ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

ಜಾಣ ಜಾಣೆಯರ "ಲಂಕೇಶ್ ಪತ್ರಿಕೆ"ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! ಇತ್ತೀಚೆಗೆ ನೀಲುಗಳು ಎಂಬ ಕೇಶವ ಕುಲ್ಕರ್ಣಿಯವರ ಬ್ಲಾಗಿನಲ್ಲಿ "ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, ನೀಲು ಹೆಸರಿನಲ್ಲಿ. ಕನ್ನಡದಲ್ಲಿ ಅಂಥ ಕಾವ್ಯ ಪ್ರಕಾರಕ್ಕೆ 'ನೀಲುಗಳು' ಎಂದು ನಾಮಕರಣ ಮಾಡಬಹುದೇ?" ಎಂದು ತಮ್ಮ ಒಂದೆರಡು ಕನ್ನಡದ ಹಾಯಿಕುಗಳನ್ನು "ನೀಲುಗಳು" ಎಂದು ಕರೆದಿದ್ದರು. ನೋಡಿ ತುಂಬಾ ಸಂತೋಷವಾಯಿತು. ಹೌದು, "ನೀಲುಗಳು" ಒಂದು ಕಾವ್ಯ ಪ್ರಕಾರವಾಗಬೇಕು ಅಂತ ಅನಿಸಿತು. ಅದಕ್ಕೆ ನೀಲು ಪದ್ಯಗಳ ಜಾಡಿನಲ್ಲೇ ಬರೆಯಬೇಕು ಅಂತ ಅನಿಸಿತು. ಇದು ನನ್ನ ಮೇಲಿನ ಲಂಕೇಶರ ಪ್ರಭಾವ ಅಂತಲೇ ಇಟ್ಕೊಳ್ಳಿ. ಹಾಗಾದರೆ ಲಂಕೇಶರ ಪದ್ಯಗಳು ಪ್ರಕಟವಾಗಿವೆಯೆ ಎಂದು ಹುಡುಕಿದಾಗ "ನೀಲು ಕಾವ್ಯ" ಅಂತ ಪ್ರಕಟವಾಗಿದೆ ಅಂತ ಪತ್ರಿಕೆಯಲ್ಲಿ ಓದಿದೆ. ತುಂಬಾ ಸಂಭ್ರಮದಿಂದ ತರಿಸಿಕೊಂಡು "ರೆಫೆರ್‍" ಮಾಡಲು ತೊಡಗಿದ್ದೇನೆ! ಈ ಸಂಪುಟದಲ್ಲಿ ಲಂಕೇಶರು 1981-1984 ರವರೆಗೆ ಬರೆದವುಗಳು ಮಾತ್ರ ಇವೆ. ಮುನ್ನುಡಿಯಲ್ಲಿ ಕಿ.ರಂ.ನಾಗರಾಜರು "ವಾರಕ್ಕೆ ಸರಾಸರಿ ಇಪ್ಪತ್ತು ಸಾಲುಗಳಂತೆ ಇಪ್ಪತ್ತು ವರ್ಷಗಳ ತುಂಬ ಹಬ್ಬಿಕೊಂಡಿದ್ದು"..."ಸುಮಾರು ಹದಿನೆಂಟು ಸಾವಿರ ಸಾಲುಗಳ" ಬರಹ ಇರಬಹುದೆಂದು ಅಂದಾಜು ಹಾಕುತ್ತಾರೆ ಮತ್ತು "ಈ ಕಾಲಮಾನದಲ್ಲಿ ನಮ್ಮ ಆಸುಪಾಸಿನಲ್ಲಿ ಇಷ್ಟು ವ್ಯಾಪಕವಾದ ಕಾವ್ಯ ರಚನೆಯಾದದ್ದು ಅಪರೂಪ" ಎಂದು ಅಭಿಪ್ರಾಯಪಡುತ್ತಾರೆ.ಮುಖಪುಟ

ತಮ್ಮ ಪತ್ರಿಕೆಯಲ್ಲಿ ಲಂಕೇಶರು "ಟೀಕೆ-ಟಿಪ್ಪಣಿ" ಎಂದು ಬರೆಯುತ್ತಿದ್ದರು. ಅದು ಈಗಾಗಲೇ ಪುಸ್ತಕರೂಪದಲ್ಲಿ ಹೊರಬಂದಿದೆ. ಅದು ಕೂಡ ಒಂದು ಪ್ರಜ್ಞಾವಂತ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಅವುಗಳನ್ನು ಲಂಕೇಶರ ಬ್ಲಾಗ್ ಅನ್ನಬಹುದು. ಆದರೆ ಅದಕ್ಕಿಂತ, ತುಂಬಾ ಭಿನ್ನವಾಗಿ, ಕಲಾತ್ಮಕವಾಗಿ, ಕಾವ್ಯಮಯವಾಗಿ "ನೀಲು" ಮೂಲಕ ಲಂಕೇಶರು ಮಾತಾಡಿದ್ದಾರೆ. ಕೆಲವು ಸಲ ತಮ್ಮ ಸ್ವಂತ ಅನಿಸಿಕೆಯನ್ನೂ ನೀಲುವಿನ ಮಾತಿನ ಚೂಪಿಗೆ ಒಡ್ಡಿದ್ದಾರೆ, ಟೀಕಿಸಿಕೊಂಡಿದ್ದಾರೆ ಎನ್ನುವುದು ನನ್ನೊಬ್ಬನ ಅನಿಸಿಕೆ ಇರಲಾರದು . ಲಂಕೇಶರು ತಮ್ಮನ್ನು ತಾವು ಮೀರುತ್ತಿದ್ದ ರೀತಿಯದು ಎಂದು ಬಗೆಯುತ್ತೇನೆ. ಹಾಗಾಗಿಯೇ "ನೀಲು" ಎಂಬ ತಮ್ಮ ಮತ್ತೊಂದು ಬದಿಯನ್ನು ಮುಖ್ಯವಾಗಿ ತಮ್ಮನ್ನು ತಾವು ಮೀರುವ ತಂತ್ರವಾಗಿ ಲಂಕೇಶರು ಬಳಸಿದ್ದಾರೆ. ಅದಕ್ಕೇ ನನಗೆ "ನೀಲು" ಪದ್ಯಗಳೂ ಒಂದು ರೀತಿಯ ನಿಯತಕಾಲಿಕ ಬ್ಲಾಗ್‌ನಂತೆ ಕಾಣುತ್ತದೆ. ಇತ್ತೀಚೆಗೆ ನಾನು ನನ್ನ ಬ್ಲಾಗುಗಳಿಗೆ ಬೇರೆ ಬೇರೆ ರೂಪಕೊಡುವ ಪ್ರಯತ್ನಪಟ್ಟಿದ್ದೇನೆ. ಆ ಪ್ರಯತ್ನಕ್ಕೂ, ಕೇಶವ ಕುಲಕರ್ಣಿಯವರ "ನೀಲುಗಳು" ಎಂಬ ತಲೆಪಟ್ಟಿಗೂ, ಲಂಕೇಶರ "ನೀಲು ಕಾವ್ಯ"ದ ಪ್ರಕಟಣೆಗೂ ಒಂದು ರೀತಿಯ ಯೋಗಾಯೋಗ ಸಂಬಂಧವಿದೆಯೇ ಎಂದು ಅಚ್ಚರಿಪಡುತ್ತಿದ್ದೇನೆ.

ನನ್ನ ನೆನಪಿನಲ್ಲಿ ನಿಂತಿದ್ದ ನೀಲು ಪದ್ಯಗಳ ಜಾಣತನ, ಪೋಲಿತನ, ವಿಲಕ್ಷಣ ಪ್ರಜ್ಞೆ ಈವತ್ತಿಗೂ ಮುದಕೊಡುತ್ತವೆ. ಯಾವುದೇ ರೀತಿಯ ಅಗ್ಗದ ಚಟಾಕಿಗೋ, ಶಾಕ್ ಮಾಡಲೆಂದೋ ಬರೆದಂಥ ಪದ್ಯಗಳಲ್ಲ ಅವು. ಆ ಪದ್ಯಗಳಿಗೆ ವಿಶಿಷ್ಟವಾದ ಪ್ರಜ್ಞೆ ಮತ್ತು ಯೋಚನಾ ಕ್ರಮ ಇರುವಂತೆ ಕಾಣುತ್ತದೆ. ಅದೇನು ಎಂದು ನಿಖರವಾಗಿ ಹೇಳುವುದು ನನ್ನ ಕೈಯಿಂದ ಆಗದ ಕೆಲಸ. ಆದರೆ ಸುತ್ತಲಿನ ಆಗುಹೋಗುಗಳಿಗೆ ಸರ್ವೆಸಾಮಾನ್ಯವಾದ ಪ್ರತಿಕ್ರಿಯೆ, ಯೋಚನೆಗಳನ್ನು ಮೀರುತ್ತಿತ್ತು ಎಂದಂತೂ ಧೈರ್ಯವಾಗಿ ಹೇಳಬಹುದು. ಯಾವ ಸಂದರ್ಭದಲ್ಲೋ ಬರೆದ ಈ ಪದ್ಯಗಳು ಇಂದಿಗೂ ತನ್ನ ಬೆಳಕು ಚೆಲ್ಲುವುದು ನನ್ನ ಮಟ್ಟಿಗಂತೂ ಸೋಜಿಗವಲ್ಲ. ಈ ಎರಡರಲ್ಲಿ ಯಾವುದು ಹಾಕಲಿ ಎಂದು ನಿರ್ಧರಿಸಲಾಗದೆ ಎರಡನ್ನೂ ಹಾಕಿಬಿಟ್ಟಿದ್ದೇನೆ!

ದುಷ್ಟ ಪುಸ್ತಕ ಅಪ್ಪಟ ಅಪಾಯದ್ದು
ಯಾಕೆಂದರೆ
ದುಷ್ಟ ಮನುಷ್ಯನಂತೆ ಅದು
ಅಕಸ್ಮಾತ್
ಪಶ್ಚಾತ್ತಾಪ ಪಡಲಾರದು
-ಪುಟ 174

ಕಂಡದ್ದು ಕಂಡಹಾಗೆ
ಹೇಳುವವನ ವರಸೆಗೆ
ಮರುಳಾಗಬೇಡಿ-
ಕಂಡ ಕಣ್ಣು, ಹೇಳುವ ನಾಲಗೆ
ಬೇರೆ ಬೇರೆ!
-ಪುಟ 134

ನೀಲು ಎಂಬ ಹೆಸರು ಹೊಳೆಸುವ ಯೋಚನೆಗಳೇ ವಿಚಿತ್ರ. "blues"ನ ನೆರಳಿದೆ ಆ ಹೆಸರಿಗೆ ಎಂದು ಯಾವಾಗಲೂ ನನಗೆ ಅನಿಸುತ್ತಿತ್ತು. ಯಾವುದೋ ಮೊಟಕುಗೊಳಿಸಿದ ಹೆಸರಾಗಿ ಆಪ್ತತೆಯಿಂದ ಆವರಿಸುತ್ತದೆ. ಹಾಗೆ ತೋರುತ್ತಲೇ ವಿಲಕ್ಷಣತೆಯನ್ನು ತನ್ನ ಸಾಲುಗಳಲ್ಲಿ ಮೆರೆಸುತ್ತದೆ. ಜೀವನವನ್ನು ಅರಿಯುವ ವಿನಯದ ಜತೆಗೆ ತನ್ನ ನಿಲುವಿನ ಬಗ್ಗೆ ಅಗಾಧವಾದ ಸ್ಥೈರ್ಯವೂ ಕಾಣುತ್ತದೆ. ಹೆಣ್ಣಾಗಿ ಆಡುವ ಮಾತುಗಳು ಆ ಸ್ಥೈರ್ಯಕ್ಕೆ ಸಾಮಾನ್ಯಕ್ಕಿಂತ ಹೆಚ್ಚು ಆಳವನ್ನು ಕೊಡುತ್ತದೆ. ಹಾಗಂತ ಯಾವುದೇ ರೀತಿಯ ದೊಡ್ಡಸ್ತಿಕೆಯನ್ನೂ ನೀಲು ಮೆರೆಯುವುದಿಲ್ಲ. ಬದಲಾಗಿ ಎಲ್ಲರನ್ನೂ ಕಾಡಬಹುದಾದ ತಲ್ಲಣಗಳನ್ನು ಕಾವ್ಯವಾಗಿ ನಿರೂಪಿಸುತ್ತದೆ. ಜಾಣತನದ ಜತೆಗೆ ಉಳಿದ ಭಾವಗಳನ್ನು ತೋರುವ ನೀಲುವಿನ ಬಗ್ಗೆಯೇ ಇರುವ ಈ ಪದ್ಯ ಗಮನಿಸಿ-

ನೀಲುವಿನಂತೆ ಬರೆಯಲು ಬಯಸುವ
ಜಾಣೆಯರು
ನೀಲುವಿನಂತೆ ಭಯ, ಕಾತರ,
ಆತಂಕ ಪಡುವುದ ಕಲಿಯಬೇಕು
-ಪುಟ 90

ವಿನಯಪೂರ್ವಕವಾಗಿ ತನ್ನ ತುಂಟಾಟವನ್ನು ಬಿಡದೆ ಕಾಳಿದಾಸನ ಬಗ್ಗೆ ಹೇಳುತ್ತಾ, ಬೇರೆ ಬರಹಗಾರರಿಗೂ ಅನ್ವಯಿಸುವ ಆತ್ಮರತಿಯ ಬಗೆಗಿನ ಈ ಟೀಕೆ ನೋಡಿ.

ಕಾಳಿದಾಸ ಸುಂದರಿಯ ವರ್ಣಿಸುವಾಗ
ತನ್ನ ವರ್ಣನೆಯನ್ನೇ ಹೆಚ್ಚು ಪ್ರೀತಿಸಿದ
ಅನಿಸುತ್ತದೆ, ಕ್ಷಮಿಸಿ
-ಪುಟ 95

ಹಾಗೆಯೇ ಅಭಿರುಚಿ ಯಾರ ಸ್ವತ್ತೂ ಅಲ್ಲ ಮತ್ತು ಅದು ಬದುಕಿನಲ್ಲಿ ಹಾಸು ಹೊಕ್ಕಾಗಿರುವಂಥದು ಎನ್ನುವ ಈ ಸುಂದರ ವ್ಯಾಖ್ಯಾನ ನನ್ನ ಮನಸ್ಸನಂತೂ ಸೂರೆಗೊಂಡಿತು:

ಕಡು ಬಡವ ಕೂಡ
ತನ್ನ ಗುಡಿಸಲಲ್ಲಿ
ಸುಂದರ ಮಣ್ಣಿನ ತಟ್ಟೆಯ ಪಕ್ಕಕ್ಕೆ
ಹೊಳೆವ ತಾಮ್ರದ ಗಿಂಡಿಯಲ್ಲಿ
ನೀರಿಟ್ಟುಕೊಂಡರೆ
ಅದೇ ಅಭಿರುಚಿ
-ಪುಟ 164ಲಂಕೇಶರು

"ನೀಲು ಕಾವ್ಯ" ತರಿಸಿಕೊಂಡು ಮೊದಲು ಕೈಯಲ್ಲಿ ಹಿಡಿದಾಗ ಆದ ಅನುಭವ ನಿಮಗೆ ಹೇಳದಿದ್ದರೆ ಸರಿ ಹೋಗುವುದಿಲ್ಲ. ನಾಟಕವೊಂದರ ತಾಲೀಮಿಗೆ ಹೋದಾಗ ನನ್ನ ಕೈಗೆ ಪುಸ್ತಕ ಬಂತು. ನಾಟಕ ಮಾಡುವ ಉತ್ಸಾಹ ಒಂದು ಕ್ಷಣ ಜರ್‍ರನೆ ಇಳ್ಳಿದುಹೋಗಿ, ಈ ಪದ್ಯಗಳನ್ನು ಓದುತ್ತಾ ಕೂತು ಬಿಡೋಣ ಅನಿಸಿತು. ತಾಲೀಮು ಮಾಡುವ ಬದಲು, ಎಲ್ಲರಿಗೂ ಕೆಲವು ಪದ್ಯಗಳನ್ನು ಜೋರಾಗಿ ಓದುತ್ತಾ ಕೂರೋಣ ಅನಿಸಿತು. ನಾಟಕದ ಉಳಿದವರು ಬೆದರಿಸಿದಾಗ ಪುಸ್ತಕ ಪಕ್ಕಕ್ಕಿಟ್ಟು ತಾಲೀಮಿನಲ್ಲಿ ತೊಡಗಿಕೊಂಡೆ.

"ನೀಲು ಕಾವ್ಯ"ವನ್ನು ಪ್ರಕಟಿಸಿದವರ ಬಗ್ಗೆ ಧನ್ಯತೆಯಿಂದ ನಂತರ ಮತ್ತೆ ಓದತೊಡಗಿದಾಗ ಆ ಪದ್ಯ ರೂಪಕ್ಕೆ ಅಚ್ಚಿನ ಅಕ್ಷರಗಳು ಹೊಂದುವುದಿಲ್ಲ ಅನಿಸಿತು. ಆ ಪದ್ಯಗಳ ಒಂದು ಮುಖ್ಯ ಲಕ್ಷಣ ಲಂಕೇಶರ ಕೈಬರಹವೂ ಕೂಡ ಆಗಿತ್ತು. ಕೆಲವು ಪದ್ಯಗಳನ್ನು ಪತ್ರಿಕೆಯಲ್ಲಿ ಕಾಣಿಸಿದ ಲಂಕೇಶರ ಕೈಬರಹದಲ್ಲೇ ಪುಸ್ತಕದಲ್ಲೂ ಮೂಡಿಸಿರುವುದು ಸ್ವಲ್ಪ ಮಟ್ಟಿನ ಸಮಾಧಾನವೇನೋ ಹೌದು. ಅದು ಪದ್ಯಗಳಿಗೆ ತರುವ ಆತ್ಮೀಯತೆ ಮತ್ತು ಜರೂರಿ ಅನನ್ಯ. ಹಾಗಾಗಿಯೇ ಪೂರ ಪುಸ್ತಕವನ್ನು ಅವರ ಕೈಬರಹದಲ್ಲೇ, ಅದರೊಡನೆಯ ಚಿತ್ರಗಳೊಂದಿಗೇ ಪ್ರಕಟಿಸಬೇಕಾಗಿತ್ತು ಅನಿಸಿತು. ಮರುಕ್ಷಣ ಹಾಗೆ ಪ್ರಕಟಿಸುವುದಕ್ಕೆ ತಗಲುವ ವೆಚ್ಚದ ಅರಿವಾಗಿ ಹೀಗೇ ಸರಿ ಅಂದೂ ಅನಿಸಿತು. ಆದರೆ ಮುಂದೊಂದು ದಿನ ತೂಗುಹಾಕಲು ಬರುವಂಥ ಪುಟ್ಟ ಫ್ರೇಮಿನ ಚಿತ್ರ-ಕವನಗಳಾಗಿ ಇವುಗಳನ್ನು ಹೊರತಂದರೆ ಸುಂದರವಾಗಿರುತ್ತದೆ ಎಂಬ ಕನಸಿಗೇ ಉದ್ವಿಗ್ನಗೊಂಡೆ!

Rating
No votes yet

Comments