ಅಗ್ಗದ ದರದಲ್ಲಿ ಸಿ ಎಫ್ ಲ್ಯಾಂಪ್
ಸಿ ಎಫ್ ಎಲ್ ಎಂದು ಜನಪ್ರಿಯವಾಗಿರುವ ಕ್ಯಾಂಪ್ಯಾಕ್ಟ್ ಫ್ಲೊರಸೆಂಟ್ ಲ್ಯಾಂಪ್ಗಳು ಸದ್ಯ ಎಪ್ಪತ್ತೈದರಿಂದ ನೂರು ರುಪಾಯಿಗೆ ಕಡಿಮೆಯಿಲ್ಲದ ಬೆಲೆಯಲ್ಲಿ ಬಳಕೆದಾರರಿಗೆ ಲಭ್ಯ. ಇವು ಬಹಳ ಕಡಿಮೆ ವಿದ್ಯುಚ್ಛಕ್ತಿ ಬಳಸುತ್ತವೆ. ನೂರು ವ್ಯಾಟ್ನ ಮಾಮೂಲಿ ಬಲ್ಬ್ ಬಳಸುವ ವಿದ್ಯುತ್ನ ಐದನೇ ಒಂದು ಶಕ್ತಿ ಬಳಸಿ ನೂರು ವ್ಯಾಟಿನ ಬಲ್ಬು ನೀಡುವ ಬೆಳಕು ನೀಡುತ್ತದೆ. ಅಂದರೆ, ಸಿ ಎಫ್ ಎಲ್ ಪರಿಸರ ಸ್ನೇಹಿ ಅನ್ನುವುದರಲ್ಲಿ ಸಂಶಯವಿಲ್ಲವಷ್ಟೇ?ಇನ್ನು ಮುಂದೆ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಗಳಿಗೆ ಕಾರ್ಬನ್ ಕ್ರೆಡಿಟ್ ಅನ್ನು ಪಡೆಯುತ್ತವೆ. ಪರಿಸರಕ್ಕೆ ಹಾನಿ ಮಾಡುವ ಕಂಪೆನಿಗಳು ಕಾರ್ಬನ್ ಕ್ರೆಡಿಟ್ ಹೊಂದಿರುವ ಕಂಪೆನಿಗಳಿಂದ ಕಾರ್ಬನ್ ಕ್ರೆಡಿಟನ್ನು ದುಡ್ಡುಕೊಟ್ಟು ಖರೀದಿಸಬೇಕಾಗುತ್ತದೆ.
ಇದರ ಲಾಭ ಪಡೆದು ಕಡಿಮೆ ಬೆಲೆಯಲ್ಲಿ ಸಿ ಎಫ್ ಎಲ್ಗಳನ್ನು ಜನರಿಗೆ ಒದಗಿಸಲು ಕೇಂದ್ರ ಸರಕಾರ ಯೋಜನೆ ಹಾಕಿಕೊಂಡಿದೆ. ಇದರ ಪ್ರಕಾರ ಬಲ್ಬ್ ಕಂಪೆನಿಗಳು ಹತ್ತು-ಹದಿನೈದು ರೂಪಾಯಿಗಳಿಗೆ ಬಲ್ಬ್ ಒದಗಿಸಬೇಕಾಗುತ್ತದೆ. ಇವನ್ನು ವಿತರಿಸಲು ಪ್ರತ್ಯೇಕ ಕಂಪೆನಿಗಳಿರುತ್ತವೆ. ಈ ವಿತರಕ ಕಂಪೆನಿಗಳು ಕಾರ್ಬನ್ ಕ್ರೆಡಿಟ್ ಅಂದಾಜು ಮಾಡುವ ಕಾರ್ಯದಲ್ಲಿಯೂ ಕೆಲಸ ಮಾಡುತ್ತವೆ. ಪ್ರತಿವರ್ಷ ಬಲ್ಬ್ ಕಂಪೆನಿಗೆ ಅಂದಾಜು ಇಪ್ಪತ್ತು ರೂಪಾಯಿ ಕಾರ್ಬನ್ ಕ್ರೆಡಿಟ್ ದೊರೆಯುತ್ತದೆ. ಹೀಗೆ ಐದು ವರ್ಷವಾಧಿಯಲ್ಲಿ ಬಲ್ಬ್ ಕಂಪೆನಿಗೆ ಪೂರ್ತಿ ಹಣ ಸಂದಾಯವಾಗುತ್ತದೆ. ಈ ಯೋಜನೆಯು ಆಂಧ್ರ ಪ್ರದೇಶ ಮತ್ತು ಹರ್ಯಾಣಾದಲ್ಲಿ ಈಗಾಗಲೇ ಜಾರಿಗೆ ಬಂದಿದೆ.ಓಸ್ರಾಮ್ ಕಂಪೆನಿ ಈ ಯೋಜನೆಯಲ್ಲಿ ಪಾಲ್ಗೊಂಡಿದೆ. ಫಿಲಿಫ್ಸ್ ಕಂಪೆನಿಯೂ ಉತ್ಸಾಹ ವ್ಯಕ್ತ ಪಡಿಸಿದೆ.ದೇಶದಲ್ಲಿ ಐನೂರು ದಶಲಕ್ಷ ಬಲ್ಬ್ಗಳು ಬಳಕೆಯಲಿದ್ದು,ಅವುಗಳ ಪೈಕಿ ನೂರು ದಶಲಕ್ಷ ಬಲ್ಬ್ಗಳನ್ನು ಬದಲಾಯಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ.
ವಿಡಿಯೋಗೇಮ್ಗೆ ನಿಷೇಧ
ಮ್ಯಾನ್ಹಂಟ್ 2 ಎಂಬುದು ಅಮೆರಿಕಾದಲ್ಲಿ ಅಭಿವೃದ್ಧಿ ಪಡಿಸಲಾದ ವಿಡಿಯೋಗೇಮ್. ಈಗಿನ ವಿಡಿಯೋ ಆಟಗಳು ಚಲನಚಿತ್ರಗಳಂತೆ ಕತೆಯನ್ನು ಹೊಂದಿದ್ದು, ಆಟಗಾರನ ಸೂಚನೆಗಳಿಗೆ ಪ್ರತಿಸ್ಪಂದನೆ ಸಿಗುತ್ತದೆ. ಜನರ ಅಕರ್ಷಣೆ ಗಳಿಸಲು ಭಯಾನಕ, ಬೀಭತ್ಸ ದೃಶ್ಯಗಳನ್ನು ಒಳಗೊಂಡಿರುವುದು ತೀರಾ ಸಾಮಾನ್ಯ. ಈ ವಿಡಿಯೋ ಆಟವನ್ನು ಬ್ರಿಟನ್ನಿನ ಸೆನ್ಸಾರ್ ಮಂಡಳಿ ನಿಷೇಧಿಸಿದೆ. ಇದು ಜನರ ಮನಸ್ಸು ಕೆಡಿಸುವಂತಹ ಭಯಾನಕ, ಬೀಭತ್ಸ ಕತೆ ಹೊಂದಿದೆ ಎಂದು ಸೆನ್ಸಾರ್ ಮಂಡಳಿಯ ಆಕ್ಷೇಪ.ಆದರೆ ಇದನ್ನು ಆಡುವವರಿಗೆ ಇದು ಕತೆ ನಿಜವಲ್ಲ ಎನ್ನುವುದರ ಅರಿವಿರುತ್ತದೆ. ಇದು ವಯಸ್ಕರಿಗೆ ನಿರ್ಮಿಸಿದ ಆಟ ಎಂದು ಅದನ್ನು ಅಭಿವೃದ್ಧಿ ಪಡಿಸಿದ ರಾಕ್ಸ್ಟಾರ್ ಹೇಳಿದೆ.ಬ್ರಿಟನ್ನಿನಲ್ಲಿ ಹೇರಿದ ನಿಷೇಧ ಅಮೆರಿಕಾದಲ್ಲೂ ಪ್ರಭಾವ ಬೀರಬಹುದು.
ಚಕ್ರದ ಗಾಳಿ ಒತ್ತಡ ಸರಿಯಾಗಿಡಲು ಸಾಧನ
ಚಕ್ರದ ಗಾಳಿಯ ಒತ್ತಡ ಸರಿಯಾಗಿದ್ದರೆ ಅದರ ಮೈಲೇಜ್ ಕೂಡಾ ಹೆಚ್ಚಿರುತ್ತದೆ.ಹಾಗಾಗಿ ಅಮೆರಿಕಾದಲ್ಲಿ ಮುಂದಿನ ವರ್ಷದಿಂದ ಎಲ್ಲಾ ವಾಹನಗಳಲ್ಲಿ ಚಕ್ರದ ಗಾಳಿ ಒತ್ತಡ ಅಳೆಯುವ ಮಾಪಕ ಹೊಂದುವುದು ಕಡ್ಡಾಯಗೊಳಿಸಲಾಗಿದೆ. ಅದರೆ ಬರಿದೇ ಗಾಳಿ ಕಡಿಮೆ ಇರುವುದು ಗೊತ್ತಾದರೆ ಏನು ಪ್ರಯೋಜನ? ಗಾಳಿ ಕಡಿಮೆಯಿದ್ದಾಗ ಟ್ಯೂಬ್ಗೆ ಗಾಳಿ ಪಂಪ್ ಮಾಡುವ ವ್ಯವಸ್ಥೆ ಇದ್ದರೆ? ಮ್ಯಾಕ್ಸ್ ಏರ್ ಎಂಬ ಕಂಪೆನಿ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ. ಇದರಲ್ಲಿ ಕಂಪ್ರೆಸರ್ ಇದ್ದು, ಗಾಳಿ ಕಡಿಮೆಯಿದ್ದರೆ, ವಾತಾವರಣದ ಗಾಳಿಯನ್ನು ಒತ್ತಡಕ್ಕೊಳಪಡಿಸಿ, ಚಕ್ರಕ್ಕೆ ತುಂಬಿಸುವ ಕೊಳವೆ ವ್ಯವಸ್ಥೆ ಇದರಲ್ಲಿದೆ.ಸದಾ ಚಕ್ರದ ಗಾಳಿಯ ಒತ್ತಡ ಸರಿಯಾಗಿರುವಂತೆ ಈ ವ್ಯವಸ್ಥೆ ನೋಡಿಕೊಳ್ಳುವ ಮೂಲಕ ವಾಹನದ ಮೈಲೇಜ್ ಹೆಚ್ಚುವಂತಾಗುತ್ತದೆ.
ಹಣ್ಣು ಕೊಯ್ಯಲು ರೊಬೋಟ್
ಕ್ಯಾಲಿಫೋರ್ನಿಯಾದ ಹಣ್ಣು ಬೆಳೆಗಾರರ ಸಂಘವು ತನ್ನ ಕೃಷಿಕರು ಎದುರಿಸುವ ಕೂಲಿಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಲು,ವಿಶನ್ ರೊಬೋಟಿಕ್ಸ್ ಎನ್ನುವ ಕಂಪೆನಿಯನ್ನು ಸಂಪರ್ಕಿಸಿತು. ಕಿತ್ತಳೆ, ಸೇಬು ಇಂತಹ ಹಣ್ಣುಗಳ ಮರದಿಂದ ಬೆಳೆದ ಹಣ್ಣುಗಳನ್ನು ಕೊಯ್ಯಲು ರೊಬೋಟ್ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಕಂಪೆನಿಗೆ ನೀಡಲಾಯಿತು. ಕಂಪೆನಿಯ ಪ್ರತಿನಿಧಿಗಳು ತೋಟಗಳನ್ನು ಸಂದರ್ಶಿಸಿದಾಗ, ಸಾಲು ಸಾಲು ಮರಗಳು ಇಕ್ಕೆಲಗಳಲ್ಲೂ ಬೆಳೆದಿರುವುದನ್ನು ನೋಡಿದರು. ಮರಗಳಲ್ಲಿ ಹಣ್ಣುಗಳೆಲ್ಲಿವೆ ಎಂದು ಹುಡುಕಿ, ಅದು ಬೆಳೆದಿದ್ದರೆ ಮಾತ್ರಾ ಕೊಯ್ಯುವ ಕೆಲಸವನ್ನು ರೊಬೋಟ್ ಮಾಡಬೇಕಿತ್ತು. ಪ್ರಾಯೋಗಿಕವಾಗಿ ತಯಾರಿಸಿದ ರೊಬೋಟ್ ಹಣ್ಣನ್ನು ಒಂದೊಂದೇ ಹುಡುಕಿ ಕೊಯ್ಯಲು ಬಹಳ ಸಮಯ ತೆಗೆದುಕೊಳ್ಳುತ್ತಿತ್ತು. ಇದಕ್ಕೇನು ಪರಿಹಾರ ಎಂದು ಯೋಚಿಸಿದಾಗ,ಹಣ್ಣನ್ನು ಹುಡುಕಲು ಒಂದು ರೊಬೋಟ್, ಕೊಯ್ಯಲು ಇನ್ನೊಂದು ರೊಬೋಟ್ ಹೀಗೆ ಎರಡು ಪ್ರತ್ಯೇಕ ರೊಬೋಟ್ಗಳನ್ನು ಬಳಸುವ ತೀರ್ಮಾನಕ್ಕೆ ಬರಲಾಯಿತು. ಈಗ ಅವಳಿ ರೊಬೋಟ್ ಇರುವ ಹಣ್ಣು ಕೊಯ್ಯುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿ ಹಣ್ಣು ಬೆಳೆಗಾರರಿಗೆ ವಿಷನ್ ರೊಬೋಟ್ ಕಂಪೆನಿ ನೀಡಿದೆ.ಮುಂದಿನ ದಿನಗಳಲ್ಲಿ ಇಂತಹ ನೂರಾರು ರೊಬೋಟ್ಗಳು ಹಣ್ಣು ಕೊಯ್ಯುವ ಕೆಲಸವನ್ನು ಮಾಡಬಹುದು. ಈ ನಡುವೆ ಇಂತಹ ಕ್ರಮದಿಂದ ಕೆಲಸ ಕಳೆದುಕೊಳ್ಳುವ ವಲಸೆ ಕಾರ್ಮಿಕರು ಕಳವಳ ವ್ಯಕ್ತಪಡಿಸಿದ್ದಾರೆ.
*ಅಶೋಕ್ಕುಮಾರ್ ಎ