ಸ್ಟೇಟಸ್ ಕತೆಗಳು (ಭಾಗ ೯೦೨)- ಭಗವಂತ

ಸ್ಟೇಟಸ್ ಕತೆಗಳು (ಭಾಗ ೯೦೨)- ಭಗವಂತ

ಭಗವಂತ ಇಂದು ಬೆಳಗ್ಗೆ ನಾನು ಹೇಳುವುದಕ್ಕಿಂತ ಮೊದಲೇ ನನ್ನ ಮನೆಗೆ ಬಂದುಬಿಟ್ಟಿದ್ದ. ನಿನ್ನೆ ಸಂಜೆ ದೇವಸ್ಥಾನದ ಭಾವಚಿತ್ರ ಒಂದನ್ನು ನನ್ನ ಸಾಮಾಜಿಕ ಮಾಧ್ಯಮದಲ್ಲಿ ಹಾಕಿಬಿಟ್ಟಿದ್ದೆ. ಭಗವಂತ ನನ್ನ ಬಂದು ಪ್ರಶ್ನೆ ಮಾಡಿದ, ನೀನು ನನ್ನನ್ನು ಭೇಟಿಯಾಗುವುದಕ್ಕೆ ಬರುವುದು ನಿನ್ನ ಮನಶಾಂತಿಗೆ, ನಿನ್ನ ಮನಸ್ಸಿನ ನೋವುಗಳನ್ನು ಹಂಚಿಕೊಳ್ಳುವುದಕ್ಕೆ, ನಿನ್ನ ಸಂಭ್ರಮಕ್ಕೆ, ಅದು ನಿನ್ನದಾಗಿರುವಾಗ ಅದನ್ನ ಎಲ್ಲಾ ಕಡೆಗೂ ಹಂಚಿ ಏನು ಸಾಧಿಸುವುದಕ್ಕೆ ಹೊರಟಿದ್ದೀಯಾ? ದೊಡ್ಡ ದೊಡ್ಡ ಕಾರ್ಯಕ್ರಮಗಳಿರಲಿ, ದೇವರ ಉತ್ಸವವಾಗಲಿ, ದೈವದ ಕೋಲಗಳಾಗಲಿ, ಯಾವುದು ಪ್ರಚಾರಕ್ಕೆ ಇರುವುದಲ್ಲ. ಅವುಗಳನ್ನು ಎಷ್ಟು ಕ್ರಮವಾಗಿ  ಆಚರಿಸಿದ್ದೀಯಾ? ಅನುಸರಿಸಿದ್ದೀಯಾ? ಅನ್ನುವುದೇ ಮುಖ್ಯ .ದಾರಿಯ ಬದಿಯಲ್ಲಿ ಸಾಲು ಸಾಲಾಗಿ ಭಾವಚಿತ್ರಗಳನ್ನು ನೇತುಹಾಕಿ ಜಾಹಿರಾತು ಯಾಕೆ ಮಾಡ್ತಾ ಇದ್ದೀಯಾ? ಭಕ್ತಿ ಪ್ರಧಾನವಾಗಬೇಕು ಆಡಂಬರವಾಗಬಾರದು ಅನ್ನೋದನ್ನ ಎಷ್ಟು ಸಲ ವಿವರಿಸಿ ಹೇಳಿದರು ನಿನಗೆ ಅರ್ಥವಾಗುವುದಿಲ್ಲ. ನೀನು ನನ್ನ ಬಳಿಗೆ ಬರುತ್ತೀಯಾ ಅದನ್ನ ಎಲ್ಲಾ ಕಡೆ ಹಂಚಿಕೊಂಡು ನೀನು ಭಕ್ತ ಎನ್ನಿಸಿಕೊಳ್ಳಬೇಕಾ? ಅದಕ್ಕೆ ನಿನ್ನ ಬಳಿ ಕೇಳಿಕೊಳ್ಳುವುದಿಷ್ಟೇ. ನಿನ್ನ ಮನಸ್ಸಿನೊಳಗಿರಬೇಕಾದ್ದು ಪ್ರಚಾರಕ್ಕೆ ಬರಬಾರದು.ನನಗೆ ಅರ್ಥವಾಗದ್ದು ಏನು ಅಂತ ಅಂದ್ರೆ ಎಲ್ಲಿಗೆ ಜನ ಬರುವುದಿಲ್ಲ, ಎಲ್ಲಿ ಅದ್ಭುತ ಸಂಭವಿಸುವುದಿಲ್ಲ ಆ ಕ್ಷೇತ್ರ ಹೆಚ್ಚು ಜನರಿಗೆ ತಿಳಿಯುವುದೇ ಇಲ್ಲ. ದೊಡ್ಡವರು ಬಂದರೆ ಅದು ದೊಡ್ಡ ಕ್ಷೇತ್ರ, ಈ ಮನಸ್ಥಿತಿ ಬದಲಾಗ ಎಲ್ಲ ಕ್ಷೇತ್ರಗಳು ಭಕ್ತಿ ಪ್ರಧಾನಕ್ಷೇತ್ರಗಳಾಗಿ ಉಳಿಯುತ್ತವೆ. ನಾನು ಎಲ್ಲಾ ಕಡೆಗೂ ಒಬ್ಬನೇ ಇರೋದು,ನೀನೇ ಆಕಾರ ಕೊಟ್ಟು, ಹೆಸರಿಟ್ಟು ಪೂಜಿಸ್ತೀಯಾ ಅಷ್ಟೆ. ನಂಬುಕೆ ಭಕ್ತಿ ಇದ್ದ ಕಡೆ ನನಗೆ ಇರುವುದ್ದಕ್ಕೆ ಮನಸ್ಸು ಬರುತ್ತದೆ. ನನ್ನ ಸ್ಥಳ ಮಾರುಕಟ್ಟೆಯಾಗಬಾರದಲ್ಲ. ಒಂದಷ್ಟು ಜನರಾದರೂ  ಬದಲಾಗಲಿ ಮಾರಾಯ ಅದಕ್ಕೆ ಬರೀ ನೀನು.... ಎಚ್ಚರವಾದಾಗ ಭಗವಂತ ಅಲ್ಲಿರಲಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ