ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು: ಹಟ್ಟಿಯಂಗಡಿ (ಹಟ್ಟಿಅಂಗಡಿ)

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು: ಹಟ್ಟಿಯಂಗಡಿ (ಹಟ್ಟಿಅಂಗಡಿ)

ಬರಹ

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳಲ್ಲಿ ಒಂದಾದ ಹಟ್ಟಿಯಂಗಡಿ ಗಣಪತಿ ದೇವಸ್ಥಾನವು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿದೆ. ಕುಂದಾಪುರದಿಂದ ಸುಮಾರು ೮ ಕಿ.ಮೀ ದೂರದಲ್ಲಿರುವ ನಿಸರ್ಗ ರಮಣೀಯ ಕ್ಷೇತ್ರವಿದು. ಹಟ್ಟಿಯಂಗಡಿ ಒಂದು ಸಣ್ಣ ಹಳ್ಳಿ. ಇಲ್ಲಿ ಗಣಪನ ವಾಸ. ದೇವಸ್ಥಾನ ಸಣ್ಣವಾಗಿ ಕಂಡರೂ ಬಹಳ ಪ್ರಸಿದ್ಧಿ ಪಡೆದಿದೆ. ಈ ದೇವಳದಲ್ಲಿ ನವಗ್ರಹ ಮಂದಿರ ಕೂಡ ಇದೆ. ಗರ್ಭಗುಡಿಯ ಸುತ್ತಲೂ ವಿವಿಧ ಭಂಗಿಯ ಗಣಪತಿ ಮೂರ್ತಿಗಳಿವೆ (ಊರ್ಧ್ವ, ಹೇರಂಬ, ನೃತ್ಯ ಮುಂತಾದವು).

 


ಹಿನ್ನೆಲೆ:
ಪಶ್ಚಿಮಾಭಿಮುಖವಾಗಿ ಹರಿಯುವ ವರಾಹಿ ನದಿ ಉತ್ತರ ದಂಡೆಯ ಮೇಲೆ ಇರುವ ಪುಟ್ಟ ಗ್ರಾಮ ಹಟ್ಟಿಯಂಗಡಿ. ಸುಮಾರು ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ. ’ಹಟ್ಟಿಯಂಗಡಿ’ ಎಂಬ ಹೆಸರಿನ ಗ್ರಾಮಕ್ಕೆ ಹಿಂದೆ ’ಪಟ್ಟಿ-ಪಟ್ಟಿಯ’ನಗರ ಎಂಬ ಹೆಸರಿತ್ತು. ಇದಕ್ಕೆ ಶಾಸನಾಧಾರಗಳಿವೆ. ತುಳುನಾಡು ಆಳಿದ ಪ್ರಪ್ರಥಮ ರಾಜವಂಶದ ಆಳುಪ ರಾಜರ ಹೆಸರಿನಲ್ಲಿ ’ಪಟ್ಟಿ’ ಪ್ರಮುಖವಾಗಿ ಕಾಣಿಸಿಕೊಂಡಿದೆ. ಪಟ್ಟಿ ಅಥವಾ ಹಟ್ಟಿ ಎಂದರೆ ಒಂದು ಕಿರುಗ್ರಾಮ, ಒಂದು ಗುಂಪಿನವರು ವಾಸಿಸುವ ಸ್ಥಳ, ಮನೆ, ಬೀಡು ಎಂಬಿತ್ಯಾದಿ ಅರ್ಥಗಳು ಇವೆ. ಹಟ್ಟಿಯಂಗಡಿಯಲ್ಲೇ ಎರಡು ಪ್ರಾಚೀನವಾದ ಗಣಪತಿ ವಿಗ್ರಹಗಳಿವೆ. ಒಂದು ಲೋಕನಾಥೇಶ್ವರ ದೇವಸ್ಥಾನದಲ್ಲಿ (ಈ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ) ಮತ್ತೊಂದು ಸಿದ್ಧಿವಿನಾಯಕ ದೇವಸ್ಥಾನದಲ್ಲಿದೆ.

ದೇವಾಲಯ:
ಈ ದೇವಾಲಯ ಒಂದು ಮಂಟಪ ಮಾದರಿಯದು. ಒಳಗಿನ ಕೇಂದ್ರ ಭಾಗದಲ್ಲಿ ಚತುರಸ್ರ ಆಕಾರದ ಗರ್ಭಗುಡಿ. ಇದೊಂದು ಸಧೃಡವಾದ ಪ್ರಾಚೀನ ಶಿಲಾಮಯ ಕಟ್ಟಡ. ಶಿಲಾಮಯ ಭಿತ್ತಿಯ ಹೊರಭಾಗವು ಸುಂದರವಾಗಿ ಕಡೆಯಲ್ಪಟ್ಟ ೩೨ ರೀತಿಯ ಮುದ್ಗಲ ಪುರಾಣದ ಗಣಪತಿ ವಿಗ್ರಹಗಳನ್ನು ಹೊಂದಿದೆ (ಲೇಖನದ ಮೊದಲನೆ ಪ್ಯಾರದಲ್ಲಿ ಉಲ್ಲೇಖಿಸಿದ್ದೇನೆ. ಛಾಯಾಗ್ರಹಣ ನಿಷೇಧವಿದ್ದುದ್ದರಿಂದ ಚಿತ್ರ ತೆಗೆಯಲು ಸಾಧ್ಯವಾಗಲಿಲ್ಲ. ಎಲ್ಲಾ ಮೂರ್ತಿಗಳು ಬಹಳ ಸುಂದರವಾಗಿವೆ). ಇನ್ನಾವ ದೇವಾಲಯದಲ್ಲೂ ನೋಡಸಿಗದ ಅಪರೂಪದ ವಿಗ್ರಹಗಳು. ಹೊರಗೆ ಈಶಾನ್ಯ ಭಾಗದಲ್ಲಿ ಸುಂದರವಾದ ಶಿಲಾಮಯ ನವಗ್ರಹ ಗುಡಿ ಇದೆ. ದೇವಾಲಯದ ಹಿಂಭಾಗದಲ್ಲಿ ಯಜ್ಞಶಾಲೆ ಇದೆ. ಬದಿಗೆ ಭೊಜನ ಶಾಲೆಯಿದೆ. ದೇವಸ್ಥಾನದ ಪಕ್ಕದಲ್ಲಿ ವಾದ್ಯ ವಾದಕರ ಮನೆ ಇರಬೇಕು. ಅಲ್ಲಿಯೊಬ್ಬರು ವಾದ್ಯ ವಿದ್ಯೆ ಹೇಳಿಸಿಕೊಳ್ಳುತ್ತಿದ್ದರು (ಮುತ್ತಯ್ಯ ಭಾಗವತರ ’ವಾಂಚತೋನುನ..’ ಕೀರ್ತನೆ ಕೇಳಿಬರುತ್ತಿತ್ತು).

ಗರ್ಭಗುಡಿ:
ಗರ್ಭಗುಡಿಯಲ್ಲಿರುವ ಶ್ರೀ ವಿನಾಯಕನ ವಿಗ್ರಹವು ಪೂರ್ವಾಭಿಮುಖವಾಗಿ ಪ್ರತಿಷ್ಠೆಗೊಂಡಿದೆ. ಗರ್ಭಗೃಹದಲ್ಲಿ ಪ್ರತಿಷ್ಠೆಗೊಂಡಿರುವ ಶ್ರೀ ವಿನಾಯಕನ ವಿಗ್ರಹವು ವಿಶಿಷ್ಟ ರೀತಿಯದು. ಇದೊಂದು ದ್ವಿಬಾಹು ಕೃಷ್ಣಶಿಲಾ ವಿಗ್ರಹ (ಇಲ್ಲಿ ಕೃಷ್ಣಶಿಲಾ ಎಂದರೆ ಕಪ್ಪು ಬಣ್ಣದ ಕಲ್ಲು). ಇದರ ಉದರ ಭಾಗದ ತನಕ ಪಾಣಿಪೀಠ ಇರುವುದರಿಂದ ಇದು ಯಾವ ಭಂಗಿಯಲ್ಲಿದೆ ಎಂದು ಹೇಳುವುದು ಕಷ್ಟ. ಶಿರದಲ್ಲಿ ಚಿಕ್ಕದಾದ ಕಿರೀಟದಂತಿರುವ ಶಿಖೆ. ಗುಂಗುರು ಶಿಖೆ ಹಿಂದಕ್ಕೆ ಇಳಿಬಿದ್ದಿದೆ. ವಿಶಾಲವಾದ ಹಣೆ ಮತ್ತು ಮುಖ, ಭುಜದ ಮೇಲೆ ಇಳಿಬಿದ್ದಿರುವ ವಿಶಾಲವಾದ ಕಿವಿಗಳು. ಎಡದ ಕೈ ವಿಶಿಷ್ಟ ರೀತಿಯ ಹಿಡಿಕೆ ಇರುವ ಮೋದಕ ಪಾತ್ರೆಯನ್ನು ಹಿಡಿದಿದೆ. ಪುಟ್ಟ ಸೊಂಡಿಲು ಮೋದಕದ ಮೇಲಿದೆ. ಬಲಗೈ ಪಾಣಿಪೀಠದೊಳಗೆ ಸೇರಿರುವುದರಿಂದ ಅದು ಹೇಗಿದೆ ಎನ್ನುವುದು ಗೊತ್ತಾಗುವುದಿಲ್ಲ. ದಪ್ಪಪುಷ್ಟ ದೇಹವಿರುವ ಈ ವಿಗ್ರಹ ಸಂಪೂರ್ಣ ಅಲಂಕಾರ ರಹಿತ. ಇದು ಬಾಲಗಣೇಶ ಇರಬಹುದು ಎಂದು ಕೆಲವರ ಅಭಿಪ್ರಾಯ. ಪಾಣಿಪೀಠದ ಮೇಲ್ಭಾಗದಲ್ಲಿ ಎಡದಿಂದ ಬಲಕ್ಕೆ ಸುವರ್ಣರೇಖೆ ಮೂಡಿರುವುದು ಗೋಚರಿಸುತ್ತದೆ.
[ಗಣಪನ ವಿಗ್ರಹ ಕಂಡಾಗ ಮೇಲೆ ವಿವರಿಸಿದಂತೆ ಅನುಭವವಾಗುತ್ತದೆ. ಚಿತ್ರವನ್ನು ಮುದ್ರಿತ ಫೋಟೋದಿಂದ ಸ್ಕಾನ್ ಮಾಡಿದ್ದು]


ವಿಶೇಷಗಳು:
ಇಲ್ಲಿ ನಿತ್ಯ ತ್ರಿಕಾಲಪೂಜೆ ನಡೆಯುತ್ತದೆ. ನಿತ್ಯ ಅಷ್ಟದ್ರವ್ಯಾತ್ಮಕ ಗಣಹೋಮ ಇಲ್ಲಿನ ವೈಶಿಷ್ಟ್ಯ. ಅಷ್ಟದ್ರವ್ಯ ಎಂದರೆ ಎಂಟು ಬಗ್ಗೆಯ ಪದಾರ್ಥಗಳಿಂದ (ಅರಳು, ಅವಲಕ್ಕಿ, ಜೇನುತುಪ್ಪ, ತೆಂಗಿನಕಾಯಿ, ಎಳ್ಳು(ಕಪ್ಪು), ಬಾಳೆಹಣ್ಣು, ಬೆಲ್ಲ, ಕಬ್ಬು) ತಯಾರಿಸಿದ ಸಿಹಿತಿಂಡಿ. ಗಣೇಶ ಚತುರ್ಥಿಯಂದು, ಸಂಕಷ್ಟಹರ ಚತುರ್ಥಿಯಂದು (ವಿಶೇಷವಾಗಿ ಮಂಗಳವಾರದಂದು ಬರುವ ಅಂಗಾರಕ ಸಂಕಷ್ಟಹ ಚತುರ್ಥಿಯಂದು) ಅಪಾರ ಜನಸಾಗರ ಇರುತ್ತದೆ. ಮಾಘ, ಬಹುಳ ಪ್ರತಿಪದೆಯಿಂದ ಮೂರು ದಿನಗಳ ಕಾಲ ವಾರ್ಷಿಕೋತ್ಸವ ಜರುಗುತ್ತದೆ. ಮೋದಕ ಪ್ರಸಾದ ಇಲ್ಲಿನ ವಿಶೇಷ ಆದರೆ ಯಾವಾಗಲೂ ಲಭ್ಯವಿಲ್ಲ. ಪ್ರತಿನಿತ್ಯ ಭಕ್ತಾದಿಗಳಿಗೆ ಮಧ್ಯಾಹ್ನ ಪೂಜೆಯ ನಂತರ ಊಟದ ವ್ಯವಸ್ಥೆ ಕೂಡ ಇದೆ (ಏಕಾದಶಿ-ದ್ವಾದಶಿಯಂದು ತಿಳಿದಿಲ್ಲ).

ಹೋಗುವುದು ಹೇಗೆ:ಕುಂದಾಪುರದಿಂದ ಕೊಲ್ಲೂರು ಮಾರ್ಗವಾಗಿ ಸಂಚರಿಸುತ್ತಿರುವಾಗ, ಮಾರ್ಗ ಮಧ್ಯೆ ಈ ಕ್ಷೇತ್ರ ಸಿಗುತ್ತದೆ. ಕುಂದಾಪುರದಿಂದ ಕೊಲ್ಲೂರಿಗೆ ಹೋಗಲು ಎರಡು ಮಾರ್ಗಗಳಿವೆ (ಅಂದರೆ ರಾಹೆ-೧೭ ರಿಂದ ಎರಡು ಕಡೆ ಅಡ್ದದಾರಿಗಳಿವೆ). ಮೊದಲ ಮಾರ್ಗ ಅನುಸರಿಸಬೇಕು. ಎರಡನೆ ಮಾರ್ಗದಲ್ಲಿ ಹಟ್ಟಿಯಂಗಡಿ ಸಿಗುವುದಿಲ್ಲ. ಸೂಚನಾ ಫಲಕಗಳು ದಾರಿ ತಪ್ಪದಂತೆ ನೋಡಿಕೊಳ್ಳುತ್ತವೆ. ಕೊಲ್ಲೂರು ಮಾರ್ಗವಾಗಿ ಒಳ ಹಾದಿಯಲ್ಲಿ ಸಂಚರಿಸುತ್ತಿರುವಾಗ, ದೇವಸ್ಥಾನದ ಸ್ವಾಗತ ಗೋಪುರ ಗೋಚರಿಸುತ್ತದೆ. ಇಲ್ಲಿಂದ ಮತ್ತೆ ಒಳದಾರಿಯಾಗಿ ೨ ಕಿ.ಮೀ ಕ್ರಮಿಸಬೇಕು (ಚಿತ್ರ ನೋಡಿ. ಹಿನ್ನೆಲೆಯಲ್ಲಿ ಇನ್ನೂ ಸಹ ದಕ್ಷಿಣ ಕನ್ನಡ ಜಿಲ್ಲೆ ಅಂತಲೇ ಇದೆ).


೧) ಬಸ್ ಸೌಕರ್ಯ: ಕುಂದಾಪುರದಿಂದ ನೇರ ಬಸ್ ಸೌಲಭ್ಯವಿದೆ. ಉಡುಪಿಯಿಂದ ಬರುವವರು ಗೋಪುರದ ಬಳಿ ಇಳಿದುಕೊಂಡು ಅಲ್ಲಿಂದ ರಿಕ್ಷಾ/ಬಸ್ಸು ಹತ್ತಬೇಕು. ಇಲ್ಲವೇ ಕುಂದಾಪುರದಲ್ಲಿ ಇಳಿದು ಅಲ್ಲಿಂದ ನೇರ ಬಸ್ಸು ಹಿಡಿಯಬಹುದು.
೨) ಹತ್ತಿರದ ರೈಲ್ವೆ ನಿಲ್ದಾಣ: ಕುಂದಾಪುರ
೩) ಹತ್ತಿರದ ವಿಮಾನ ನಿಲ್ದಾಣ: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
೪) ಉಡುಪಿಯಿಂದ ಟ್ಯಾಕ್ಸಿ ಮಾಡಿಕೊಂಡು ಹೋಗಬಹುದು
೫) ಸ್ವಂತ ವಾಹನ ಇರುವವರಿಗೆ: ರಸ್ತೆ ಸಮತಟ್ಟಾಗಿ ಸಂಚಾರಕ್ಕೆ ಯೋಗ್ಯವಾಗಿದೆ (ಬದಲಾವಣೆ ಅನ್ವಯಿಸುತ್ತದೆ)
ಭೇಟಿ ನೀಡುವ ಸಮಯ: ನವೆಂಬರ್-ಫೆಬ್ರವರಿ ತಿಂಗಳುಗಳು. ಉಳಿದಂತೆ ಮಳೆಗಾಲ, ಬೇಸಿಗೆ ಸಮಯದಲ್ಲಿ ಸ್ವಲ್ಪ ಕಷ್ಟವಾಗಬಹುದು.
ಅತಿಧಿ ಗೃಹಗಳು: ವಿಶೇಷ ಸೇವೆ ಸಲ್ಲಿಸುವವರು(ಗಣಹೋಮ ಇತ್ಯಾದಿ) ಅಥವಾ ಸಮಾರಂಭ ಇರುವವರಿಗೆ ತಂಗಲು ಇಲ್ಲಿ ಎರಡು ಅತಿಥಿ ಗೃಹಗಳಿವೆ.
೧) ಶ್ರೀ ಸಿದ್ಧಿ ಅತಿಥಿ ಗೃಹ
೨) ವಿನಾಯಕ ಅತಿಥಿ ಗೃಹ
----------------------------------------------------------------------------------------------------------
ವಿಗ್ರಹ ಹಾಗೂ ಕ್ಷೇತ್ರದ ಮಾಹಿತಿ: ಶ್ರೀ ಕ್ಷೇತ್ರ ಹಟ್ಟಿಯಂಗಡಿ ಪರಿಚಯ ಪುಸ್ತಕದಿಂದ