ಭೂಮಿಯ ಮೇಲೆ ಜೇನು ನೊಣಗಳ ಪ್ರಾಮುಖ್ಯತೆ (ಭಾಗ 1)
ಬಾಲ್ಯದಿಂದಲೂ ನನ್ನದು ಭಾಗಶಃ ಜೇನು ಕೀಳುವುದೇ ಕೆಲಸ ಆಗಿತ್ತು. ಜೇನುಗಳನ್ನು ಕೀಳುವುದು ವಾಣಿಜ್ಯ ಉದ್ದೇಶದಿಂದ ಅಲ್ಲದೇ ಇದ್ದರೂ ಅದೊಂದು ಆಹಾರದ ಅಭ್ಯಾಸವಾಗಿ ಹವ್ಯಾಸವಾಗಿತ್ತು. ನನ್ನ ಐದು - ಆರನೇ ವಯಸ್ಸಿನಿಂದಲೇ ಆರಂಭವಾದ ಈ ಅಭ್ಯಾಸ ಹವ್ಯಾಸವಾಗಿ ಇಪ್ಪತ್ತು ಇಪ್ಪತ್ತೆರಡು ವರ್ಷಗಳವರೆಗೆ ಪ್ರಧಾನವಾಗಿಯೇ ಮುಂದುವರೆದಿತ್ತು. ಈಗಲೂ ಕಸುಬು ಮರೆತಿಲ್ಲವಾದರೂ ಅಭ್ಯಾಸ ಮಾಡುತ್ತಿಲ್ಲವಷ್ಟೇ... ನನ್ನ ಸುಧೀರ್ಘ ಜೇನು ಬದುಕಿನಲ್ಲಿ ಇಲ್ಲಿಯವರೆಗೆ ನಾನು ಕನಿಷ್ಟ ಅಂದಾಜು ಸುಮಾರು ಹತ್ತುಸಾವಿರ ಜೇನು ಬಿಡಿಸಿರಬಹುದು.! ಆ ಅನುಭವದ ಹಿನ್ನೆಲೆಯಲ್ಲಿ ಈ ಅಖಂಡ ಭೂ ಪ್ರದೇಶದ ಮೇಲೆ ಜೇನುಹುಳಗಳು ಭೂಮಿಯ ಮೇಲೆ ಇರದಿದ್ದರೆ ಏನಾಗುತ್ತಿತ್ತು? ಜೇನುಹುಳಗಳಿಗೂ ಮತ್ತು ಈ ಭೂಮಿಯ ಜೀವರಾಶಿಗಳ ಆಹಾರದ ಮೇಲಿನ ಸಂಬಂಧ ಹೇಗಿದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ.
ನಮ್ಮ ಮನೆಯಲ್ಲಿ ಎಂದೆಂದಿಗೂ ಜೇನುತುಪ್ಪ ಇಲ್ಲದ ದಿನಗಳು ಇರಲಿಲ್ಲ. ಮನೆಯಲ್ಲಿದ್ದ ರೇಡಿಯೋದಲ್ಲಿ ಯಾವಾಗಲೂ ಒಮ್ಮೆ "ಹಾಲೂ ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ ..." ಎಂಬ ರಾಜುಕುಮಾರ್ ಹಾಡನ್ನು ಆಗಾಗ ಕೇಳುತಿದ್ದೆ. ಆ ಹಾಡಿನಲ್ಲಿ ಹೇಳಿದ ಹಾಗೆ ಹಾಲಿನ ಜೊತೆಗೆ ಜೇನುತುಪ್ಪ ಹಾಕಿಕೊಂಡು ಕುಡಿಯುತ್ತಿದ್ದೆ. 150-200 ml ನ ಹಾಲಿನ ಲೋಟಕ್ಕೆ 20 ml ನಷ್ಟು ಜೇನುತುಪ್ಪ ಸೇರಿದಾಗ ಸಿಹಿ ಹೊಂದಾಣಿಕೆಯಾಗದೇ ಮತ್ತೊಮ್ಮೆ ಇನ್ನೂ ಜಾಸ್ತಿ .. ಇನ್ನೂ ಜಾಸ್ತಿ... ಹೀಗೆ ಹಾಲು ಜೇನು ಆಟ ಆಡುತ್ತಾ ಇರುವ ಜೇನು ತುಪ್ಪ ಖಾಲಿ ಆಗಿಬಿಡುತ್ತಿತ್ತು. ಅದನ್ನು ನೋಡುತ್ತಿದ್ದ ಅಮ್ಮ 'ಮನೆ ಅಂದ ಮೇಲೆ ಒಂದು ಹನಿಯಾದರೂ ಜೇನು ತುಪ್ಪ ಇರಬೇಕು... ಯಾರಾದರೂ ಏನಕ್ಕಾದರೂ ಕೇಳಿದರೆ ಇಲ್ಲದ ಹಾಗೆ ಮಾಡಬೇಡ ಎಂದು ಬಯ್ಯುತ್ತಿದ್ದರು. ಪುನಃ ಕೆಲವೇ ದಿನಗಳಲ್ಲಿ ಶೇಖರಿಸಿ ಇಡುತ್ತಿದ್ದೆ. ಆದರೂ ಜೇನುಹುಳುಗಳ ಪ್ರಾಮುಖ್ಯತೆ ತಿಳಿಯಲೇ ಬೇಕು.
ಜೇನುಹುಳುಗಳು ಸುಮಾರು 6000 ವರ್ಷಗಳ ಹಿಂದೆ ಉಗಮ ಆಗಿರಬಹುದು. ಇವು ಈ ಭೂಮಿಯ ಆದಿ ಜೀವಿಗಳೇ ಆಗಿವೆ. ಮನುಷ್ಯನ ಉಗಮಕ್ಕಿಂತಲೂ ಮೊದಲೇ ಜೇನು ನೊಣಗಳು ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದವು. ಜೇನುತುಪ್ಪ ಭೂಮಿಯ ಮೇಲಿನ ಕೀಟಗಳು ತಯಾರಿಸುವ ಅದ್ಭುತ ವಸ್ತು ಅಂತನೇ ಹೇಳಬಹುದು. ಇದರಲ್ಲಿರುವ ವ್ಯಾಪಕ ಔಷಧೀಗುಣಗಳು ಬಹಶಃ ಮಾನವ ನಿರ್ಮಿತ ಯಾವದ್ರವದಲ್ಲೂ ಇಲ್ಲ. ಆದ್ದರಿಂದನೇ ಈ ಆಂಗ್ಲ ಮೆಡಿಸಿನ್ ಬರುವ ಮುನ್ನ ಪ್ರತಿಮನೆಯಲ್ಲೂ ಜೇನುತುಪ್ಪ ಅಗತ್ಯ ಮತ್ತು ಕಡ್ಡಾಯವಸ್ತು ಆಗಿಯೂ, ಶಾಸ್ತ್ರವೆಂಬಂತೆ ಒಂದೆರಡು ಹನಿಯಷ್ಟಾದರೂ ಇದ್ದೇ ಇರುತ್ತಿತ್ತು. ಕೇವಲ ಭಾರತದಲ್ಲಿ ಅಷ್ಟೆ ಅಲ್ಲ ಪ್ರಾಚೀನ ಈಜಿಪ್ಟ್, ಸುಮೇರಿಯನ್ನರು ಹೀಗೆ ಹಲವು ನಾಗರೀಕತೆಯ ಆರಂಭದಿಂದಲೂ ಇದನ್ನು ಬಳಸುತ್ತಾ ಬಂದಿದ್ದಾರೆ. ಅಧ್ಯಯನದ ಪ್ರಕಾರ ಇತಿಹಾಸ ನೋಡಿದರೆ ಪುರಾತತ್ವಶಾಸ್ತ್ರಜ್ಞರು ಪ್ರಾಚೀನ ಈಜಿಪ್ಟಿನ ಸಮಾಧಿಯಲ್ಲಿನ ಫೇರೋಗಳ ಗೋರಿಗಳಲ್ಲಿ ಜೇನುತುಪ್ಪದ ಮುಚ್ಚಿದ ಜಾಡಿಗಳನ್ನು ಪತ್ತೆಹಚ್ಚಿದ್ದಾರೆ. ಆ ಎಲ್ಲಾ ಜೇನುತುಪ್ಪದ ಜಾಡಿಗಳೊಂದಿಗೆ ಅವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲವಾದರೂ ಬಹುಶಃ ಇನ್ನಿತರ ವಸ್ತುಗಳಿಗಿಂತ ಇದು ಅಮೂಲ್ಯವಾದದು ಮತ್ತು ಪುನರ್ಜನ್ಮ ಇದ್ದರೆ ಅವರಿಗೆ ಅದು ಸಿಹಿಯ ಸಂಕೇತ ಮತ್ತು ಪದಾರ್ಥವಾಗಿ ಇಟ್ಟಿರಬಹುದು. ಅದೇನೇ ಇದ್ದರೂ ಅತ್ಯಮೂಲ್ಯವಾದ ವಸ್ತುಗಳ ಪೈಕಿ ಒಂದಾಗಿದ್ದರಿಂದಲೇ ಅದನ್ನು ಹಾಗೆ ಅವರು ಇಟ್ಟಿರಬಹುದು. ಶೇ.೩೦% ಸುಮೇರಿಯನ್ನರ ವೈದ್ಯಕೀಯ ಚಿಕಿತ್ಸೆಗಳಲ್ಲಿ ಜೇನು ತುಪ್ಪದ ಬಳಕೆಯಿತ್ತು. ಭಾರತದಲ್ಲಿ ಜೇನುತುಪ್ಪವು, ಪುರಾತನ, ಪ್ರಾಚೀನ ಸಾಂಪ್ರದಾಯಿಕ ಔಷಧಗಳಾದ ಸಿದ್ಧ ಮತ್ತು ಆಯುರ್ವೇದದ ಪ್ರಮುಖ ಭಾಗವಾಗಿದೆ. ಹಲವಾರು ಸಂಸ್ಕೃತಿಗಳು ಕೂಡ, ವಿವಿಧ ಔಷಧೀಯ ಉದ್ದೇಶಗಳಿಗಾಗಿ ಜೇನುತುಪ್ಪವನ್ನು ಬಳಸಿಕೊಂಡಿವೆ.
ಜೇನುತುಪ್ಪವು ಇಂದು ವೈದ್ಯಕೀಯ ಸಮುದಾಯದ ವೈಜ್ಞಾನಿಕ ಸಂಶೋಧನೆಯ ಕೇಂದ್ರಬಿಂದುವಾಗಿದೆ. ನಮ್ಮ ಪೂರ್ವಜರು ಈಗಾಗಲೇ ನಿತ್ಯಜೀವನದಲ್ಲಿ ಅನ್ವಯಿಸಿಕೊಂಡ ಜೇನುತುಪ್ಪದ ಹಲವು ಉಪಯೋಗಗಳನ್ನು ಇದು ತನಿಖೆ ಮಾಡಿ ದೃಢಪಡಿಸಿದೆ. ಬಹುಶಃ ಭಾರತೀಯರಷ್ಟು ಆಳವಾಗಿ, ಜೇನುತುಪ್ಪದ ಪ್ರಯೋಜನಗಳನ್ನು ಯಾರೂ ಅನ್ವೇಷಣೆ ಮಾಡಿಲ್ಲವೇನೋ..? ಜೇನುತುಪ್ಪವನ್ನು ಮನುಕುಲಕ್ಕೆ ಪ್ರಕೃತಿಯ ಉಡುಗೊರೆಯೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಅಡುಗೆಮನೆಯಲ್ಲಿಯೂ ಜೇನುತುಪ್ಪ ಅಗತ್ಯವಾದ ಪದಾರ್ಥವೆಂದು ಇಂದಿಗೂ ಆಚರಣೆಯಲ್ಲಿದೆ. ಜೇನುತುಪ್ಪವು ಪೂರ್ವಸಿದ್ಧ ಆಹಾರವಾಗಿಯೂ ಹಾಗೂ ಮನುಷ್ಯರು ಇದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಆಯುರ್ವೇದ ಮತ್ತು ಸಿದ್ಧ ಎರಡರಲ್ಲೂ ಔಷಧ ಗಳ ಮಾಧ್ಯಮವಾಗಿರುವುದು ಜೇನುತುಪ್ಪದ ಒಂದು ವಿಶೇಷ. ಜೇನುತುಪ್ಪದೊಂದಿಗೆ ಇತರ ಔಷಧಿಗಳನ್ನು ಬೆರೆಸಿದಾಗ, ಔಷಧಿಗಳನ್ನು ದೇಹವು ಸುಲಭವಾಗಿ ಮತ್ತು ಶೀಘ್ರವಾಗಿ ಹೀರಿಕೊಳ್ಳುತ್ತದೆ ಹಾಗೂ ರಕ್ತದ ಪರಿಚಲನೆಯ ಮೂಲಕ ನರವ್ಯವಸ್ಥೆಯಲ್ಲಿ ಹರಡುತ್ತವೆ.
ಜೇನುತುಪ್ಪವು, ಔಷಧಿಯ ಶಕ್ತಿಯನ್ನು ಕಾಪಾಡುತ್ತದೆ ಹಾಗೂ ಅದರ ಪರಿಣಾಮಕಾರಿತ್ವವನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕೇ ಕೆಲವು ಆಯುರ್ವೇದ ಔಷಧಿ ಮತ್ತು ಮೂಲಿಕೆಗಳನ್ನು ಜೇನುತುಪ್ಪದ ಕಾಂಬಿನೇಷನ್ನೊಂದಿಗೆ ತೆಗೆದುಕೊಳ್ಳಲು ಹೇಳುವುದು. ನೈಸರ್ಗಿಕ ಜೇನು ಬಹುಪರಿಣಾಮಕಾರಿಯಾಗಿದೆ. ಆಹಾರದಿಂದ-ಹರಡುವ ರೋಗಗಳ ವ್ಯಾಧಿಜನಕಗಳನ್ನು (pathogens), ವೈದ್ಯಕೀಯ-ದರ್ಜೆಯ ಜೇನುತುಪ್ಪವು ನಾಶಪಡಿಸಬಹುದು ಎಂದು ವೈದ್ಯಕೀಯ ಸಂಶೋಧನೆಯು ತೋರಿಸಿದೆ. ಪ್ರತಿಜೀವಕಗಳಿಗೆ (antibiotics) ಪ್ರತಿರೋಧವನ್ನು ವೃದ್ಧಿಪಡಿಸಿಕೊಂಡಿರುವ ಬ್ಯಾಕ್ಟೀರಿಯಾದ ತಳಿಗಳನ್ನು ಎದುರಿಸುವಲ್ಲಿ ಜೇನುತುಪ್ಪದ ಪ್ರಯೋಗವು ಭರವಸೆಯನ್ನು ತೋರಿಸಿದೆ. ಹಲವು ರೋಗಗಳಿಗೆ ಜೇನುತುಪ್ಪವು ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆಯು ಮನದಟ್ಟು ಮಾಡಿಸಿದೆ. ಹೀಗೆ ಜೇನುತುಪ್ಪವನ್ನು ಆರೋಗ್ಯ, ಔಷಧೀಯ ನೂರಾರು ಉಪಯೋಗಗಳನ್ನು ಪಟ್ಟಿಮಾಡಬಹುದು. ಕಣ್ಣಿನ ಚಿಕಿತ್ಸೆ, ಚರ್ಮ ಖಾಯಿಲೆಗಳು, ವಾತ ಪಿತ್ತ, ಕಫ, ಮಲಬದ್ದತೆ, ಹೃದಯರೋಗಗಳೂ ಮತ್ತು ಕ್ಯಾನ್ಸರ್ ನಂತಹ ಖಾಯಿಲೆಗಳವರೆಗೆ, ಅಪಾಯಕಾರಿ ಕ್ರಿಮಿ ಕೀಟಗಳು ಕಚ್ಚಿದಾಗಲೂ ಇದನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಈ ಔಷಧಿಯಾಗಿ ಯಾವುದೇ ಅಡ್ಡಪರಿಣಾಮ ಇಲ್ಲದೇ ಆಗ ತಾನೇ ಜನಿಸಿದ ಮಗುವಿನಿಂದ ಮುದುಕರವರೆಗೆ ಔಷಧೀಯವಾಗಿ ಬಳಸುವ ಕೆಲವು ನಿಯಮಗಳ ಷರತ್ತುಗಳಿಗೊಳಪಟ್ಟು ವಿಶ್ವದಾದ್ಯಂತ ಹೆಚ್ಚು ವಿಶ್ವಾಸದಿಂದ ಬಳಸಲ್ಪಡುತ್ತಿರುವ ಪಾರಂಪರಿಕ ಔಷದವೇ ಈ ಜೇನುತುಪ್ಪ.
(ಇನ್ನೂ ಇದೆ)
-ನಾಗೇಂದ್ರ ಬಂಜಗೆರೆ, ಬಳ್ಳಾರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ