ಬಾಯಿಯ ದುರ್ವಾಸನೆಯ ಸಮಸ್ಯೆಗೆ ಕಾರಣ ಮತ್ತು ಪರಿಹಾರ

ನಾವು ಹಲವಾರು ಮಂದಿಯನ್ನು ಯಾವುದಾದರೂ ಕಾರ್ಯಕ್ರಮದಲ್ಲೋ, ಸಾರ್ವಜನಿಕ ಸ್ಥಳಗಳಲ್ಲೋ ಸಂಧಿಸುತ್ತೇವೆ. ಕೆಲವು ಜನರ ಬಳಿ ಮಾತನಾಡುವಾಗ ಅವರ ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ. ಆದರೆ ಈಗ ಕೋವಿಡ್ ಕಾರಣದಿಂದ ಮಾಸ್ಕ್ ಧರಿಸುವುದರಿಂದ ಈ ಸಮಸ್ಯೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ. ಆದರೆ ಬಾಯಿಯ ದುರ್ವಾಸನೆಯ ಸಮಸ್ಯೆ ನೂರು ಮಂದಿಯಲ್ಲಿ ಸುಮಾರು ೭೫ ಮಂದಿಗೆ ಇದ್ದೇ ಇರುತ್ತದೆಯಂತೆ. ಆದುದರಿಂದ ನಾವು ಈ ಸಮಸ್ಯೆಯ ಮೂಲವೇನು ಎಂಬುವುದನ್ನು ಕಂಡುಕೊಳ್ಳೋಣ.
ಬಾಯಿಯ ದುರ್ವಾಸನೆಗೆ ಬಹುತೇಕ ನಮ್ಮಲ್ಲಿರುವ ಆರೋಗ್ಯ ಸಮಸ್ಯೆಯೇ ಕಾರಣವಾಗಿರುತ್ತದೆ ಎಂದು ಆರೋಗ್ಯ ಮಾಸಿಕಗಳು ತಮ್ಮ ವರದಿಯಲ್ಲಿ ಹೇಳಿವೆ. ಸಾಮಾಜಿಕವಾಗಿ ಮುಜುಗರಕ್ಕೆ ಒಳಪಡಿಸುವ ಈ ಸಮಸ್ಯೆಯು ಹಲವರಲ್ಲಿ ಮಾನಸಿಕ ಸಮಸ್ಯೆಗೂ ಕಾರಣವಾಗುತ್ತದೆ. ಈ ಸಮಸ್ಯೆಯು ಶೇ ೮೦ರಷ್ಟು ಬಾಯಿಯ ಸಮಸ್ಯೆಗಳು, ಶೇ.೨೦ರಷ್ಟು ಗಂಟಲು, ಮೂಗು, ಶ್ವಾಸಕೋಶ, ಜಠರ ಸಂಬಂಧಿ ಸಮಸ್ಯೆಗಳಿಂದಾಗಿ ಬರುತ್ತದೆ. ಬಾಯಿಯನ್ನು ಸ್ವಚ್ಛವಾಗಿರಿಕೊಂಡರೆ ಈ ಸಮಸ್ಯೆಯನ್ನು ಬಹುವಾಗಿ ನಿಯಂತ್ರಿಸಬಹುದು.
ಬಾಯಿಯ ದುರ್ವಾಸನೆಗೆ ವೈದ್ಯಕೀಯ ಭಾಷೆಯಲ್ಲಿ ‘ಹಾಲಿಟೋಸಿಸ್' ಎಂದು ಕರೆಯುತ್ತಾರೆ. ನಮ್ಮ ಆಹಾರವು ಬಾಯಿಯಲ್ಲಿರುವ ಹಲ್ಲಿನಿಂದ ಜಗಿಯಲ್ಪಡುವಾಗ ಅದರ ತುಣುಕುಗಳು ಅದರ ಸಂದಿಗಳಲ್ಲಿ ಉಳಿಯುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಆ ಆಹಾರದ ತುಣುಕಿನಲ್ಲಿ ಇರುವ ಬ್ಯಾಕ್ಟೀರಿಯಾಗಳಿಂದ ದುರ್ವಾಸನೆ ಪ್ರಾರಂಭವಾಗಬಹುದು. ಕೆಲವರು ಊಟ, ಉಪಹಾರ ಸೇವನೆಯ ಬಳಿಕ ಸರಿಯಾಗಿ ಬಾಯಿಯನ್ನು ಮುಕ್ಕಳಿಸುವುದಿಲ್ಲ. ನಾಲಿಗೆಯನ್ನೂ ಸರಿಯಾಗಿ ಸ್ವಚ್ಛವಾಗಿಡುವುದಿಲ್ಲ. ಈ ಕಾರಣದಿಂದಲೂ ದುರ್ವಾಸನೆ ಬರುವ ಸಾಧ್ಯತೆ ಇರುತ್ತದೆ. ಕೆಲವರ ಬಾಯಿಯಲ್ಲಿ ಸ್ವಲ್ಪ ಸಮಯದವರೆಗೆ ವಾಸನೆ ಇದ್ದರೆ, ಕೆಲವು ಮಂದಿಯಲ್ಲಿ ಇದು ನಿರಂತರವಾಗಿ ಬಹುಕಾಲ ಕಂಡುಬರುತ್ತದೆ. ಈ ಕಾರಣದಿಂದ ಕೆಲವರಿಗೆ ಬಾಯಿ ತೆರೆಯಲೇ ಹೆದರಿಕೆಯಾಗುತ್ತದೆ. ಒಂದು ರೀತಿಯ ಭಯ ಕಾಡುತ್ತದೆ. ಈ ಭಯಕ್ಕೆ ‘ಹಾಲಿಟೋಫೋಬಿಯಾ’ ಎನ್ನುತ್ತಾರೆ.
ನಮ್ಮ ಬಾಯಿಯ ಒಳಗಡೆ ಹಲವಾರು ಬಗೆಯ ಬ್ಯಾಕ್ಟೀರಿಯಾಗಳು ಇರುತ್ತವೆ. ನಾಲಿಗೆಯ ಅಡಿಯಲ್ಲಿ, ಗಂಟಲಿನಲ್ಲಿ ಇವುಗಳ ವಾಸ ಇರುತ್ತದೆ. ಹಲವಾರು ಬ್ಯಾಕ್ಟೀರಿಯಾಗಳು ನಮಗೆ ಉಪಕಾರಿಗಳಾಗಿರುತ್ತವೆ. ಅವುಗಳು ತಿಂದ ಆಹಾರ ಜೀರ್ಣವಾಗಲು ಸಹಕರಿಸುತ್ತದೆ. ಕೆಲವೊಮ್ಮೆ ಏನಾಗುತ್ತದೆ ಎಂದರೆ, ನಾವು ತಿಂದ ಆಹಾರದಲ್ಲಿ ಶುಂಠಿ, ಬೆಳ್ಳುಳ್ಳಿ , ನೀರುಳ್ಳಿಯ ಅಂಶಗಳು ಹೆಚ್ಚಾಗಿದ್ದರೆ ಬ್ಯಾಕ್ಟೀರಿಯಾಗಳ ಪರಿವರ್ತನೆಗಳಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಮಾರ್ಪಾಟುಗಳಾಗಿ ಬಾಯಿಯಿಂದ ದುರ್ವಾಸನೆ ಹೊರಬರುತ್ತದೆ. ನಮ್ಮ ಬಾಯಿಯು ಅಧಿಕ ತೇವಾಂಶದಿಂದ ಕೂಡಿದ್ದರೂ ಈ ಮಾರ್ಪಾಡುಗಳು ಸಂಭವಿಸುತ್ತದೆ.
ಬಾಯಿಯ ಒಳಗಡೆ ಹುಣ್ಣಾಗಿದ್ದರೆ, ವಸಡುಗಳಿಗೆ ಗಾಯವಾಗಿದ್ದರೆ, ನಾಲಗೆಯ ಮೇಲೆ ಹುಣ್ಣಾಗಿದ್ದರೆ ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು. ಬಾಯಿಯಲ್ಲಿರುವ ಹಲ್ಲುಗಳು ಕೆಟ್ಟುಹೋಗಿದ್ದರೆ, ಹಲ್ಲು ಉದುರಿಹೋಗಿ ಖಾಲಿ ಜಾಗ ಉಳಿದು ಅಲ್ಲಿ ಆಹಾರ ಸಂಗ್ರಹವಾಗುತ್ತಿದ್ದರೂ ಬಾಯಿಯಿಂದ ವಾಸನೆ ಬರುವ ಸಾಧ್ಯತೆ ಇರುತ್ತದೆ. ಹಲವಾರು ಕಾರಣದಿಂದ ಬಾಯಿ ವಾಸನೆ ಬರುವುದರಿಂದ ವೈದ್ಯರ ಬಳಿ ತೆರಳಿ ಸರಿಯಾದ ಕಾರಣವನ್ನು ಕಂಡುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ರಕ್ತ, ಮಲಮೂತ್ರ, ಎಕ್ಸ್ ರೇ ಮುಂತಾದ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಇದರಿಂದ ನಿಖರವಾಗಿ ಬಾಯಿಯ ದುರ್ವಾಸನೆಯ ಕಾರಣವನ್ನು ಕಂಡುಕೊಳ್ಳಬಹುದು.
ನಮ್ಮ ಸಮಸ್ಯೆಯ ಮೂಲ ತಿಳಿದ ಬಳಿಕ ಅದರ ಪರಿಹಾರದ ಬಗ್ಗೆ ಯೋಚನೆ ಮಾಡಬಹುದಾಗಿದೆ. ಬಾಯಿಯನ್ನು ಸ್ವಚ್ಛವಾಗಿರಿಸಿಕೊಂಡರೆ ಹಲವಾರು ಸಲ ದುರ್ವಾಸನೆಯನ್ನು ಪ್ರಾಥಮಿಕ ಹಂತದಲ್ಲೇ ಪರಿಹಾರ ಮಾಡಬಹುದಾಗಿದೆ. ಈ ಕಾರಣಕ್ಕೆ ಪ್ರತೀ ಸಲ ಆಹಾರ ತಿಂದಾಗ ಬಾಯಿಯನ್ನು ಸರಿಯಾಗಿ ಮುಕ್ಕಳಿಸುತ್ತಿರಿ. ಸಾಧ್ಯವಾದಷ್ಟು ನೀರನ್ನು ಕುಡಿಯಿರಿ. ವಾಸನೆ ಬರುವಂತಹ ಆಹಾರ ಪದಾರ್ಥಗಳನ್ನು ಕಮ್ಮಿ ಬಳಕೆ ಮಾಡಿರಿ. ಮಕ್ಕಳಿಗೆ ಬಾಯಿಯ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ. ಹಲ್ಲಿನ ಸಮಸ್ಯೆಗೆ ಪ್ರಾರಂಭದಲ್ಲೇ ದಂತವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಿರಿ. ಅನಾರೋಗ್ಯವಾದಾಗ ಅದರ ಮೂಲವನ್ನು ಅರಿಯಿರಿ. ಗಂಟಲಿನ ಸಮಸ್ಯೆಗಳಾದ ಟಾನ್ಸಿಲ್ಸ್ ಮುಂತಾದುವುಗಳ ಸಮಸ್ಯೆ, ಮೂಗಿನ ಸಮಸ್ಯೆಗಳು, ಬಾಯಿಯಲ್ಲಿನ ಲಾಲಾ ಗ್ರಂಥಿಗಳ ಸಮಸ್ಯೆಗಳು, ಶ್ವಾಸಕೋಶದ ಸಮಸ್ಯೆಗಳು ಇದ್ದಲ್ಲಿ ಅದಕ್ಕೆ ಅಗತ್ಯವಾದ ಚಿಕಿತ್ಸೆಯನ್ನು ಪಡೆದುಕೊಳ್ಲಬೇಕಾಗುತ್ತದೆ.
ನಾವು ತಿಂದ ಕೆಲವು ಬಗೆಯ ಆಹಾರಗಳು ಜಠರದಲ್ಲಿ ಸರಿಯಾಗಿ ಜೀರ್ಣವಾಗದೆ, ದುರ್ವಾಸನೆ ಬೀರುವ ಅನಿಲವನ್ನು ಉತ್ಪಾದನೆ ಮಾಡುತ್ತದೆ. ಈ ಅನಿಲವು ಬಾಯಿಯ ಮೂಲಕ ಹೊರ ಬಂದಾಗಲೂ ಬಾಯಿಯಿಂದ ದುರ್ವಾಸನೆ ಬರುತ್ತದೆ. ನಾವು ತೆಗೆಯುವ ತೇಗು ಸಹಾ ದುರ್ವಾಸನೆಯನ್ನು ಹೊರಹಾಕಬಹುದು. ಮಾಂಸಹಾರ ಹಾಗೂ ಕೆಲವು ತೀಕ್ಷ್ಣವಾದ ವಾಸನೆಯನ್ನು ಬೀರುವ ತರಕಾರಿ (ಶುಂಠಿ, ಬೆಳ್ಳುಳ್ಳಿ , ನೀರುಳ್ಳಿ ಇತ್ಯಾದಿ)ಗಳನ್ನು ಸೇವನೆ ಮಾಡಿದಾಗ ಅವುಗಳು ಜೀರ್ಣಕ್ರಿಯೆಯಲ್ಲಿ ಮಾರ್ಪಾಡು ಹೊಂದಿ ವಾಸನೆಯನ್ನು ಹೊರಹೊಮ್ಮಿಸಬಹುದು. ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದರೂ ಈ ರೀತಿಯ ದುರ್ವಾಸನೆ ಬರುತ್ತದೆ.
ಈ ದುರ್ವಾಸನೆಗೆ ಪರಿಹಾರವೆಂದರೆ ನಮ್ಮ ಆರೋಗ್ಯ ಮತ್ತು ಆಹಾರ ಪದ್ಧತಿಯನ್ನು ಸರಿಯಾದ ಸಮತೋಲನದಲ್ಲಿ ಇಡುವುದು. ಕೆಲವು ದುರ್ವಾಸನೆಗಳು ತಾತ್ಕಾಲಿಕವಾಗಿದ್ದು, ಸ್ವಲ್ಪವೇ ಸಮಯದಲ್ಲಿ ತನ್ನಿಂದ ತಾನಾಗಿಯೇ ಪರಿಹಾರವಾಗುತ್ತದೆ. ಅದಕ್ಕಾಗಿ ಮೌತ್ ಫ್ರೆಶ್ನರ್, ಲವಂಗ, ಸೋಂಪು ಇತ್ಯಾದಿಗಳನ್ನು ಬಳಸಬಹುದು. ದಿನಕ್ಕೆ ಎರಡು ಬಾರಿ ಉತ್ತಮ ಪೇಸ್ಟ್ ಉಪಯೋಗಿಸಿ ದಂತಗಳನ್ನು ಸರಿಯಾಗಿ ಸ್ವಚ್ಛಮಾಡಿಕೊಳ್ಳಬೇಕು. ಬಾಯಿಯ, ವಸಡುಗಳನ್ನು ಸರಿಯಾಗಿ ಗಮನಿಸುತ್ತಿರಬೇಕು. ಬಾಯಿಯಲ್ಲಿನ ಹುಣ್ಣುಗಳ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಪಾನ್ ಮಸಾಲಾ, ಗುಟ್ಕಾ, ತಂಬಾಕು ಉತ್ಪನ್ನಗಳನ್ನು ಬಾಯಿಯಲ್ಲಿಡುವುದರಿಂದ ಅನೇಕ ಆರೋಗ್ಯ ಸಂಬಂಧಿ ತೊಂದರೆಗಳಾಗುತ್ತವೆ. ಕ್ಯಾನ್ಸರ್ ನಂತಹ ಭೀಕರ ಕಾಯಿಲೆಯೂ ಬರಬಹುದು.
ಬಾಯಿಯನ್ನು ಸ್ವಚ್ಚವಾಗಿಡಲು ಉತ್ತಮ ದರ್ಜೆಯ ಮೌತ್ ವಾಷ್ ಗಳನ್ನು ಬಳಸ ಬೇಕು. ಉತ್ತಮ ಚ್ಯೂಯಿಂಗ್ ಗಮ್ ಸಹ ಬಳಸಬಹುದು. ಆದರೆ ಅಭ್ಯಾಸಗಳು ಚಟವಾಗಬಾರದು. ಒಂದು ನಿಗದಿತ ಸಮಯವಷ್ಟೇ ಉಪಯೋಗಿಸಬೇಕು. ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಭೇಟಿಯಾಗಬೇಕು. ಅವರ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಮದ್ಯಪಾನ, ಧೂಮಪಾನ, ತಂಬಾಕು ಸೇವನೆಯಂತಹ ಚಟಗಳನ್ನು ಬಿಡಬೇಕು ಅಥವಾ ಬಹಳ ಕಮ್ಮಿ ಮಾಡಬೇಕು. ಅಜೀರ್ಣ, ಗಂಟಲು, ನಾಲಗೆ, ಮೂಗು, ಮಧುಮೇಹ, ಶ್ವಾಸಕೋಶದ ತೊಂದರೆಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
ನಾವು ತಿಂದ ಆಹಾರದ ಪರಿಣಾಮ ಸ್ವಲ್ಪ ಬಾಯಿ ವಾಸನೆ ಇದ್ದೇ ಇರುತ್ತದೆ. ಅದರ ಬಗ್ಗೆ ವಿಪರೀತ ತಲೆಕೆಡಿಸಿಕೊಳ್ಳುವುದು ಬೇಡ. ಏಕೆಂದರೆ ಜಗತ್ತಿನ ೮೦ ಶೇಕಡಾ ಜನರಲ್ಲಿ ಈ ಸಮಸ್ಯೆ ಇದ್ದೇ ಇದೆ. ಆರೋಗ್ಯಕರವಾದ ಜೀವನಶೈಲಿಯನ್ನು ನಮ್ಮ ಬಾಳಿನಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಆರೋಗ್ಯವೂ ಸರಿಯಾಗಿರುತ್ತದೆ. ಆರೋಗ್ಯ ಸರಿಯಾಗಿದ್ದರೆ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ.
ಚಿತ್ರ ಕೃಪೆ: ಅಂತರ್ಜಾಲ ತಾಣ