ನನ್ನ ಕಂಪ್ಯೂಟರ್‍ ಅನುಭವಗಳು -೨

ನನ್ನ ಕಂಪ್ಯೂಟರ್‍ ಅನುಭವಗಳು -೨

ಮುಂದುವರಿದುದು....

.....ಮುಂದೆ ಕೆಲಸಕ್ಕೆ ಸೇರಿದಾಗ ನನ್ನ ಅಲ್ಲಿಯ automation ವಿಭಾಗಕ್ಕೆ ಹಾಕಿದರು. ಆಗ ಹೊಸತಾಗಿ ನಡೆಯುತ್ತಿದ್ದ ಪ್ರಾಜೆಕ್ಟ್ ಅಂಗವಾಗಿ plant information system ಅಂತ ಒಂದು ಹೊಚ್ಚ ಹೊಸ ಜಪಾನಿ ಕಂಪ್ಯೂಟರ್‍ ಬಂದಿತ್ತು . ಈ ಕಂಪ್ಯೂಟರ್‍ ಮೇಲೆ ಕೆಲಸಮಾಡಲು ವಿಶೇಷ ತರಬೇತಿ ಪಡೆದುಕೊಂಡ ಸಣ್ಣ ತಂಡವೊಂದು ಬಿಟ್ಟರೆ , ನಮ್ಮ ಸಹೋದ್ಯೋಗಿಗಳಲ್ಲಿ ಬಾಕಿಯವರಿಗೆ ಕಂಪ್ಯೂಟರ್‍ ಜ್ಞಾನ ಅಷ್ಟಕ್ಕಷ್ಟೆ ಇದ್ದು , ಕುರುಡರಲ್ಲಿ ಮೆಳ್ಳೆಗಣ್ಣ ಶ್ರೇಷ್ಠ ಅನ್ನುವಂತೆ ಕಂಪ್ಯೂಟರ್‍ ಬಗ್ಯೆ ಅಲ್ಪಸ್ವಲ್ಪ ಗೊತ್ತಿದ್ದ , ನನಗೂ ಇದರ ಮೇಲೆ ಆಗಾಗ ಕೆಲಸ ಮಾಡುವ ಅವಕಾಶ ಪ್ರಾಪ್ತವಾಯಿತು.

ಈ ಕಂಪ್ಯೂಟರೋ ಹೆದರಿಕೆ ಹುಟ್ಟಿಸುವಂತಿತ್ತು. ೮ ಇಂಚಿನ ಫ್ಲಾಪಿಗಳು, ದೊಡ್ಡ ಇಡ್ಲಿ ಪಾತ್ರೆಯಂತೆ ಕಾಣುವ removable driveಗಳು, ಸಣ್ಣ ಗಾದ್ರೆಜ್ ಬೀರುವಿನಂತಿದ್ದ ಹಾರ್ಡ್ ಡಿಸ್ಕುಗಳು. (ಅದರ ಕ್ಯಪಾಸಿಟಿ ಈಗ ನೆನಪಿಲ್ಲ). Memory board ಮೇಲೆ magnetic coreಗಳು ಮಿನಿಯೇಚರ್‍ ಕೋಡುಬಳೆಗಳಂತೆ ಬರಿಗಣ್ಣಿಗೆ ಕಾಣುತ್ತಿದ್ದವು. ಭೂತಗನ್ನಡಿ ಹಿಡಿದು ನೋಡಿದರೆ ಬಹುಷ bitಗಳ ೦ ೧ ಸ್ಟೇಟುಗಳೂ ಕಾಣಬಹುದು ಅಂತ ತಮಾಷೆ ಮಾಡುತ್ತಿದ್ದೆವು. ಇಂಥಾ ಕಂಪ್ಯೂಟರಿನಲ್ಲಿ backup ತೆಗೆಯುವುದೇ ಒಂದು ದೊಡ್ಡ ರಾಮಾಯಣ. ಇನ್ನು software ಕೇಳಿದರೆ, ಮುಂದೆ ಕೇಳಿಬಂದ user friendliness ಇತ್ಯಾದಿ ಒಂದೂ ಇರಲಿಲ್ಲ. ಏನಾದರೂ faul reset ಮಾಡಬೇಕಾದರೆ, ಮ್ಯಾನ್ಯುಯಲ್ ಹುಡುಕಿ , ಆ ಟಾಸ್ಕಿಗೆ ಸಂಬಂಧಪಟ್ಟ ಫ್ಲಾಪಿ ಹಾಕಿ, ಬೈಟುಗಳನ್ನು ಹುಶಾರಾಗಿ ಎಣಿಸಿಕೊಂಡು ಅದನ್ನು ಮಾತ್ರಾ reset ಮಾಡಬೇಕಾಗಿತ್ತು. on-line help ಇತ್ಯಾದಿ ಯಾವ ಉಪದ್ವ್ಯಾಪಗಳೂ ಅಲ್ಲಿರಲಿಲ್ಲ!!. ಆ ಫ್ಲಾಪಿ ಹಾಕಿದಾಗ ಡ್ರೈವಿನಿಂದ ಬರುತ್ತಿದ್ದ ಟುಕುಟುಕು ಶಬ್ದ ಇನ್ನೂ ನನ್ನ ಕಿವಿಯಲ್ಲಿ ಗುಣುಗುಣಿಸುತ್ತದೆ.

ಇನ್ನು ಹಾರ್ಡ್‌ವೇರ್‍ ತೊಂದರೆ ಬಂದರಂತೂ ದೇವರೇ ಗತಿ. ಒಮ್ಮೆ ಹೀಗೆ ಕಂಪ್ಯೂಟರ್‍ ನಿಂತು ಹೋಗಿ , ಅದರ ಮೂಲ ಹುಡುಕಿ ಸರಿಮಾಡುವುದಕ್ಕೆ ಮೂರು ದಿವಸ ಹಿಡಿದಿತ್ತು! ನಮ್ಮ ಅದೃಷ್ಟಕ್ಕೆ ಅಂಥಾ ತೊಂದರೆಗಳು ಬರುತ್ತಿದ್ದದ್ದು ಅಪರೂಪಕ್ಕೆ ಮಾತ್ರಾ. ಮುಂದೆ ಅನೇಕ ವರ್ಷಗಳ ನಂತರ ಇದನ್ನು ಬದಲಾಯಿಸಿದೆವು.

ಈ ಪ್ರಾಜೆಕ್ಟ್ ಮುಗಿಯಿತು ಅನ್ನೋ ಹೊತ್ತಿಗೆ ಇನ್ನೊಂದು ಅಂತಹದೇ ಪ್ರಾಜೆಕ್ಟ್ ತಲೆ ಎತ್ತಿತು. ಈ ಬಾರಿಯ ಕಂಪ್ಯೂಟರ್‍ ಅಮೇರಿಕದ್ದು. ಹಿಂದಿನ ಜಪಾನಿ ಕಂಪ್ಯೂಟರಿಗಿಂತ ಸಾಕಷ್ಟು ಮುಂದುವರಿದ ತಂತ್ರಜ್ಞಾನವಿತ್ತು. ಅವಳಿ ಪ್ರಾಸೆಸರ್‍ಗಳು, redundant ಹಾರ್ಡ್ ಡಿಸ್ಕುಗಳು (೪೧೩ MB) ಇತ್ಯಾದಿ. ಇದರ ಗ್ರಾಫಿಕ್ ಸಾಫ್ಟ್ ವೆಯರ್‍ ಆಸ್ಟ್ರೇಲಿಯದಿಂದ ಬಂದಿತ್ತು .ಹೀಗಾಗಿ ಮೊದಮೊದಲಲ್ಲಿ ತೊಂದರೆಯಾದರೆ ಮೊದಲು ನಮಗಿಂತ ಹನ್ನೆರಡು ಘಂಟೆ ಹಿಂದಿರುವ ಅಮೇರಿಕದವರನ್ನು ಸಂಪರ್ಕಿಸಿ , ಆಮೇಲೆ ಅವರ ಸೂಚನೆಯ ಮೇರೆಗೆ ನಮಗಿಂದ ೧೨ ಘಂಟೆ ಮುಂದಿರುವ ಆಸ್ಟ್ರೇಲಿಯಾದವರನ್ನು ಸಂಪರ್ಕಿಸುತ್ತಿದ್ದೆವು. ಈ ಕಂಪ್ಯೂಟರ್‍ ಜಪಾನಿ ಕಂಪ್ಯೂಟರಿಗಿಂತ ಆಧುನಿಕವಾಗಿದ್ದರೂ, ಆಗಾಗ ಹ್ಯಾಂಗ್ ಆಗುತ್ತಿತ್ತು. ಅಷ್ಟೇ ಅಲ್ಲ ಜಪಾನಿ ಕಂಪ್ಯೂಟರಿಗಿಂತ ಮೊದಲೇ obsolete (ಇದಕ್ಕೆ ಕನ್ನಡದಲ್ಲಿ ಏನೆನ್ನಬೇಕು) ಆಗಿಹೋಯಿತು. ಆದರೂ ತಕ್ಷಣ ತಕ್ಷಣ ಫಲ ನೀಡುವ ಕಂಪ್ಯೂಟರ್‍ ಟರ್ಮಿನಲ್ಲಿನ ಮೇಲೆ ಕೂತು ಕೆಲಸ ಮಾಡುವ ಮಜಾ ಇಲ್ಲಿಯೇ ನಾನು ಅನುಭವಿಸಿದ್ದು.
ಮುಂದೆ ಇದರ ಮತ್ತೆ ಮತ್ತೆ ಉಂಟಾಗುತ್ತಿದ್ದ ತೊಂದರೆಗಳಿಂದ ಬೇಸತ್ತು, ಇದರ ಪ್ರೋಗ್ರಾಮುಗಳನ್ನು (fortran) ನಮ್ಮ automation system ಗೆ port ಮಾಡಿ , ಆಮೇಲೆ ಈ ಕಂಪ್ಯೂಟರನ್ನು scrap ಮಾಡಿದೆವು.

ಅಲ್ಲಿಂದ scrap ಮಾಡಿದ್ದೇನೋ ಸರಿ. ಆದರೆ ಮತ್ತೆ ಆ ಕಂಪ್ಯೂಟರಿನ ಪುರಾಣ ಮುಗಿಯಲಿಲ್ಲ. ನಮ್ಮಲ್ಲಿ ಒಂದು ಕಂಪ್ಯೂಟರೈಸ್ಡ್ ಸಿಮುಲೇಟರ್‍ ಇತ್ತು. ಅನೇಕ ವರ್ಷಗಳ ಉಪಯೋಗದ ನಂತರ ಅದು ಆಗಾಗ ಹಾಳಾಗುತ್ತಿತ್ತು. ನಮ್ಮಲ್ಲಿ ಯಾರಿಗೋ ಒಂದು ಐಡಿಯಾ ಬಂತು. ಅರೆ,ಈಗಿನ್ನೂ scrap ಮಾಡಿದ ಕಂಪ್ಯೂಟರನ್ನ ಸಿಮುಲೇಟರ್‍ ಕಂಪ್ಯೂಟರ್‍ ಆಗಿ ಉಪಯೋಗಿಸಿದರೆ ಹೇಗೆ ಎಂದು. ನಾನು ಎಷ್ಟು ಅಲವತ್ತುಕೊಂಡರೂ ಫಲವಾಗಲಿಲ್ಲ. ಸರಿ, ಆ ಕಂಪ್ಯೂಟರನ್ನ ಸಿಮುಲೇಟರಿನ ಜಾಗಕ್ಕೆ ಹೊತ್ತೊಯ್ಯುವ ಮಹಾನ್ ಕಾರ್ಯ ನನಗೆ ವಹಿಸಲಾಯಿತು. ಅದೋ ಮತ್ತೆ ಯಾವುದೋ ಫ್ಲೋರಿನಲ್ಲಿ. ಮತ್ತೆ ನಮ್ಮ ಕಂಪ್ಯೂಟರೋ ಹೆಣ ಭಾರದ್ದು ( ಈಗಿನ PC , Servers ನೋಡಿದವರಿಗೆ ಅದರ ಕಲ್ಪನೆ ಬಾರದಿರಬಹುದು) . ಸುಮಾರು ಎರಡು ಗಾದ್ರೆಜ್ ಕಪಾಟುಗಳನ್ನು ಒಟ್ಟಿಗೆ ಇಟ್ಟಷ್ಟು ಅಗಲ, ಎತ್ತರವಾಗಿತ್ತು. ಅಂತೂ ಜೋರ್‍ ಲಗಾಕೆ ಐಸ್ಸಾ ಅಂತ ನೂಕಿ ತಳ್ಳಿ ಏನೇನೋ ಮಾಡಿ ಸಾಗಿಸಿದ್ದಾಯಿತು. ಅದರ ಹೊಸ ಜಾಗದಲ್ಲಿ ನಿಲ್ಲಿಸಿ ಚಾಲೂ ಮಾಡಿದರೆ, ಬೂಟೇ ಆಗಲಿಲ್ಲ. ಯಾಕೆ ಅಂತ ನೋಡಿದರೆ , primary hard disk crash ಆಗಿತ್ತು. ಕಂಪ್ಯೂಟರನ್ನು ಶಿಫ್ಟ್ ಮಾಡುವಾಗ hard diskನ transport lock ಹಾಕಬೇಕಾಗಿತ್ತು ಅಂತ ನನಗೆ ಆಮೇಲೆ ಗೊತ್ತಾಯಿತು. ಅದೃಷ್ಟವಶಾತ್ ಅದರ ಜೋಡಿ disk ಸರಿಯಾಗಿದ್ದಂತೆ ಕಂಡಿತು. ಅದರಿಂದ ಬೂಟ್ ಮಾಡಿದರೆ , ಅದರಲ್ಲಿ ಮುಖ್ಯ ಸಾಫ್ಟ್ ವೆಯರ್‍ ಲೋಡ್ ಆಗಿರಲಿಲ್ಲ. ಸರಿ ಮತ್ತೆ , magtape backup ನಿಂದ ಲೋಡ್ ಶುರುಮಾಡಿದೆ. ೫ ಟೇಪುಗಳ ಒಂದು ಸೆಟ್ ಇತ್ತು. ಒಂದೊಂದೇ ಲೋಡ್ ಮಾಡಲಿಕ್ಕೆ ಸುಮಾರು ಒಂದು ಒಂದೂವರೆ ಘಂಟೆ. ಹಾಗಾಗಿ start ಮಾಡಿ ಬೇರೆ ಕೆಲಸಕ್ಕೆ ಹೋಗುತ್ತಿದ್ದೆ. ಹೀಗೆ ಒಂದು ಟೇಪ್ ಆಯ್ತು. ಎರಡಾಯ್ತು, ಮೂರನೆಯದೂ ಹಾಕಿ ಆಯಿತು. ಇದ್ದಕ್ಕಿದ್ದ ಹಾಗೇ , ಅರ್ಧ ಮುಗಿದಿದ್ದ ಟೇಪು rewind ಆಯ್ತು. ಯಾಕೆ? ಗೊತ್ತಿಲ್ಲ. ಮತ್ತೆ ಮೊದಲನೇ ಟೇಪಿನಿಂದ ಶುರು. ಈ ಬಾರಿಯೂ ಹೀಗೆ . ಹೀಗೆ ಅನೇಕ ಬಾರಿ ಮಾಡಿದ ಮೇಲೆ, ಕೊನೆಗೂ ಇದರ ರಹಸ್ಯ ತಿಳಿಯಿತು. ಮೂರನೇ ಟೇಪಿನ ಒಂದು ಕಡೆ ಏನೋ ಕಸ ಸಿಕ್ಕಿಕೊಂಡಿತ್ತು ಅದನ್ನು ಪೂರಾ ಒರೆಸಿ ತೆಗೆದ ಮೇಲೆ ಎಲ್ಲಾ ಸುಸೂತ್ರ ವಾಗಿ ನಡೆಯಿತು. ಇದೆಲ್ಲಕ್ಕೂ ನನಗೆ ಹಿಡಿದ ಸಮಯ ಎಷ್ಟು ಗೊತ್ತೇ? ಒಂದು ತಿಂಗಳು ! . ಕೊನೆಗೆ ಸಿಮುಲೇಟರಿನ ಎಕ್ಸ್ಪರ್ಟುಗಳು ಬಂದು ಅದನ್ನು ಪರಿಶೀಲಿಸಿ , ಕಂಪ್ಯೂಟರ್‍ ಶಕ್ತಿಯುತವಾಗಿದ್ದರೂ, ಅದಕ್ಕೆ ಸಿಮುಲೇಟರ್‍ ಸಾಫ್ಟ್ ವೆಯರ್‍ port ಮಾಡುವುದು ಸುಲಭ ಸಾಧ್ಯವಲ್ಲ ಎಂಬ ನಿರ್ಣಯಕ್ಕೆ ಬಂದರು. ಸರಿ, ಮತ್ತೆ ಅದರ ಗುಜರೀಕರಣದ ಆನಂದ ನನಗೆ ಸಿಕ್ಕಿತು.

ಮುಂದುವರಿಯುವುದು.....

Rating
No votes yet

Comments