‘ಮಯೂರ' ಹಾಸ್ಯ - ಭಾಗ ೨೯

‘ಮಯೂರ' ಹಾಸ್ಯ - ಭಾಗ ೨೯

ಬೇಬಿ ಕಾರ್ನ್

ಇತ್ತೀಚೆಗೆ ಹೋಟೇಲಿಗೆ ಹೋದಾಗ ಎಂದಿನಂತೆ ಮಸಾಲೆ ದೋಸೆ ಆರ್ಡರ್ ಮಾಡಿದೆ. ‘ನನಗೊಂದು ಬೇಬಿ ಕಾರ್ನ್ ಮಂಚೂರಿ' ಎಂದು ಮಗಳು ನೆನಪಿಸಿದಳು. ಆಗ ಅವಳ ಮಗ ಐದು ವರ್ಷದ ಹರಿ,’ ನಿನಗ್ಯಾಕೆ ಬೇಬಿ ಕಾರ್ನ್ ಮಂಚೂರಿ? ನೀನು ದೊಡ್ಡವಳು. ಅದನ್ನ ನಾನು ಮಾತ್ರ ತಿನ್ನಬಹುದು. ಏಕೆಂದರೆ ನಾನು ಬೇಬಿ' ಎಂದು ತಿನಿಸು ಬರುವ ಮೊದಲೇ ಅದನ್ನು ತನ್ನದಾಗಿಸಿಕೊಂಡ!

-ಕೆ.ವಿ.ರಾಜಲಕ್ಷ್ಮಿ

***

ಭಾಷಾ ಅವಾಂತರ

ನಾವು ಹುಬ್ಬಳ್ಳಿಯಲ್ಲಿ ಇರುವಾಗ ನಡೆದ ಘಟನೆ. ನಮ್ಮ ನೆರೆಮನೆಯಲ್ಲಿ ತೆಲುಗು ಮಾತಾಡುವ ಕುಟುಂಬ ಒಂದಿತ್ತು. ಅವರ ಮನೆಯಲ್ಲಿ ಒಬ್ಬ ಅಜ್ಜಿ ಇದ್ದರು. ಅವರಿಗೆ ಸದಾ ತಮ್ಮ ಮೊಮ್ಮಗನ ಗುಣಗಾನ ಮಾಡುವುದೇ ಕೆಲಸ. ಅವರ ಮೊಮ್ಮಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ. ಅಜ್ಜಿಯ ಕತೆ ಕೇಳಬೇಕೇ? ಊರ ತುಂಬ ಮೊಮ್ಮಗನ ಗುಣಗಾನ ಮಾಡಿಕೊಂಡು ಬಂದರು. ಆಗ ನಾನು ‘ನಿಮ್ಮ ಮೊಮ್ಮಗ ಪಾಸಾಗಿರುವುದಕ್ಕೆ ನೀವು ಮಾತ್ರ ಪೇಡಾ ತಿಂದರೆ ಆಯಿತೇ? ನಮಗಿಲ್ವೇ?’ ಎಂದು ಕೇಳಿದಾಗ ಅಜ್ಜಿಗೆ ರೇಗಿ ಹೋಯಿತು. ಅವರ ಭಾಷೆಯಲ್ಲಿ ನಮ್ಮನ್ನು ಬೈಯ ತೊಡಗಿದರು. ಯಾಕೆ ಅಂತ ನಮಗೆ ಅರ್ಥವೇ ಆಗಲಿಲ್ಲ.

ಆಗ ಅಜ್ಜಿಯ ಸೊಸೆ ಬಂದು ನಗುತ್ತ-’ತೆಲುಗು ಭಾಷೆಯಲ್ಲಿ ಪೇಡಾ ಎಂದರೆ ಸಗಣಿ ಅಂತ ಅರ್ಥ. ನೀವು ಸಗಣಿ ತಿಂದ್ರಾ ಅಂತ ಕೇಳಿದ್ದೀರಿ ಅಂದುಕೊಂಡು ಅಜ್ಜಿ ಕೋಪ ಮಾಡಿಕೊಂಡಿದ್ದಾರೆ' ಎಂದು ಅಜ್ಜಿಯ ಸಿಟ್ಟಿಗೆ ಕಾರಣ ವಿವರಿಸಿದರು. ಅಜ್ಜಿಯನ್ನು ಸಮಾಧಾನ ಮಾಡಲು ನಮಗೆ ಸಾಕು ಸಾಕಾಯ್ತು.

-ಸಾವಿತ್ರಿ ಹೊಳ್ಳ

***

ಅದಲು-ಬದಲು

ನನ್ನ ತಾಯಿ ಮನೆಯಿಂದ ಆಚೆ ಹೋಗುವಾಗ ನನ್ನ ಕೈಗೆ ೨೦೦ ರೂಪಾಯಿ ಕೊಟ್ಟು, ‘ಮಾಲಾ ಬಂದರೆ ಇದನ್ನು ಕೊಡು' ಎಂದು ಹೇಳಿದಳು. ನಂತರ ಸ್ವಲ್ಪ ಸಮಯದ ಬಳಿಕ ಎದುರು ಮನೆಯ ಪುಟ್ಟ ಹುಡುಗಿ ಮಾಲಾ ಬಂದು ತನ್ನ ಹುಟ್ಟುಹಬ್ಬದ ಸಿಹಿ ಕೊಟ್ಟಳು. ಅವಳಿಗೆ ‘ಹ್ಯಾಪಿ ಬರ್ತ್ ಡೇ’ ಹೇಳಿ ೨೦೦ ರೂಪಾಯಿ ಕೊಟ್ಟೆ. ಅವಳು ‘ಥ್ಯಾಂಕ್ಸ್' ಹೇಳಿ ಹೋದಳು. ನಂತರ ನನ್ನ ಅಮ್ಮ ಬಂದಳು. ಅವಳ ಹಿಂದೆಯೇ ಇಸ್ತ್ರೀ ಅಂಗಡಿಯ ಮಾಲಾ ಕೂಡಾ ಬಂದಿದ್ದಳು. ‘ಅಮ್ಮೋರೇ, ಅಡ್ವಾನ್ಸ್ ಬೇಕಿತ್ತು ಅಂತ ಕೇಳಿದ್ನಲ್ಲ...' ಅಂದಳು. ಆಗ ಅಮ್ಮ, ‘ಶಾಂತಿ, ಮಾಲಾ ಬಂದ್ರೆ ಕೊಡು ಅಂತ ದುಡ್ಡು ಕೊಟ್ಟು ಹೋಗಿದ್ನಲ್ಲ. ತಾ ಇಲ್ಲಿ' ಎಂದಳು. ನಾನು ತಬ್ಬಿಬ್ಬಾದೆ. ಪಕ್ಕದ ಮನೆಯ ಮಾಲಾಳಿಗೆ ಹಣ ಕೊಟ್ಟದ್ದು ಹೇಳಿದೆ. ಅಮ್ಮ ಬೈದಳು. ನನಗೇನು ಗೊತ್ತು ಇಬ್ಬರು ಮಾಲಾಗಳು ಒಂದೇ ದಿನ ಬರುತ್ತಾರೆ ಅಂತ... ಇನ್ಮೇಲೆ ಈ ಮಾಲಾಳನ್ನು 'ಇಸ್ತ್ರಿ ಮಾಲಾ’ ಅಂತ ಕರಿ ಎಂದು ಹೇಳಿ ಅಮ್ಮನ ಬಾಯಿ ಮುಚ್ಚಿಸಿದೆ.

-ಉಷಾ ಪ್ರಸಾದ್

***

ಜಾಣ ಪತಿ

ನಾನು ನನ್ನ ಪತಿ ಸಿನೆಮಾ ನೋಡಿಕೊಂಡು ಸ್ಕೂಟರ್ ನಲ್ಲಿ ಮನೆಗೆ ಬರುತ್ತಿದ್ದೆವು. ಮಾರ್ಗ ಮಧ್ಯದಲ್ಲಿ ದೊಡ್ಡ ದೊಡ್ಡ ತಾಜಾ ಪೇರಲೆ ಹಣ್ಣು ಕಂಡವು. ನಾನು ಕೂಡಲೇ ಸ್ಕೂಟರ್ ಇಳಿದು ಹಣ್ಣು ಕೊಳ್ಳಲು ನಿಂತೆ. ಅವರು ರಸ್ತೆ ಬದಿಯಲ್ಲಿಯೇ ಸ್ಕೂಟರ್ ನಿಲ್ಲಿಸಿಕೊಂಡು ನಿಂತಿದ್ದರು. ಚೌಕಾಸಿ ಮಾಡುತ್ತಾ ತುಸು ಸಮಯವಾಯಿತು. ತಡವಾದ್ದರಿಂದ ಅವರೇ ಸ್ಕೂಟರ್ ಇಳಿದು ಹಣ್ಣಿನವಳ ಬಳಿ ಬಂದರು. ಅಷ್ಟೊತ್ತು ನನ್ನ ಹಾಗೂ ಹಣ್ಣಿನವಳ ನಡುವೆ ವಾಗ್ವಾದ ನಡೆದೇ ಇತ್ತು. ‘ಐವತ್ತು ರೂಪಾಯಿಗೆ ಎರಡು ಹಣ್ಣು' ಎಂದು ಅವಳೆಂದರೆ, ‘ಮೂರು ಹಣ್ಣು ಕೊಡು' ಎಂದು ನಾನು. ಕೊನೆಗೂ ಅವಳೇ ಸೋತು ಚೀಲಕ್ಕೆ ಮೂರು ಹಣ್ಣು ಹಾಕುವುದಕ್ಕೂ, ಪತಿ ಮಧ್ಯೆ ಪ್ರವೇಶಿಸುವುದಕ್ಕೂ ಸರಿ ಹೋಯ್ತು. ‘ಅಯ್ಯೋ ಮೂರು ಹಣ್ಣು ಯಾಕಮ್ಮ, ನಾವಿರೋದು ಇಬ್ಬರೇ. ಎರಡು ಹಣ್ಣು ಕೊಡು ಸಾಕು.’ ಎಂದವರೇ ಚೀಲದಿಂದ ಒಂದು ಹಣ್ಣನ್ನು ಎತ್ತಿ ಅವಳ ಬುಟ್ಟಿಗೆ ಹಾಕಿ ಐವತ್ತು ರೂಪಾಯಿಗಳನ್ನು ಅವಳಿಗೆ ಕೊಟ್ಟರು. ಅಷ್ಟೂ ಹೊತ್ತು ನನ್ನ ಚೌಕಾಸಿಯ ಶ್ರಮ ವ್ಯರ್ಥವಾಗಿ ನಾನು ಮುಖ ಊದಿಸಿಕೊಂಡು ಮನೆಗೆ ಬಂದೆ!

-ಸುವರ್ಣ ಮಠ

***

(‘ಮಯೂರ' ಅಕ್ಟೋಬರ್ ೨೦೧೭ರ ಸಂಚಿಕೆಯಿಂದ ಸಂಗ್ರಹಿತ)