ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನೆಂಟು

ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನೆಂಟು

“ನೇರವಾಗಿ ಕಥೆ ಹೇಳುವುದು ಬಿಟ್ಟು ಏನೇನೋ ಹೇಳುತ್ತಿದ್ದೇನೆ. ಸಮಾಧಾನವಾಗಿ ಹೇಳುವುದಕ್ಕೆ ಆಗುವುದೇ ಇಲ್ಲ. ಈ ವಿಷಯಗಳ ಬಗ್ಗೆ ಬಹಳ ಆಲೋಚನೆ ಮಾಡಿದ್ದೇನೆ. ನನಗೆ ಎಲ್ಲವೂ ಬೇರೆ ಥರ ಕಾಣುತ್ತವೆ. ನನಗೆ ಕಂಡದ್ದನ್ನು ಹೇಳದೆ ಇರಲಾರೆ.
“ಇರಲಿ. ಸಿಟಿಗೆ ಹೋದೆವು. ದುಃಖ ತುಂಬಿಕೊಂಡಿರುವವರು ಸಿಟಿಗಳಲ್ಲಿ ಬದುಕುವುದು ಸುಲಭ. ಸತ್ತು ಕೊಳೆತು ಹೋಗಿದ್ದೇವೆ ಅನ್ನುವುದೇ ಗೊತ್ತಿಲ್ಲದಂತೆ ನೂರು ವರ್ಷ ಬೇಕಾದರೂ ಬದುಕಿಬಿಡಬಹುದು ಸಿಟಿಗಳಲ್ಲಿ. ಎಲ್ಲರೂ ಬ್ಯುಸಿ. ನಮ್ಮನ್ನು ನಾವು ನೋಡಿಕೊಳ್ಳುವುದಕ್ಕೆ ವ್ಯವಧಾನವೇ ಇಲ್ಲ. ಬ್ಯುಸಿನೆಸ್ಸು, ಸಾಮಾಜಿಕ ಜವಾಬ್ದಾರಿ, ಆರೋಗ್ಯ, ಕಲೆ, ಮಕ್ಕಳ ಹೆಲ್ತು, ಎಜುಕೇಶನ್ನು, ಇವತ್ತು ಇಂಥಾವರನ್ನು ಮನೆಗೆ ಕರೆಯಬೇಕು, ನಾಳೆ ಇಂಥಾವರ ಮನೆಗೆ ಹೋಗಬೇಕು, ಇದನ್ನ ನೋಡಲೇಬೇಕು, ಅದನ್ನ ಮಾಡಲೇಬೇಕು, ಆ ಭಾಷಣ ಕೇಳಲೇಬೇಕು. ಸಿಟಿಗಳಿಗೆ ದಿನವೂ ಒಬ್ಬಿಬ್ಬರಾದರೂ ಸೆಲಿಬ್ರಿಟಿಗಳು ಬರುತ್ತಲೇ ಇರುತ್ತಾರೆ. ಅವರನ್ನು ನೋಡದೆ ಇದ್ದರೆ ಹೇಗೆ? ನಮ್ಮ ಕಾಯಿಲೆಗೆ ಡಾಕ್ಟರ ಹತ್ತಿರ ಹೋಗಬೇಕು, ಮಗುವನ್ನು ಸ್ಪೆಷಲಿಸ್ಟಿಗೆ ತೋರಿಸಬೇಕು, ಮಕ್ಕಳ ಸ್ಕೂಲು, ಟ್ಯೂಶನ್ನು, ಗೌರ್ನೆಸ್ಸುಗಳು, ಎಷ್ಟೊಂದು ಮಾಡಲೇಬೇಕಾದ ಕೆಲಸಗಳು, ಬದುಕು ಖಾಲಿ ಗುಡಾಣದ ಹಾಗೆ ಖಾಲಿ ಅಪೂಟ ಖಾಲಿ. ನಾವೂ ಹಾಗೇ ಇರಲು ಶುರುಮಾಡಿದೆವು. ಒಟ್ಟಿಗೆ ಬದುಕುವ ನೋವು ಸ್ವಲ್ಪ ಕಡಮೆಯಾಗಿತ್ತು. ಜೊತೆಗೆ ಹೊಸ ಊರಿನಲ್ಲಿ, ಹೊಸ ಮನೆಯಲ್ಲಿ ಸೆಟಲ್‌ ಆಗುವ ಉತ್ಸಾಹ, ಹಳ್ಳಿಗೆ ಸಿಟಿಗೆ ಓಡಾಡುವ ಸಡಗರ ಇವೆಲ್ಲ ಇದ್ದವು.
“ಒಂದು ಚಳಿಗಾಲ ಕಳೆಯಿತು. ಎರಡನೆಯದು, ಮೂರನೆಯದೂ ಆಗಿಹೋದವು. ಬಹಳ ಮುಖ್ಯ ಅನಿಸುವಂಥದು ಏನೂ ನಡೆಯಲಿಲ್ಲ. ಆದರೆ ಮುಂದೆ ಆದದಕ್ಕೆ ಕಾರಣವಾಗುವಂಥ ಘಟನೆ ತನ್ನಷ್ಟಕೆ ತಾನು ಆಗಿಹೋಯಿತು.
“ಅವಳಿಗೆ ಹುಷಾರಿರಲಿಲ್ಲ. ಡಾಕ್ಟರುಗಳು, ದುಷ್ಟರು, ಇನ್ನುಮೇಲೆ ಮಕ್ಕಳಾಗಬಾರದು ಅಂದರು. ಮಕ್ಕಳಾಗದಂತೆ ನೋಡಿಕೊಳ್ಳುವ ಪ್ಲಾನು ಹೇಳಿಕೊಟ್ಟರು ಅವಳಿಗೆ. ನನಗೆ ಅಸಹ್ಯ ಅನಿಸಿತ್ತು. ವಿರೋಧಮಾಡಿದೆ. ಆದರೆ ಅವಳು ಹಟಮಾಡಿದಳು. ನಾನೇ ಸೋತೆ. ನಮ್ಮ ಮೃಗೀಯ ಬದುಕಿಗೆ ಒಂದು ನೆಪವಾಗಿದ್ದ ಮಕ್ಕಳನ್ನೂ ತೊಲಗಿಸಿಕೊಂಡಮೇಲೆ ನಮ್ಮ ಬದುಕು ಮೊದಲಿಗಿಂತ ಕೊಳಕಾಯಿತು.
“ರೈತನಿಗೆ, ದುಡಿಯುವನಿಗೆ ಮಕ್ಕಳು ಬೇಕು. ಅವನು ಅವಕ್ಕೆ ಹೊಟ್ಟೆಗೆ ಹಾಕಲು ಆಗದಿದ್ದರೂ ಮಕ್ಕಳು ಬೇಕು. ಅವರ ಮದುವೆಗೆ, ದೇಹಸಂಬಂಧಕ್ಕೆ ಅದು ಕಾರಣ. ಆದರೆ ನಮಗೆ ಮಕ್ಕಳು ಬೇಕಾಗಿಲ್ಲ, ಹೆಚ್ಚು ಮಕ್ಕಳಂತೂ ಬೇಡವೇ ಬೇಡ. ಅನಗತ್ಯವಾದ ಜವಾಬ್ದಾರಿ, ವೃಥಾ ಖರ್ಚು ಮತ್ತೆ ಆಸ್ತಿಯಲ್ಲಿ ಹೆಚ್ಚು ಹೆಚ್ಚು ಪಾಲು. ಆದ್ದರಿಂದಲೇ ಹಂದಿಗಳಂತೆ ಬದುಕುವ ನಮ್ಮ ಲೈಫಿಗೆ ಯಾವ ಸಮರ್ಥನೆಯೂ ಇಲ್ಲ. ಕೃತಕವಾಗಿ ಮಕ್ಕಳಾಗದಂತೆ ತಡೆಯುತ್ತೇವೆ, ಅಥವಾ ಹಾಗೂ ಮಕ್ಕಳಾದರೆ ನಮ್ಮದೇ ಬೇಜವಾಬ್ದಾರಿ ಎಂದು ಬೈದುಕೊಳ್ಳುತ್ತೇವೆ. ನಮಗೆ ಯಾವ ಸಮರ್ಥನೆಯೂ ಇಲ್ಲ. ನೈತಿಕವಾಗಿ ಎಷ್ಟು ಹಾಳಾಗಿದ್ದೇವೆಂದರೆ ಸಮರ್ಥನೆಯ ಅಗತ್ಯ ಇದೆ ಎಂದು ಕೂಡ ನಮಗೆ ಅನಿಸುವುದಿಲ್ಲ. ಎಜುಕೇಟೆಡ್ ಆದ ಜನ ಒಂದಿಷ್ಟೂ ಮನಸ್ಸು ಅಳುಕದೆ ಲಂಪಟತನದಲ್ಲಿ ಮುಳುಗಿಹೋಗಿದ್ದಾರೆ.
“ಮನಸ್ಸೇ ಇಲ್ಲದಿರುವಾಗ ಅಳುಕುವುದೆಲ್ಲಿಂದ ಬಂತು? ಪಬ್ಲಿಕ್ ಒಪಿನಿಯನ್ನನ್ನೇ ಅಥವಾ ಕ್ರಿಮಿನಲ್‌ ಕಾನೂನನ್ನೇ ಮನಸ್ಸು ಅಂದುಕೊಳ್ಳಬೇಕೇನೋ. ಆದರೆ ಅವೆರಡೂ ಇದನ್ನ ತಪ್ಪು ಎಂದು ತಿಳಿಯುವುದೇ ಇಲ್ಲ. ಅಯ್ಯೋ, ಮೇರಿ ಪಾವ್ಲೊವ್ನಾ, ಇವಾನ್ ಝಕರಯಾ ಇಂಥಾವರು ಕೂಡ ಮಕ್ಕಳಾಗದಂತೆ ನೋಡಿಕೊಂಡಿದ್ದಾರಂತೆ, ನಾವೂ ಹಾಗಿದ್ದರೆ ನಾಚಿಕೆ ಯಾಕೆ ಎಂದು ಕೇಳುತ್ತದೆ ಸಮಾಜದ ಮನಸ್ಸು. ಹೆಚ್ಚು ಮಕ್ಕಳನ್ನು ಹುಟ್ಟಿಸಿ ಅವರು ಭಿಕ್ಷುಕರಾಗುವಂತೆ ಮಾಡಬೇಕೇ, ನಾವು ಸಮಾಜದಲ್ಲಿ ಮೇಲೆ ಹೋಗುವುದು ಬೇಡವೇ ಎಂದು ಕೇಳುತ್ತದೆ. ಕ್ರಿಮಿನಲ್ ಲಾ ಕೂಡ ಇದರಲ್ಲಿ ನಾಚಿಕೊಳ್ಳುವುದು ಏನಿಲ್ಲ ಅನ್ನುತ್ತದೆ. ಏನಿದ್ದರೂ ಸೂಳೆಯರು ಅಥವಾ ಸೈನಿಕರ ಲವರ್‌ಗಳು ಮಾತ್ರ ಬೇಡದ ಮಕ್ಕಳನ್ನು ಬಾವಿಗೋ ಕಸದ ತೊಟ್ಟಿಗೋ ಬಿಸಾಕುತ್ತಾರೆ. ಅವರಿಗೆ ಶಿಕ್ಷೆ ಆಗಬೇಕು. ಆದರೆ ನಾವು, ಎಜುಕೇಟೆಡ್ ಆದವರು ಸೂಕ್ತ ಸಮಯದಲ್ಲಿ, ಸೂಕ್ತ ವಿಧಾನವನ್ನು ಕ್ಲೀನಾಗಿ ಅನುಸರಿಸುತ್ತಾ ಮಕ್ಕಳಾಗದಂತೆ ನೋಡಿಕೊಳ್ಳುತ್ತೇವೆ.
“ಹೀಗೇ ಇನ್ನೆರಡು ವರ್ಷ ಕಳೆಯಿತು. ದುಷ್ಟ ಡಾಕ್ಟರುಗಳ ಉಪಾಯ ಫಲ ಕೊಟ್ಟಿತ್ತು. ಮೈಕೈ ತುಂಬಿಕೊಂಡಳು. ಚಂದವಾಗಿ ಕಾಣುತ್ತಿದ್ದಳು. ಬೇಸಗೆಯ ಕೊನೆಗೆ ಅರಳುವ ಹೂವಿನಂತೆ ಇದ್ದಳು. ಅವಳಿಗೂ ತಾನು ಚಂದ ಕಾಣುತ್ತಿದ್ದೇನೆಂದು ತಿಳಿಯಿತು. ಅಲಂಕಾರಕ್ಕೆ ಗಮನಕೊಡಲು ತೊಡಗಿದಳು. ನೋಟಕ್ಕೆ ಸವಾಲು ಎಸೆಯುವಂಥ, ಕೆರಳಿಸುವಂಥ, ಕಸಿವಿಸಿ ಹುಟ್ಟಿಸುವಂಥ ಚೆಲುವು ಅವಳದು. ಮೂವತ್ತು ವಯಸಿನ, ದಷ್ಟಪುಷ್ಟ ಮೈಯಿನ, ಮಕ್ಕಳು ಹೆರದಂಥ, ಉತ್ಸಾಹ ತುಂಬಿದ ಹೆಂಗಸು. ಗಂಡಸರ ಕಣ್ಣು ಸೆಳೆಯುವ ಹಾಗಿದ್ದಳು. ಚೆನ್ನಾಗಿ ಪಳಗಿದ, ಈಗ ತಾನೇ ಲಗಾಮು ಕಳಚಿಕೊಂಡ ಕುದುರೆಯ ಹಾಗೆ ಕಾಣುತ್ತಿದ್ದಳು. ನೂರಕ್ಕೆ ತೊಂಬತ್ತೊಂಬತ್ತು ಹೆಂಗಸರಿಗೆ ಲಗಾಮು ಇರುವುದೇ ಇಲ್ಲ. ಇದು ಗೊತ್ತಾಗಿ ನನಗೆ ಭಯ ಆಗಲು ಶುರುವಾಯಿತು.”
(ಮುಂದುವರೆಯುವುದು)

Rating
No votes yet