತೊಡಗಿದೆ.
ದಾರಿ ನೇರವಾಗಿ ಹುಲಿಗೆಮ್ಮ ದೇವಿಯ ಕೊಳ್ಳಕ್ಕೆ ಬಂದು ಕೊನೆಗೊಂಡಿತ್ತು. ಒಂದೇ ನಿಮಿಷ ನಡೆದು ಎಡಕ್ಕೆ ಮುಖ ಮಾಡಿದರೆ.... ಆಹಾ! ಎಂತಹ ಅದ್ಭುತ ಸ್ಥಳ. ಸುಮಾರು ೨೦೦ಅಡಿ ಎತ್ತರದಿಂದ ಇಳಿಯುತ್ತಿರುವ ಮನತಣಿಸುವ ಜಲಧಾರೆ. ಮತ್ತದೇ ಕೆಂಪು ರಂಗಿನ ಬೆಟ್ಟ. ಮೇಲಿನಿಂದ ಕೆಲವು ಬಿಳಿಲುಗಳು ಜಲಧಾರೆಯ ಕೆಳಗಿನವರೆಗೂ ನೇತಾಡುತ್ತಿವೆ. ನೀರಿನ ಪ್ರಮಾಣ ತುಂಬಾ ಕಡಿಮೆಯಿದ್ದರೂ, ಅಲ್ಲಿನ ಪರಿಸರಕ್ಕೆ ಪೂರಕವಾಗಿತ್ತು ಈ ಜಲಧಾರೆ. ಮಳೆಯಿದ್ದಾಗ ನೋಡಿದರೆ ಇನ್ನೂ ಚೆನ್ನಾಗಿರುತ್ತೆ. ಗುಡ್ಡದ ಕಲ್ಲಿನ ಮೇಲ್ಮೈಯನ್ನೇ ಕೊರೆದು ಹುಲಿಗೆಮ್ಮ ದೇವಿಯ ಮಂದಿರಕ್ಕೆ ಜಾಗವನ್ನು ನಿರ್ಮಿಸಲಾಗಿದೆ. ಮುಂದೆ ಜಲಧಾರೆ, ಅದರ ಹಿಂದೆ ಗುಹೆ. ಆ ಗುಹೆಯಂತಹ ಸ್ಥಳದಲ್ಲಿ ನಿಂತರೆ, ಜಲಧಾರೆಯನ್ನು ಹಿಂದಿನಿಂದ ನೋಡುವ ಅಪೂರ್ವ ಅನುಭವ. ಮುಖದ ಮೇಲೆ ಜಲಧಾರೆಯ ಹನಿ ಹನಿ ನೀರಿನ ಸಿಂಚನ. ಈ ಗುಹೆಯೊಳಗೆ ಹುಲಿಗೆಮ್ಮದೇವಿಯ ಮಂದಿರ, ಶಿವಲಿಂಗ, ಒಂದೆರಡು ಸಣ್ಣ ದೇವಳಗಳು, ಅಡಿಗೆಮನೆ ಇಷ್ಟು ಇವೆ. ಒಂದು ಸಲಕ್ಕೆ ೨೫೦ ಜನರು ರಾತ್ರಿ ಕಳೆಯುವಷ್ಟು ವಿಶಾಲವಾಗಿದೆ ಇಲ್ಲಿನ ಜಗುಲಿ. ಜಲಪಾತದ ಮುಂದೆ ಹಳ್ಳದ ನೀರು ಸಣ್ಣ ತೋಪಿನೊಳಗೆ ಹರಿಯುತ್ತದೆ. ಈ ತೋಪಿನಲ್ಲಿ ಹಕ್ಕಿಗಳ ಚಿಲಿಪಿಲಿಯ ನಡುವೆ ಸ್ವಲ್ಪ ಸಮಯ ಕಳೆದೆವು. ನನಗಂತೂ ಹುಲಿಗೆಮ್ಮನಕೊಳ್ಳ ಅನಿರೀಕ್ಷಿತವಾಗಿ ಸಿಕ್ಕ ನಿಧಿ. ಅಲ್ಲಿ ಕಳೆದ ೩೦ ನಿಮಿಷ ಆಗಾಗ ನೆನಪಾಗುತ್ತಿರುತ್ತದೆ.
ಪಟ್ಟದಕಲ್ಲಿನ ದೇವಸ್ಥಾನ ಪ್ರಾಂಗಣ ಮನಸೂರೆಗೊಳ್ಳುವಂತದ್ದು. ೭ನೇ ಮತ್ತು ೮ನೇ ಶತಮಾನದಲ್ಲಿ ಚಾಳುಕ್ಯರ ಆಳ್ವಿಕೆಯ ಕಾಲದಲ್ಲಿ ಕಟ್ಟಲಾಗಿರುವ ಈ ದೇವಸ್ಥಾನಗಳು ಅದ್ಭುತವಾಗಿವೆ. ಇಲ್ಲಿರುವ ಜೈನ ಬಸದಿಯೊಂದನ್ನು ಸೇರಿಸಿ ೧೦ ದೇವಳಗಳಿವೆ. ವಿಜಯಾದಿತ್ಯ ಸತ್ಯಾಶ್ರಯನೆಂಬ ಚಾಳುಕ್ಯ ರಾಜನು ಕಟ್ಟಿಸಿದ ಸಂಗಮೇಶ್ವರ ದೇವಸ್ಥಾನ ಇಲ್ಲಿರುವ ದೇವಸ್ಥಾನಗಳಲ್ಲಿ ಅತಿ ಹಳೆಯದ್ದು. ನೋಡಲು ಈ ದೇವಸ್ಥಾನ ಅಷ್ಟೇನೂ ಆಕರ್ಷಕವಾಗಿಲ್ಲದಿದ್ದರೂ, ದೇವಸ್ಥಾನದ ಅಗಾಧ ಗಾತ್ರ ಬೆರಗುಗೊಳಿಸುತ್ತದೆ. ಆಕರ್ಷಕವಾಗಿದ್ದು ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವ ದೇವಸ್ಥಾನವೆಂದರೆ ವಿರೂಪಾಕ್ಷ ದೇವಸ್ಥಾನ. ಈ ದೇವಸ್ಥಾನವನ್ನು ರಾಣಿ ಲೋಕಮಹಾದೇವಿಯು ತನ್ನ ಗಂಡ ಎರಡನೇ ವಿಕ್ರಮಾದಿತ್ಯ, ಪಲ್ಲವರ ವಿರುದ್ಧ ಜಯಗಳಿಸಿದ ನೆನಪಿಗಾಗಿ ಕಟ್ಟಿಸಿದ್ದಳು. ಹೆಚ್ಚಿನ ವಿವರ ಇಲ್ಲಿದೆ.
ಪಟ್ಟದಕಲ್ಲಿನಿಂದ ಐಹೊಳೆಗೆ ತೆರಳುವ ಹಾದಿಯಲ್ಲಿ ಬಲಕ್ಕೆ ಒಂದು ಬೆಟ್ಟದ ಮೇಲಿದೆ ಸಿದ್ಧನಕೊಳ್ಳ. ಮೇಲಿನವರೆಗೂ ಚಪ್ಪಡಿಕಲ್ಲು ಹಾಸಿದ ರಸ್ತೆ ಇದೆ. ಇಲ್ಲಿದೆ ಒಂದು ಸಣ್ಣದಾದರೂ, ಪ್ರಶಾಂತ ಕಣಿವೆ ಮತ್ತೆ ಸಣ್ಣ ತೊರೆ. ಆಯಾಸ ಪರಿಹಾರ ಮಾಡಲು ಮತ್ತೊಂದು ಸ್ಥಳ. ಮಳೆ ಬಿದ್ದಾಗ ಮಾತ್ರ ೨೦ ಅಡಿಯಷ್ಟು ಎತ್ತರವಿರುವ ಜಲಧಾರೆಯಲ್ಲಿ ನೀರು ಧುಮುಕುತ್ತಿರುತ್ತದೆ. ನಂತರ ಐಹೊಳೆಗೆ ಪಯಣ. ದಾರಿಯುದ್ದಕ್ಕೂ ಸೂರ್ಯನೆಡೆ ಮುಖ ಮಾಡಿ ನಿಂತಿರುವ ಸೂರ್ಯಕಾಂತಿಗಳ ಸುಂದರ ನೋಟ.
ಐಹೊಳೆಯಲ್ಲಿ ೧೨೫ಕ್ಕೂ ಹೆಚ್ಚಿನ ದೇವಳಗಳಿವೆಯೆಂದು ಹೇಳಲಾಗುತ್ತಿದ್ದರೂ, ಇವುಗಳಲ್ಲಿ ಹೆಚ್ಚಿನವು ನಶಿಸಿಹೋಗಿವೆ. ಸುಂದರವಾಗಿ, ಆಕರ್ಷಕವಾಗಿ ಕಾಣುವಂತದ್ದು ಇಲ್ಲಿರುವ ದುರ್ಗಾ ದೇವಸ್ಥಾನ. ಈ ದೇವಸ್ಥಾನವನ್ನು ಚಾಳುಕ್ಯ ದೊರೆ ಎರಡನೇ ಪುಲಕೇಶಿಯ ಆಸ್ಥಾನದಲ್ಲಿದ್ದ ರವಿಕೀರ್ತಿ ಎಂಬವನು ನಿರ್ಮಿಸಿದ್ದ ಎಂದು ಹೇಳಲಾಗುತ್ತದೆ. ಚಾಳುಕ್ಯರು ಐಹೊಳೆಯಲ್ಲಿ ಮೊದಲು ದೇವಸ್ಥಾನಗಳನ್ನು ಕಟ್ಟಿಸಿದ್ದರು. ನಂತರ ಪಟ್ಟದಕಲ್ಲಿನ ದೇವಸ್ಥಾನಗಳನ್ನು ಕಟ್ಟಿಸಿದರು. ಐಹೊಳೆಯಲ್ಲಿರುವ ದೇವಸ್ಥಾನಗಳ ಶೈಲಿಯನ್ನು 'ಹಳೇ ಚಾಳುಕ್ಯ ಶೈಲಿ' ಎನ್ನಲಾಗುತ್ತದೆ. ಹೆಚ್ಚಿನ ವಿವರ ಇಲ್ಲಿದೆ.
ಹಿಂತಿರುಗುವಾಗ ಒಂದೆಡೆ ಎಡಕ್ಕೆ ತಿರುವು ಪಡೆದು ಬಾಗಲಕೋಟ ಪಟ್ಟಣದೊಳಗೆ ತೆರಳುವ ಬದಲಾಗಿ ಅನಿಲ ನೇರ ಮುಂದಕ್ಕೆ ಬೈಕನ್ನು ಓಡಿಸಿದ. ಒಂದೆರಡು ಕಿಮಿ ತೆರಳಿದ ಕೂಡಲೇ ಆಲಮಟ್ಟಿ ಹಿನ್ನೀರಿನಲ್ಲಿ ನಾವು ತೆರಳುತ್ತಿದ್ದ ರಸ್ತೆ ಮುಳುಗಿತ್ತು. ಇದು ಹಳೇ ಬಾಗಲಕೋಟ. ಆ ರಸ್ತೆ ನೇರವಾಗಿ ಬಾಗಲಕೋಟ ಬಸ್ಸು ನಿಲ್ದಾಣಕ್ಕೆ ತೆರಳುವ ರಸ್ತೆಯಾಗಿತ್ತು. ಈಗ ಸುತ್ತು ಬಳಸಿ ಹೊಸ ರಸ್ತೆಯನ್ನು ಮಾಡಲಾಗಿದೆ. ಮುಂದೆ ನೋಡಿದರೆ ವಿಶಾಲ ಜಲರಾಶಿ. 'ಸಿಟಿಯೊಳಗೆ ಅಷ್ಟೇನು ಮುಳುಗಡೆಯಾಗಿಲ್ಲವಲ್ಲ' ಎಂದು ನಾನು ಕೇಳಲು, 'ನಾಳೆ ತೋರಿಸ್ತಿನಿ' ಎಂದು ಅನಿಲ ಬೈಕನ್ನು ಮನೆಯೆಡೆ ದೌಡಾಯಿಸಿದ. ಆ ದಿನದ ಮಟ್ಟಿಗೆ ಆತ ನನಗೆ 'ದುನಿಯಾ' ತೋರಿಸಿದ್ದನೆನ್ನಿ.