ಕ್ಯಾನ್ಸರ್ ಗೆ ಆನ್ಸರ್
ಕ್ಯಾನ್ಸರ್ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ವೈದ್ಯರಾದ ಡಾ. ಅಪರ್ಣಾ ಶ್ರೀವತ್ಸ ಅವರು ಬರೆದ ಪುಸ್ತಕವೇ ‘ಕ್ಯಾನ್ಸರ್ ಗೆ ಆನ್ಸರ್'. ಈ ಕೃತಿಯಲ್ಲಿ ಅವರು ಕ್ಯಾನ್ಸರ್ ಪತ್ತೆ, ಅವರ ಗುಣಲಕ್ಷಣಗಳು, ವೈದ್ಯೋಪಚಾರ ಮೊದಲಾದುವುಗಳನ್ನು ಸರಳವಾಗಿ ವಿವರಿಸುತ್ತಾ ಹೋಗಿದ್ದಾರೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ…
“‘ಕ್ಯಾನ್ಸರ್’ ಎಂಬ ಹೆಸರಿಗೆ ಕೆಚ್ಚೆದೆಯನ್ನೂ ಅಡಗಿಸುವ ಶಕ್ತಿ ಇದೆ. ‘ಕ್ಯಾನ್ಸರ್’ ಇದೆ ಎಂದು ಪತ್ತೆ ಆದಾಗ ಕೇವಲ ರೋಗಿಯಷ್ಟೇ ಅಲ್ಲ, ಇಡೀ ಪರಿವಾರವೇ ದುಃಖ ಸಾಗರದಲ್ಲಿ ಮುಳುಗುತ್ತದೆ. ಆತಂಕ, ಸಂದಿಗ್ದತೆ, ಕೋಪ, ಅವಮಾನ, ಜಿಗುಪ್ಸೆ-ಹೀಗೆ ಅನೇಕ ಮನೋವೈಪರೀತ್ಯಗಳು ಕಾಡುತ್ತವೆ. ಕ್ಯಾನ್ಸರ್ ರೋಗಿಗಳನ್ನು ಸುಮಾರು ಒಂದು ದಶಕದಿಂದ ನಾನು ನೋಡುತ್ತಿದ್ದೆನಾದರೂ, ನನಗೆ ಕ್ಯಾನ್ಸರ್ ವಿಶ್ವ ರೂಪ ದರ್ಶನವಾಗಿದ್ದು ನನ್ನ ತಾಯಿಗೆ ಕ್ಯಾನ್ಸರ್ ಪತ್ತೆ ಆದಾಗ. ‘ಕ್ಯಾನ್ಸರ್’ ಎಂಬ ಪದಕ್ಕಿರುವ ಅಗಾಧ ಶಕ್ತಿ, ನನ್ನ ತಾಯಿಯ ಕಣ್ಣಿನಲ್ಲಿದ್ದ ಜೀವ ಭಯ, ಆಂಕೋಲಾಜಿಸ್ಟ್ ಆದ ನನ್ನನ್ನೇ ನಡುಗಿಸಿತ್ತು. ನನ್ನ ತಾಯಿ ಕ್ಯಾನ್ಸರ್ ಬಗ್ಗೆ ಅರಿಯಲು ಮಾಹಿತಿಗಾಗಿ ಇಂಟರ್ನೆಟ್ನಲ್ಲಿ ಹುಡುಕಾಡಿ, ಕನ್ನಡದಲ್ಲಿ ಓದಲು ಮಾಹಿತಿ ಸಿಗದೆ ಇಂಗ್ಲಿಷ್ ಸರಿಯಾಗಿ ಅರ್ಥವಾಗದೇ ಪೇಚಾಡುತ್ತದ್ದಿರು. ಕನ್ನಡದಲ್ಲಿ ಕ್ಯಾನ್ಸರ್ ಬಗೆಗಿನ ವೈಜ್ಞಾನಿಕ ಮಾಹಿತಿ ವಿರಳ. ಆಗ ನಾನೇ ಏಕೆ ಕನ್ನಡದಲ್ಲಿ ಕ್ಯಾನ್ಸರ್ ಬಗ್ಗೆ ಬರೆಯಬಾರದು ಎಂದೆನಿಸಿತ್ತು. ನನ್ನ ತಾಯಿಯ ಚಿಕಿತ್ಸೆ ಯಶಸ್ವಿಯಾಗಿ ಮುಗಿದು ಅವರು ಕ್ಯಾನ್ಸರ್ ಮುಕ್ತರಾದರು. ನನ್ನ ತಾಯಿಗೆ ಮರು ಜನ್ಮ ನೀಡಿದ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಗಳಿಗೆ ಹಾಗೂ ಅನುಗ್ರಹ ಮಾಡಿದ ರೋಗ ಹರಣ ಕೃಪಾ ಸಾಗರ ಭಗವಂತನಿಗೂ ನಮಿಸುತ್ತಾ ಈ ಪುಸ್ತಕವನ್ನು ಬರೆದೇ ಬಿಟ್ಟೆ. ಈ ಪುಸ್ತಕ ಓದಲು ಕ್ಯಾನ್ಸರ್ ಬಂದಿರಲೇ ಬೇಕೆಂಬ ಷರತ್ತೇನೂ ಇಲ್ಲ. ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕ್ಯಾನ್ಸರ್ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಲು ಈ ಪುಸ್ತಕ ಸಹಾಯಕಾರಿ. ಕ್ಯಾನ್ಸರ್ ಉಂಟಾಗಲು ಕಾರಣ ಏನು, ಕ್ಯಾನ್ಸರ್ ತಡೆಗಟ್ಟಲು ನಮ್ಮ ಜೀವನ ಶೈಲಿ ಹೇಗಿರಬೇಕು, ಕ್ಯಾನ್ಸರ್ ಅನ್ನು ನಿಯಮಿತ ಅರೋಗ್ಯ ತಪಾಸಣೆಗಳ ಮೂಲಕ ಹೇಗೆ ಆರಂಭಿಕ ಹಂತಗಳಲ್ಲಿ ಪತ್ತೆ ಮಾಡಬಹುದು ಎಂದು ತಿಳಿಯಬಹುದು.
ಕ್ಯಾನ್ಸರ್ ಚಿಕಿತ್ಸೆಯನ್ನು ‘ಕ್ಯಾನ್ಸರ್ ಯುದ್ಧ’ ಎಂದೇ ಕರೆಯಬೇಕು. ಈ ಸೆಣಸಾಟದಲ್ಲಿ ಸರ್ಜರಿಯ ಕತ್ತಿಯ ಏಟು ಬೀಳುತ್ತದೆ. ಕೀಮೋಥೆರಪಿಯಂತಹ ವಿಷವನ್ನೇ ನುಂಗಬೇಕಾಗುತ್ತದೆ. ರೇಡಿಯೋಥೆರಪಿಯ ವಿದ್ಯುದಾಲಿಂಗನವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಹುಲಿಯ ಬಾಯನ್ನೇ ಸೇರಿ ಜೀವಂತ ಹೊರಬಂದಂತಾಗುತ್ತದೆ. ಈ ‘ಕ್ಯಾನ್ಸರಾಯಣ’ವನ್ನು ಕಾಲಾನುಸಾರವಾಗಿ ನಾಲ್ಕು ಕಾಂಡಗಳಾಗಿ ವಿಭಜಿಸಿದ್ದೇನೆ. ‘ರೋಗ ನಿರ್ಣಯ ಕಾಂಡ’ದಲ್ಲಿ ಕ್ಯಾನ್ಸರ್ನ ಲಕ್ಷಣಗಳೇನು, ಕ್ಯಾನ್ಸರ್ ಪತ್ತೆ ಮಾಡುವುದು ಹೇಗೆ ಎಂದು ತಿಳಿಸಿದ್ದೇನೆ. ‘ಯುದ್ಧ ಕಾಂಡ’ದಲ್ಲಿ ಕ್ಯಾನ್ಸರ್ಗೆ ಉಪಯೋಗಿಸುವ ಚಿಕಿತ್ಸಾ ವಿಧಾನಗಳನ್ನು ಹಾಗೂ ಅವುಗಳ ದುಷ್ಪರಿಣಾಮಗಳನ್ನೂ ವಿವರಿಸಿದ್ದೇನೆ. ‘ಸುಂದರ ಕಾಂಡ’ದಲ್ಲಿ ಕ್ಯಾನ್ಸರ್ ಚಿಕಿತ್ಸಾ ನಂತರ ಚೇತರಿಸಿಕೊಳ್ಳುವ ಬಗ್ಗೆ ಹೇಳಿದ್ದೇನೆ. ‘ಉತ್ತರ ಕಾಂಡ’ದಲ್ಲಿ ಚಿಕಿತ್ಸಾ ನಂತರ ಕ್ಯಾನ್ಸರ್ ಮರುಕಳಿಸದಂತೆ ಮುಂಜಾಗರೂಕತೆ ಕ್ರಮಗಳನ್ನು ತಿಳಿಸಿದ್ದೇನೆ.
ಕ್ಯಾನ್ಸರ್ ಹಾಗೂ ಕ್ಯಾನ್ಸರ್ ಚಿಕಿತ್ಸೆಗಳ ಬಗ್ಗೆ ಜನರಲ್ಲಿ ಹಾಗೂ ಇಂಟರ್ನೆಟ್ನಲ್ಲಿ ತಪ್ಪು ಮಾಹಿತಿಗಳು ಮತ್ತು ತಪ್ಪು ಪೂರ್ವಗ್ರಹಗಳು ಸಾಮಾನ್ಯ. ಈ ಪುಸ್ತಕ ಜನರಲ್ಲಿ ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಗಳ ಬಗ್ಗೆ ನಿಖರ ಮಾಹಿತಿ ನೀಡಿ, ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಧೈರ್ಯ ಹಾಗೂ ಮಾರ್ಗದರ್ಶನ ನೀಡಿ, ಆಶಾವಾದದಿಂದ ಚಿಕಿತ್ಸೆ ಪಡೆಯಲು ಹುರಿದುಂಬಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಿದ್ದು, ಅಂತಿಮ ಹಂತದ ಕ್ಯಾನ್ಸರ್ ಅನ್ನು ಸಹ ಸಮರ್ಥವಾಗಿ ನಿವಾರಿಸಬಹುದು. ಈ ಪುಸ್ತಕದಲ್ಲಿ ನಾನು ಅನೇಕ ಚಿಕಿತ್ಸೆಗಳ ಬಗ್ಗೆ ತಿಳಿಸಿದ್ದೇನಾದರೂ, ರೋಗಿಯು ಕ್ಯಾನ್ಸರ್ ತಜ್ಞ ರನ್ನು ಸಂಪರ್ಕಿಸಿ, ಚರ್ಚಿಸಿ, ಅವರ ಮಾರ್ಗದರ್ಶನದಿಂದಲೇ ಈ ಚಿಕಿತ್ಸೆಗಳನ್ನು ಪಡೆಯುವುದು ಸೂಕ್ತ.
ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಕರ್ನಾಟಕ ಸಿ.ಈ.ಟಿ. ಪರೀಕ್ಷೆಯಲ್ಲಿ 31ನೇ ರಾಂಕ್ ಪಡೆದು ಬೆಂಗಳೂರು ಮೆಡಿಕಲ್ ಕಾಲೇಜ್ ನಲ್ಲಿ ಎಂ.ಬಿ.ಬಿ.ಎಸ್. ಅನ್ನು 3 ಚಿನ್ನದ ಪದಕಗಳೊಂದಿಗೆ ಮುಗಿಸಿದೆ. ನಂತರ ಚಂಡೀಗಢದ ಪಿ.ಜಿ.ಐ.ನಲ್ಲಿ ಎಂ.ಡಿ. ಮುಗಿಸಿ, ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ಡಿ.ಎಂ. ಮೆಡಿಕಲ್ ಆಂಕಾಲಜಿಯನ್ನು ಮತ್ತೊಂದು ಚಿನ್ನದ ಪದಕದೊಂದಿಗೆ ಮುಗಿಸಿ, ಎಂ.ಆರ್.ಸಿ.ಪಿ. (ಯು.ಕೆ.) ಪದವಿಯನ್ನು ಪಡೆದೆ. ನಂತರ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಮಧ್ಯಮ ಕರ್ನಾಟಕದ ಪ್ರಪ್ರಥಮ ಮೆಡಿಕಲ್ ಆಂಕಾಲಾಜಿಸ್ಟ್ ಎಂಬ ಹೆಗ್ಗಳಿಕೆಯೂ ನನ್ನದು.
ನನ್ನ ಪ್ರಗತಿಗೆ ಬೆನ್ನೆಲುಬಾಗಿರುವ ಮತ್ತು ನನ್ನನ್ನು ಕನ್ನಡದಲ್ಲಿ ಬರೆಯಲು ಪ್ರೇರೇಪಿಸಿದ ನನ್ನ ಪತಿದೇವರು ಡಾ. ಶ್ರೀವತ್ಸ ನಾಡಿಗ್ರಿಗೆ ನನ್ನ ನಮನಗಳು. ನನಗೆ ಕನ್ನಡ ಪುಸ್ತಕಗಳನ್ನು ತಂದು ಕೊಟ್ಟು, ಕಥೆಗಳನ್ನು ಹೇಳಿದ ನನ್ನ ತಂದೆ ದಿವಂಗತ ಎ.ವಿ. ಶ್ರೀಧರ ಮೂರ್ತಿ ಅವರಿಗೆ ನಾನು ಚಿರ ಋಣಿ. ನನ್ನ ಲೇಖನಗಳನ್ನು ಓದಿ ಬೆನ್ನು ತಟ್ಟಿದ ನನ್ನ ತಾಯಿ ಪೂರ್ಣಿಮಾ ಮೂರ್ತಿ, ನನ್ನ ಅಕ್ಕ ಸ್ಮಿತಾ ಶ್ರೀಹರ್ಷ, ನನ್ನ ತಂಗಿ ಡಾ. ಅಖಿಲ ಸುಹಾಸ್ ಅವರಿಗೆ ನಾನು ಆಭಾರಿ. ಪುಸ್ತಕಕ್ಕೆ ಚಿತ್ರಗಳನ್ನು ಬಿಡಿಸಿ ಕೊಟ್ಟ ನನ್ನ ತಮ್ಮ ಕುಮಾರ್ ಮೂರ್ತಿ ಹಾಗೂ ನನ್ನ ಸುಪುತ್ರ ಅಕ್ಷೋಭ್ಯ ಇಬ್ಬರಿಗೂ ನನ್ನ ಕೃತಜ್ಞತೆಗಳು. ಈ ಪುಸ್ತಕ ಬರೆಯುವಾಗ ನನ್ನೊಂದಿಗೆ ಸಹಕರಿಸಿದ ನನ್ನ ಮುದ್ದು ಅವಳಿ ಮಕ್ಕಳು ಆರೋಹಿ ಮತ್ತು ಅಪ್ರಮೇಯನಿಗೆ ಧನ್ಯವಾದಗಳು. ಪ್ರಕಾಶನದ ಸಮಯದಲ್ಲಿ ಮಾರ್ಗದರ್ಶಿಸಿದ ಶ್ರೀ ವಸುಧೇಂದ್ರ ಮತ್ತು ಶ್ರೀ ಗಜಾನನ ಶರ್ಮರಿಗೆ ಚಿರಋಣಿ. ಪುಸ್ತಕಕ್ಕೆ ಬೆನ್ನುಡಿ ಬರೆಯಲು ಒಪ್ಪಿ ಪ್ರೋತ್ಸಾಹಿಸಿದ ನಾರಾಯಣ ಹೆಲ್ತ್ ಸಂಸ್ಥಾಪಕರೂ ಅಧ್ಯಕ್ಷರೂ ಆದ ಶ್ರೀಮಾನ್ಯ ಡಾ. ದೇವಿ ಪ್ರಸಾದ್ ಶೆಟ್ಟಿರವರಿಗೆ ಚಿರಋಣಿ. ಪುಸ್ತಕವನ್ನು ಪ್ರಕಟಿಸಲು ಒಪ್ಪಿದ ಸಾವಣ್ಣ ಪ್ರಕಾಶನದ ಮಾಲೀಕರಾದ ಜಮೀಲ್ ಹಾಗೂ ಶಫೀಕಾ ದಂಪತಿಗಳಿಗೆ, ಮುಖಪುಟ ರಚಿಸಿಕೊಟ್ಟ ಪ್ರದೀಪ್ ಬತ್ತೇರಿ ಹಾಗೂ ಒಳಪುಟ ವಿನ್ಯಾಸಗೊಳಿಸಿದ ವಿಜಯ ವಿಕ್ರಮ್ ಅಡಿಗ, ಅಕ್ಷರ ದೊಷ ತಿದ್ದಿದ ನಿವೇದಿತಾ ಹಾಗೂ ಪುಸ್ತಕವನ್ನು ಮುದ್ರಿಸಿದ ಸುನೀಲ್ ಇವರೆಲ್ಲರಿಗೂ ವಂದನೆಗಳು.ಪುಸ್ತಕ ಬರೆಯಲು ಹುರಿದುಂಬಿಸಿದ ನನ್ನ ಸ್ನೇಹಿತೆ ಶಿಲ್ಪಾ ಬೆಳವಾಡಿಗೆ ನನ್ನ ನಮನಗಳು. ತಮ್ಮ ಅನುಭವಗಳನ್ನು ಹಂಚಿಕೊಂಡ ನನ್ನ ರೋಗಿ ಮಿತ್ರರಿಗೂ ಮತ್ತು ನನ್ನ ಆಸ್ಪತ್ರೆಯ ಚಿಕಿತ್ಸಾ ತಂಡದ ವೇದಾವತಿ ಹಾಗೂ ಕೌಶಿಕ್ ಅವರಿಗೆ ಧನ್ಯವಾದಗಳು.” ಎಂದಿದ್ದಾರೆ.