ಮೋಡವಾಗಿಯೇ ಉಳಿಯುವುದು ಯಾರ ತಪ್ಪು?

ಮೋಡವಾಗಿಯೇ ಉಳಿಯುವುದು ಯಾರ ತಪ್ಪು?

ಮತ್ತೆ ಮತ್ತೆ ನಿನ್ನ ನೆನಪಿನೆಡೆಗೆ ಸಾಗಲು ನನಗೆ
ನೋಯಿಸಿರುವೆ ನಿನ್ನ ಎಂಬುದೊಂದೇ ಕಾರಣವೇ,
ನೋವಾಯಿತೇ ಮೊದಲು ಬಡಿದುದೆಂದು ಕೇಳಲು
ಮತ್ತೆ ಮತ್ತೆ ತೀರದೆಡೆಗೆ ಅಲೆಯು ಬರುವಂತೆ?

ಮಿಡಿವ ಶರಧಿಯ ಮನಸು ಅಲೆಯಲ್ಲಿ ತೋರುವುದು,
ಆಳವೆಷ್ಟೇ ಇದ್ದರೂ ಅದು ಮೇಲಷ್ಟೇ ತೇಲುವುದು.
ಅಲೆಗಳು ಹೊತ್ತು ತರುವುದು ಕಸ, ಕಪ್ಪೆಚಿಪ್ಪು,
ಆಳದಲಿ ಮುತ್ತಿನ ರಾಶಿ, ಅದು ಮರೆತು ಹೋದರೆ ತಪ್ಪು.

ಉಪಮೆಯಿಲ್ಲದ ಎಲ್ಲ ಗಳಿಗೆಗಳಲಿ
ನೆನಪು ಬರುವುದಾದರೆ ಅವುಗಳಲೇನು ದೋಷವಿದೆ?
ಮುಂಜಾನೆ, ಮುಸ್ಸಂಜೆಗಳಲ್ಲಿ ಅರಳುವುದಾದರೆ
ಈ ನೆನಪಿಗೆ ದೋಷವಲ್ಲದ ಮತ್ತಾವ ಪಾಶವಿದೆ?

ಸ್ವಾತಿ ಹನಿಗಾಗಿ ಕಾಯುವುದು ಕಡಲಚಿಪ್ಪು,
ಮೋಡವಾಗಿಯೇ ಉಳಿಯುವುದು ಯಾರ ತಪ್ಪು?
(Composed this sonnet in January 2003)

http://raaghava-haagesummane.blogspot.com

Rating
No votes yet