ನೀನೆ ನೀನೆ

ನೀನೆ ನೀನೆ

ನನಗೆಲ್ಲಾ ನೀನೆ - ಅಲ್ಲಾ!!! ನಾನು ಬರೆಯ ಹೊರಟಿರುವುದು ಈ ಹಾಡಿನ ಬಗ್ಗೆ ಖಂಡಿತ ಅಲ್ಲ! ಬರೆಯುತ್ತಿರುವುದು, ಭಾರತ ಮತ್ತು ವಿದೇಶದಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ "ನೀನೆ ನೀನೆ" ಚಿತ್ರದ ಬಗ್ಗೆ. ಚಿತ್ರಕಥೆ ಕೇಳಲಿಕ್ಕೆ ಇಷ್ಟವಿಲ್ಲಾಂದ್ರೆ ದಯವಿಟ್ಟು ಮುಂದೆ ಓದಬೇಡಿ.

ಸಾಂಸಾರಿಕ ಚಿತ್ರ, ಮನೆಮಂದಿಯಲ್ಲ ನಿಸ್ಸಂಕೋಚವಾಗಿ ಕೂತು ನೋಡಬಹುದಾದ ಚಿತ್ರ ಅಂತೆಲ್ಲ ಪ್ರಚಾರವಿತ್ತಲ್ಲ, ಸರಿ, ನೋಡೋಣ ಅಂತ ಹೋದೆ. ಚಿತ್ರಮಂದಿರ ನೊಣ ಹೊಡೀತಿತ್ತು. ಯಾಕೋ ಮುಂಗಾರು ಮಳೆ, ಗಾಳಿಪಟದ hype ಈ ಚಿತ್ರಕ್ಕಿಲ್ಲ. ಶಿವಧ್ವಜ್ ಅವರ ಚೊಚ್ಚಿಲ ನಿರ್ದೇಶನದ ಚಿತ್ರ. ಆದ್ದರಿಂದ ಸ್ವಲ್ಪ ಲೋಪದೋಷಗಳನ್ನು ಮನ್ನಿಸಬೇಕಾಗುತ್ತೆ. ಆದರೂ, ನಿರ್ದೇಶನದಲ್ಲಿ ಬಿಗಿ ಹಿಡಿತವಿಲ್ಲ ಎಂಬುದು ನಿಜ ಮಾತು. ಕಥೆಯಲ್ಲಿ ಸ್ವಲ್ಪ ನವೀನತೆ ಇದೆ. ಅಭಿಶೇಕ್ (ಧ್ಯಾನ್) ಪ್ರೀತಿಸಿ ಶ್ರೀಮಂತಳಾದ ನಂದಿತಾ(ಐಶ್ವರ್ಯ ನಾಗ್)ಳನ್ನು ಮದುವೆ ಆಗುತ್ತಾನೆ. ಅವಳನ್ನು ಸುಖದ ಸುಪ್ಪತ್ತಿಗೆಯಲ್ಲಿರಿಸಬೇಕೆಂದು ಮೈತುಂಬ ಸಾಲ ಮಾಡಿಕೊಂಡು ಒದ್ದಾಡುತ್ತಾನೆ. ಈ ಮಧ್ಯದಲ್ಲಿ ಅವರಿಗೆ ಮಗು ಹುಟ್ಟಿ, ಅದರ ಜವಾಬ್ದಾರಿಯೂ ಹೆಗಲ ಮೇಲೇರಿ ಪರಿಸ್ಥಿತಿ ಸಂಪೂರ್ಣ ಹದಗೆಡುತ್ತೆ. ಸುಖಾಂತ್ಯವೋ ಅಲ್ಲವೋ ನಿಮ್ಮ ಊಹೆಗೆ ಬಿಡುತ್ತೇನೆ.

ನನಗೆ ಧ್ಯಾನ್ ನನ್ನು ನೋಡಲು ಇಷ್ಟ, for obvious reasons :-) (ಹಾಗೇನೆ ದಿಗಂತ್ ಸಹ, ಅವನ cute ಗುಳಿಗೋಸ್ಕರ, ಆದ್ರೆ ವಿಷಯಕ್ಕೆ ಬರೋಣ :-)) ಹೂಂ... ಎಲ್ಲಿದ್ದೆ? ಹಾಂ! ಧ್ಯಾನ್ ಇನ್ನೂ ಎಮೋಶನಲ್ ಸೀನನ್ನು ಸರಿಯಾಗಿ ನಿಭಾಯಿಸುವ ಶಕ್ತಿ ಹೊಂದಿಲ್ಲ. ಯಾವುದಾದರೂ acting schoolಗೆ ಹೋಗಿ ಕಲಿತು ಬಂದರೆ ಚೆನ್ನ. ತನ್ನ ಮೊದಲ ಚಿತ್ರವಾದರೂ ಐಶ್ವರ್ಯ ತುಂಬಾ ಚೆನ್ನಾಗಿಯೇ ಮಾಡಿದ್ದಾಳೆ. ಒಳ್ಳೆಯ expressive ಕಣ್ಣು ಮತ್ತು ಮುಖಚರ್ಯೆ ಹೊಂದಿದ್ದಾಳೆ. ಮುಂದೆ ಮಿಂಚಬಹುದು. ಅನಂತನಾಗ್, ಶರಣ್ ಸಹನಟರಾಗಿ ಒಳ್ಳೆಯ ಅಭಿನಯ ನೀಡಿದ್ದಾರೆ.

ನನಗೆ ನಿರಾಶೆ ನೀಡಿದ್ದು ಕೆಲವೆಡೆ ಅಸಂಬದ್ಧವಾಗಿ ಹೆಣೆದ ಚಿತ್ರಕಥೆಯ ರೀತಿ ಮತ್ತು ನಿರ್ದಿಷ್ಟ ಗುರಿಯಿಲ್ಲದೆ ಚಿತ್ರೀಕರಣವಾದ ದೃಶ್ಯಗಳು. ಉದಾಹರಣೆಗೆ - ನಂದಿತ, ತೀರ್ಥಹಳ್ಳಿಯ ಮನೆಯಲ್ಲಿ, ಅಭಿಯ ತಾಯಿಯ ಬಗ್ಗೆ ತಿಳಿದೊಡನೆ ಅವನಿಗೆ ಮಾನಸಿಕ ಬೆಂಬಲ ಸೂಚಿಸಿ ಹತ್ತಿರವಾಗುತ್ತಾಳೆ. ಇದು ಒಂಥರ ಬಹಳ emotionally charged scene. ಇದರ ನಂತರದ ಅವಳ ಪ್ರಶ್ನೆ- "what's next?" - ಎಂಬುದು ತೀರ ಹಾಸ್ಯಾಸ್ಪದವಾಗಿದೆ. ಮತ್ತೆ ಮುಂದಿನ ದೃಶ್ಯದಲ್ಲಿ, ಇದುವರೆಗೂ ನಡೆದಿರುವುದಕ್ಕೆ ಸಂಬಂಧವೇ ಇಲ್ಲದಂತೆ ಅವರಿಬ್ಬರೂ ನೇರ ಹಾಸಿಗೆಯೇರಿ ಮೊದಲ ರಾತ್ರಿ ಆಚರಿಸುವುದು ನಮ್ಮನ್ನು(ನನ್ನನ್ನಂತು) ಕಕ್ಕಾಬಿಕ್ಕಿಯಾಗುವಂತೆ ಮಾಡಿತು :-) ಕೆಲವು ಪಾತ್ರಗಳಂತೂ waste bodyಗಳಂತೆ ಬಂದು, ಯಾರಿವರು, ಯಾಕೆ ಬಂದರು ಅಂದುಕೊಳ್ಳುವಷ್ಟರಲ್ಲಿ ಹೊರಟು ಹೋಗುತ್ತವೆ. ಕತೆಯ ಹಲವಾರು ಎಳೆಗಳು ತುಂಡು ತುಂಡಾಗಿ ಗತಿಗಾಣದೆ ಹಾಗೆಯೇ ಅನಾಥವಾಗಿ ಉಳಿದು ಹೋಗುತ್ತವೆ.

ಹಾಡುಗಳಲ್ಲಿ, "ಏನೋ ಇದು ಏನೋ" ಮತ್ತು "ವಿ ಆರ್ ಇನ್ ಲವ್" ಚೆನ್ನಾಗಿವೆ. ನಾನು ಹಿಂದೊಮ್ಮೆ ಹೇಳಿದಂತೆ ನಮ್ಮ ಚೈತ್ರಾ, ಸುನೀಧಿ ಚೌಹಾನಳನ್ನು ನಾಚಿಸುವಂತೆ pop-effect ಕೊಟ್ಟು ಹಾಡುತ್ತಾಳೆ. ಅವಳಿಗೆ ಒಳ್ಳೆಯ ಹಾಡುಗಳು ಸಿಗಲಿ.

ಇನ್ನು, ನಿಮಗೆ ಕನ್ನಡ ಚಿತ್ರಗಳನ್ನು ಬೆಂಬಲಿಸಬೇಕೆಂದರೆ ಖಂಡಿತ ಚಿತ್ರ ನೋಡಲು ಹೋಗಿ. ನಾನು ಹೋಗಿದ್ದೂ ಅದಕ್ಕೇನೆ. ಮಚ್ಚು ಲಾಂಗು ಇಲ್ಲ, ತಲೆನೋವೇನು ಬರೋದಿಲ್ಲ. ಆದ್ರೆ, ಛೆ!, ಇದೇ ಚಿತ್ರನ ಇನ್ನೂ ಎಷ್ಟು ಚೆನ್ನಾಗಿ ತೆಗೀಬಹುದಿತ್ತು? ಅಂತ ಅನ್ನಿಸೋದಂತು ನಿಜ.

ನನ್ನ ರೇಟಿಂಗು - ೫ ರಲ್ಲಿ ೩ !

Rating
No votes yet