ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು
ಜಾಣ ಜಾಣೆಯರ "ಲಂಕೇಶ್ ಪತ್ರಿಕೆ"ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! ಇತ್ತೀಚೆಗೆ ನೀಲುಗಳು ಎಂಬ ಕೇಶವ ಕುಲ್ಕರ್ಣಿಯವರ ಬ್ಲಾಗಿನಲ್ಲಿ "ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, ನೀಲು ಹೆಸರಿನಲ್ಲಿ. ಕನ್ನಡದಲ್ಲಿ ಅಂಥ ಕಾವ್ಯ ಪ್ರಕಾರಕ್ಕೆ 'ನೀಲುಗಳು' ಎಂದು ನಾಮಕರಣ ಮಾಡಬಹುದೇ?" ಎಂದು ತಮ್ಮ ಒಂದೆರಡು ಕನ್ನಡದ ಹಾಯಿಕುಗಳನ್ನು "ನೀಲುಗಳು" ಎಂದು ಕರೆದಿದ್ದರು. ನೋಡಿ ತುಂಬಾ ಸಂತೋಷವಾಯಿತು. ಹೌದು, "ನೀಲುಗಳು" ಒಂದು ಕಾವ್ಯ ಪ್ರಕಾರವಾಗಬೇಕು ಅಂತ ಅನಿಸಿತು. ಅದಕ್ಕೆ ನೀಲು ಪದ್ಯಗಳ ಜಾಡಿನಲ್ಲೇ ಬರೆಯಬೇಕು ಅಂತ ಅನಿಸಿತು. ಇದು ನನ್ನ ಮೇಲಿನ ಲಂಕೇಶರ ಪ್ರಭಾವ ಅಂತಲೇ ಇಟ್ಕೊಳ್ಳಿ. ಹಾಗಾದರೆ ಲಂಕೇಶರ ಪದ್ಯಗಳು ಪ್ರಕಟವಾಗಿವೆಯೆ ಎಂದು ಹುಡುಕಿದಾಗ "ನೀಲು ಕಾವ್ಯ" ಅಂತ ಪ್ರಕಟವಾಗಿದೆ ಅಂತ ಪತ್ರಿಕೆಯಲ್ಲಿ ಓದಿದೆ. ತುಂಬಾ ಸಂಭ್ರಮದಿಂದ ತರಿಸಿಕೊಂಡು "ರೆಫೆರ್" ಮಾಡಲು ತೊಡಗಿದ್ದೇನೆ! ಈ ಸಂಪುಟದಲ್ಲಿ ಲಂಕೇಶರು 1981-1984 ರವರೆಗೆ ಬರೆದವುಗಳು ಮಾತ್ರ ಇವೆ. ಮುನ್ನುಡಿಯಲ್ಲಿ ಕಿ.ರಂ.ನಾಗರಾಜರು "ವಾರಕ್ಕೆ ಸರಾಸರಿ ಇಪ್ಪತ್ತು ಸಾಲುಗಳಂತೆ ಇಪ್ಪತ್ತು ವರ್ಷಗಳ ತುಂಬ ಹಬ್ಬಿಕೊಂಡಿದ್ದು"..."ಸುಮಾರು ಹದಿನೆಂಟು ಸಾವಿರ ಸಾಲುಗಳ" ಬರಹ ಇರಬಹುದೆಂದು ಅಂದಾಜು ಹಾಕುತ್ತಾರೆ ಮತ್ತು "ಈ ಕಾಲಮಾನದಲ್ಲಿ ನಮ್ಮ ಆಸುಪಾಸಿನಲ್ಲಿ ಇಷ್ಟು ವ್ಯಾಪಕವಾದ ಕಾವ್ಯ ರಚನೆಯಾದದ್ದು ಅಪರೂಪ" ಎಂದು ಅಭಿಪ್ರಾಯಪಡುತ್ತಾರೆ.
ತಮ್ಮ ಪತ್ರಿಕೆಯಲ್ಲಿ ಲಂಕೇಶರು "ಟೀಕೆ-ಟಿಪ್ಪಣಿ" ಎಂದು ಬರೆಯುತ್ತಿದ್ದರು. ಅದು ಈಗಾಗಲೇ ಪುಸ್ತಕರೂಪದಲ್ಲಿ ಹೊರಬಂದಿದೆ. ಅದು ಕೂಡ ಒಂದು ಪ್ರಜ್ಞಾವಂತ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಅವುಗಳನ್ನು ಲಂಕೇಶರ ಬ್ಲಾಗ್ ಅನ್ನಬಹುದು. ಆದರೆ ಅದಕ್ಕಿಂತ, ತುಂಬಾ ಭಿನ್ನವಾಗಿ, ಕಲಾತ್ಮಕವಾಗಿ, ಕಾವ್ಯಮಯವಾಗಿ "ನೀಲು" ಮೂಲಕ ಲಂಕೇಶರು ಮಾತಾಡಿದ್ದಾರೆ. ಕೆಲವು ಸಲ ತಮ್ಮ ಸ್ವಂತ ಅನಿಸಿಕೆಯನ್ನೂ ನೀಲುವಿನ ಮಾತಿನ ಚೂಪಿಗೆ ಒಡ್ಡಿದ್ದಾರೆ, ಟೀಕಿಸಿಕೊಂಡಿದ್ದಾರೆ ಎನ್ನುವುದು ನನ್ನೊಬ್ಬನ ಅನಿಸಿಕೆ ಇರಲಾರದು . ಲಂಕೇಶರು ತಮ್ಮನ್ನು ತಾವು ಮೀರುತ್ತಿದ್ದ ರೀತಿಯದು ಎಂದು ಬಗೆಯುತ್ತೇನೆ. ಹಾಗಾಗಿಯೇ "ನೀಲು" ಎಂಬ ತಮ್ಮ ಮತ್ತೊಂದು ಬದಿಯನ್ನು ಮುಖ್ಯವಾಗಿ ತಮ್ಮನ್ನು ತಾವು ಮೀರುವ ತಂತ್ರವಾಗಿ ಲಂಕೇಶರು ಬಳಸಿದ್ದಾರೆ. ಅದಕ್ಕೇ ನನಗೆ "ನೀಲು" ಪದ್ಯಗಳೂ ಒಂದು ರೀತಿಯ ನಿಯತಕಾಲಿಕ ಬ್ಲಾಗ್‌ನಂತೆ ಕಾಣುತ್ತದೆ. ಇತ್ತೀಚೆಗೆ ನಾನು ನನ್ನ ಬ್ಲಾಗುಗಳಿಗೆ ಬೇರೆ ಬೇರೆ ರೂಪಕೊಡುವ ಪ್ರಯತ್ನಪಟ್ಟಿದ್ದೇನೆ. ಆ ಪ್ರಯತ್ನಕ್ಕೂ, ಕೇಶವ ಕುಲಕರ್ಣಿಯವರ "ನೀಲುಗಳು" ಎಂಬ ತಲೆಪಟ್ಟಿಗೂ, ಲಂಕೇಶರ "ನೀಲು ಕಾವ್ಯ"ದ ಪ್ರಕಟಣೆಗೂ ಒಂದು ರೀತಿಯ ಯೋಗಾಯೋಗ ಸಂಬಂಧವಿದೆಯೇ ಎಂದು ಅಚ್ಚರಿಪಡುತ್ತಿದ್ದೇನೆ.
- Read more about ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು
- 6 comments
- Log in or register to post comments