ಇದೂ ಮುಗಿಯುತ್ತೆ.. (ಮುಗಿಯಿತು)

ಇದೂ ಮುಗಿಯುತ್ತೆ.. (ಮುಗಿಯಿತು)

ಬರಹ

(ಇಲ್ಲೀವರ್ಗೂ ಏನಾಗಿತ್ತು ಅಂದ್ರೆ....)

ಮಂಡಿಯೂರಿಯವರ ಮಾತಿನ ಮಾಂತ್ರಿಕ ಮೋಡಿಗೆ ಒಳಗಾದ ಕುಚೇಲನಿಗೆ ತಾನು ಕುರಿಯಲ್ಲ ಹುಲಿ
ಎಂಬ ಆತ್ಮವಿಶ್ವಾಸ ಮೂಡಿತು. ಇಷ್ಟು ದಿನ ತನ್ನೊಳಗಿದ್ದ ಶಕ್ತಿಯನ್ನು ಕಾಣದೆ ಸಂಕಟ
ಪಟ್ಟದ್ದಕ್ಕೆ ಆತನಿಗೆ ದುಃಖವಾಯಿತು. ಇನ್ನು ಮುಂದೆ ಮಂಡಿಯೂರಿಯವರ ಈ ಸೂಪರ್
ಫಾರ್ಮುಲಾವನ್ನು ಅಳವಡಿಸಿಕೊಂಡು ಬದುಕನ್ನು ಸುಖದ ಬೀಡಾಗಿಸಿಕೊಳ್ಳಬೇಕು ಎಂದುಕೊಂಡು
ಜೇಬಿನಲ್ಲಿ ಉಳಿದಿದ್ದ ಚಿಲ್ಲರೆ ಕಾಸನ್ನೆಲ್ಲಾ ಮಂಡಿಯೂರಿಯವರ ಎದುರು ಇಟ್ಟು ಮಂಡಿಯೂರಿ
ಬಾಗಿ ನಮಸ್ಕರಿಸಿ ಅಲ್ಲಿಂದ ಹೊರಟ.

ಮುಂದೆ ದಿನನಿತ್ಯದ ಬದುಕಿನಲ್ಲಿ ಯಾವುದೇ ಕಷ್ಟ ಬಂದರೂ ‘ಈ ಕಷ್ಟ ಶಾಶ್ವತವಲ್ಲ. ಇದು
ಮುಗಿದು ಒಳ್ಳೆಯ ಕಾಲ ಬಂದೇ ಬರುತ್ತೆ. Just let it go... ಇದೂ ಮುಗಿಯುತ್ತೆ’
ಅಂದುಕೊಂಡು ನೆಮ್ಮದಿಯಿಂದ ಇರುತ್ತಾ, ಸುಖದ ಹೊಳೆಯಲ್ಲಿ ತೇಲುತ್ತಿರುವಾಗಲೂ ‘ಈ ಸುಖವೇ
ಶಾಶ್ವತವಲ್ಲ. ಮನಸ್ಸಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡ. ಲಗಾಮು
ಕೈತಪ್ಪಿಹೋಗದಂತೆ ಎಚ್ಚರ ವಹಿಸು. ಸುಖದ ಅಲೆ ನಿರಂತರವಾದದ್ದಲ್ಲ. ಮೇಲೇರಿದವ
ಕೆಳಕ್ಕಿಳಿಯಲೇ ಬೇಕು. ಈ ಸುಖದ ಘಳಿಗೆ- ಇದೂ ಮುಗಿದು ಹೋಗುತ್ತೆ.’ ಎಂಬ ಎಚ್ಚರವನ್ನು
ಪಾಲಿಸುತ್ತಾ ಕುಚೇಲ ಇಡೀ ಭೂಮಿಯ ಮೇಲೆಯೇ  ಅತ್ಯಂತ ಸುಖಿ ಮನುಷ್ಯನಾಗಿದ್ದ. ಆತನ
ಸಂತೋಷ, ನೆಮ್ಮದಿಯನ್ನು ಕಂಡು ನೆಂಟರಿಷ್ಟರು, ಸಹೋದ್ಯೋಗಿಗಳೆಲ್ಲಾ ಅಸೂಯೆಯಿಂದ ನರಳಿ
ಡಾಕ್ಟರನ ಮಗನ ಶೋಕಿಗೆ ಚಂದಾ ಪಾವತಿಸತೊಡಗಿದರು.

ಸತ್ವಶಾಲಿಯಾದ ಮನುಷ್ಯನನ್ನು ಘಳಿಗೆ ಘಳಿಗೆಗೆ ಪರೀಕ್ಷೆಗೊಡ್ಡದಿದ್ದರೆ, ಗೋಳು
ಹೋಯ್ದುಕೊಳ್ಳದಿದ್ದರೆ ತಾನಿದ್ದೇನು ಪ್ರಯೋಜನ ಎನ್ನಿಸಿರಬೇಕು ದೇವರಿಗೆ, ಕುಚೇಲನಿಗೆ
ಸಾಲಾಗಿ ಒಂದರ ಮೇಲೊಂದರಂತೆ ಕಷ್ಟಗಳನ್ನು ನೀಡುತ್ತಾ ಹೋದ. ಆದರೆ ಕುಚೇಲ ಹಲ್ಲು ಕಚ್ಚಿ
ಸಹಿಸುತ್ತಾ ನೆಮ್ಮದಿಯಿಂದ ಬಾಳುತ್ತಿದ್ದ. ದೇವರು ಕಟ್ಟ ಕಡೆಗೆ ತನ್ನ
ಶಕ್ತ್ಯಾಯುಧವನ್ನೇ ಹೊರತೆಗೆದ. ತನ್ನೆಲ್ಲಾ ಶಕ್ತಿಯನ್ನು ಬಳಸಿ ಅದನ್ನು ಕುಚೇಲನ ಮೇಲೆ
ಪ್ರಯೋಗ ಮಾಡಿಯೇ ಬಿಟ್ಟ. ಅದರ ಫಲವಾಗಿ ಕುಚೇಲ ಶುಭ ಮುಹೂರ್ತದಲ್ಲಿ ಮದುವೆಯಾದ.

ಮದುವೆಯಾದ ಹೊಸತರಲ್ಲಿ ದಾಂಪತ್ಯ ಸುಖದ ಜೇನನ್ನು ಸವಿದು ಸವಿದು ದುಂಡಗಾಗುತ್ತಿದ್ದ
ಕುಚೇಲನ ಮನಸ್ಸಿನಲ್ಲಿ ಮಂಡಿಯೂರಿಯ ಉಪದೇಶ ಇದ್ದೇ ಇತ್ತು. ಈ ಸುಖ ಶಾಶ್ವತವಾದದ್ದಲ್ಲ,
ಇದು ಒಂದು ದಿನ ಮುಗಿಯಲೇ ಬೇಕು ಎಂಬ ಎಚ್ಚರ ಆತನಿಗಿತ್ತು. ಈ ವೈಭವ, ಸುಖ, ಸಂತೃಪ್ತಿ,
ನೆಮ್ಮದಿಯೆಲ್ಲಾ ಒಂದು ದಿನ ಮುಗಿಯಲೇ ಬೇಕು ಎಂಬುದು ಆತನಿಗೆ ತಿಳಿದಿತ್ತು. ಆದರೆ ಆ
ದಿನ ಅಷ್ಟು ಬೇಗ ಬರುತ್ತೆ ಎಂಬುದನ್ನು ಆತ ಕನಸಿನಲ್ಲೂ ಎಣಿಸಿರಲಿಲ್ಲ. ಮದುವೆಯ ನಂತರ
ಲೋಲುಪತೆ, ಮಾದಕತೆಯ ಪದರುಗಳೆಲ್ಲಾ ಸರಿದು, ಆ ಮಬ್ಬೆಲ್ಲಾ ತೊಲಗಿ ಹೆಂಡತಿ ಎಂಬಾಕೆಯ
ವಿಶ್ವ ರೂಪ ದರ್ಶನವಾಗಲು ಶುರುವಾಯಿತು! ತನ್ನ ಕಷ್ಟದ ದಿನಗಳು ಇನ್ನು ಶುರುವಾದವು
ಅನ್ನಿಸಿತು ಕುಚೇಲನಿಗೆ. ಆದರೆ ಇವು ಶಾಶ್ವತವಲ್ಲ, ಇವಕ್ಕೆ ಅಂತ್ಯ ಇದ್ದೇ ಇದೆ ಎಂಬ
ಮಂಡಿಯೂರಿಯವರ ಮಾತು ಈತ ಆಶಾವಾದಿಯಾಗಿರಲು ನೆರವಾಗಿತ್ತು.

ಚಿಕ್ಕಂದಿನಲ್ಲಿ ತೂಕಡಿಕೆ, ಗೊರಕೆಗಳ ನಡುವೆ ಕೇಳಿದ ಹರಿಕತೆಯಲ್ಲಿ ನರಕದ ನಾನಾ
ಟಾರ್ಚರ್ ವಿಧಾನಗಳ ಬಗ್ಗೆ ಅಸ್ಪಷ್ಟವಾಗಿ ತಿಳಿದಿತ್ತು. ಈಗ ಮದುವೆಯಾದ ನಂತರ ಅವೆಲ್ಲಾ
ಸ್ಪಷ್ಟವಾಗ ತೊಡಗಿದವು. ನರಕವೆಂದರೆ ಅಬಾಲವೃದ್ಧರಾಗಿ ಎಲ್ಲರೂ ಥರಥರ ನಡುಗುವುದು
ಏತಕ್ಕೆಂದು ಆತನಿಗೆ ಅರಿವಾಗಲಾರಂಭಿಸಿತು. ಹೆಂಡತಿ ‘ಪ್ರಾಣ ಹಿಂಡುವ’ ರಕ್ಕಸಿಯಾದದ್ದು
ಯಾವಾಗ ಎಂದು ಆಲೋಚಿಸಲೂ ಮನಸ್ಸಿಗೆ ಶಕ್ತಿಯಿಲ್ಲದಾಯಿತು. ಬೆಳಿಗ್ಗೆ ಕಣ್ಬಿಟ್ಟ
ಕ್ಷಣದಿಂದ ರಾತ್ರಿ ಎಚ್ಚರ ತಪ್ಪುವವರೆಗೂ ನಿಲ್ಲದ ಕಟಿಪಿಟಿಯಿಂದ ಕುಚೇಲ ಕಂಗಾಲಾಗಿ
ಹೋದ. ‘ಮದುವೆಯೆಂಬುದು ಒಂದು ಕುಲುಮೆ’ ಎಂಬ ಹಿರಿಯರ ಮಾತು ನೆನಪಾದರೂ, ನಮ್ಮಂತಹ
ಪ್ಲಾಸ್ಟಿಕ್ ಡಬ್ಬಗಳು ಸುಟ್ಟು ಕರಕಲಾಗಿ, ಕರಗಿ ನೀರಾಗುವುದು ಖಂಡಿತಾ ಎಂದು
ಅನುಭವದಿಂದ ತಿಳಿದುಕೊಂಡ. ಆದರೂ ಮಂಡಿಯೂರಿಯವರ ಮಾತಿನ ಆಧಾರದ ಮೇಲೆ ಜೀವವನ್ನು
ಅಂಗೈಯಲ್ಲಿ ಹಿಡಿದು ಜೋಪಾನ ಮಾಡಿಕೊಂಡಿದ್ದ. ‘ಇದೂ ಮುಗಿಯುತ್ತೆ...’ ಎಂದು ಪ್ರತಿ
ರಾತ್ರಿ ಪಠಿಸುತ್ತಾ ನಿದ್ದೆ ಹೋಗುತ್ತಿದ್ದ.

ಮದುವೆಯಾಗಿ ಐವತ್ತು ವರ್ಷಗಳಾಗಿದ್ದವು. ಹೆಂಡತಿ ಗುಂಡುಕಲ್ಲಿನ ಹಾಗೇ ಇದ್ದಳು, ಆಕೆ
ಕೊಡುತ್ತಿದ್ದ ಹಿಂಸೆಯೂ ಕಲ್ಲು ಗುಂಡಿನ ಹಾಗೇ ಇತ್ತು. ಕುಚೇಲ ‘ಇದೂ ಮುಗಿಯುತ್ತೆ...’
ಎಂದು ಪಠಿಸುವುದನ್ನು ಮಾತ್ರ ನಿಲ್ಲಿಸಿರಲಿಲ್ಲ.

‘ಅದೊಂದು ದಿನ ಬರುತ್ತದೆ. ಅಂದು ತನ್ನ ಈ ಕಷ್ಟವೆಲ್ಲಾ ದೂರವಾಗುತ್ತೆ. ತನಗೂ
ಒಳ್ಳೆಯ ದಿನಗಳು ಬರುತ್ತೆ’ ಎಂದು ಕುಚೇಲ ಕಣ್ಣು ಮಂಜಾದರೂ ಕನಸು ಕಾಣುತ್ತಲೇ ಇದ್ದ. ಆ
ದಿನ ಕಡೆಗೂ ಬಂದಿತು, ಅಂದು ಎಲ್ಲವೂ ಮುಗಿದು ಹೋಗಿತ್ತು. ಕುಚೇಲನ ಮನೆಯೆದುರು ಹೊಗೆ
ಹಾಕಿತ್ತು.

ಅವನ ಅಂಗೈಯಲ್ಲಿ ಮುದುಡಿಕೊಂಡಿದ್ದ ಕಾಗದ ತುಂಡಿನ ಮೇಲೆ ಬರೆದಿತ್ತು: ‘ಇದೂ ಮುಗಿಯುತ್ತೆ!’