ಮುಂಬಾಗಿಲು
ಕವನ
ಮುಂಜಾನೆ ಅಮ್ಮನ
ಇಂಪ ಸವಿಗಾನ
ಬೆಣ್ಣೆ ತೇಲುವ ತನಕ
ಸಂದೇಶ ಹೊತ್ತು
ಬರುವ ಅಂಚೆಯಣ್ಣಗೆ
ತಂಪ ಮಜ್ಜಿಗೆ
ಮುಂಬಾಗಿಲು ತೆರೆದೇ ಇತ್ತು...
ಮನೆಯ ಕಾಯುತ
ಬೌ ಬೌ ಎನುತ
ತಿಳಿಸುತ ಅತಿಥಿಗಳ
ಆಗಮನ
ಕಾಲಿಗೆ ತಲೆಯ ಸವರುತ
ಮಿಯಾಮ್ ಎನುತ
ಸೆಳೆಯುತ ತನ್ನತ್ತ
ಗಮನ
ಮುಂಬಾಗಿಲು ತೆರೆದೇ ಇತ್ತು...
ಅಂಬಾ ಎನುತ ಕರೆಯಲು
ತುಂಬ ಬಿಂದಿಗೆ
ನೊರೆ ಹಾಲು ಅಂದಿಗೆ
ಕೇಕೆ ಹಾಕುತ ಎದ್ದು
ಬಿದ್ದು ಓಡಿ ಅಂಗಳದಿ
ನಲಿದಾಡುತ
ಮುಂಬಾಗಿಲು ತೆರೆದೇ ಇತ್ತು...
ಹೊತ್ತು ಇಳಿಯುತ
ಜಗಲಿಯಲಿ ಅಜ್ಜಿ
ತಾತ ದೊಡ್ಡಪ್ಪ ಚಿಕ್ಕಮ್ಮ
ನಡೆಯುತ ಹಾಸ್ಯ ಹರಟೆ
ಮುಸ್ಸಂಜೆಯಲಿ
ಮನೆತುಂಬ ನಿನಾದ
ಭಕ್ತಿಭಾವದಿ ಭಜನೆ
ಮುಂಬಾಗಿಲು ತೆರೆದೇ ಇತ್ತು...
ತಾಂತ್ರಿಕತೆ ಮೊಳಗಿ
ಯಾಂತ್ರಿಕತೆ ಮೆರೆದು
ಮೊಬೈಲ್ ಟಿವಿ
ಕಂಪ್ಯೂಟರ್
ಅಂತರ್ಜಾಲದಲಿ ಮುಳುಗೇಳುತ
ಆಂತರ್ಯದಲಿ ತೊಳಲಾಡುತ
ವೇಗದ ಬದುಕಲಿ
ಸವಿಯಬಹುದೆ ಬಾಳರಸವ
ಮುಂಬಾಗಿಲು ಮುಚ್ಚಿಯೇ ಇದೆ...
Comments
ಉ: ಮುಂಬಾಗಿಲು
In reply to ಉ: ಮುಂಬಾಗಿಲು by santhosh_87
ಉ: ಮುಂಬಾಗಿಲು