ಹಂಸ ಹಾಡುವ ಹೊತ್ತು - ೭
ಪಂಚಮದಿಂಚರ
ಕಾಫಿ ಗುಟಕರಿಸುತ್ತಾ ಮಿಲಿಂದ್ ಕೇಳಿದ,
"ಆಭಾ, ಬಹಳ ದಿನಗಳಿಂದ ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕಿತ್ತು......ಆದರೆ ನಿಮ್ಮ ಜೊತೆ ಮಾತನಾಡುವಾಗ ಮರೆತೇ ಹೋಗುತ್ತಿತ್ತು. ಈ ದಿನ ಕೇಳಿಯೇ ಬಿಡುತ್ತೇನೆ..."
"ಅದಕ್ಕೇನಂತೆ ಕೇಳಿ......ತುಂಬಾ ಪರ್ಸನಲ್ ಅಲ್ಲಾ ತಾನೇ ?" ಎಂದಳು
"ನಿಮ್ಮ ಹೆಸರಿನಿಂದಲೇ ನೀವು ಮಹಾರಾಷ್ಟ್ರದವರಿರಬೇಕು ಎಂದು ಹೇಳಬಹುದು. ಆದರೆ ಅದು ಹೇಗೆ ಅಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತೀರಿ...." ಎಂದು ಕೇಳಿದ ಮಿಲಿಂದ್.
"ಅರೆ, ಏನಾಶ್ಚರ್ಯ ? ನಾನು ಇದೇ ಪ್ರಶ್ನೆಯನ್ನು ನಿಮ್ಮನ್ನು ಕೇಳಬೇಕೆಂದಿದ್ದೆ.....ಮಿಲಿಂದ್ ಕೂಡ ಮಹಾರಾಷ್ಟ್ರ ಕಡೆ ಹೆಸರು ತಾನೇ. ಅದು ಹೇಗೆ ನೀವು ಅಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತೀರಿ ?" ಎಂದು ಮರುಪ್ರಶ್ನೆ ಮಾಡಿದಳು.
"ಮೊದಲು ಪ್ರಶ್ನೆ ಕೇಳಿದವನು ನಾನು. ನೀವು ಮೊದಲು ಉತ್ತರ ಕೊಡಬೇಕು..."
"ಅದರಲ್ಲಿ ಅಂತಹಾ ದೊಡ್ಡ ರಹಸ್ಯವೇನಿಲ್ಲ. ನಮ್ಮ ಮುತ್ತಾತ ಮಹಾರಷ್ಟ್ರದ ಸತಾರಾದವರು. ಅದ್ಯಾವಾಗಲೋ, ವ್ಯಾಪಾರಕ್ಕೆಂದು ಬಿಜಾಪುರಕ್ಕೆ ಬಂದವರು, ಅಲ್ಲಿಯೇ ನೆಲೆಸಿ ಬಿಟ್ಟರಂತೆ, ನಾನು ಹುಟ್ಟುವ ವೇಳೆಗೆ ನಮಗೆ ಕನ್ನಡ ಪೂರ್ತಿ ಒಗ್ಗಿ ಹೋಗಿ, ಮರಾಠಿ ಮರೆಯದೇ ಇದ್ದುದು ನಮ್ಮ ಪುಣ್ಯ..."
"ಹಂಗಂದ್ರೆ ನೀವು ಬಿಜಾಪುರ ಹುಡ್ಗಿ ಏನ್ರೀ... ಮತ್ತೆ ನಿಮ್ಮ ಕಾನಡಿ ಬಿಜಾಪುರ ಕಾನಡಿ ತರಾ ಇಲ್ಲಲ್ರೀ.......!" ಎಂದ ಹುಸಿ ವಿಸ್ಮಯದಿಂದ.
"ನಾನು ಹುಟ್ಟಿದ್ದು ಮಾತ್ರ ಬಿಜಾಪುರದಾಗ್ರಿ, ಮತ್ತ ನಮ್ಮ ಬಾಬಾ ಒಬ್ಬ ಎಂಜೀನೀರ್ ಇದ್ರಿ. ಅವ್ರು ಹಾಸನಾ ಎಂಜಿನೀರಿಂಗ್ ಕಾಲೇಜ್ದಾಗ ಪ್ರೊಫೆಸರ್ ಇದ್ರಿ. ಹಂಗಾಗಿ ನಾನು ಪೂರ್ತಿ ಹಾಸನಾ ಹುಡುಗೀರೀ..... ಮತ್ತ ನಮ್ಮ ಕಾನಡೀನೂ ಮಲ್ನಾಡ ಕಾನಡೀರಿ....." ಎಂದಳು ಅವನನ್ನು ಅಣಕಿಸುತ್ತಾ...
"ಓಹ್, ಮಲೆನಾಡ ಹುಡುಗೀ......" ಎಂದು ಉದ್ಗರಿಸಿ, " ಭೂತಯ್ಯನ ಮಗ ಅಯ್ಯು ಚಿತ್ರದಾಗ ನಿಮ್ಮ ಬಗ್ಗೆ ಒಂದು ಹಾಡಿದೆ ಕೇಳಿದ್ದೀರಾ...?"
"ನನ್ನ ಬಗ್ಗೇನಾ ....?"
"ನಿಮ್ಮ ಬಗ್ಗೆ ಅಂದ್ರೆ ನಿಮ್ಮ ಬಗ್ಗೆ ಅಲ್ಲ, ಮಲೆನಾಡ ಹುಡುಗಿ ಬಗ್ಗೆ....ಮಲೆನಾಡ ಹೆಣ್ಣ ಮೈಬಣ್ಣ ಬಲು ಚೆನ್ನ, ಆ ನಡು ಚೆನ್ನ..." ಎಂದು ರಾಗವಾಗಿ ಉಲಿದ.
"ಅದೆಲ್ಲ ಇರ್ಲಿ, ಈಗ ನಿಮ್ಮ ಬಗ್ಗೆ ಹೇಳಿ......." ಎಂದು ಕೇಳಿದಳು ಅವನನ್ನು ತಡೆಯುತ್ತಾ.
"ಮಿಲಿಂದ ಎನ್ನೋ ಹೆಸರು ಉತ್ತರ ಕರ್ನಾಟಕದಲ್ಲಿ ಬಹಳ ಸಾಮಾನ್ಯ... ಅದೂ ಕೂಡಾ ನೆರೆಯ ಮಹಾರಾಷ್ಟ್ರದ ಪ್ರಭಾವವಿರಬೇಕು. ನಮ್ಮ ತಂದೆ ಬೀದರಿನವರು. ನಾನು ಹುಟ್ಟುವಾಗ ನಮ್ಮ ತಂದೆ ಪುಣೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಅಲ್ಲಿ ಕೇಳಿದ ಈ ಹೆಸರು ಅವರಿಗೆ ತುಂಬಾ ಹಿಡಿಸಿತಂತೆ. ಹೀಗಾಗಿ ನನಗೆ ಆ ಹೆಸರಿಟ್ಟರಂತೆ"
"ಅಂದಹಾಗೆ ನಿಮ್ಮನ್ನು ಇನ್ನೊಂದು ಪ್ರಶ್ನೆ ಕೇಳೋದಿತ್ತು. ನಾನು ಆಭಾ ಗೋಖಲೆ ....ಹಾಗೇ ನೀವು ಮಿಲಿಂದ್ .....?"
"ನಾನು ಮಿಲಿಂದ್ ಎಸ್.ಬಿ."
"ಅಷ್ಟು ನನಗೆ ಗೊತ್ತಿಲ್ವೇ ? ಸರ್ಕ್ಯೂಲರ್ ಗಳಲ್ಲಿ ಅದನ್ನೆಂದೋ ಗಮನಿಸಿದ್ದೇನೆ. ಎಸ್. ಬಿ. ಅಂದರೇನು...."
"ಅದೇಕೆ ಬಿಡಿ....ಅದರಲ್ಲೇನಿದೆ..." ಎಂದು ಮಿಲಿಂದ್ ಪ್ರಶ್ನೆಯನ್ನು ಹಾರಿಸಲು ನೋಡಿದಾಗ,
"ಅರೆ, ಮನೆ ಹೆಸರು ಹೇಳಲು ಅಷ್ಟೇಕೆ ಸಂಕೋಚ......ಅದರಲ್ಲೇನಿದೆ...ಹೇಳಿ " ಎಂದು ಒತ್ತಾಯ ಮಾಡಿದಳು.
" ಸರಿ, ಎಸ್. ಬಿ. ಅಂದರೆ ಶ್ರೀನಿವಾಸ್ ಬಿ. ಅಂತ. ಶ್ರೀನಿವಾಸ್ ನಮ್ಮ ತಂದೆಯ ಹೆಸರು...." ಎಂದ.
"ಬಿ. ಅಂದ್ರೆ ....?" ಎಂದು ಆಭಾ ಕೇಳಿದಳು ಪಟ್ಟು ಬಿಡದೆ.
" ಬಿ. ಅಂದ್ರೆ...... ಬಿಸಿರೊಟ್ಟಿ.." ಎಂದ ಮಿಲಿಂದ ಬಹು ಸಂಕೋಚದಿಂದ.
"ಏನು ? ಬಿಸಿರೊಟ್ಟೀನೇ.....ಇದೆಂತಹ ಹೆಸರು ..." ಎಂದು ಬಿದ್ದು ಬಿದ್ದು ನಗಲಾರಂಭಿಸಿದಳು.
"ನೀವೇ ತಾನೇ ಒತ್ತಾಯ ಮಾಡಿ ಕೇಳಿದ್ದು........" ಮಿಲಿಂದ್ ನ ಮುಖ ಕೋಪದಿಂದ ಕೆಂಪಾಗಿತ್ತು. ಅದನ್ನು ಗಮನಿಸಿದ ಆಭಾ,
"ಐ ಆಮ್ ಸಾರಿ.....ಪ್ಲೀಸ್." ಎಂದಳು ತನ್ನೆರಡೂ ಕಿವಿಯ ಕೆಳ ತುದಿಗಳನ್ನು ಮುಟ್ಟಿಕೊಳ್ಳುತ್ತಾ.
ಮಿಲಿಂದ್ ಮೌನವಾಗಿಯೇ ಇದ್ದ. ಅವನ ಸಿಟ್ಟು ಇನ್ನೂ ಇಳಿದಿಲ್ಲವೆಂದು ಅವಳಿಗೆ ತಿಳಿಯಿತು.
"ಆಯ್ತು. ನನ್ನ ತಪ್ಪಿಗೆ ನಾನೇ ಶಿಕ್ಷೆ ಕೊಟ್ಟು ಕೊಳ್ಳುತ್ತೇನೆ......." ಎಂದಳು ಗಂಭೀರವಾಗಿ. ಮಿಲಿಂದ್ ಅವಳತ್ತ ನೋಡಿದಾಗ,
"ನೀವು ನನಗೆ ಮೂರು ಪಾರ್ಟಿ ಕೊಡಬೇಕು ತಾನೇ....ಅದರಲ್ಲಿ ಒಂದನ್ನು ಕ್ಯಾನ್ಸಲ್ ಮಾಡಿ...." ಎಂದಳು ತುಂಟನಗೆಯೊಂದಿಗೆ. ಮಿಲಿಂದನಿಗೂ ನಗು ತಡೆಯಲಾಗಲಿಲ್ಲ.
" ಓಹ್, ಥ್ಯಾಂಕ್ ಯೂ, ಹೌ ಜೆನರಸ್ ಆಫ್ ಯು !" ಎಂದವನು ಅದೇನನ್ನೋ ಜ್ಞಾಪಿಸಿಕೊಂಡು,
"ಅರೆ, ಅದು ಕ್ಯಾನ್ಸಲ್ ಮಾಡಿದ ಮೇಲೂ ನಿಮಗೆ ಇನ್ನೂ ಎರಡು ಪಾರ್ಟಿಗಳು ಉಳಿಯುತ್ತವೆ. ....." ಎಂದ.
"ಇನ್ನೊಂದು ಪಾರ್ಟಿ ಯಾತಕ್ಕೆ ?" ಎಂದಳು ಅಚ್ಚರಿಯಿಂದ.
"ಈ ದಿನ ಸಿಂಘಾನಿಯವರ ಬಳಿ ಹೋಗಿದ್ದೆನಲ್ಲ. ಅವರಿಗೆ ನನ್ನ ಯಶಸ್ಸಿನ ಬಗ್ಗೆ ಹೇಳಿದಾಗ, ಅವರಿಗೆ ತುಂಬಾ ಸಂತೋಷವಾಯಿತು. ಇಟ್ ಈಸ್ ಎ ಗ್ರೇಟ್ ನ್ಯೂಸ್. ವುಯ್ ಮಸ್ಟ್ ಸೆಲೆಬ್ರೇಟ್ ದಿಸ್ ಆಸ್ ಎ ಫ್ಯಾಮಿಲಿ. ನಮ್ಮ ಇಡೀ ಸಂಸ್ಥೆಗೆ ಒಂದು ಪಾರ್ಟಿ ಇಟ್ಟುಕೊಳ್ಳೋಣ ಎಂದರು. ಸಂಶೋಧನೆ ಇನ್ನೂ ಪ್ರಕಟವಾಗಿಲ್ಲವಾದ್ದರಿಂದ ಈಗಲೇ ಬೇಡ ಎಂದು ನಾನು ಹೇಳಿದೆ. ಅದಕ್ಕೆ ಅವರು, ಸರಿ ಹಾಗಾದರೆ, ಸಧ್ಯಕ್ಕೆ ಒಂದು ಚಿಕ್ಕ ಪಾರ್ಟಿ ನನ್ನ ಕಡೆಯಿಂದ ಕೊಡುತ್ತೇನೆ. ನೀವು ಮತ್ತು ಎಚ್.ಆರ್ ಚೀಫ್ ಇಬ್ಬರಿಗೂ ಎಂದರು.
ಆಗ ನಾನು, ಸರ್ ಆಭಾ ಅವರನ್ನೂ ಕರೆಯೋಣ, ಪಾಪ, ಅವರಿಗೆ ಪಾರ್ಟಿ ಹುಚ್ಚು ಬಹಳ ಎಂದೆ. ಅದಕ್ಕೆ ಅವರು ಒಪ್ಪಿಕೊಂಡರು . ಸೋ, ಯು ಹ್ಯಾವ್ ಅನದರ್ ಪಾರ್ಟಿ" ಎಂದ.
"ಅದು ಹ್ಯಾಗೆ ನೀವು ಹಾಗೆ ಹೇಳಿದ್ರಿ ನನ್ನ ಬಗ್ಗೆ ?" ಎಂದಳು ಆಭಾ ಕೋಪದಿಂದ.
"ರೀ, ಆಭಾ ನಾನು ಹಾಗೆ ಹೇಳಲಿಕ್ಕೆ ಸಾಧ್ಯ ಏನ್ರೀ....ಎನೋ ತಮಾಷೆ ಮಾಡಿದ್ರೆ...ಈ ಸಂಶೋಧನೆಯಲ್ಲಿ ನಿಮ್ಮ ಪಾತ್ರ ತಿಳಿದೂ ಸಿಂಘಾನಿಯವರು ನಿಮ್ಮನ್ನು ಕರೆಯದೇ ಇರಲು ಸಾಧ್ಯವೇ ?" ಎಂದ ಮಿಲಿಂದ್.
"ನಾನು ಆದಷ್ಟು ಬೇಗ ನಿಮ್ಮಿಂದ ಪಾರ್ಟಿಗಳನ್ನು ವಸೂಲು ಮಾಡುವುದು ಒಳ್ಳೆಯದು. ನೀವು ಪ್ರಸಿದ್ಧರಾದ ಬಳಿಕ ನಿಮ್ಮನ್ನು ಮಾತನಾಡಿಸಲೂ ಸಾಧ್ಯವಾಗುತ್ತದೆಯೋ ಇಲ್ಲವೋ" ಎಂದು ನಿಡುಸುಯ್ದಳು.
"ಅಷ್ಟು ಸುಲಭವಾಗಿ ನಿಮ್ಮನ್ನು ಮರೆಯಲಾರೆ ಎನಿಸುತ್ತದೆ" ಎಂದು ಹೇಳಿದ ಮಿಲಿಂದನ ಕಣ್ಣುಗಳನ್ನೇ ಎವೆ ಇಕ್ಕದೆ ನೋಡುತ್ತಿದ್ದ ಆಭಾ ಆ ಕಣ್ಣುಗಳ ಹಿಂದೆ ಅಡಗಿರುವ ಭಾವವನ್ನು ಅರಿಯಲು ಯತ್ನಿಸಿದಳು. ಅದರ ಅರಿವಾದಾಗ, ಅವಳ ತನುಮನಗಳು ಬೆಚ್ಚಗಾಗಿ, ಲಜ್ಜೆಯಿಂದ ತಲೆ ತಗ್ಗಿಸಿದಳು. ಲಂಚ್ ಅವರ್ ಮುಗಿದು ಹದಿನೈದು ನಿಮಿಷಗಳಾಗಿದ್ದನ್ನು ಗಮನಿಸಿ ಇಬ್ಬರೂ ಒಲ್ಲದ ಮನಸ್ಸಿನಿಂದ ಕ್ಯಾಂಟೀನ್ ನಿಂದ ಹೊರಬಿದ್ದರು.
ಮುಂದೆ ಸುಮಾರು ಒಂದು ತಿಂಗಳ ಬಳಿಕ, ಆಭಾ ತನ್ನ ಡೆಸ್ಕ್ ಬಳಿ ಕೆಲಸದಲ್ಲಿ ತೊಡಗಿದ್ದಾಗ, ಕೌರಿಯರ್ ಅವಳಿಗೆ ಒಂದು ಕಡು ಕೆಂಪು ಬಣ್ಣದ ಗುಲಾಬಿಗಳ ಬುಕೆ ಒಂದನ್ನು ಕೊಟ್ಟು ಹೋದ. ಅದನ್ನು ಯಾರು ಕಳಿಸಿರಬಹುದೆಂದು ಅಚ್ಚರಿಯಿಂದ ನೋಡಿದಾಗ, ಬುಕೆ ಜೊತೆಗೆ ಒಂದು ಶುಭಾಶಯ ಪತ್ರವೂ ಇತ್ತು.
"My dear Angel fish, hope your next birthday brings an angler for you whose bait you bite and who makes you say "may it be so" for whatever he says ! Many many happy returns of the day !"
ಅದು ಮಿಲಿಂದ್ ಕಳಿಸಿದ ಪುಷ್ಪ ಗುಚ್ಛವೆಂದು ಅವಳಿಗೆ ತಿಳಿಯಿತು.
ಕೇವಲ ಎರಡು ವಾರಗಳ ಕೆಳಗೆ, ನಗರದ ಪ್ರತಿಷ್ಠಿತ ಹೋಟೆಲ್ ನವನೀತ್ ನಲ್ಲಿ ಅವಳಿಗೆ ಪಾರ್ಟಿ ಇತ್ತ ಸಮಯದಲ್ಲಿ, ಮಾತಿನ ಮಧ್ಯೆ,
"ಆಭಾ, ನಿಮ್ಮ ಹೆಸರೇನೋ ಚೆನ್ನಾಗಿದೆ. ಆದರೂ ನಾನು ಮಾತ್ರ ನಿಮ್ಮನ್ನು ಕರೆಯಬಹುದಾದ ಒಂದು ಹೆಸರನ್ನು ನಿಮಗೆ ಕೊಟ್ಟರೆ ಹೇಗೆ ಎಂದು ವಿಚಾರಿಸುತ್ತಿದ್ದೆ" ಎಂದ.
"ಯಾವ ಹೆಸರು ಕೊಡಬೇಕೆಂದಿದ್ದೀರಿ.....?" ಎಂದು ಕೇಳಿದಳು ಕುತೂಹಲದಿಂದ
"ನನ್ನದೊಂದು ಪೆಟ್ ಇದೆ. ಅದರ ಹೆಸರನ್ನೇ ನಿಮಗೆ ಕೊಟ್ಟರೆ ಹೇಗೆ ಎಂದು ಯೋಚಿಸುತ್ತಿದ್ದೆ"
"ಛೀ, ಪೆಟ್ ನ ಹೆಸರೇ ......" ಎಂದಳು ಆಭಾ .
" ಹೌದು, ನನ್ನದೊಂದು ಏಂಜೆಲ್ ಫಿಶ್ ಇದೆ. ಹಾಗೇ, ನಿಮ್ಮನ್ನೂ ನಾನು ಇನ್ನು ಮುಂದೆ........" ಎಂದು ಮಿಲಿಂದ್ ಹೇಳಿದಾಗ, ಆಭಾ ವಿರೋಧಿಸಿರಲಿಲ್ಲ.!
ಅವರ ಸ್ನೇಹ ಪ್ರಣಯವಾಗಿ ಮುಂದುವರೆಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಮುಂದೊಂದು ದಿನ, ಆಭಾ ಪ್ರಸನ್ನವಾಗಿದ್ದ ಮುಹೂರ್ತವೊಂದನ್ನು ನೋಡಿ, ಮಿಲಿಂದ ಪ್ರಪೋಸ್ ಮಾಡಿದಾಗ, ಆಭಾ ಬಿಗುಮಾನದಿಂದ, ಬಹಳ ಹೊತ್ತು ಅಳೆದೂ ಸುರಿದೂ ,
" ಆಯಿತು; ಆದರೆ ನನ್ನ ಒಂದು ಕಂಡೀಷನ್ ಗೆ ನೀವು ಒಪ್ಪಿದರೆ ಮಾತ್ರ......." ಎಂದಳು.
"ಕಂಡೀಷನ್ನೇ......ಯಾವ ಕಂಡೀಷನ್ ..." ಎಂದು ಆತಂಕದಿಂದ ಕೇಳಿದ ಮಿಲಿಂದ್.
"ನನ್ನ ಹೆಸರನ್ನು ಆಭಾ ಬಿಸಿರೊಟ್ಟಿ ಎಂದು ಬದಲಾಯಿಸಿಕೊಳ್ಳಲು ನೀವು ಒಪ್ಪಿದರೆ ಮಾತ್ರ...." ಎಂದಳು ತುಂಟ ನೋಟದಿಂದ. ಮಿಲಿಂದನಿಗೆ ಮನದುಂಬಿ ಬಂದು ಮಾತೇ ಹೊರಡಲಿಲ್ಲ. ಆಭಾಳ ಎರಡೂ ಕೈಗಳನ್ನು ತನ್ನ ಬೊಗಸೆಯಲ್ಲಿ ಹಿಡಿದು,
"ಆಭಾ, ನೀವು ನನಗೆ ದೊರೆಯದೇ ಹೋಗಿದ್ದರೆ ನಾನು ತಂಗಳು ರೊಟ್ಟಿಯಾಗುತ್ತಿದ್ದೆ ...." ಎಂದು ಭಾವುಕನಾಗಿ ನುಡಿದ.
ಮಿಲಿಂದನ ಸಂಶೋಧನೆಯನ್ನು ಪ್ರಕಟ ಪಡಿಸುವ ಮುನ್ನ ಅವನು ಮಾಡಬೇಕಿದ್ದ ಕೆಲಸ ಇನ್ನೂ ಬಹಳ ಇತ್ತು. ಮಿಲಿಂದನ ಬಾಳ ಸಂಗಾತಿಯಾಗಿ ಆಭಾಳನ್ನು ಪಡೆಯುವ ಮುನ್ನವೇ ತನ್ನ ಸಂಶೋಧನೆಯ ಸಂಗಾತಿಯನ್ನಾಗಿಯೂ ಪಡೆದುಕೊಂಡ.
ಅದೊಂದು ಭಾನುವಾರ, ಇಬ್ಬರೂ ಬಿಡುವಾಗಿ, ಚಾಮುಂಡಿ ಬೆಟ್ಟದ ಮೇಲೆ ದಟ್ಟವಾಗಿ ಹರಡಿಕೊಂಡಿದ್ದ ಮರವೊಂದರ ನೆರಳಲ್ಲಿ ಕುಳಿತಿದ್ದರು. ಆ ಸಂದರ್ಭದಲ್ಲಿ, ಮಿಲಿಂದ್ ತನ್ನ ಸಂಶೋಧನೆಯ ತಾಂತ್ರಿಕ ವಿವರಗಳನ್ನು ಅವಳಿಗೆ ತಿಳಿಸಿ ಕೊಟ್ಟಿದ್ದ.
"ಮೂರ್ತಿಯವರ ಸಿ.ಡಿ ಗಳಲ್ಲಿ ಅವರ ಸಂಶೋಧನೆಗಾಗಿ ಬಳಸಿದ ಅಪಾರ ಡಾಟಾ ಇದೆ. ಅವರೇ ಒಂದು ಕಡೆ ವಿವರಿಸಿರುವಂತೆ, ಈ ಡಾಟಾದ ಮೊದಲ ವಿಶ್ಲೇಷಣೆಯಲ್ಲಿ, ಮಾನವರ ಜೀವಕೋಶಗಳಲ್ಲಿನ ಎಸ್. ಡಿ. ಎಂದರೆ ಸೂಪರ್ ಆಕ್ಸೈಡ್ ಡಿಸ್ಮುಟೇಸ್ (super oxide dismutase ) ಎಂಬ ಎನ್ ಜೈಮ್ ನ ಮಟ್ಟವನ್ನು ಅಳೆಯಲಾಗಿತ್ತು. ವಿಭಿನ್ನ ವ್ಯಕ್ತಿಗಳಲ್ಲಿ ಅದರ ಮಟ್ಟ ವಿವಿಧವಾಗಿದ್ದನ್ನು ಗಮನಿಸಿದಾಗ, ಅದಕ್ಕೆ ಕಾರಣಗಳನ್ನು ಹುಡುಕಿದ್ದರು. ಮೊದಲನೆಯದಾಗಿ ವ್ಯಕ್ತಿಯ ವಯಸ್ಸಿಗೆ ಸಂಬಂಧ ಕಂಡು ಬಂತು. ಆದರೆ, ಈ ಸಂಬಂಧವನ್ನು ಗ್ರಾಫ್ ನಲ್ಲಿ ರಚಿಸಿದಾಗ, ಅದು ಸರಿಸುಮಾರಾಗಿ ನೇರ ರೇಖೆಯಾಗಿದ್ದರೂ, ಸಾಕಷ್ಟು ಅಂಕುಡೊಂಕುಗಳಿದ್ದುದು ಕಂಡುಬಂದಿತು. ವಯಸ್ಸಲ್ಲದೇ ಬೇರೆ ಇನ್ನು ಕೆಲವು ಅಂಶಗಳು ಈ ಸಂಬಂಧದ ಮೇಲೆ ಪ್ರಭಾವ ಬೀರುತ್ತಿದ್ದುದನ್ನು ನೋಡಿ, ಅವುಗಳನ್ನೂ ಸೇರಿಸಿಕೊಂಡು, ಅದಕ್ಕೆ ಸೂಕ್ತ ಮಲ್ಟಿಪಲ್ ರಿಗ್ರೆಷನ್ ಫಾರ್ಮುಲಾ ತಯಾರಿಸಿ ವಿಶ್ಲೇಷಿಸಿದಾಗ, ಮೂರ್ತಿ ದಂಗಾಗಿದ್ದರಂತೆ. ಆ ರೀತಿ ಮಾಡಿದಾಗ, ಗ್ರಾಫ್ ನಲ್ಲಿ ಎಸ್.ಡಿ ಮತ್ತು ವಯಸ್ಸಿನ ಸಂಬಂಧದ ರೇಖೆ ನೇರವಾಗಿದ್ದು, ವ್ಯಕ್ತಿಯ ವಯಸ್ಸಾದಂತೆ ಕೆಳಮುಖವಾಗಿ ಸಾಗಿ, ಒಂದು ಹಂತದಲ್ಲಿ ಹಠಾತ್ತಾಗಿ ಕೆಳಗೆ ಬಾಗಿ, ಬೇಸ್ ಲೈನ್ ಅಥವಾ ವಯಸ್ಸಿನ ರೇಖೆಯನ್ನು ಸ್ಪರ್ಶಿಸುತ್ತಿತ್ತಂತೆ. ಆ ರೀತಿ ಹಠಾತ್ತಾಗಿ ಕೆಳಗೆ ಬಾಗುವ ಬಿಂದುವನ್ನು ವಯಸ್ಸಿನೊಂದಿಗೆ ತುಲನೆ ಮಾಡಿದಾಗ, ಆ ವಯಸ್ಸಿನ ಕೇವಲ ಹತ್ತು ದಿನಗಳ ಆಚೀಚಿನ ಅಂತರದಲ್ಲಿ ವ್ಯಕ್ತಿಯ ಮರಣವಾಗಿದ್ದುದು ಕೆಲವು ಪ್ರಕರಣ ಗಳಲ್ಲಿ ಕಂಡುಬಂದಿತಂತೆ. ಇದನ್ನು ಗಮನದಲ್ಲಿಟ್ಟುಕೊಂಡು, ತೀವ್ರವಾಗಿ ಅಸ್ವಸ್ಥರಾಗಿರುವ ವ್ಯಕ್ತಿಗಳನ್ನು ಅಧ್ಯಯನಕ್ಕೆ ಆರಿಸಿಕೊಂಡರಂತೆ. ಆ ಅಧ್ಯಯನದಲ್ಲಿ ವಿಸ್ಮಯವಾಗುವ ರೀತಿಯಲ್ಲಿ, ಅವರ ಮೊದಲ ಫಲಿತಾಂಶವನ್ನು ಪುಷ್ಠೀಕರಿಸಿತ್ತಂತೆ. ಈ ಎಲ್ಲಾ ಆಧಾರದ ಮೇಲೆ ಅವರ ಸಂಶೋಧನೆಯ ಫಲಿತಾಂಶ ಹೊರಬಿದ್ದಿತ್ತು. ಆಗ ಅವರಿಗೆ ಅದನ್ನು ಪ್ರಕಟಿಸಬೇಕೇ ಇಲ್ಲವೇ ಎನ್ನುವುದರ ಬಗ್ಗೆ ಜಿಜ್ಞಾಸೆ ಆರಂಭವಾಗಿತ್ತಂತೆ...."
ಎಂದು ಹೇಳಿ ಮೂರ್ತಿಯವರ ನಿಧನದವರೆಗೆ ಮುಂದಿನ ಬೆಳವಣಿಗೆಗಳ ಬಗ್ಗೆ ತಿಳಿಸಿದ. ಮೂರ್ತಿಯವರ ಬಗ್ಗೆ ಅವನು ಹೇಳುವಾಗ ಅವಳೂ ಕೂಡ ಭಾವುಕಳಾದದ್ದನ್ನು ಗಮನಿಸಿದ. ಸ್ವಲ್ಪ ಸಮಯದ ನಂತರ,
"ಇದಕ್ಕೇ, ನಿನ್ನ ಸಂಶೋಧನೆಗೆ ಏನು ಸಂಬಂಧ ? " ಎಂದು ಆಭಾ ಕೇಳಿದಳು.
"ನನ್ನ ಸಂಶೋಧನೆಗೆ ಬೀಜ ದೊರೆತಿದ್ದೇ ಮೂರ್ತಿಯವರ ಸಂಶೋಧನೆಯಿಂದ. ಮೂರ್ತಿಯವರ ಡಾಟಾವನ್ನು ಗಮನಿಸಿದಾಗ, ಎಸ್.ಡಿ ಯೊಂದನ್ನಲ್ಲದೇ, ಎಸ್.ಡಿ ಯ
ಪ್ರಬೇಧಗಳಾದ ಕೆಲವು ಎಸ್.ಡಿ ಐಸೋ ಎನ್ ಜೈಮ್ (iso enzymes) ಗಳ ಮಟ್ಟವನ್ನೂ ಕೆಲವು ಅಂಗಾಂಶಗಲ್ಲಿ (tissues) ಅಳೆಯಲಾಗಿತ್ತು. ಅವುಗಳ ಮಟ್ಟವನ್ನೂ ಮೂರ್ತಿಯವರು ವಯಸ್ಸಿನ ಜೊತೆ ತಾಳೆ ನೋಡಿದ್ದರು. ಆದರೆ ಅದರಿಂದ ಯಾವ ಅರ್ಥಪೂರ್ಣ ನಿರ್ಣಯಕ್ಕೂ ಬರಲಾಗಿರಲಿಲ್ಲ. ನನಗೆನಿಸಿದ ಮಟ್ಟಿಗೆ, ಅದಾಗಲೇ ಅವರಿಗೆ ಬೇಕಾದ ಮಾಹಿತಿ ದೊರೆತಿದ್ದರಿಂದ ಇದನ್ನು ಇನ್ನೂ ಹೆಚ್ಚಿನ ವಿಶ್ಲೇಷಣೆಗೆ ಒಳಪಡಿಸಲಿಲ್ಲವೆಂದು ಕಾಣುತ್ತದೆ. ನಾನು ಇದೇ ಡಾಟಾವನ್ನು ಬಳಸಿ, ಕಾಂಪೋಸಿಟ್ ಗ್ರಾಫ್ ಗಳನ್ನು
ತಯಾರಿಸಿದಾಗ. ಗ್ರಾಫ್ ನಲ್ಲಿ ಎರಡು ರೇಖೆಗಳು ಕಂಡು ಬಂದು, ಎಸ್.ಡಿ ಮಟ್ಟವನ್ನು ಸೂಚಿಸುವ ರೇಖೆ ನಿಧಾನ ಗತಿಯಲ್ಲಿ ಇಳಿಮುಖವಾಗಿ ಸಾಗಿದ್ದರೆ, ಐಸೋ ಎನ್ ಜೈಮ್ ನ ರೇಖೆ ಜಲಪಾತದಂತೆ ಅತ್ಯಲ್ಪ ಸಮಯದಲ್ಲಿ ಬೇಸ ಲೈನ್ ತಲುಪುವುದನ್ನೂ ಮತ್ತು ವಿವಿಧ ಅಂಗಾಂಶಗಳಲ್ಲಿನ ಐಸೋ ಎನ್ ಜೈಮ್ ವಿವಿಧ ಗತಿಯಲ್ಲಿ ಸಾಗುವುದನ್ನೂ ಕಂಡಾಗ, ಇವು ಆ ಅಂಗಾಂಶಗಳ ಜೀವಕೋಶಗಳ ಆಯುಮಾನವನ್ನು ಅಳೆಯುವಲ್ಲಿ ಉಪಯೋಗವಾಗಬಹುದೆಂದು ತಿಳಿಯಿತು. ಈ ಅಂಶವನ್ನು ಮತ್ತೊಮ್ಮೆ ಬಲಪಡಿಸಿಕೊಳ್ಳಲು
ನಾನೇ ಸ್ವಂತವಾಗಿ ಕೆಲವು ಪ್ರಯೋಗ ಮಾಡಬೇಕಾಯಿತು. ಇದಕ್ಕೆ ಪೈಲಟ್ ಅಧ್ಯಯನವಾಗಿ, ನಿಮ್ಮ ಸಹಾಯದಿಂದ ನಮ್ಮ ಸಿಬ್ಬಂದಿಯವರ ರಕ್ತದಲ್ಲಿನ ಬಿಳಿ ರಕ್ತ ಕಣಗಳಲ್ಲಿರುವ ನ್ಯೂಟ್ರೋಫಿಲ್ ಮತ್ತು ಲಿಂಫೋಸೈಟ್ ಗಳೆಂಬ ಎರಡು ಬಗೆಯ ಕಣಗಳಲ್ಲಿ ಎಸ್. ಡಿ ಮತ್ತು ಅದರ ಐಸೋ ಎನ್ ಜೈಮ್ ಗಳ ಮಟ್ಟವನ್ನು ಅಳೆದಾಗ, ನನ್ನ ಊಹೆ ಸರಿ ಎಂದು ಕಂಡು ಬಂತು. ಮೂರ್ತಿಯವರ ಸಂಶೋಧನೆಯನ್ನು ಈಗಲೇ ಪ್ರಕಟಮಾಡುವುದಕ್ಕೆ ಅವರದೇ ಆಕ್ಷೇಪವಿದೆ. ಆದರೆ, ನನ್ನ ಸಂಶೋಧನೆಯನ್ನು ಪ್ರಕಟ ಪಡಿಸುವುದರಲ್ಲಿ ಯಾವ ತೊಡಕೂ ಇಲ್ಲ.....ಅಷ್ಟೇ ಅಲ್ಲ, ನಾನಾಗಲೇ ನಿನಗೆ ತಿಳಿಸಿರುವಂತೆ, ಈ ಸಂಶೋಧನೆಯ ಸಹಾದಿಂದ, ಕ್ಯಾನ್ಸರ್ ಚಿಕಿತೆಯಲ್ಲಿಯೂ ಉಪಯೋಗವಾಗಬಹುದು...." ಎಂದು ವಿವರಿಸಿದ.
"ಹಾಗಾದರೆ, ಇನ್ನೂ ಯಾಕೆ ಪ್ರಕಟ ಪಡಿಸಿಲ್ಲ ..." ಎಂದು ಕೇಳಿದಳು ಆಭಾ.
"ನಾನಾಗಲೇ ತಿಳಿಸಿದಂತೆ, ನಾನು ಮಾಡಿರುವುದು ಕೇವಲ ಪೈಲಟ್ ಅಧ್ಯಯನ ಮಾತ್ರ..... ಪ್ರಕಟ ಪಡಿಸುವ ಮುನ್ನ ಇನ್ನೂ ಬಹಳ ಅಧ್ಯಯನ ಮಾಡ ಬೇಕಿದೆ. ಈ ಸಂಶೋಧನೆಯಲ್ಲಿ ನನ್ನ ಕೈಜೋಡಿಸುತ್ತೀಯಾ ಆಭಾ .....?" ಎಂದು ಅವಳ ಕೈಹಿಡಿದು, ಬಲು ನಲ್ಮೆಯಿಂದ ಕೇಳಿದ.
"ನಾನೇ.... ನಾನು ಹೇಗೆ ಇದರಲ್ಲಿ ಭಾಗವಹಿಸಬಲ್ಲೆ ....?" ಎಂದು ಅಚ್ಚರಿಯಿಂದ ಕೇಳಿದಳು.
"ಈ ಅಧ್ಯಯನದಲ್ಲಿ, ಸ್ಟಾಟಿ ಸ್ಟಿಟಿಕಲ್ ಅನಾಲೈಸಿಸ್ ಬಹಳ ಮುಖ್ಯವಾದ ಅಂಶ. ಇಲ್ಲಿ ನೀನು ನನಗೆ ಬಹಳ ಸಹಾಯ ಮಾಡಬಹುದು..:"
ಆಭಾ ಮರುಮಾತಿಲ್ಲದೇ ಒಪ್ಪಿಗೆ ಕೊಟ್ಟಳು.
ಮೂರ್ತಿಯವರ ಬಗ್ಗೆ ಮತ್ತು ತಾನು ಮುಂದುವರೆಸಿರುವ ಸಂಶೋಧನೆಯ ಬಗ್ಗೆ ವಿವರವಾಗಿ ಆಭಾಗೆ ತಿಳಿಸಿದ. ತನ್ನ ಗುರಿ ತಲುಪಿದ ನಂತರ ಮದುವೆಯಾದರೆ ಹೇಗೆ ಎಂಬ ಅವನ ಸಲಹೆಗೆ ಅವಳು ಕೂಡ ಒಪ್ಪಿಗೆ ಕೊಟ್ಟಿದ್ದಳು. ಮನೆಯವರ ಒಪ್ಪಿಗೆ ಸುಲಭವಾಗಿಯೇ ದೊರೆತಿತ್ತು. ಮುಂದಿನ ಹದಿನೆಂಟು ತಿಂಗಳ ಕಾಲ ಮಿಲಿಂದ್ ಹಗಲೂ ರಾತ್ರಿ ದುಡಿದು ತನ್ನ ಗುರಿ ಸಾಧಿಸಿದ್ದ. >>>>>>>>>>>>>>>>>>>>>>>>>>>>>>>>>>>>>>>>>>>>
ಅಂದು ಪುರಭವನದಲ್ಲಿ ಮಿಲಿಂದನಿಗೆ ಪೌರಸತ್ಕಾರದ ಕಾರ್ಯಕ್ರಮವಿತ್ತು. ಅವನ ಸಂಶೋಧನೆ ಪ್ರಕಟವಾಗಿ, ದೇಶ ವಿದೇಶಗಳಿಂದ ಅದಕ್ಕೆ ಮನ್ನಣೆ ದೊರಕಿ ಈಗಾಗಲೇ ಹಲವಾರು ತಿಂಗಳಾಗಿತ್ತು. ಅವನ ಸಾಧನೆಗೆ ರಾಜ್ಯ ಸರ್ಕಾರದ ವತಿಯಿಂದ ಸತ್ಕಾರ ಏರ್ಪಾಡಾಗಿತ್ತು. ಮಿಲಿಂದನ ಸಂಸ್ಥೆಯ ಸಿ.ಇ.ಒ ಮತ್ತು ಇತರ ಸಿಬ್ಬಂದಿ ವರ್ಗ ಮತ್ತು ಅವನ ಸ್ನೇಹಿತರ ಬಳಗ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು.
ವೇದಿಕೆಯ ಮೇಲೆ ಮಡದಿ ಆಭಾಳ ಜೊತೆ ಕುಳಿತಿದ್ದ ಮಿಲಿಂದ್ ಮುಂದಿನ ಸಾಲಿನಲ್ಲಿ ಕುಳಿತಿದ್ದ ಗಣ್ಯರ ಸಾಲಿನೆಡೆಗೆ ಕಣ್ಣು ಹಾಯಿಸಿದಾಗ, ಅವನ ಮೆಚ್ಚಿನ ಸೋದರಮಾವ
ಮುರಳೀಧರ ರಾವ್ ಕಾಣಿಸಿದರು. ಅವನ ಸಾಧನೆಗೆ ಸಹಜವಾಗಿಯೇ ಅವರಿಗೆ ಬಹಳ ಹೆಮ್ಮೆಯಾಗಿತ್ತು.
ಸ್ವಾಗತ ಭಾಷಣ ಮತ್ತಿತರ ಔಪಚಾರಿಕ ಭಾಷಣಗಳ ನಂತರ ಆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾನವ ಸಂಪನ್ಮೂಲ ಖಾತೆಯ ಸಚಿವರಾದ ಶ್ರೀ ಜಗನ್ನಾಥ ಶೆಟ್ಟಿಯವರು ತಮ್ಮ ಭಾಷಣದಲ್ಲಿ ಮಿಲಿಂದನನ್ನು ಬಾಯ್ತುಂಬಾ ಹೊಗಳುತ್ತಾ " ಈ ನಮ್ಮ ಯುವಕ ನಮ್ಮ ರಾಜ್ಯಕ್ಕೆ ಭಾರೀ ಗೌರವ ತಂದುಕೊಟ್ಟಿದ್ದಾನೆ. ವೈದ್ಯಲೋಕಕ್ಕೇ ಸವಾಲಾಗಿರುವ ಮಹಾಮಾರಿ ಕ್ಯಾನ್ಸರ್ ಕಾಯಿಲೆಯನ್ನು ಕಟ್ಟಿಹಾಕುವುದರಲ್ಲಿ ಯಶಸ್ವಿಯಾಗಿದ್ದಾನೆ. ಇನ್ನು ಮುಂದೆಯೂ ಇನ್ನಷ್ಟು ಮಾರಕ ರೋಗಗಳಿಗೆ ಪರಿಹಾರ ಕಂಡುಹಿಡಿಯುವುದರಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ" ಎಂದು ಹೇಳಿದರು.
ತನಗೆ ನೀಡಿದ ಸತ್ಕಾರಕ್ಕೆ ಪ್ರತಿಕ್ರಿಯಿಸಲು ಎದ್ದ ಮಿಲಿಂದ್, ಗಂಭೀರವಾಗಿ ಪೋಡಿಯಮ್ ಬಳಿ ಬಂದು, ತನ್ನೆರಡೂ ಕೈಗಳನ್ನು ಭಕ್ತಿಪೂರ್ವಕವಾಗಿ ಜೋಡಿಸಿ,
"ವಂದಿಸುವುದಾದಿಯಲಿ ಡಾಕ್ಟರ್ ಮೂರ್ತಿಯವರ...." ಎಂದು ರಾಗವಾಗಿ ಉಲಿಯುತ್ತಿದ್ದಂತೆ, ಸಭಿಕರಿಂದ ಮೆಚ್ಚುಗೆಯ ಕರತಾಡನವಾಯಿತು.
"ನನ್ನ ಮಾನಸ ಗುರುಗಳಾದ ಡಾಕ್ಟರ್ ಮೂರ್ತಿಯವರೂ ಹಿಂದೊಮ್ಮೆ ತಮ್ಮ ಮಾನಸ ಗುರುಗಳಾದ ಎಚ್. ನರಸಿಂಹಯ್ಯನವರಿಗೆ ಈ ರೀತಿ ಗೌರವ ಸೂಚಿಸಿದರು ಎಂದು ಕೇಳಿ ಬಲ್ಲೆ. ಕೇವಲ ಅವರ ಅಂಧಾನುಕರಣೆಗಾಗಿ ಮಾತ್ರ ನಾನು ಹೀಗೆ ಮಾಡಲಿಲ್ಲ. ಅವರ ಅಂದಿನ ನಡೆ ಪರಂಪರೆಯಾಗಬಲ್ಲಷ್ಟು ಔಚಿತ್ಯವನ್ನು ಪಡೆದಿದೆ ಎಂಬುದನ್ನು ಸೂಚಿಸಿದೆ ಅಷ್ಟೆ.
ಮಾನ್ಯ ಸಚಿವರು, ನನ್ನ ಮೇಲಿನ ಅಭಿಮಾನದ ಭರದಲ್ಲಿ, ಅತಿ ಭಾರವೆನಿಸುವ ಗೌರವ ಆದರಗಳನ್ನು ನನಗೆ ದಯಪಾಲಿಸಿದ್ದಾರೆ. ವಾಸ್ತವದಲ್ಲಿ ನನ್ನ ಸಂಶೋಧನೆ ಅಂತಹ ಕ್ರಾಂತಿಕಾರಕ ಸಂಶೋಧನೆಯೇನೂ ಅಲ್ಲ. ಕ್ಯಾನ್ಸರ್ ಕಾಯಿಲೆಗೆ ಸೂಕ್ತ ಮದ್ದನ್ನು ಕಂಡುಹಿಡಿದುಬಿಟ್ಟಿದ್ದೇನೇನೋ ಎನ್ನುವ ಧಾಟಿಯಲ್ಲಿ ಹೇಳಿದರು. ವಾಸ್ತವದಲ್ಲಿ ಯಾವ ವಿಜ್ಞಾನಿಯೇ ಆಗಲಿ ಇಂತಹ ಕಾಯಿಲೆಗೆ ಇಂತಹ ಮದ್ದು ಎನ್ನುವ ರೀತಿಯಲ್ಲಿ ಸಂಶೋಧಿಸುವುದು ಬಹಳ ಅಪರೂಪ. ನಮ್ಮ ದೇಶದವರೇ ಆದ ಯಲ್ಲಪ್ರಗಡ ಸುಬ್ಬರಾಯರಂತಹವರು ಅಂತಹ ಅಸಾಮಾನ್ಯ ಸಾಧನೆಯನ್ನು ಮಾಡಿದವರು. ಇತ್ತೀಚಿನ ದಿನಗಳಲ್ಲಿ ಸಂಶೋಧನೆಗಳು ಹಾಗೆ ಜರುಗುವುದಿಲ್ಲ. ಹಲವಾರು ವಿಜ್ಞಾನಿಗಳು ಕಂಡುಹಿಡಿಯುವ ಚಿಕ್ಕ ಚಿಕ್ಕ ತುಣುಕುಗಳು, ಸರಪಳಿಯಂತೆ ಸೇರಿಕೊಂಡು ಒಂದು ಆವಿಷ್ಕಾರವಾಗಿ ಹೊರಬರುತ್ತದೆ. ನಾನು ಕೂಡ ಅಂತಹ ಒಂದು ಚಿಕ್ಕ ತುಣುಕನ್ನು ನೀಡಿದ್ದೇನೆಯೇ ಹೊರತು ಕ್ಯಾನ್ಸರ್ ಗೆ ಸೂಕ್ತ ಔಷಧಿಯನ್ನು ಕಂಡುಹಿಡಿದಿದ್ದೇನೆ ಎಂದು ಹೇಳುವುದು ಬಹಳ ಅನುಚಿತ ಮತ್ತು ಉತ್ಪ್ರೇಕ್ಷೆಯ ಮಾತಾಗುತ್ತದೆ. ಈ ಒಂದು ಚಿಕ್ಕ ತುಣುಕು ಕೂಡ ಸಂಪೂರ್ಣ ನನ್ನದೇ ಎನ್ನಲಾರೆ. ಹಿರಿಯರೊಬ್ಬರ ಸಂಶೋಧನೆಯೊಂದು ಸಮಾಜಮುಖಿಯಾಗುವಂತೆ ಮಾಡುವಲ್ಲಿ ಮಾತ್ರ ಯಶಸ್ವಿಯಾಗಿದ್ದೇನೆ" ಎಂದು ಹೇಳುತ್ತಾ, ಮುರಳೀಧರ ರಾವ್ ಅವರೆಡೆಗೆ ಅರ್ಥಗರ್ಭಿತವಾಗಿ ನೋಟ ಬೀರಿದ. ಅವರು ತಮ್ಮ ಕಣ್ಣಂಚಿನ ಕಂಬನಿಗಳನ್ನು ಒರೆಸಿಕೊಳ್ಳುತ್ತಿದ್ದಂತೆ ಕಂಡಿತು.
"ನನ್ನ ಈ ಪುಟ್ಟ ಸಾಧನೆಗೆ ಅಗಾಧ ಗೌರವ ತೋರಿದ ನಿಮಗೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ. ಸಾಧನೆ ಅಲ್ಪವಾದರೂ ಇದರಿಂದ ನನಗೆ ದಕ್ಕಿರುವ ಪ್ರತಿಫಲ ಮಾತ್ರ ಬಹಳ ಅಗಾಧವಾದುದು. ಅಂತಹ ಪ್ರತಿಫಲಗಳಲ್ಲಿ ನನಗೆ ಅತ್ಯಂತ ಮಹತ್ವವಾದುದು, ಈ ಸಂಶೋಧನೆಯ ಸಮಯದಲ್ಲಿ ನನ್ನ ಮನ ಗೆದ್ದು ನನ್ನ ಮನದನ್ನೆಯಾದ ನನ್ನ ಮಡದಿ.... ಆಭಾ ಬಿಸಿರೊಟ್ಟಿ " ಎಂದು,ಮುಗುಳ್ನಗುತ್ತಾ ಆಭಾಳ ಕಡೆಗೆ ತಿರುಗಿ ನೋಡಿದಾಗ, ಸಭಿಕರೆಲ್ಲರ ನೋಟವೂ ಅವಳತ್ತ ತಿರುಗಿತು. ಆಭಾ ಸಂಕೋಚ ಮತ್ತು ಲಜ್ಜೆಯಿಂದ ತಲೆಬಾಗುತ್ತಿದ್ದಂತೆ, ಸಭೆಯಲ್ಲಿ ಅಲ್ಲಲ್ಲಿ ನಗು ಕೇಳಿಬಂತು.
ಸಭೆ ಮುಕ್ತಾಯವಾದ ನಂತರ, ತನ್ನನ್ನು ಅಭಿನಂದಿಸಲು ನೆರೆದಿದ್ದ ಎಲ್ಲಾ ಅಭಿಮಾನಿಗಳಿಂದ ಬಿಡಿಸಿಕೊಂಡು, ಮುರಳೀಧರ ರಾವ್ ಬಳಿ ಹೋಗಿ ಅವರಿಗೆ ನಮಸ್ಕರಿಸಲು ಬಾಗಿದಾಗ, ಅವರು ಅವನನ್ನು ತಬ್ಬಿಕೊಂಡು ಬಹು ಆತ್ಮೀಯವಾಗಿ ಅವನನ್ನು ಅಭಿನಂದಿಸಿದರು.
……………….ಮುಂದುವರೆಯುವುದು