ಒಂದು ಒಳ್ಳೆಯ ನುಡಿ (257) - ತಪ್ಪು ಯಾರದು?

ಒಂದು ಒಳ್ಳೆಯ ನುಡಿ (257) - ತಪ್ಪು ಯಾರದು?

ಇದೀಗ ಅಂತರ್ಜಾಲದಲ್ಲಿ ಓದಿದ ಸುದ್ಧಿ. 'ಹೀಗೂ ಉಂಟೇ?' ನನಗೆ ನಾನೇ ಪ್ರಶ್ನೆ ಹಾಕಿಕೊಂಡೆ. ‘ಕೆಟ್ಟ ಮಕ್ಕಳಾದರೂ ಇರಬಹುದಂತೆ, ಕೆಟ್ಟ ತಾಯಿ ಇರಲಾರಳಂತೆ’. ಹಾಗಾದರೆ ಈ ಸುದ್ಧಿ?

ಯಾರದ್ದೋ ಕರೆ, ಮೊಬೈಲ್ ಕಿವಿಗಿಟ್ಟ ತಾಯಿ ತೆಗೆಯಲೇ ಇಲ್ಲ. ಅದು ಇದು ಮಾತುಕತೆ. ಮುಗಿಯುವ ಲಕ್ಷಣವಿಲ್ಲ. ಮನೆಯ ಪುಟ್ಟ ಮಗುವಿಗೆ ಹಸಿವೆಯೋ, ನಿದ್ದೆಯೋ ಇರಬಹುದು. ಜೋರಾಗಿ ಅಳಲಾರಂಭಿಸಿತು. ಊಹುಂ, ಅಮ್ಮನ ಸ್ಪಂದನವಿಲ್ಲ. ಮಗು ಕಿರುಚಲಾರಂಭಿಸಿತು. ಉಟ್ಟ ವಸ್ತ್ರವನ್ನು ಹಿಡಿದು ಎಳೆಯಲಾರಂಭಿಸಿದಾಗ ಮೊಬೈಲಿನ ಸಂಭಾಷಣೆಯಲ್ಲಿ ಮುಳುಗಿದ್ದ ತಾಯಿ ಅನಿಸಿಕೊಂಡವಳ ಸಿಟ್ಟು ನೆತ್ತಿಗೇರಿತೋ ಏನೋ? ಮಗುವನ್ನು ಹಿಡಿದು ಕುತ್ತಿಗೆ ಹಿಚುಕಿ ಸಾಯಿಸಿಯೇ ಬಿಟ್ಟಳು. ಮಗುವಿನ ಕಿರುಚಾಟ, ಅರಚಾಟ ಕೇಳಿ ನೆರೆಹೊರೆಯವರೆಲ್ಲ ಓಡಿಬಂದಾಗ ಉಸಿರೇ ನಿಂತುಹೋಗಿತ್ತು.

ಇಲ್ಲಿ ತಪ್ಪು ಯಾರದು? ಹೊತ್ತು ಹೆತ್ತ ತಾಯಿಯದೇ? ಬಾಯಿ ಬಾರದ ಮುದ್ದು ಕಂದಮ್ಮನದೇ? ಎಗ್ಗಿಲ್ಲದೆ ಮಾತನಾಡಲು ಬಳಸಿದ ಮೊಬೈಲೇ? ಎಲ್ಲಿಗೆ ಬಂದು ತಲುಪಿತು ನಮ್ಮ ಮನಸ್ಸು? ಹೊಸ ಸೌಲಭ್ಯಗಳು ಬೆಳಕಿಗೆ ಬಂದಂತೆ ಸೋಮಾರಿತನ, ಕ್ರೌರ್ಯ ಜೊತೆಜೊತೆಗೆ ಬಂದು ಬಿಟ್ಟಿತು. ಸಂಬಂಧಗಳ ಮೌಲ್ಯವೇ ಅರಿಯದವರೇ? ರಕ್ತ ಸಂಬಂಧದ ಅರ್ಥ ಗೊತ್ತಿಲ್ಲದ್ದೇ? ಇಷ್ಟೂ ಹುಚ್ಚೇ? ಇತಿ-ಮಿತಿ ಬೇಡವೇ? ಪ್ರತಿಯೊಂದಕ್ಕೂ ನಮಗೆ ನಾವೇ ಅಂಕುಶ ಹಾಕಿಕೊಳ್ಳಬೇಕಲ್ಲವೇ? ತಾಯಿ -ಮಗುವಿನ ಸಂಬಂಧಕ್ಕೆ ಬೆಲೆಯಿಲ್ಲವೇ?

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ