ಮತದಾನ ಪವಿತ್ರ ಕರ್ತವ್ಯ ಎಂಬ ಭ್ರಮೆಯ ಸುತ್ತ…!

ಮತದಾನ ಪವಿತ್ರ ಕರ್ತವ್ಯ ಎಂಬ ಭ್ರಮೆಯ ಸುತ್ತ…!

" ಪ್ರಜಾಪ್ರಭುತ್ವ ಉಳಿಯುವುದು ಮತದಾರನ ಮತದಾನದಿಂದ ಅಲ್ಲ, ಅವರಿಂದ ಆಯ್ಕೆಯಾದ  ಪ್ರತಿನಿಧಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ದಕ್ಷತೆ ಹಾಗು ಪ್ರಾಮಾಣಿಕತೆಯಿಂದ ನಿರ್ವಹಿಸಿದಾಗ " ಹೌದು ಮತದಾನ ಚುನಾವಣಾ ಪ್ರಕ್ರಿಯೆಯ ಒಂದು ಮುಖ್ಯ ಭಾಗ ಎಂಬುದು ನಿಜ.  ಮತದಾರರು ತಮ್ಮ ಪ್ರತಿನಿಧಿಯನ್ನು ತಮ್ಮ ಮತದ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾರೇ ಆಯ್ಕೆಯಾದರು ಅವರು ಅವರ ಇಷ್ಟದಂತೆ ಅಧಿಕಾರ ನಡೆಸಲು ಸಾಧ್ಯವಿಲ್ಲ ಮತ್ತು ಆಯ್ಕೆಯಾದ ವ್ಯಕ್ತಿಗೆ ಆ ಕ್ಷೇತ್ರವನ್ನು ಗುತ್ತಿಗೆ ನೀಡಿದಂತೆ ಆಗುವುದಿಲ್ಲ. ಆತನು ಸಹ ಸಂವಿಧಾನಾತ್ಮಕ ನಿಯಮಾವಳಿಗಳ ಪ್ರಕಾರವೇ ಆಡಳಿತ ನಡೆಸಬೇಕು.

ಭಾರತದಲ್ಲಿ ಇರುವುದು ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ. ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು. ಒಂದು ವೇಳೆ ಚುನಾವಣೆಯಲ್ಲಿ A or B or C or D....... ಯಾರೇ ಆಯ್ಕೆಯಾಗಲಿ ನೀತಿ ನಿಯಮಗಳಿಗೆ ಹೊರತಾಗಿ ಅಂತಹ ದೊಡ್ಡ ವ್ಯತ್ಯಾಸ ಆಗಬಾರದು. ಕಾನೂನಿನ ಅಡಿಯಲ್ಲಿಯೇ ಎಲ್ಲರೂ ಕಾರ್ಯನಿರ್ವಹಿಸಬೇಕು.

ಆದರೆ ವಾಸ್ತವದ ಚಿತ್ರಣವೇ ಬೇರೆ. ಇಲ್ಲಿ ಆಯ್ಕೆಯಾದವರನ್ನು ಭ್ರಷ್ಟರು ಅಥವಾ ಪ್ರಾಮಾಣಿಕರು ಎಂದು ವಿಂಗಡಿಸಲಾಗುತ್ತದೆ. ಬಹುತೇಕರು ಭ್ರಷ್ಟರು ಮತ್ತು ಕೆಲವೇ ಬೆರಳೆಣಿಕೆಯಷ್ಟು ಪ್ರಾಮಾಣಿಕರು ಇದ್ದಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಒಬ್ಬ ಜನ ಪ್ರತಿನಿಧಿ ಭ್ರಷ್ಟ ಎಂದು ಹೇಳಿದ ನಂತರವೂ ಆತ ಹೇಗೆ ಇನ್ನೂ ಕಾರ್ಯನಿರ್ವಹಿಸುತ್ತಾನೆ ಎಂಬ ಪ್ರಶ್ನೆ ಏಳುತ್ತದೆ. ಭ್ರಷ್ಟರು ಅವರು ಯಾವ ಪಕ್ಷದವರೇ ಆಗಿರಲಿ ಭ್ರಷ್ಟಾಚಾರ ಮಾಡಿದ ಮೇಲೆ ಜೈಲಿಗೆ ಹೋಗಬೇಕಲ್ಲವೇ?

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಗೆದ್ದ ಅಭ್ಯರ್ಥಿಯ ಅಭಿಮಾನಿಗಳು ಅಥವಾ ಆಯಾ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ‌ ಸಂಭ್ರಮಿಸುವುದನ್ನು ನೋಡಿದಾಗ ಭ್ರಷ್ಟಾಚಾರದ ಮೂಲ ಬೇರುಗಳನ್ನು ಗುರುತಿಸಬಹುದು. ಗೆದ್ದ ವ್ಯಕ್ತಿ ನಮ್ಮ ಸ್ನೇಹಿತರೋ ಪರಿಚಿತರೋ ಆಗಿದ್ದರೆ ಆತ ನಮಗೆ ಲಾಭ ಮಾಡಿ ಕೊಡುತ್ತಾನೆ ಮತ್ತು ಆತನೂ ಲಾಭ ಮಾಡಿಕೊಳ್ಳುತ್ತಾನೆ ಎಂಬುದು ಬಹಿರಂಗ ಸತ್ಯವಾಗಿರುವಾಗ ಪ್ರಜಾಪ್ರಭುತ್ವ ಮತ್ತು ಕಾನೂನು ಒಂದು ರೀತಿಯ ಅಣಕು ವ್ಯವಸ್ಥೆ ಎಂದೆನಿಸುತ್ತದೆ.

ಕಳ್ಳನೊಬ್ಬ ದರೋಡೆ ಮಾಡಲು ಸನ್ಯಾಸಿಯ ವೇಷ ಧರಿಸುವುದು, ಅದು ತಿಳಿದಿದ್ದರು ಮನೆಯ ಒಡೆಯ ಅವನಿಗೆ ಮಂಗಳಾರತಿ ಮಾಡಿ ಮನೆಗೆ ಸ್ವಾಗತಿಸುವುದು, ಕಳ್ಳ ಕಳ್ಳತನದ ಹಣವನ್ನು ನಮಗೆ ನೀಡಿತ್ತಾನೆ ಎಂದು ಮನೆ ಒಡೆಯ ನಿರೀಕ್ಷಿಸುವುದು,  ನಂತರ ಕಳ್ಳ ಸ್ವಲ್ಪ ಹಣ ಕೊಟ್ಟಂತೆ ಮಾಡಿ ಕೊನೆಗೆ ಇಡೀ ಮನೆಯನ್ನು ದೋಚಿಕೊಂಡು ಹೋಗುವುದು, ಇದು ಅರ್ಥವಾದ ಮೇಲೆ ಮನೆಯ ಒಡೆಯ ಬಾಯಿ ಬಾಯಿ ಬಡಿದುಕೊಂಡು ರೋಧಿಸುವುದು ಎಲ್ಲವೂ ಒಂದು ನಾಟಕದಂತೆ ಕಾಣುತ್ತಿದೆ. ನಾವು ನೀವು ಈ ನಾಟಕದ ಪ್ರೇಕ್ಷಕರು.

ಯಾರದೋ ಸುಖಕ್ಕೆ, ಸಾಧನೆಗೆ, ಯಶಸ್ಸಿಗೆ ಇಡೀ ಮತದಾರರು ಮತದಾನ ಪವಿತ್ರ, ಅದು ನಮ್ಮ ಕರ್ತವ್ಯ, ಪ್ರಜಾಪ್ರಭುತ್ವದ ಯಶಸ್ಸು ಅಡಗಿರುವುದೇ ಮತದಾನದ ಮೂಲಕ ಎಂಬ ಭ್ರಮೆಗೆ ಒಳಗಾಗಿ ಮತದಾನ ಮಾಡುವುದು ಕೊನೆಗೆ ಭ್ರಷ್ಟ ವ್ಯವಸ್ಥೆಯಲ್ಲಿ ಸಿಕ್ಕಿ ನರಳುವುದು.  ಗೆದ್ದ ವ್ಯಕ್ತಿ ಖಾಜಾನೆ ಲೂಟಿ ಮಾಡಲು ಮತದಾರರೇ ಸ್ವಾಗತ ಕೋರಿ ಪಟಾಕಿ ಸಿಡಿಸುವುದು, ಎಂತಹ ವಿಪರ್ಯಾಸ.

ಗೆಳೆಯ ಗೆಳತಿಯರೆ, ದಯವಿಟ್ಟು ಅರ್ಥಮಾಡಿಕೊಳ್ಳಿ, ಜನ ಪ್ರತಿನಿಧಿ ಎಂಬುವವನು ಒಡೆಯನಲ್ಲ ಒಬ್ಬ ಸೇವಕ. ಗೆಲುವು ಸಾಧನೆಯಲ್ಲ ಅದು ಜವಾಬ್ದಾರಿ ಮತ್ತು ಕರ್ತವ್ಯ. ಇಡೀ ಕ್ಷೇತ್ರದ ಜನ ಒಟ್ಟಾಗಿ ಯಾವುದೇ ಕೆಲಸ ಅಥವಾ ತೀರ್ಮಾನ ಮಾಡುವುದು ಕಷ್ಟ ಮತ್ತು ಸಮಯ ವ್ಯರ್ಥ ಎಂಬ ಕಾರಣಕ್ಕಾಗಿ ಚುನಾವಣೆಯ ಮುಖಾಂತರ ಕೇವಲ ಒಬ್ಬನನ್ನು ನಮ್ಮ ಪ್ರತಿನಿಧಿಯಾಗಿ ಕಳುಹಿಸುತ್ತೇವೆ ಅಷ್ಟೇ. ಆತನೂ ಸಹ ತನಗೆ ಇಷ್ಟ ಬಂದಂತೆ ಕಾರ್ಯನಿರ್ವಹಿಸಲು‌ ಸಾಧ್ಯವಿಲ್ಲ. ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಇಷ್ಟು ಸರಳ ವಿಷಯ ಅರಿಯದೆ ಚುನಾವಣೆ ಎಂಬುದು ಒಂದು ದೊಡ್ಡ ಯುದ್ಧ, ಗೆಲುವು ಒಂದು ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ನಮ್ಮನ್ನು ವಂಚಿಸಲಾಗುತ್ತಿದೆ. ಬಡತನ, ಮೌಢ್ಯ, ಶಾಲೆಗೆ ಫೀಜು ಕಟ್ಟಲು ಆಗದ ಒದ್ದಾಟ, ಅಸಹಾಯಕತೆ,  ಅಪೌಷ್ಟಿಕತೆಯಿಂದ ಬಹಳಷ್ಟು ಜನ ನರಳುತ್ತಾ ಜೀವ ಬಿಡುತ್ತಿರುವಾಗ ಅದರ ನಿವಾರಣೆಗೆ ಶ್ರಮಿಸದೆ, ನಾಚಿಕೆ ಇಲ್ಲದೆ ಚುನಾವಣೆ ಗೆದ್ದ ಅಭ್ಯರ್ಥಿ ಪರವಾಗಿ ಪಟಾಕಿ ಹೊಡೆಯುವ ಮನೋಭಾವ ಅತ್ಯಂತ ಹೇಯ.

ಈಗಲಾದರೂ ಎಚ್ಚೆತ್ತುಕೊಳ್ಳಿ. ಕನಿಷ್ಠ ಒಂದು ಒಳ್ಳೆಯ ಸಾಮೂಹಿಕ ಪ್ರಜ್ಞೆ ಬೆಳೆಸಿಕೊಂಡು ನೀವೇ ಈ ಪಕ್ಷಗಳು ಹೇರುವ ಭ್ರಷ್ಟ ಅಭ್ಯರ್ಥಿಗಳನ್ನು ‌ತಿರಸ್ಕರಿಸಿ ನಿಮ್ಮದೇ ಕ್ಷೇತ್ರದ ಒಬ್ಬ ಸ್ಥಳೀಯ ದಕ್ಷ ಪ್ರಾಮಾಣಿಕ ವ್ಯಕಿಯನ್ನು ಗುರುತಿಸಿ ಆತನನ್ನು ಪ್ರತಿನಿಧಿಯಾಗಿ ಆರಿಸಿಕೊಳ್ಳಿ. ಆಗಲಾದರು ಕನಿಷ್ಠ ಮಟ್ಟದ ಬದಲಾವಣೆ ಆಗಬಹುದು. ಸಂವಿಧಾನದ ಮೂಲ ಆಶಯದ ಹತ್ತಿರಕ್ಕೆ ಹೋಗಬಹುದು. ಪ್ರಾಮಾಣಿಕರಿಗೆ ಚುನಾವಣೆಯಲ್ಲಿ ಜಯ ಸಿಕ್ಕರೆ ಮುಂದೆ ಇದೇ ಎಲ್ಲಾ ಕಡೆಯು ಹರಡಿ ಒಳ್ಳೆಯ ಭ್ರಷ್ಟಾಚಾರ ರಹಿತ ಆಡಳಿತ ಸಿಗಬಹುದು. ದೀರ್ಘವಾಗಿ ಮತ್ತು ಸೂಕ್ಷ್ಮವಾಗಿ ಒಮ್ಮೆ ಯೋಚಿಸಿ ನೋಡಿ...

-ವಿವೇಕಾನಂದ ಎಚ್ ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ