ರದ್ದಿಯಲ್ಲೊಂದು ಚಿಂತನಾರ್ಹ ವಿಚಾರ

ರದ್ದಿಯಲ್ಲೊಂದು ಚಿಂತನಾರ್ಹ ವಿಚಾರ

"ಆನೋ ಭದ್ರಾಃ ಕತವೋ ಯಂತು ವಿಶ್ವತ್ಃ"
ಶ್ರೇಷ್ಠ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ನಮಗೆ ಬರಲಿ
- ಉಪನಿಃಷತ್

ಅಂದು ನಾನು ಹಳೆಯ ಪೇಪರುಗಳು ಮತ್ತು ಇತರ ಬೇಡವಾದ ಕಾಗದಗಳನ್ನು ರದ್ದಿಯವನಿಗೆ ಹಾಕುತ್ತಾ ಖಾಲಿ ಪೇಪರಿನವನೊಂದಿಗೆ ಚೌಕಾಸಿ ವ್ಯವಹಾರ ಮಾಡುತ್ತಾ ಕುಳಿತಿದ್ದೆ. ಆ ರದ್ದಿ ಪೇಪರಿನವನು ಸಹ ತನ್ನ ಗಂಟನ್ನು ಬಿಚ್ಚಿ ನನ್ನಲ್ಲಿ ಖರೀದಿಸಿದ ಪೇಪರನ್ನೆಲ್ಲಾ ಅದಕ್ಕೆ ಹಾಕಿಕೊಳ್ಳುತ್ತಲಿದ್ದ. ಅಂದು ನಾನು ಸುಮಾರು ಒಂದು ಗೋಣಿಚೀಲದಸ್ಟು ಪೇಪರನ್ನು ಮಾರಿದ್ದೆ. ಆ ರದ್ದಿಯವನ ಚಿಲವೂ ರದ್ದಿಯಾಗಿತ್ತು!!! ಬಾಯಲ್ಲಿ ತುಂಬಿದ ಹಾಳೆಗಳು ಹರಿದ ಬುಡದಿಂದ ಹೊರಗೆ ಇಣುಕಿ ಬೀಳುತ್ತಿದ್ದವು. ಆದರೂ ಪ್ರಯತ್ನ ಬಿಡದ ರದ್ದಿಯವ ಎಲ್ಲವನ್ನು ಮತ್ತೆ ಮತ್ತೆ ತುಂಬುತ್ತಿದ್ದ. ಈ ಗೊಂದಲದಲ್ಲಿ ನನ್ನ ಅಂಗಳವೆಲ್ಲ ರದ್ದಿ ಪೇಪರಿನ ಅಂಗಡಿಯಂತಾಗಿತ್ತು. ಸಾಹೇಬ್ರೆ ನಾನು ಇಲ್ಲೆ ಹೋಗಿ ಮತ್ತೊಂದು ಚೀಲ ತರ್ತೇನೆ ಅಲ್ಲಿ ತಂಕಾ ನನ್ನ ಸೈಕಲ್, ತಕ್ಕಡಿ, ಮತ್ತೊಂದಸ್ಟು ಬೇರೆ ಕಡೆ ಖರೀದಿ ಮಾಡಿದ ರದ್ದಿ ಎಲ್ಲಾ ಇಲ್ಲೆ ಇರ್ಲಿ ಎನ್ನುತ್ತಾ ಹೋಗೆ ಬಿಟ್ಟ, ಏ ಬಾ ಇಲ್ಲಿ ಸೈಕಲ್ಲು ತಗೋಂಡು ಹೊಗೊ ಬೇಗ ಬರ್ಬೌದು ಅಂತ ನಾನಂದ್ರೆ, ಅದು ಪಂಚರಾಗಿ ಬಾಳಾ ದಿವ್ಸಾಯ್ತು, ಅದೇನಿದ್ರು ರದ್ದಿ ಹಾಕ್ಕೊಂಡು ದೂಡಿಕೊಂಡು ಹೋಗೊದಸ್ಟೆ... ಎನ್ನುತ್ತಾ ಹೋಗೆ ಬಿಟ್ಟ. ತಾಸಾಯಿತು, ಎರಡು ತಾಸಾಯಿತು, ಆಸಾಮಿ ಪತ್ತೆನೆ ಇಲ್ಲ!!! ನಾನು ಕುತೂಹಲದಿಂದ ಅವನ ರದ್ದಿ ಪೇಪರತ್ತ ಕಣ್ಣಾಡಿಸಿದೆ. ಅದಲ್ಲೊಂದು ಬ್ರೌನ್ ಕವರ್ ನನ್ನ ಗಮನ ಸೆಳಿತು, ನೋಡೋಣ ಅಂತ ತೆಗೆದು ಬಿಚ್ಚಿದೆ...... ಅದರಲ್ಲಿದ್ದದ್ದನ್ನು ನಿಮ್ಮ ಮುಂದೆ ಇಡತಾ ಇದ್ದೇನೆ, ನೀವೆ ಓದಿ...

ಕ್ಷೀಣಿಸುತ್ತಿರುವ ಮಾನವನ ಸಾಮಾಜಿಕ ಸಂಬಂಧ! ಒಂದು ವಿಶ್ಲೇಷಣೆ.

ಅನಾದಿಕಾಲದಿಂದಲೂ, ಪುರಾಣ ಪುಣ್ಯಕಥೆಗಳಲ್ಲೂ, ಇತಿಹಾಸದಲ್ಲೂ ಮಾನವರ ಸಾಮಾಜಿಕ ಸಂಬಂಧಕ್ಕೊಂದು ವಿಶಿಷ್ಟ ಸ್ಥಾನ. ಆವತ್ತಿನಿಂದ ಇವತ್ತಿನವರೆಗೂ, ಯಾವತ್ತೂ, ಪ್ರತಿಯೊಂದು ರಂಗದಲ್ಲೂ ತನ್ನದೇ ಆದ ಛಾಪನ್ನು ಹೊಂದಿ ಅನೇಕಾನೇಕ ಪರಿಣಾಮಕಾರಿಯಾದಂತಹ ಕರ್ಮವನ್ನು ಮಾಡಬಲ್ಲ, ಮಾಡಿಸಬಲ್ಲ, ಮಾನವರ ಸಂಬಂಧ ಹಿತಕಾರಿಯಾಗಬೇಕಾದ್ದೂ ಅಷ್ಟೇ ಮುಖ್ಯ. ಇಲ್ಲದೇ ಹೋದರೆ ಇಂದಿನ ಯಾಂತ್ರಿಕ ಯುಗದಲ್ಲಿ, ಜಾಗತಿಕ ಪರಮಾಣು ಯುಧ್ದವಾದರೆ ಇದೂ ಒಂದು ಕಾರಣವೇ? ಎಂದು ಯೋಚನೆಗೆ ಎಡೆ ಮಾಡಿಕೊಟ್ಟರೆ ವಿಚಿತ್ರವೆನಿಸಲಾರದು!!
ವಿವಿಧ ಮುಖವಾಡಗಳನ್ನು ಹೊಂದಿರುವ ಮಾನವರ ಸಂಬಂಧವನ್ನು ನಿಯಂತ್ರಿಸುವ ಮನಸ್ಸು ಕಲುಷಿತಗೊಂಡಿರುವುದು ಒಂದು ಅಪಾಯಕಾರಿ ಬೆಳವಣಿಗೆ. ದಿನಓಪ್ರತಿ ಕೌಟುಂಬಿಕ ಸಮಸ್ಯೆಯನ್ನು ಹಿಡಿದು, ಅಂತರಾಷ್ಟ್ರ್‍ಈಯ ಮಾನವ ಹಕ್ಕುಗಳ ಉಲ್ಲಂಘನೆಯಸಮಸ್ಯೆಯವರೆಗೂ ಕಾರಣವಾಗಬಲ್ಲ ಮನುಷ್ಯರ ಸಂಬಂಧದಲ್ಲಿ ಮಾನವೀಯ ಮೌಲ್ಯಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕಾದ್ದು ಇಂದು ಎಲ್ಲರ ಅಗತ್ಯ ಮತ್ತು ಅವಶ್ಯ ಕೂಡ. ರಾಜಕೀಯ ಅಸ್ಥಿತ್ವಕ್ಕಾಜಿಯೊ, ಅಥವಾ ಸ್ವಾರ್ಥ ಲಾಲಸೆಗಾಗಿಯೊ ಹಲವರು, ವೇದಿಕೆಯ ಮೇಲೆ ಮಾನವರ ಸಂಬಂದಗಳ ಬಗ್ಗೆ ಓತಪ್ರೋತವಾಗಿ ವಾಗ್ಝರಿಯನ್ನು ಹರಿಸುತ್ತಾರೆ, ಇದರಿಂದ ಏನೂ ಉಪಯೋಗವಾಗಿಲ್ಲ ಎನ್ನುವದಕ್ಕೆ ನಮ್ಮ ದೇಶಕಾಲದಲ್ಲಿ ನಡೆಯುತ್ತಿರುವ ಉಗ್ರಗಾಮಿ ದಾಳಿಗಳು, ಮತೀಯ ಗಲಭೆಗಳು, ಪ್ರಾಂತೀಯವಾದದ ದೊಂಬಿ ಗಲಾಟೆಗಳೇ ಸಾಕ್ಷಿ. ನಮ್ಮ ರಾಜ್ಯಪಾಲರುಗಳು, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳು ಸಾಮಾನ್ಯವಾಗಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಸಂಧರ್ಬಗಳಲ್ಲಿ ಅವರ ಭಾಷಣದಲ್ಲಿ ಹೇಳಿದ್ದನ್ನೇ ಹೇಳಿ ಯಾವದನ್ನೂ ಕಾರ್ಯಗತಗೊಳಿಸದೇ ಒಂದು ಕ್ಲೀಶೆಯನ್ನಾಗಿಸಿದೆ.
ಹಾಗಾದರೆ ಈ ಮಾನವ ಸಂಬಂಧ ಏನು? ಯಾರು ನಿಯಂತ್ರಿಸಬೇಕು? ಮಾನವೀಯ ಮೌಲ್ಯಗಳನ್ನೊಳಗೊಂಡ ಮಾನವ ಸಂಬಂಧ ಏನು? ಏಕೆ? ಹೇಗೆ? ಇವು ಪ್ರಸ್ಥುತದಲ್ಲಿ ಬಹಳ ಮುಖ್ಯವಾದಂತಹ ಪ್ರಶ್ನೆ, ಇವುಗಳನ್ನು ನಮ್ಮ ಗಣನೆಗೆಕೊಂಡು ಉತ್ತರಿಸುವಾಗ, ಇದು ಯಾವದೇ ಒಂದು ಸಂಗಟನೆಯ, ಸಂಸ್ಥೆಗಳ, ಮಠಗಳ ಅಥವಾ ರಾಜಕೀಯ ಪಕ್ಷಗಳ ಹೊಣೆಗಾರಿಕೆ ಎಂದು ಬಾವಿಸಲಾಗದು, ಬದಲಾಗಿ ಇದುಉ ನಮ್ಮ ವ್ಯಕ್ತಿಗತವಾದಹ ಹೊಣೆಗಾರಿಕೆ ಅಥವಾ ಈಸಮಾಜದ ಪ್ರತಿಯೊಂದು ವ್ಯಕ್ತಿಯ / ಪ್ರಜೆಯ ಹೊಣೆಗಾರಿಕೆ ಇಲ್ಲಿ ಅತೀ ಮಹತ್ವದ್ದು.
ಮೌಲ್ಯಾಧಾರಿತ ಮಾನವ ಸಂಬಂಧ ಸಮಾಜದ ಸುಖಕ್ಕೆ, ಶಾಂತಿಗೆ ಪೂರಕವಾದದ್ದು. ಇವು ಒಂದೇ ನಾಣ್ಯದ ಎರಡು ಮಖಗಳಿದ್ದಂತೆ. ಒಂದನ್ನು ಬಿಟ್ಟು ಒಂದು ಇರಲಾರದು. ಪ್ರತಿಯೊಬ್ಬ ಮನುಷ್ಯನ ಉಲ್ಲಾಸಕ್ಕೆ, ಸುಖಕ್ಕೆ ಹಿತಕರವಾದಂತಹ ಮಾನವ ಸಂಬಂಧ ಅತೀ ಮುಖ್ಯ. ಇದನ್ನು ಸಾಧಿಸಬೇಕಾದರೆ ತ್ಯಾಗವೂ ಅಷ್ಟೇ ಮಹತ್ವದ್ದು. ಇದು ಯಾವದೇ ಮನುಷ್ಯನ್೯ಗಾಗಲಿ ಹುಟ್ಟಿನಿಂದ ಬರುವಂತಹ ವಿಷಯವಸ್ತುವಲ್ಲ. ಸತತ ಸಾಧನೆಯಿಂದ, ಸಂಸ್ಕ್ರತಿಯಿಂದ ಪಡೆದುಕೊಳ್ಳಬೇಕಾದ ಗುಣ. ಇದಕ್ಕಾಗಿ ನಮ್ಮ ಯುವ ಪೀಳಿಗೆಗೆ ಸರಿಯಾದ ಯೋಚನಾ ಮಾರ್ಗವನ್ನ, ಸಂಸ್ಕ್ರತಿಯನ್ನ ತಳಹದಿಯನಾಗಿಸುವ ಹೊಣೆಗರಿಕೆ ನಮ್ಮ ಮೇಲಿದೆ. ತಪ್ಪಿದಲ್ಲಿ, ಸರಿಯಾದ ಶಿಕ್ಷಣವನ್ನು, ಸಂಸ್ಕ್ರತಿಯನ್ನು ಕೊಡಲಾಗದ ಅಪವಾದವನ್ನು ಹೊತ್ತುಕೊಳ್ಳುವ ಹೊಣೆಗಾರಿಕೆಯೂ ನಮ್ಮದೇ! "ಹಿಂದೊಂದು ಕಾಲದಲ್ಲಿ ಶಿಸ್ತು, ಸಂಯಮ ಈ ರೀತಿಯಾಗಿತ್ತು, ಈಗ ಅದೇನು ಉಳಿದಿಲ್ಲ, ಕಾಲ ಕೆಟ್ಟು ಹೋಗಿದೆ" ಎನ್ನುವ ಕೆಲವರ ಉದ್ಗಾರಕ್ಕೆ ಅರ್ಥವಿಲ್ಲವೆಂದೇ ಹೇಳಬೇಕಾಗುತ್ತದೆ.
ಹಿಂದೊಂದು ಕಾಲದಲ್ಲಿ ಒಂದು ಮನುಷ್ಯನ ಬುದ್ದಿಮಟ್ಟವನ್ನು ಅಳೆಯಲು ಐಕ್ಯೂ ಒಂದೇ ಸಾಧನವಾಗಿತ್ತು. ಆದರೆ ಇವತ್ತಿನ ಜೀವನದಲ್ಲಿ ಉದ್ವೇಗ, ಉದ್ರೇಕ ಅಥವಾ ಮನೋಭಾವಗಳ ನಿರ್ವಾಹ ಕೂಡ ಇದರ ಜೊತೆಗೆ ಅಷ್ಟೇ ಸರಿಯಾದ ಸ್ಥಾನಮಾನವನ್ನು ಪಡೆಯುವ ಅನಿವಾರ್ಯತೆ ಉದ್ಬವಗೊಂಡಿದೆ. ಈ ಸಂದರ್ಭದಲ್ಲಿ ಈ ಮಾತನ್ನು ಹೇಳಲು ಕಾರಣವಿಲ್ಲದಿಲ್ಲ. ಇಂದಿನ ಈ ಯಾಂತ್ರಿಕ ಜೀವನದ ಸ್ಪರ್ಧಾ ಪ್ರಪಂಚದಲ್ಲಿ ಸ್ಪರ್ಧೆಯ ಜೊತೆಗೆ ದ್ವೇಶವನ್ನು ಮೈಗೂಡಿಸಿಕೊಳ್ಳುವ ಮನೋಭಾವ ನಮ್ಮ ಜನರಲ್ಲಿ ಹೆಚ್ಚಾಗತೊಡಗಿದೆ. ಇದು ವಿಪರೀತಗೊಡಲ್ಲಿ ಅತ್ಯಂತ ಕಠಿಣ, ಕಗ್ಗಂಟಿನ ಸಾಮಾಜಿಕ ಸಮಸ್ಯೆಗೆ ಎಡೆಮಾಡಿ ಕೊಡುವುದು ನಿಸ್ಸಂದೇಹ. ಇದು ಯಾವದೇ ಒಂದು ರಂಗಕ್ಕೆ ಅನ್ವಯಿಸುವ ಸಮಸ್ಯೆಯಾಗದೇ, ಪ್ರತಿಯೊಂದು ಪ್ರದೇಶದಲ್ಲಿಯೂ ಅದರಲ್ಲೂ ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ಹೆಮ್ಮರವಾಗಿ ಹಬ್ಬುವ ಸಂಕೇತ ಕಾಣುತ್ತಿದೆ. ಸಿಟ್ಟು ದ್ವೇಷ, ದುಃಖ, ಸೋಲಿನ ಅಥವಾ ಗೆಲುವಿನ ಅನುಭವ, ಉಲ್ಲಾಸ, ಸಂತೋಷ ಇವು ಪ್ರಕ್ರತಿ ಸಹಜವಾದಂತಹ ಮಾನವನ ಸಾಂದರ್ಭಿಕ ಪ್ರತಿಕ್ರಿಯೆ. ಇಂದಿನ ಯಾಂತ್ರಿಕ ಜೀವನದಲ್ಲಿ ಇವುಗಳನ್ನು ನಿಯಂತ್ರಿಸುವುದು ನಮ್ಮ ಅವಶ್ಯಕತೆಗಳಲ್ಲೊಂದು. ಇಲ್ಲದಿದ್ದಲ್ಲಿ ಮಾನಸಿಕ ಜೊತೆಯಾಗಿ ಶಾರೀರಿಕ ಅನಾರೋಗ್ಯಗಳ ದಾಸರಾಗುವುದು ದೂರವಿಲ್ಲದೇ ಇರಲಾರದು. ಇದು ವಿಪರೀತಗೊಳ್ಳುವ ಮೊದಲೇ ಆತ್ಮಾವಲೋಕನದಿಂದ ಸರಿಪಡಿಸಲು ಸಾಧ್ಯ ಎಂದು ಹೇಳುವುದು ಸುಲಭವವಾದರೂ ಕಾರ್ಯಗತಗೊಳಿಸುವುದು ಸ್ವಲ್ಪ ಕಷ್ಟವೆ. ಆದರೂ ಆ ದಿಸೆಯಲ್ಲಿ ಪ್ರಯತ್ನ ಮುಖ್ಯ. ಅರಿಷಡ್ವರ್ಗಗಳನ್ನು ಮೆಟ್ಟಿನಿಂತು, ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಡುವಂತಹ ಕಾರ್ಯ ಸುಲಭದ ಮಾತೇನಲ್ಲ. ಸತತ ಸಾಧನೆಯಿಂದ ಸಾಧ್ಯವಾದರೂ ಅನೇಕ ಸಂತ ಸಾಧಕರೂ ಕೂಡ ವಿಫಲವಾದ ಸಂಗತಿ ಸಾಕಷ್ಟಿವೆ. ಸ್ವಾರ್ಥ, ನಾನು, ನನ್ನದು ಎನ್ನುವ ಅಹಂ ಹಿಂದಿನ ಕಾಲದ ಮುನಿಗಳಿಗೇ ಬಿಟ್ಟಂತಹ ವಿಷಯಗಳಲ್ಲ. ಈ ಸಂದರ್ಭದಲ್ಲಿ ನಮ್ಮ ಮಹಾ ಕಾವ್ಯವಾದಂತಹ ಮಹಾಭಾರತದ ಒಂದು ಪೀಠಿಕಾ ಶ್ಲೋಕ ಉಲ್ಲೇಕನಾರ್ಹ
ಪ್ರಾಯಶೋ ಮುನಯಃ ಸರ್ವೇ ಕೇವಲಾತ್ಮಾ ಹಿತೋದ್ಯತಾಃ
ದ್ವೈಪಾಯನಸ್ತು ಭಗವಾನ್ ಸರ್ವಲೋಕ ಹಿತೋದ್ಯತ:
ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ತಪಸ್ವಿಗಳೆಲ್ಲ ತಮ್ಮ ತಮ್ಮ ಆತ್ಮೋದ್ದಾರಕ್ಕಾಗಿ ಶ್ರಮಿಸುತ್ತಿದ್ದರೆ ದ್ವೀಪದಲ್ಲಿ ಹುಟ್ಟಿದಂತಹ ದ್ವೈಪಾಯನ (ವ್ಯಾಸ) ಅದಕ್ಕೆ ಅಪವಾದವಾಗಿ ಲೋಕ ಕಲ್ಯಾಣವಾಗಿ ತಪಸ್ಸನ್ನು ಮಾಡುತ್ತಿದ್ದರಂತೆ
ಇಲ್ಲಿ ಹೇಳುವುದಿಷ್ಟೆ ಯಾವುದನ್ನಾದರು ಸಾಧಿಸಬೇಕಾದರೆ ಕನಿಷ್ಟ ಪಕ್ಷ ಒಂದು ಮನಸ್ಸು ಮತ್ತು ಪ್ರಾಮಾಣಿಕ ಪ್ರಯತ್ನ ಅಗತ್ಯ. ಅದೇ ಇಲ್ಲದಿದ್ದಲ್ಲಿ ಬರೀ ಇವೆಲ್ಲ ತತ್ವ ಪದಗಳಾಗಿ ನಮ್ಮ ಹಿರಿಯ ತಲೆಮಾರಿನ ಉಪದೇಶದ ಕಾರಂಜಿಯಾಗಿ ಕಂಗೊಳಿಸಬಲ್ಲದೇ ವಿನಃ ಯಾವ್ ಕಾರ್ಯವನ್ನು ಸಾಮರ್ಥ್ಯವನ್ನೂ ಹೊಂದದೇ ಸಮಾಜವನ್ನು ವಿನಾಶದ ಅಂಚಿಗೆ ತಳ್ಳೀತು!! ಇವತ್ತು ನಮ್ಮ ಜನ ಸಾಮಾನ್ಯರು ಸಮಾಜದ ಹಿತಕ್ಕಾಗಿ ಕೆಲವೊಂದು ಅನಪೇಕ್ಷಿತ ಮನೋಭಾವನೆಯನ್ನು ಬದಲಾಯಿಸಿಕೊಳ್ಳುವಂತಹ ಅವಶ್ಯಕತೆ ಇದೆ. ಒಬ್ಬ ವ್ಯಕ್ತಿಯ ಹಣ, ಪ್ರಭಾವ ಮತ್ತು ಅಧಿಕಾರವನ್ನು ನೋಡಿ ಮನ್ನಣೆ ಕೊಡುವಂತಹ ಹವ್ಯಾಸವನ್ನು ತ್ಯಜಿಸಿ ಗುಣಕ್ಕೆ ಪ್ರಾಶಸ್ತ್ಯ ನೀಡುವ ಮನೋಧರ್ಮವನ್ನು ಬೆಳೆಯಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಅದಿಲ್ಲದಿದ್ದಲ್ಲಿ ಆಘಾತಗಳೇ ಹೆಚ್ಚಿನದಾಗಿ ಪರಿನಾಮಗಳು. ಇವೆಲ್ಲದಕ್ಕಿಂಅ ಮಿಗಿಲಾಗಿ, ಬೆಳೆಯುತ್ತಿರುವ ನಮ್ಮ ಪೇಳಿಗೆಗಳ ಮುಗ್ಧ ಮನಸ್ಸಿನ ಮೇಲೆ ಅರಿವಿಲ್ಲದಂತೆ ವ್ಯತಿರಿಕ್ತ ಪರಿಣಾಮ ಹೊಂದಿ, ಮುಂದೊಂದು ದಿನ ಅವರ ಸಾಧನಾ ಶಕ್ತಿಯ ಮೇಲೆ ಕುಂದುಟುಮಾಡುವಂಥಹ ದೂರಗಾಮಿ ಸಾಮಾಜಿಕ, ಮಾನಸಿಕ ಸಮಸ್ಯೆಗೆ ನಮ್ಮ ಸಮಾಜ ಬಲಿಯಾದೀತು!! ಇನ್ನೂ ಮುಂದುವರೆದು ಹೇಳಬೇಕಾದರೆ ಯಾವೊಬ್ಬ ಮನುಷ್ಯ ಎಲ್ಲ ವರ್ಗದ ಜನರನ್ನೂ ಸಮರ್ಪಣ ಭಾವದಿಂದ ನೋಡಬಲ್ಲನೋ ಅವನೇ ನಿಜವಾದ ವಿವೇಕವಂತನಾಗಬಲ್ಲ, ಸಾಅಧಕನಾಗಬಲ್ಲ, ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಪರಿಪೂರ್ಣ ಆರೋಗ್ಯವನ್ನು ಹೊಂದಬಲ್ಲ. ಇದೆಲ್ಲ ನಮ್ಮ ಸಂಸ್ಕ್ರತಿಯಲ್ಲಿಯೇ ಅಡಕವಾಗಿರುವಂತಹ ಕೆಲವೊಂದು ಬದುಕಿನ ದಾರಿದೀಪಗಳು.
ಇದೆಲ್ಲವನ್ನೂ ನೆನಪಿಸಿಕೊಳ್ಳಲೇಬೇಕಾದಂತಹ ಅವಶ್ಯಕತೆ ಇದ್ದಿದ್ದು ಒಂದಕ್ಕೆ ಮಾತ್ರ. ಅದು ಪ್ರಪಂಚದ ಎಲ್ಲ ಎಲ್ಲ ಸಮಸ್ಯೆಗಳಿಗು ಅಮೂಲಾಗ್ರ ಬದಲಾವಣೆಯನ್ನೊಡ್ಡಿ ಪರಿಹಾರ ನೀಡುವ ಒಂದು ಸಂಬಂಧ!! "ವಸುಧೈವ ಕುಟುಂಬಕಂ" ಎಂಬ ವಾಕ್ಯವನ್ನು ಸತ್ಯವಾಗಿಸುವ ಈ ಸಂಬಂಧ, ಪವಿತ್ರವಾದ, ಹಿತಕರವಾದಂತಹ ಈ ಮಾನವ ಸಂಬಂಧ! ಅದಿಲ್ಲದಿದ್ದರೆ ಮಾನವ ಕುಲವನ್ನೇ ಅಧೋಗತಿಯ ಅಂಚಿಗೆ ತಳ್ಳಬಲ್ಲ ದುರ್ಗಂಧ ಈ ಮಾನವ ಸಂಬಂಧ!!!! ಜೋಕೆ.

Rating
No votes yet

Comments