ಸ್ಟೇಟಸ್ ಕತೆಗಳು (ಭಾಗ ೭೯೪) - ಬದುಕು
ಪ್ರತಿದಿನವೂ ಗಾಡಿಯ ಸ್ಟೇರಿಂಗ್ ತಿರುಗಿಸುತ್ತಾ ಊರಿನಿಂದ ಊರಿಗೆ ಜನರನ್ನ ಸಾಗಿಸುವುದು ಅವನ ಕೆಲಸ. ಆತ ಬೆಳಿಗ್ಗೆ ಏಳುವಾಗಲೇ ದಿನವೂ ಅದೇ ಕೆಲಸವನ್ನು ಅದೇ ರಸ್ತೆಯಲ್ಲಿ ಚಲಿಸುತ್ತಾ ಮಾಡಬೇಕಲ್ಲ ಅನ್ನುವ ಉದಾಸೀನತೆ. ಒಂದಿನಿತೂ ನಗದೆ ದಾರಿಯಲ್ಲಿ ಸಿಕ್ಕ ಎಲ್ಲರಿಗೂ ತನ್ನ ಬೈಗುಳದ ಮಾತುಗಳ ಉಪದೇಶಗಳನ್ನು ನೀಡುತ್ತಾ ಗುರಿಯ ಕಡೆಗೆ ತಲುಪುತ್ತಾನೆ.ಅದೇ ದಾರಿಯಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೂ ಚಲಿಸುತ್ತಾ ಆತನ ಊರ ರಸ್ತೆಗಳು ಪರಿಚಯವಾಗಿದೆ. ಅವನು ಕೆಲಸಕ್ಕೆ ಸೇರಿ ಕೆಲವು ತಿಂಗಳುಗಳಾಗಿದೆ. ಅದೇ ರಸ್ತೆಯಲ್ಲಿ ಅಂತಹದೇ ಗಾಡಿಯನ್ನು ಚಲಾಯಿಸುವ ಇನ್ನೊಬ್ಬ ಚಾಲಕನಿದ್ದಾನೆ. ಆತನದ್ದು ಸ್ವಂತ ಗಾಡಿಯೇನಲ್ಲ. ಆದರೂ ಅದನ್ನ ಪ್ರತಿದಿನವೂ ಅಂದದಿಂದ ಶುಭ್ರಗೊಳಿಸಿ ತಾನು ಚಂದದ ಬಟ್ಟೆಗಳನ್ನ ಧರಿಸಿ ಪ್ರತಿ ಕ್ಷಣವನ್ನ ಆಸ್ವಾದಿಸುತ್ತಾ ಅದೇ ರಸ್ತೆಯಲ್ಲಿ ಜನರ ಸಾಗಾಟಕ್ಕಾಗಿ ಸಾಗುತ್ತಾನೆ. ಹಲವು ವರ್ಷಗಳಿಂದ ಇದೇ ಕೆಲಸವನ್ನ ಮತ್ತೆ ಮತ್ತೆ ಮಾಡುತ್ತಿದ್ದರೂ ಸಹ ಆತನಿಗೆ ಒಂದು ದಿನವೂ ಬೇಸರವಾಗಿಲ್ಲ .ಕೆಲಸದ ಬಗ್ಗೆ ತಿರಸ್ಕಾರವಿಲ್ಲ. ತುಂಬಾ ಪ್ರೀತಿಯಿಂದ ಪ್ರತಿ ಒಂದು ಕ್ಷಣವನ್ನು ಆಸ್ವಾದಿಸುತ್ತ ನಿರ್ವಹಿಸುತ್ತಾ ಹೋಗುತ್ತಾನೆ. ಇಬ್ಬರದು ಕೆಲಸ ಒಂದೇ. ಆ ಕೆಲಸವನ್ನ ಆಸ್ವಾದಿಸುವ ನೋಡುವ ದೃಷ್ಟಿಗಳು ಬೇರೆ ಬೇರೆಯಾಗಿವೆ ಅಷ್ಟೇ. ಆ ನಗು ಮುಖದ ಸುಂದರನಲ್ಲಿ ಕೇಳಿದರೆ ಆತ ಹೇಳುವುದು ಇಷ್ಟೇ, ನನಗೆ ತುಂಬಾ ದೊಡ್ಡ ಮಾತುಗಳು ಗೊತ್ತಿಲ್ಲ ಆದರೆ ಬದುಕು ಇದೆಯಲ್ಲ ಅದು ನಮ್ಮನ್ನ ಬಯಸ್ತಾ ಇರಬೇಕು ಇಂಥವರು ನನ್ನ ಜೊತೆಗೆ ನಡಿಬೇಕು ನನ್ನನ್ನ ಸವಿಯಬೇಕು ಅನ್ನುವ ಕಾರಣಕ್ಕೆ ಹಾಗಾದಾಗ ನಾವು ಸುಂದರವಾಗಿರುತ್ತೇವೆ ನಮ್ಮ ಬದುಕು ಸುಂದರವಾಗಿರುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ