ಸ್ಟೇಟಸ್ ಕತೆಗಳು (ಭಾಗ ೮೯೬)- ಕತೆ

ಸ್ಟೇಟಸ್ ಕತೆಗಳು (ಭಾಗ ೮೯೬)- ಕತೆ

ಹಲವು ಮನೆಗಳ ಬೇರೆ ಬೇರೆ ಕಥೆಗಳು ಒಂದು ಕಡೆ ಬಂದು ಸೇರಿದವು. ಸೇರುವುದಕ್ಕೆ ಕಾರಣವಿತ್ತು. ಊರ ನಡುವೆ ನಡೆಯುತ್ತಿರುವ ನೋಡಿಯೂ ನೋಡದಂತಿರುವ ಕೇಳಿಯೂ ಕೇಳದಂತಿರುವ ಒಂದು ಕಥೆಯನ್ನು ಜನರ ಮನಸ್ಸಿಗೆ ತಲುಪಿಸಬೇಕು, ಅದಕ್ಕೆ ಪರಿಶ್ರಮವನ್ನು ಪಟ್ಟಿದ್ದರು. ಹಲವು ಸಮಯಗಳ ಸತತ ಪರಿಶ್ರಮದಿಂದ  ನಡೆದ ಕಥೆಯೊಂದನ್ನು ಮೂರ್ತರೂಪವಾಗಿಸಿ ಜನರ ಮುಂದೆ ಇಡುವುದಕ್ಕೆ ಬಂದಿದ್ದರು. ಆ ವೇದಿಕೆಯ ಮೇಲೆ ನಡೆಯುವ ಕಥೆಯನ್ನು ನೋಡುವುದಕ್ಕೆ ಸೇರಿದ ಸಾವಿರ ಮಂದಿಗಳದ್ದು ಕೂಡ ಒಂದೊಂದು ಕಥೆ.

ಪ್ರತಿಯೊಬ್ಬರಿಗೂ ಅವರ ಕಥೆಯೇ ದೊಡ್ಡದು. ಆದರೆ ವೇದಿಕೆಯಲ್ಲಿ ಕಥೆಯನ್ನ ಪ್ರಸ್ತುತಪಡಿಸುವ ಕಲಾವಿದರ ಅಭಿನಯದ ಚತುರತೆಗೆ ತಮ್ಮ ಮನೆಯ ದೈನಂದಿನ ಜೀವನದ ಎಲ್ಲಾ ಕಥೆಗಳನ್ನ ಮರೆತು ಹೇಳುವ ಕತೆಯೊಳಗೊಂದಾದ್ರು. ವೇದಿಕೆಯಲ್ಲಿ ಘಟಿಸಿದ ಕಥೆ ಪ್ರತಿಯೊಬ್ಬರ ಜೀವನದ ಒಂದು ಕ್ಷಣದಲ್ಲಿ ಹಾದುಹೋಗಿದ್ದದ್ದು ಅಥವಾ ಮುಂದೆ ಹಾದು ಹೋಗಬಹುದಾದದ್ದನ್ನ ಎಚ್ಚರಿಸಿದ್ದು. ಎಲ್ಲರ ಕಣ್ಣಾಲಿಗಳು ತುಂಬಿಕೊಂಡು ಅಭಿನಯಿಸಿದ ಕಲಾವಿದರನ್ನ ಹಾರೈಸಿದರು. ವೇದಿಕೆ ಮೇಲೆಯೇ ಘಟನೆ ನಡೆದಿದೆಯೋ ಎನ್ನುವಂತೆ ಪ್ರೀತಿಯಿಂದ ಒಪ್ಪಿಕೊಂಡರು. ವೇದಿಕೆ ಇಳಿದಾದ ಮೇಲೆ ಅವರವರ ಮನೆಗೆ ಅವರವರ ಕಥೆಯೊಳಗೆ ಪ್ರವೇಶಿಸುವಾಗ ವೇದಿಕೆಯಲ್ಲಿ ತಾವು ನೋಡಿದ ಕಥೆಯೂ ಒಂದಂಶವಾಗಿ ಸೇರಿಕೊಂಡಿತ್ತು. ಬದಲಾವಣೆ ಆರಂಭವಾಗುವ ಸೂಚನೆಯೂ ಖಂಡಿತಾ, ಅಭಿನಯಿಸಿದ ಕಥಾ ತಂಡಕ್ಕೆ ಒಂದಷ್ಟು ಸಾರ್ಥಕ ಭಾವ ಸಿಕ್ಕಿತು. ಬರಿಯ ನಗುವ ಹಂಚಿ ಆ ಕ್ಷಣದ ಸಂಭ್ರಮವನ್ನು ಕೊಡುವವರ ನಡುವೆ ಒಂದಷ್ಟು ಬದಲಾವಣೆಗಾಗಿ ದುಡಿದ ತಂಡದ ಶ್ರಮವಿದೆಯಲ್ಲ ಅದು ದೊಡ್ಡದು ಅಂತ ಅನ್ನಿಸ್ತು. ಹಾಗಾಗಿ ಕಥೆ ಚೆನ್ನಾಗಿತ್ತು. ನಮ್ಮ ಜೀವನದ್ದೇ ದೊಡ್ಡ ಕಥೆ ಅಂದುಕೊಳ್ಳೋರು ಹಲವು ಜೀವನದ ಹಲವು ಕಥೆಗಳನ್ನು ಅರ್ಥೈಸಿಕೊಂಡರೆ ಬದುಕಿನ ವೈರುಧ್ಯಗಳು ತೆರೆದುಕೊಳ್ಳಬಹುದು.  ಹಾಗಾಗಿ ಒಂದಷ್ಟು ಕಥೆಗಳು ಜನರ ಮುಂದೆ ನಿಂತುಬಿಡುತ್ತದೆ ಕೆಲವೊಂದು ಮೌನದ ಹಿಂದೆ ಅಡಗಿರುತ್ತವೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ