ವಿಶ್ವ ಕ್ಯಾನ್ಸರ್ ದಿನದಂದು ಅರಿವು ಮೂಡಲಿ...
ಕ್ಯಾನ್ಸರ್ ಎಂಬ ಪದ ಕೇಳಿದೊಡನೆಯೇ ಎಲ್ಲರ ಮನದಲ್ಲಿ ಗಾಬರಿ ಮೂಡುತ್ತದೆ. ಈ ರೋಗದ ಪರಿಣಾಮವೇ ಹಾಗೆ. ಬಿಟ್ಟರೂ, ಗುಣವಾದರೂ ಮತ್ತೆ ಉಲ್ಬಣಿಸುವಂತೆ ಮಾಡುವ ಕಾಯಿಲೆ ಇದು. ಬಹಳಷ್ಟು ವೇಳೆ ಈ ಕಾಯಿಲೆ ನಮಗೆ ಇದೆ ಎಂದು ತಿಳಿಯುವಾಗಲೇ ಬಹಳ ಸಮಯ ಆಗಿರುತ್ತದೆ. ಮೊದಲ ಹಂತಗಳಲ್ಲಿ ಚಿಕಿತ್ಸೆ ದೊರೆತರೆ ಖಂಡಿತವಾಗಿಯೂ ಈ ಕ್ಯಾನ್ಸರ್ ರೋಗವನ್ನು ನಿವಾರಿಸಬಹುದಾಗಿದೆ. ಈ ಎಲ್ಲಾ ನಿಟ್ಟಿನಲ್ಲಿ ಅರಿವು, ಜಾಗೃತಿ ಮತ್ತು ವಿಶ್ವಾಸ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಫೆಬ್ರವರಿ ೪ನ್ನು ‘ವಿಶ್ವ ಕ್ಯಾನ್ಸರ್ ದಿನ' ಎಂದು ಘೋಷಣೆ ಮಾಡಿದೆ. ಈ ದಿನದಂದು ವಿಶ್ವದಾದ್ಯಂತ ಈ ಕಾಯಿಲೆಯ ಬಗ್ಗೆ ಇರುವ ಭಯವನ್ನು ನಿವಾರಿಸಿ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಕ್ಯಾನ್ಸರ್ ಕಾಯಿಲೆಗೆ ಗಂಡು- ಹೆಣ್ಣು, ಹಿರಿಯರು-ಮಕ್ಕಳು, ಜಾತಿ-ಧರ್ಮ, ಬಡವ-ಶ್ರೀಮಂತ ಎಂಬ ಯಾವ ಭೇಧವೂ ಇಲ್ಲ. ಯಾವ ಸಮಯದಲ್ಲಾದರೂ ಇದು ವಕ್ಕರಿಸಿಕೊಳ್ಳಬಹುದಾಗಿದೆ. ಕೆಲವೊಂದು ಕ್ಯಾನ್ಸರ್ ನ್ನು ನಾವೇ ಕರೆದು ಪೋಷಿಸಿ ಬೆಳೆಸಿದಂತವುಗಳು. ಉದಾಹರಣೆಗೆ ಧೂಮಪಾನದ ಚಟ ಇರುವವರಿಗೆ ಬರುವ ಶ್ವಾಸಕೋಶದ ಕ್ಯಾನ್ಸರ್, ಗುಟ್ಕಾ, ತಂಬಾಕು ತಿನ್ನುವವರಿಗೆ ಬರುವ ಬಾಯಿ, ಗಂಟಲು ಕ್ಯಾನ್ಸರ್, ಮದ್ಯಪಾನಿಗಳಿಗೆ ತಗಲುವ ಲಿವರ್ ಕ್ಯಾನ್ಸರ್ ಇತ್ಯಾದಿ. ಇವುಗಳನ್ನು ನಾವು ದೂರ ಇಡಬಹುದಾಗಿದೆ. ಇದಕ್ಕಾಗಿ ನಾವು ನಮ್ಮ ದುಶ್ಚಟಗಳನ್ನು ತ್ಯಜಿಸಲು ಮನಸ್ಸು ಮಾಡ ಬೇಕಷ್ಟೇ.
ನಮ್ಮ ದೇಹದಲ್ಲಿ ಅಸಹಜ ಕಾರಣಗಳಿಂದಾಗಿ ಉತ್ಪತ್ತಿಯಾಗುವ ಸಹಜವಲ್ಲದ ಜೀವಕೋಶಗಳಿಂದಾಗಿ ನಮಗೆ ಕ್ಯಾನ್ಸರ್ ಬರುತ್ತದೆ. ಈ ಬೇಡವಾದ ಜೀವಕೋಶಗಳು ನಮ್ಮ ದೇಹದ ಯಾವುದೇ ಭಾಗದಲ್ಲಿ ಬೆಳವಣಿಗೆಯನ್ನು ತೋರಿಸಬಹುದು. ಕೆಲವೊಮ್ಮೆ ನೋವು ಇಲ್ಲದೇ ಇರುವುದರಿಂದ ಕಾಯಿಲೆ ಇರುವ ಬಗ್ಗೆಯೂ ಕೊನೆಯ ಹಂತದವರೆಗೆ ಗೊತ್ತಾಗುವುದಿಲ್ಲ.
ಕ್ಯಾನ್ಸರ್ ಕಾಯಿಲೆ ಮುಖ್ಯವಾಗಿ ಬಾಯಿಯ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಅಧಿಕ ಪ್ರಮಾಣದಲ್ಲಿ ಕಾಣ ಸಿಗುತ್ತದೆ. ಪ್ರತೀ ವರ್ಷ ಸ್ತನ ಕ್ಯಾನ್ಸರ್ ನಿಂದ ಆಗುವ ಸಾವುಗಳ ಸಂಖ್ಯೆಗಳು ಜಾಸ್ತಿಯಾಗುತ್ತಿವೆ. ನಮ್ಮ ದೇಹದ ಯಾವುದೇ ಭಾಗದಲ್ಲಿ ಗಂಟು, ಒಂದು ವಿಭಿನ್ನ ರೀತಿಯ ಮಚ್ಚೆಗಳು, ಕಡಿಮೆಯಾಗದ ಕೆಮ್ಮು, ಅಜೀರ್ಣ, ಮಲ ಮತ್ತು ಮೂತ್ರ ವಿಸರ್ಜನೆಯಲ್ಲಿ ಬದಲಾವಣೆಗಳು, ದ್ವನಿಯಲ್ಲಿನ ಬದಲಾವಣೆ, ತೂಕದಲ್ಲಿ ವ್ಯತ್ಯಾಸ, ರಕ್ತಸ್ರಾವ ಹಾಗೂ ನಗುವಾಗ, ಕೆಮ್ಮುವಾಗ ನೋವು ಕಾಣಿಸುವುದು ಇವೆಲ್ಲಾ ಕ್ಯಾನ್ಸರ್ ರೋಗದ ಲಕ್ಷಣಗಳು. ಇವೆಲ್ಲಾ ಲಕ್ಷಣಗಳು ಇದ್ದವರು ಕ್ಯಾನ್ಸರ್ ನಿಂದಲೇ ಬಳಲುತ್ತಿದ್ದಾರೆ ಎಂದು ತೀರ್ಮಾನಿಸಬಾರದು. ಬೇರೆ ಬೇರೆ ಕಾರಣಗಳಿಂದ ಈ ಮೇಲಿನ ರೋಗ ಲಕ್ಷಣಗಳು ಕಾಣಿಸಬಹುದು. ಕ್ಯಾನ್ಸರ್ ಕಾಯಿಲೆಗೆ ಇವೇ ರೋಗ ಲಕ್ಷಣಗಳು ಅಥವಾ ಚಿನ್ಹೆಗಳು ಎಂದೂ ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದುದರಿಂದ ಕೂಲಂಕುಷವಾದ ತಪಾಸಣೆಯಿಂದ ನಮಗೆ ಬಂದಿರುವುದು ಕ್ಯಾನ್ಸರ್ ಹೌದಾ ಅಲ್ಲವಾ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.
ಕರುಳಿನ ಕ್ಯಾನ್ಸರ್, ಮೇದೋಜಿರಕ ಗ್ರಂಥಿಯ ಕ್ಯಾನ್ಸರ್, ಸ್ತನದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಗಳನ್ನು ರಕ್ತದ ಪರೀಕ್ಷೆ ಮಾಡಿಸುವುದರ ಮೂಲಕ ಪ್ರಾಥಮಿಕ ಹಂತದಲ್ಲೇ ಕಂಡು ಹಿಡಿಯಬಹುದಾಗಿದೆ. ಹೆತ್ತವರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದರೆ ಮಕ್ಕಳೂ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಕೆಲವು ಕ್ಯಾನ್ಸರ್ ಗಳು ವಂಶವಾಹಿನಿಗಳ ಮೂಲಕವೂ ಹರಡುವ ಸಾಧ್ಯತೆ ಇರುತ್ತದೆ. ಮೆದುಳಿನ ಕ್ಯಾನ್ಸರ್ ಗಳು ಮಾತ್ರ ತುಂಬಾನೇ ಅಪಾಯಕಾರಿ. ಮೊದಲೇ ಹೇಳಿದಂತೆ ಕ್ಯಾನ್ಸರ್ ಎಂಬುವುದು ಜೀವಶೋಶಗಳ ಅನಿಯಮಿತ ಬೆಳವಣಿಗೆ. ಈ ಕಾರಣದಿಂದಾಗಿ ಕ್ಯಾನ್ಸರ್ ರೋಗಿಯೊಂದಿಗಿನ ಒಡನಾಟದಿಂದ ಅದು ಇನ್ನೊಬ್ಬರಿಗೆ ಹರಡುವುದಿಲ್ಲ. ನಮ್ಮ ಈ ಯಾಂತ್ರಿಕ ಜೀವನದಲ್ಲಿ ನಮ್ಮ ವಿಭಿನ್ನವಾದ ಜೀವನಶೈಲಿಯಿಂದಾಗಿ ನಮ್ಮಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಅಧಿಕ. ಕಲುಷಿತ ವಾತಾವರಣ ಮತ್ತು ರಾಸಾಯನಿಕ ಭರಿತ ಆಹಾರ ಕ್ರಮದಿಂದಾಗಿ ಹಿರಿಯ ನಾಗರಿಕರಲ್ಲಿ ಹಾಗೂ ಮಕ್ಕಳಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಅಧಿಕವಾಗಿರುತ್ತದೆ. ಈಗಂತೂ ಮಕ್ಕಳಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್)ದಂತಹ ಕ್ಯಾನ್ಸರ್ ಗಳು ಮಕ್ಕಳಲ್ಲಿ ಕಂಡು ಬರುತ್ತಿವೆ.
ಅಧಿಕಾಂಶ ಕ್ಯಾನ್ಸರ್ ಗಳು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲ್ಪಟ್ಟರೆ ಗುಣವಾಗುವ ಸಂಭವ ಅಧಿಕ. ಎಲ್ಲಾ ಕ್ಯಾನ್ಸರ್ ಗಳಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ. ಕೀಮೋಥೆರಪಿ ಅಥವಾ ರೇಡಿಯೋಥೆರಪಿ ಮೂಲಕವೂ ಚಿಕಿತ್ಸೆ ನೀಡಬಹುದು. ಪರಿಣಿತ ವೈದ್ಯರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕ್ಯಾನ್ಸರ್ ಯಾವ ಹಂತದಲ್ಲಿದೆ? ಯಾವ ಭಾಗದಲ್ಲಿದೆ? ಯಾವ ಗಾತ್ರದಲ್ಲಿದೆ? ಎಷ್ಟು ವೇಗದಲ್ಲಿ ಹರಡುತ್ತಿದೆ ಎಂಬೆಲ್ಲಾ ಸಂಗತಿಗಳನ್ನು ಪರಿಶೀಲಿಸಿ ಯಾವ ಚಿಕಿತ್ಸೆ ಉತ್ತಮ ಎಂದು ವೈದ್ಯರು ನಿರ್ಣಯ ಮಾಡುತ್ತಾರೆ. ಕ್ಯಾನ್ಸರ್ ಕಾಯಿಲೆಗೆ ಇನ್ನೂ ನೂರು ಶೇಕಡಾ ಯಶಸ್ವಿಯಾದ ಲಸಿಕೆಯನ್ನು ಕಂಡುಹಿಡಿಯಲಾಗಿಲ್ಲ. ಆದರೂ ಕೆಲವು ಕ್ಯಾನ್ಸರ್ ಗಳು ಬಾರದಂತೆ ಲಸಿಕೆಗಳ ಪ್ರಯೋಗಗಳು ಸಫಲವಾಗಿವೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಗರ್ಭಗೊರಳಿನ ಕ್ಯಾನ್ಸರ್ ಗೆ ಈಗ ಭಾರತದಲ್ಲಿ ಲಸಿಕೆ ಲಭ್ಯವಿದೆ. ಹುಡುಗಿಯೋರ್ವಳಿಗೆ ೯ ವರ್ಷದ ನಂತರ ಈ ಲಸಿಕೆಯನ್ನು ಹಂತ ಹಂತವಾಗಿ ನೀಡಬೇಕಾಗುತ್ತದೆ. ೬ ತಿಂಗಳ ಅವಧಿಯಲ್ಲಿ ಮೂರು ಸಲ ಈ ಲಸಿಕೆ ನೀಡಬೇಕಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಗರ್ಭಗೊರಳಿನ ಕ್ಯಾನ್ಸರ್ ಬರುವ ಸಂಭವ ಇರುವುದಿಲ್ಲ ಎಂದು ಸಂಶೋಧಕರು ಹೇಳುತ್ತಾರೆ.
ವಿಶ್ವ ಸಂಸ್ಥೆಯ ಅಧ್ಯಯನದ ಪ್ರಕಾರ ೩೦-೪೦ ಶೇಕಡಾ ಕ್ಯಾನ್ಸರ್ ಗಳನ್ನು ಬಾರದಂತೆ ನಾವೇ ತಡೆಯಬಹುದಂತೆ. ತಂಬಾಕು, ಮದ್ಯಪಾನ, ಧೂಮಪಾನದಂತಹ ಚಟಗಳನ್ನು ತ್ಯಜಿಸಿದರೆ ನನ್ನ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳ ಬಹುದು.
ನಮ್ಮ ಆಹಾರ ಸೇವನೆಯಲ್ಲೂ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ದೂರವಾಗಿಸಬಹುದು. ಹೊರಗಿನ, ರಾಸಾಯನಿಕ ಭರಿತ ಆಹಾರವನ್ನು ತಿನ್ನದೇ, ನಾವೇ ಮನೆಯಲ್ಲಿ ಸಾಧ್ಯವಾದಷ್ಟು ಶುದ್ಧವಾಗಿ, ಸ್ವಚ್ಚವಾಗಿ ತಯಾರಿಸಿದ ಆಹಾರವನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಹಿತಕರ. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದು, ನಿಯಮಿತ ವ್ಯಾಯಾಮ, ವಾಕಿಂಗ್ ಮಾಡುವುದರಿಂದ ಆರೋಗ್ಯ ಕಾಪಾಡುವುದರ ಜೊತೆಗೆ ಕ್ಯಾನ್ಸರ್ ಬರುವುದನ್ನೂ ತಡೆಗಟ್ಟುವ ಸಾಧ್ಯತೆ ಇದೆ. ಎಲ್ಲಾ ರೀತಿಯ ಜಾಗ್ರತೆ ಮಾಡಿದ ನಂತರವೂ ಕ್ಯಾನ್ಸರ್ ಬರೋ ಸಾಧ್ಯತೆಗಳು ಇದ್ದೇ ಇರುತ್ತದೆ. ಕ್ಯಾನ್ಸರ್ ಬಂದಾಗ ಆತ್ಮವಿಶ್ವಾಸದಿಂದ ಎದುರಿಸಬೇಕು. ಮನಸ್ಸಿನಲ್ಲಿ ಧೈರ್ಯ ಇದ್ದರೆ ಕ್ಯಾನ್ಸರ್ ಎಂಬ ಕಾಯಿಲೆಯನ್ನು ಒದ್ದೋಡಿಸಬಹುದು. ಈಗ ಲಭ್ಯ ಇರುವ ಚಿಕಿತ್ಸೆಗಳಿಂದ ಕಾಯಿಲೆಯನ್ನು ಹೊಂದಿದ್ದೂ ಹಲವಾರು ವರ್ಷಗಳ ಕಾಲ ಸುಖೀ ಜೀವನ ನಡೆಸಬಹುದು. ನಮ್ಮ ನಡುವೆಯೇ ನೂರಾರು ಮಂದಿ ಕ್ಯಾನ್ಸರ್ ಗೆದ್ದ ಖ್ಯಾತನಾಮರನ್ನು ನಾವು ಕಾಣಬಹುದು. ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ನಮ್ಮ ಬದುಕನ್ನು ರೂಪಿಸಿಕೊಳ್ಳಬಹುದು.