ಸರಿಸಾಟಿ ಯಾರಿಲ್ಲ
ಶ್ವೇತ ವರ್ಣದ ಘಮಘಮಿಪ ಪುಷ್ಪವೇ
ಮಾತನಾಡಲು ಪದಗಳೇ ಉಳಿದಿಲ್ಲ ಮನವೇ
ಖಾತೆಯಲಿ ತುಂಬಿರಲು ಹಲವಾರು ಒಲವೇ
ದಾತಾರನಿಗೆ ಖುಷಿಯ ತರುವ ವಿಚಾರವೇ
ಅರಳಿ ನಗುತಿಹ ಸುರ ಸುಂದರಾಂಗಿಯೇ
ಬಿರಿದು ಆಹ್ವಾನಿಸುವ ಕೋಮಲಾಂಗಿಯೇ
ಕರೆದು ಮನ ತಣಿಸುವ ಚಕೋರಿಯೇ
ಮರೆತು ಬಿಡದಂಥ ಮುದ್ದು ಮಾಣಿಕ್ಯವೇ
ಕಂಡ ಕನಸು ನನಸಾಗಿ ಮೆರೆಯಿತಿಂದು
ಮೊಂಡುತನ ಬಿಟ್ಟು ನಿಂತಿರುವೆಯಿಂದು
ದಂಡು ದಂಡು ಹೂಮೊಗ್ಗು ಕಾಣುತಿದೆಯಿಂದು
ಭಂಡತನ ತೋರದೆ ಬಳಿಬಂದೆಯಿಂದು
ನಿನಗೆ ನೀನೇ ಸರಿಸಾಟಿ ಯಾರಿಲ್ಲ ಗೆಳತಿ
ಮನಕೆ ಹರುಷದಿ ಕುಣಿಯುತ ಮುದ ನೀಡಿದೆ ಪ್ರಣತಿ
ತನುವ ಉಲ್ಲಾಸ ನೂರ್ಮಡಿಯಾಗಿ ಹಿಗ್ಗಿತು
ಬಳಿ ಸಾರಿ ಕರಚಾಚಿ ಬಿಗಿದಪ್ಪಿ ಚುಂಬಿಸಿತು
ಬಾ ಬಾರೆ ನನ್ನೊಲವಿನ ಸಿಂಚನ ಫಣಿವೇಣಿ
ನೋಡುಗರ ಚಕ್ಷುಗಳ ಸೆಳೆಯುತಿಹ ಮಣಿಮಾಲಿನಿ
ಹಸಿರು ಗಿಡಗಳ ನಡುವೆ ನಿಂದಿಹ ಹೂರಾಣಿ
ಗಾಳಿಗೆ ಹೊಯ್ದಾಡುವ ಸಿಂಹಕಟಿ ಮೋಹನಾಂಗಿ
ಧನ್ಯವಾಯಿತು ನಿನ್ನ ಹುಟ್ಟಿನ ಗುಟ್ಟು
ಪೋಷಿಸಿ ನಾನಾದೆ ಬೇತಾಳನಂತೆ ಬಿಡದ ಪಟ್ಟು
ಅರಗಿಣಿ ದೇವನ ಮುಡಿಗೇರಿ ಹರುಷದ ಕಟ್ಟು
ಶ್ರೀಗಂಧದ ಪರಿಮಳವಾಗಿ ಮೆರೆದೆ ಸಂತಸ ಪಟ್ಟು
-ರತ್ನಾ ಕೆ.ಭಟ್ ತಲಂಜೇರಿ
