‘ಸುವರ್ಣ ಸಂಪುಟ' (ಭಾಗ ೧೧೩) - ಪೇಜಾವರ ಸದಾಶಿವರಾಯರು

‘ಸುವರ್ಣ ಸಂಪುಟ' (ಭಾಗ ೧೧೩) - ಪೇಜಾವರ ಸದಾಶಿವರಾಯರು

‘ಕನ್ನಡ ಕಾವ್ಯದ ಅಭಿಮನ್ಯು' ಎಂದು ವಿ.ಕೃ.ಗೋಕಾಕರಿಂದ ಕರೆಯಲ್ಪಟ್ಟ ಸಾಹಿತಿ ಪೇಜಾವರ ಸದಾಶಿವರಾವ್. ಹೀಗೆ ಕರೆಯಲು ಕಾರಣವೂ ಇದೆ. ಬದುಕಿದ್ದ ಕೇವಲ ೨೬ ಚಿಲ್ಲರೆ ವರ್ಷಗಳಲ್ಲಿ ಸದಾಶಿವರಾಯರು ಸಾಧಿಸಿದ್ದು ಬಹಳಷ್ಟು, ಥೇಟ್ ಮಹಾಭಾರತದ ಅಭಿಮನ್ಯುವಿನಂತೆ. ನಾಟಕ, ಕಥೆ, ಕಾವ್ಯ ಮೊದಲಾದ ಪ್ರಕಾರಗಳಲ್ಲಿ ಕೈಯಾಡಿಸಿ ಸೈ ಅನಿಸಿಕೊಂಡ ವ್ಯಕ್ತಿ ಇನ್ನಷ್ಟು ವರ್ಷ ಬದುಕಿದ್ದರೆ ಕನ್ನಡ ಸಾಹಿತ್ಯ ಲೋಕ ಮತ್ತಷ್ಟು ಶ್ರೀಮಂತವಾಗುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ

ಸದಾಶಿವರಾಯರು ಹುಟ್ಟಿದ್ದು ಫೆಬ್ರವರಿ ೧೫, ೧೯೧೩ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಎಂಬ ಸ್ಥಳದಲ್ಲಿ. ಇವರ ತಂದೆ ಪೇಜಾವರ ರಾಮರಾಯರು ಹಾಗೂ ತಾಯಿ ಸೀತಮ್ಮ. ಎಕ್ಕಾರಿನ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದುಕೊಂಡು ನಂತರ ಮುಲ್ಕಿ ಹಾಗೂ ಮಂಗಳೂರಿನ ಸಂತ ಅಲೋಸಿಯಸ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಾರೆ. ಕಾಲೇಜಿನ ಸಮಯದಲ್ಲೇ ಇವರು ‘ಮಿತ್ರಮಂಡಳಿ' ಎಂಬ ಪ್ರಸಿದ್ಧ ಸಾಹಿತ್ಯ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದರು. ಈ ಮಿತ್ರಮಂಡಳಿಯಲ್ಲಿ ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು, ಕಡೆಂಗೋಡ್ಲು, ಕಯ್ಯಾರರು, ಕುಡ್ಪಿ ವಾಸುದೇವ ಶೆಣೈ, ಜಿ ಟಿ ಆಚಾರ್ ಮೊದಲಾದ ಖ್ಯಾತನಾಮರು ಇದ್ದರು. ಇವರ ಸಾಂಗತ್ಯದಲ್ಲಿ ಬೆಳೆದ ಸದಾಶಿವರಾಯರು ‘ಅಳಿಲು ಸೇವಾ ಗ್ರಂಥಮಾಲೆ' ಎಂಬ ಪ್ರಕಟನಾ ವಿಭಾಗವನ್ನು ಮುನ್ನಡೆಸಿದರು. ೧೯೩೧ ರಲ್ಲಿ ತಮ್ಮ ೧೭ನೇ ವಯಸ್ಸಿನಲ್ಲೇ ‘ಆಲರು' ಎಂಬ ಕವನ ಸಂಕಲನವನ್ನು ಸಂಪಾದಿಸಿ ಪ್ರಕಟಿಸಿದ ಹೆಗ್ಗಳಿಕೆ ಸದಾಶಿವರಾಯರಿಗೆ ಸಲ್ಲಬೇಕು. 

ಸದಾಶಿವರಾಯರು ಸಾಹಿತಿಯಾಗಿದ್ದರೂ ಇವರು ಕಲಿತದ್ದು ಮಾತ್ರ ಇಂಜಿನಿಯರಿಂಗ್. ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ‘ಮೆಕ್ಯಾನಿಕಲ್ ಇಂಜಿನಿಯರಿಂಗ್' ನಲ್ಲಿ ಬಿ ಇ ಪದವಿಯನ್ನು ಗಳಿಸಿದ್ದ ಇವರು ಉತ್ತಮ ಟೆನ್ನಿಸ್ ಪಟು ಆಗಿದ್ದರು. ಸೈಕಲ್ ಸವಾರಿ, ಚಾರಣಗಳಲ್ಲಿ ವಿಪರೀತ ಆಸಕ್ತಿ ಇತ್ತು. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಇಟಲಿಯ ಪ್ರಾಧ್ಯಾಪಕ ರೆವರೆಂಡ್ ಪಿಜ್ಜಿಯವರ ಪ್ರೋತ್ಸಾಹದಿಂದ ಅಂದಿನ ಖ್ಯಾತ ಅಟೋಮೊಬೈಲ್ ಕಂಪೆನಿ ‘ಫಿಯೆಟ್' ನ ಪ್ರಾಯೋಜಕತ್ವ ಪಡೆದುಕೊಂಡು ಆಟೋಮೊಬೈಲ್ ನಲ್ಲಿ ಉನ್ನತ ಶಿಕ್ಷಣ ಪಡೆಯಲು ಇಟಲಿಗೆ ತೆರಳಿದರು. ಆಗ ಇಟಲಿಗೆ ಶಿಕ್ಷಣಾರ್ಥಿಯಾಗಿ ಹೋಗಬಯಸುವವರು ಮದುವೆಯಾಗಿರಲೇ ಬೇಕು ಎಂಬ ನಿಬಂಧನೆ ಇದ್ದುದರಿಂದ ೧೯೨೬ರಲ್ಲಿ ಮದುವೆಯಾಗಿ ಸದಾಶಿವರಾಯರು ಮರು ವರ್ಷ ಇಟಲಿಯ ಮಿಲಾನ್ ಗೆ ತೆರಳಿದರು.

ಸದಾಶಿವರಾಯರು ಇಟಲಿಯ ಮಿಲಾನ್ ನಗರದಲ್ಲಿದ್ದರೂ ಸಾಹಿತ್ಯ ಪ್ರೇಮ ಕಡಿಮೆಯಾಗಲಿಲ್ಲ. ಅಲ್ಲಿಂದಲೇ ಕನ್ನಡದ ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಬೀದಿಗಿಳಿದ ನಾರಿ, ಸರಪಣಿ, ಜೀವನ ಸಂಗೀತ ನಾಟಕಗಳು, ಬಿರುಸು ಇವರು ಬರೆದ ನಾಟಕಗಳು. ಅಂಧ ಶಿಲ್ಪಿ, ಶೀಗಂಧ, ಸೂಜಿಗಲ್ಲು, ಬಾಡೂರಿನ ಸೊಗಸು, ಲಲಿತ ಲಹರಿಯ ಪ್ರಬಂಧ ಇವರು ಬರೆದ ಕೆಲವು ಸಣ್ಣ ಕಥಾ ಸಂಕಲನಗಳು. ಅಲ್ಪಾಯುವಿನಲ್ಲೇ ಸಾವಿಗೀಡಾದ ಸದಾಶಿವರಾಯರು ತಮ್ಮ ಕವನಗಳಲ್ಲಿ ಸಾವಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ಇವರ ಕೆಲವು ಕವನ ಸಂಕಲನಗಳು - ಸಾವು, ಮಾಯಕದ ಮಸಣ, ಜವರಾಯ, ಬೇಡ, ಮುಗಿದ ಮುರಲಿ ಇತ್ಯಾದಿ. 

ಇಟಲಿಯಲ್ಲಿ ತಮ್ಮ ಪಿ ಎಚ್ ಡಿ ಪ್ರಬಂಧವನ್ನು ಮುಗಿಸಿ ಕಾಲೇಜಿಗೆ ಒಪ್ಪಿಸುವ ಸಮಯದಲ್ಲೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ತೀವ್ರವಾದ ಕರುಳುಬೇನೆ (ಪೆರಿಟೋನೈಟಿಸ್) ಗೆ ಗುರಿಯಾದ ಸದಾಶಿವರಾಯರು ಚಿಕಿತ್ಸೆಗೆ ಸ್ಪಂದಿಸದೇ ದೂರದ ಇಟಲಿಯಲ್ಲೇ ಅಕ್ಟೋಬರ್ ೧೮, ೧೯೩೯ರಲ್ಲಿ ನಿಧನ ಹೊಂದುತ್ತಾರೆ. ಇನ್ನೂ ಬಾಳಿಬದುಕಬೇಕಾಗಿದ್ದ ಪ್ರತಿಭಾವಂತ ಸಾಹಿತಿ ಸಣ್ಣ ಪ್ರಾಯದಲ್ಲೇ ನಿಧನ ಹೊಂದಿದ್ದು ಸಾಹಿತ್ಯ ಲೋಕಕ್ಕೆ ಬಹಳ ದೊಡ್ದ ನಷ್ಟವೇ ಆಗಿಹೋಯಿತು. 

ಸದಾಶಿವರಾಯರ ಒಂದು ಕವನ ‘ಸುವರ್ಣ ಸಂಪುಟ' ದಲ್ಲಿ ಪ್ರಕಟವಾಗಿದೆ. ಅದನ್ನು ಆಯ್ದು ಇಲ್ಲಿ ನೀಡಲಾಗಿದೆ. 

ನಾಟ್ಯೋತ್ಸವ

ಲೋರೆನ್ಸೋ ಇಲ್ ಮನ್ನೀಫಿಡೊ

ಹಾಡನ್ನರ್ಪಿಸಿಹೆನು ತಕೊ!

ಇಂದಿನೆಮ್ಮ ಉತ್ಸವದಲಿ

ಯೌವನದೀ ಸಂಬ್ರಮದಲಿ

ಹರಯವಿದರ ಯಾಗದಲ್ಲಿ

ಜೀವಿತಗಳ ಭೋಗದಲ್ಲಿ

ಗುರುವೆ ನಿನಗೆ ಅಗ್ರಪೀಠ

ಕಲಿತೆವಿಂದು ನಿನ್ನ ಪಾಠ!

ತೇಲಿ ಬರುವ ಬಾಸ್ ಗಾನ

ನಮ್ಮ ಕುಣಿತಕ್ಕಲವೇನ!

ವೆನೇತ್ಸಿಯದ ಕಡೆದ ಗಾಜು

ಸಾರ್ದೇಯದ ಸುರೆಯ ಮೋಜು

ಮುತ್ತಿರುವರೆ ಕತ್ತಲು;

ಹಾಡಿನೊಡನೆ ಮೂಡಿ ಬರುವ 

ಬೇರೆ ನಾಡ ಕನಸ ತರುವ

ಸೌರಭದಲಿ ಎತ್ತಲು ;

ಯೌವನವನು ಸೂಸುತಿರುವ

ಬಯಕೆಯನು ಬೀಸುತಿರುವ 

ಸುಂದರಿಯರು ಸುತ್ತಲು !

ಯಾರೆ ನೀನು? ನಾನು ಸ್ಪಾನ್ಯ

ಅದು ಇತಾಲ್ಯ ಇದು ಜರ್ಮಾನ್ಯ,

ಯಾರೆ ನೀನು? ನಾನು ಫ್ರಾಂಚ,

ಮತ್ತೆ ನೀನೊ? ನಾನು ಗ್ರೇಚ.

ಮಿಂಚುತ್ತಿರುವ ರೇಶ್ಮೆಯಲ್ಲಿ 

ಅರ್ಧ ಮುಚ್ಚಿ ಅರ್ಧ ಬಿಚ್ಚಿ 

ಜಘನ ಧ್ವಜವ ಗಗನದಲ್ಲಿ

ವಿಜಯದಾಸೆಯಿಂದ ಚುಚ್ಚಿ 

ಗಂಡಿಗಾಗಿ ಕಾದುತ್ತಿರುವ

ಹಿಂಡು ಎದುರಿದೆ !

ಕಾಯದಲ್ಲಿ ಕದನದಿಚ್ಚೆ 

ಆದರದನು ಕೊಂಚ ಮುಚ್ಚೆ 

ಅರಳುತಿರುವ ಮರುಳು ನಗೆ

ಸಾವಿರ ಸಿಗರೇಟ ಹೊಗೆ;

ಮಧುವಿನಲ್ಲಿ ಮಿಂದ ಮುದವು

ಮನಸ ಕೆದರಿದೆ !

ಹಾಡಿನೊಂದು ತೆರೆಯ ಮೇಲೆ

ನರ್ತನಗಳ ತೆಪ್ಪ ತೇಲೆ

ಧೀವರಿಯರು ಬಲೆಯ ಬೀಸಿ

ಮತ್ಸ್ಯಕಾಗಿ ಕಾಯ್ದರೆ,

ಮೀಂಗಳಿವೂ ಗುಣಿಸಿ ಗುಣಿಸಿ

ಅವಳ ನೆಣಿಸಿ ಇವಳ ಕುಣಿಸಿ

ಮುಗುಳುನಗುತ ಮೆಲ್ಲನೀಸಿ

ಬಲೆಯ ಹಾಯ್ದರೆ !

ಜೀವನಕ್ಕೆ ಎರಡು ಮುಖ-

ಒಂದು ಸುಖ ಒಂದು ದುಃಖ ;

ನಾಳಿನರಿವು ಯಾಕೆ ಸಖಾ?

ಇಂದಿಗಿಹುದು ತುಂಬ ಸುಖ!

ದೀಪವೆಲ್ಲ ಆರುತಿಹುದು !

ಕುರುಡು ನೀಲ ಬೆಳಕಿನಲ್ಲಿ

ಕೊಳ್ಳೊ ಅವಳ ಬಾಹುಗಳಲಿ.

ಒಟ್ಟಿನಲ್ಲಿ ಗುಟ್ಟನಾಡೆ

ಮೊಗವನಿರಿಸೆ ಹೆಗಲ ಕೊಡು.

ಬಳ್ಳಿಗೊಂದು ಬಲವ ನೀಡೆ

ಕಟಿಗೆ ಕೈಯ ಇಂಬನಿಡು.

ತಾಳದೊಡನೆ ಮೇಳವಿಸುವ

ಎರಡು ಮಧುರ ನುಡಿಯಲಿ

ಜೀವನಗಳ ಜೀವರಸವ

ಅಧರಕೆಧರ ಕುಡಿಯಲಿ !

ಮುತ್ತಿರುವರೆ ಕತ್ತಲು

ಸೌರಭವಿದೆ ಎತ್ತಲು

ಸುಂದರಿಯರು ಸುತ್ತಲು !

ಒಂದು ರಾತ್ರಿ ಒಮ್ಮೆ ಸೊಕ್ಕಿ

ಶಾಸ್ತ್ರಗಳ ದೊಡ್ಯೇನ !

ಇಂದು ರಾತ್ರಿ ಬಂದ ಹಾಗೆ

ನನ್ನ ಬಾಳ ಮಾಡ್ಯೇನ !

ಪೃಥಿವಿಯಿದರ ಮಡಿಲನೊಕ್ಕಿ

ಸಾರವನ್ನು ನೋಡೇನ !

ಮಿಂಚಿನೊಡನೆ ಮಿಂಚುತೊಮ್ಮೆ

ಕತ್ತಲೆಯನೆ ಕೂಡ್ಯೇನ!

(ಸುವರ್ಣ ಸಂಪುಟ ಕೃತಿಯಿಂದ ಆಯ್ದ ಕವನ)