ದ್ರಾವಿಡ ಪ್ರಾಣಾಯಾಮ ನೆನಪಿಸುವ ತೋಳು ಬಾವಲಿಗಳ ಕಲರವ ಹುಬ್ಬಳ್ಳಿ-ಧಾರವಾಡದಲ್ಲಿ!

ದ್ರಾವಿಡ ಪ್ರಾಣಾಯಾಮ ನೆನಪಿಸುವ ತೋಳು ಬಾವಲಿಗಳ ಕಲರವ ಹುಬ್ಬಳ್ಳಿ-ಧಾರವಾಡದಲ್ಲಿ!

ಬರಹ

ನಾವು ಧಾರವಾಡದವರು ಸಾಕಷ್ಟು ವಿಷಯಗಳಲ್ಲಿ ಭಾಗ್ಯವಂತರು. ನಿತ್ಯ ಒಂದು ವಿಶೇಷ ಘಟನೆಗೆ ಸಾಕ್ಷಿಯಾಗುತ್ತೇವೆ. ನಾಳೆಗೆ ಏನು ಎಂಬ ಪ್ರಶ್ನೆ ಬರಹಗಾರರಿಗೆ ಸಹಜ. ಆದರೆ ಧಾರವಾಡದ ಬರಹಗಾರರಿಗೆ ವಿಷಯಗಳಿಗೆ ಬರವಿಲ್ಲ. ವಿಷಯ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಗೂ ನಮ್ಮಲ್ಲಿ ಕೊರತೆ ಇಲ್ಲ. ‘ಓಯಾಸಿಸ್’ ತರಹ ತಂಪೆರೆಯುವ ಸಂಗ ಅವರ ಒಡನಾಟ. ಹಾಗಾಗಿ ಹೂವಿನ ಸಂಗದಿಂದ ದಾರವೂ ದೇವರ ಮುಡಿಗೆ ಏರುವ ಸೌಭಾಗ್ಯ ಪಡೆದಂತೆ ನಾವು!

ಈ ಪೀಠಿಕೆ ಏಕೆ ಎಂದು ನೀವು ಲೆಕ್ಕಹಾಕುತ್ತಿರಬೇಕಲ್ಲ?

ಎರಡು ದಿನಗಳಿಂದ ಧಾರವಾಡದ ಸಾಧನಕೇರಿಯ ಸರಕಾರಿ ಮುದ್ರಣಾಲಯದ ಆವರಣದ ನೂರಾರು ‘ಯುಕೆಲಿಪ್ಟಸ್’- ನೀಲಗಿರಿ ಮರಗಳ ತೋಪಿನಲ್ಲಿ ಸಾವಿರಾರು ನಾಯಿ ಮುಖದ ದೈತ್ಯ ತೋಳು ಬಾವಲಿಗಳು ತಮ್ಮ ಸೈನ್ಯದೊಂದಿಗೆ ತಂಗಿವೆ. ಅವುಗಳ ‘ಗ್ಲ್ಯಾಡರ್’ ಶೈಲಿಯ ಹಾರಾಟ, ಕೀರಲು ಚೀರಾಟ ಎಲ್ಲರ ಗಮನ ಸೆಳೆಯುತ್ತಿದೆ. ಹುಬ್ಬಳ್ಳಿಯ ಪ್ರತಿಷ್ಠಿತ ‘ಕಿಮ್ಸ್’ ಆಸ್ಪತ್ರೆಯ ಆವರಣದಲ್ಲಿ ಹಾಗು ಭೈಲಪ್ಪನವನಗರದ ನೀಲಗಿರಿ ತೋಪಿನಲ್ಲಿ ಸಹ ಸಾವಿರಾರು ಸಂಖ್ಯೆಯಲ್ಲಿ ತೋಳು ಬಾವಲಿಗಳು ತಲೆ ಕೆಳಗಾಗಿ ಜೋತು ಬಿದ್ದಿವೆ.

ಬಾವಲಿಗಳು ಕೇವಲ ರಾತ್ರಿ ವೇಳೆ ಮಾತ್ರ ಹಾರಾಡಬಲ್ಲವು. ಬೆಳಗಿನ ವೇಳೆ ಅವುಗಳಿಗೆ ಕಣ್ಣು ಕಾಣುವುದಿಲ್ಲ. ಅಥವಾ ಕಣ್ಣಿಲ್ಲದ ಅವು ಎತ್ತಬೇಕತ್ತ ಹಾರಾಡುತ್ತ ಮನುಷ್ಯರ ಕಣ್ಣುಗಳನ್ನು ಕುಕ್ಕೇಬಿಡುತ್ತವೆ. ಹೀಗೆ ಏನೇನೋ ಕೇಳಿದ್ದ ನನಗೆ ಇವು ಸಹಜವಾಗಿಯೇ ಕುತೂಹಲ ಕೆರಳಿಸಿದವು. ಮುಖ ಮಾತ್ರ ನೋಡಲು ನರಿ/ ನಾಯಿಯ ಹಾಗೆ. ಗಾತ್ರದಲ್ಲಿ ಸಾಧಾರಣ ಬಾವಲಿಯ ೫ ರಿಂದ ೬ ಪಟ್ಟು. ಮುಖ ಹಾಗು ದೇಹದ ಭಾಗ ಮಾತ್ರ ನಸು ಗೆಂಪು ಅಥವಾ ದಟ್ಟ ಹಳದಿ ಮಿಷ್ರಿತ ಕಂದು. ರೆಕ್ಕೆಗಳು ಮಾತ್ರ ದಟ್ಟ ಕಪ್ಪು. ಸುಮಾರು ೬ ಕೊಕ್ಕೆಗಳು ಅವುಗಳ ರೆಕ್ಕೆಯ ತುದಿಯಲ್ಲಿ. ಜೋತು ಬೀಳುವುದು ಮತ್ತು ಹಾರಾಡುವುದು ಅತ್ಯಂತ ಎತ್ತರವಾಗಿ!

ಕಷ್ಟಪಟ್ಟು ಇವುಗಳನ್ನು ನೋಡಲು ಕತ್ತು ಎತ್ತಿ ನಿಂತ ವಾಕಿಂಗ್ ಪ್ರೇಮಿಗಳನ್ನು ನೋಡಿ ನಾನು ಸಹ ಬೆಕ್ಕಸ ಬೆರಗಾದೆ. ಸ್ಟ್ಯಾಂಡರ್ಡ್ ಕಾರಿನ ‘ಪವರ್ ಸ್ಟೀಯರಿಂಗ್’ ಹಿಡಿದು ತಿರುಗಿಸಿದಂತೆ, ಮುದ್ದು ಮೊಗದ ಸಾನಿಯಾ ಮಿರ್ಜಾ ಟೆನ್ನಿಸ್ ಆಡುವಾಗ ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಎವೆಇಕ್ಕದೇ ಚೆಂಡು ಹೋಗುವ ಬೆಳಕಿನ ವೇಗ ಗುರುತಿಸಲು ಕತ್ತು ತಿರುಗಿಸುವ ರೀತಿಯಲ್ಲಿಯ ವ್ಯಾಯಾಮವನ್ನು ನೆನಪಿಸುವಂತಿತ್ತು!

ಬಾವಲಿಗಳ ಬಗ್ಗೆ ನಾಲ್ಕು ಮಾತು: ಬಾವಲಿಗಳ ದೇಹ ರಚನೆ ವಿಶಿಷ್ಠವಾದುದು. ರೆಕ್ಕೆಗಳ ತರಹ ವಿನ್ಯಾಸ ಗೋಚರಿಸುತ್ತದೆ. ಆದರೆ ಅವು ರೆಕ್ಕೆಗಳಲ್ಲ. ಒಂದರ್ಥದಲ್ಲಿ ಕೈಗಳು! ಗುಹೆ, ಗುಡಿ, ಗುಂಡಾರ, ಕೋಟೆ ಕೊತ್ತಲಗಳ ಗೋಡೆಗಳನ್ನು ಸಹಜವಾಗಿ ಮತ್ತು ಸಲೀಸಾಗಿ ಏರಲು ಬರುವಂತೆ ಭಗವಂತನ ಸೃಷ್ಠಿ! ಮಡಚಲು ಬರುವ ‘ಫೋಲ್ಡಿಂಗ್ ಛತ್ರಿ’ ತರಹ. ಬೀಸಣಿಕೆಯ ಆಕೃತಿ. ಅಸ್ದ್ಥಿಪಂಜರದಂತಿರುವ ಪುಟ್ಟ ದೇಹದ ಇಕ್ಕೆಲಗಳಲ್ಲಿ ಹರಡಿರುವ ಚರ್ಮವೇ ಅವುಗಳ ರೆಕ್ಕೆ. ಇದು ಅತ್ಯಂತ ಪಾರದರ್ಶಕ ಹಾಗು ಮೃದು.

ಜಗತ್ತಿನಲ್ಲಿ ಸುಮಾರು ೯೦೦ ಜಾತಿಯ ಬಾವಲಿಗಳಿವೆ. ಅಂಟಾರ್ಟಿಕ್ ಹಾಗು ಅರ್ಕಾಟಿಕ್ ಖಂಡಗಳನ್ನು ಹೊರತು ಪಡಿಸಿದರೆ ಭೂಮಂಡಲದ ಎಲ್ಲ ಭಾಗಗಳಲ್ಲಿ ಇವು ಬದುಕಬಲ್ಲವು. ಹೆಚ್ಚಾಗಿ ಇವು ಉಷ್ಣವಲಯದ ಪ್ರದೇಶಗಳನ್ನೇ ಆಯ್ದುಕೊಂಡು ಬದುಕುವ ಸ್ತನಿಗಳು. ಕಾರಣ ಉಷ್ಣವಲಯದ ಪ್ರದೇಶಗಳಲ್ಲಿ ವರ್ಷದ ೧೨ ತಿಂಗಳು ಆಹಾರ ಲಭ್ಯತೆಯ ಗ್ಯಾರಂಟಿ ನಿಸರ್ಗ ನೀಡಿದೆ! ಇವುಗಳಲ್ಲಿ ೪೦ ಪ್ರಜಾತಿಯ ಬಾವಲಿಗಳು ಕೆನಡಾ ಮತ್ತು ಅಮೇರಿಕಾಗಳಲಲ್ಲಿ ಕಂಡು ಬರುತ್ತವೆ.

ಬಾವಲಿಗಳ ಶತ್ರುಗಳೆಂದರೆ ಬೆಕ್ಕು, ಹದ್ದು, ಗೂಬೆ, ಹಾವು, ಮುಂಗುಸಿ. ಬಾವಲಿಗಳು ಸದಾ ಚಟುವಟಿಕೆಯಿಂದ ಕೂಡಿದ್ದು ಎತ್ತರದ ಸ್ಥಳಗಳಲ್ಲಿ ವಾಸಿಸುವುದರಿಂದ ಶತ್ರುಗಳಿಗೆ ಸುಲಭದ ಬೇಟೆಯಲ್ಲ. ಮೇಲಾಗಿ ಬಾವಲಿಗಳು ದೃಷ್ಟಿ ಮತ್ತು ವಾಸನೆಯನ್ನು ಆಧರಿಸಿ ಚಲಿಸುತ್ತವೆ. ಇವುಗಳ ಕೂಗು ಪ್ರತಿಧ್ವನಿಸುವುದರಿಂದ ಕತ್ತಲಿನಲ್ಲಿಯೂ ಪರಸ್ಪರ ಢಿಕ್ಕಿ ಹೊಡೆಯದೇ ವೇಗವಾಗಿ ಹಾರಾಡಬಲ್ಲವು. ಆ ಸೂಕ್ಷ್ಮ ಸಂವೇದಿ ಹಾರಾಡುವಾಗ ಬಳಕೆಯಾಗುವ ಧ್ವನಿ ಮಾನವರ ಕಿವಿಗೆ ನಿಲುಕದ್ದು! ಎಂಬುದು ಇಲ್ಲಿ ಗಮನಾರ್ಹ. ಅವು ಮೂಗಿನ ಚೂಪಾದ ತುದಿಯಿಂದ ಧ್ವನಿ ಹೊರಡಿಸುತ್ತವೆ.

ಕೆಲವು ಪ್ರಜಾತಿಯ ಬಾವಲಿಗಳು ತಮ್ಮ ಚೂಪಾದ ಪಂಜಿನಂತಹ ಕೊಕ್ಕೆಯಿಂದ ನೀರಿನಲ್ಲೂ ಬೇಟೆ ನಡೆಸಿ ಮೀನು ಹಿಡಿಯುತ್ತವೆ. ಇಲಿ, ಕಪ್ಪೆ ಹಾಗು ಹಲ್ಲಿ, ಕೋಳಿಯ ಪಿಳ್ಳೆಗಳು ಇವಿಗಳ ಬಹು ಇಷ್ಟದ ಆಹಾರ. ವ್ಯಾಂಪಾಯರ್ ಎಂಬ ಬಾವಲಿ ಪ್ರಾಣಿಗಳ ರಕ್ತ ಹೀರುವಲ್ಲಿ ನಿಸ್ಸೀಮ. ಅದರ ಆಹಾರವೇ ರಕ್ತ. ಮೃದು ಆಹಾರ ಸೇವಿಸುವ ಬಾವಲಿಗಳ ನೀರಿನ ಅವಶ್ಯಕತೆ ಇಲ್ಲ. ಆದರೂ ಕೆರೆ, ಕಟ್ಟ ಕಂಡಲ್ಲಿ ನೀರಿನ ಮೇಲ್ಪದರದ ಮೇಲೆ ಹಾರಿ ನೆಕ್ಕಿ ಗುಟುಕು ಸೇವಿಸುವುದರ ಮೂಲಕ ತಮ್ಮ ತೃಷೆ ಇಂಗಿಸಿಕೊಳ್ಳುತ್ತವೆ.

ಮಳೆಗಾಲದಲ್ಲಿ ಏಕೆ ಈ ಸರ್ಕಸ್? ಕೆಲವು ಪ್ರಜಾತಿಯ ಬಾವಲಿಗಳು ಮಳೆಗಾಲದಲ್ಲಿ ನಿಶ್ಚೇತವಾಗಿದ್ದರೆ, ಕೆಲವು ಛಳಿಗಾಲದಲ್ಲಿ. ಕೆಲವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವಾಗ ಹೀಗೆ ವಾತಾವರಣ ನಿರ್ಮಿಸುತ್ತವೆ ಎನ್ನುತ್ತಾರೆ ತಜ್ನರು. ಬಾವಲಿಗಳು ಏಕಪತ್ನಿ ವೃತಸ್ಥವಲ್ಲ. ಸಂಗಾತಿಗಳಾಗಿ ಅವು ಬದುಕುವುದು ವಿರಳ. ಕೇವಲ ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರ ಅವು ಜೊತೆಯಾಗಿರುತ್ತವೆ. ಅದು ಕೇವಲ ಒಂದು ವಾರದ ಅವಧಿಗೆ ಮಾತ್ರ. ಇನ್ನುಳಿದ ದಿನಗಳಲ್ಲಿ ಅವು ಬೇರೆ-ಬೇರೆ ಆಗಿಯೇ ವಾಸಿಸುತ್ತವೆ.

ಹೆಣ್ಣು ಬಾವಲಿ ಗರ್ಭಧರಿಸುವ ಮೊದಲು ಅನೇಕ ತಿಂಗಳುಗಳ ವರೆಗೆ ಗಂಡು ಬಾವಲಿಯ ವೀರ್ಯವನ್ನು ತನ್ನ ದೇಹದಲ್ಲಿ ಸಂಗ್ರಹಿಸಿಟ್ಟು ಕೊಂಡಿರುತ್ತದೆ. ವಸಂತ ರುತುವಿನಲ್ಲಿ ಸಾಮಾನ್ಯವಾಗಿ ಗರ್ಭಸ್ಥ ಬಾವಲಿಗಳು ತಾವು ವಾಸಿಸುವ ಸ್ಥಳ ಬಿಟ್ಟು ಇತರೆ ಬಾವಲಿಗಳ ಗುಂಪು ಸೇರುತ್ತವೆ. ಇವುಗಳಿಗೂ ನಮ್ಮ ರಾಜಕಾರಣಿಗಳಂತೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವ್ಯವಾಗುವುದಿಲ್ಲ! ಒಂದು ಹೆಣ್ಣು ಬಾವಲಿ ವರ್ಷದಲ್ಲಿ ಎರಡು ಅವಧಿಗೆ ಮರಿ ಹಾಕುತ್ತದೆ. ಕೆಲವು ಪ್ರಜಾತಿಯ ಬಾವಲಿಗಳು ೪ ಮರಿಗಳನ್ನು ಹಾಕಿದ ದಾಖಲೆ ಇದೆ. ಆಗತಾನೇ ಜನಿಸಿದ ಮರಿ ಬಾವಲಿ ತಾಯಿ ಬಾವಲಿಯ ಐದನೇಯ ಒಂದು ಭಾಗದಷ್ಟಿರುತ್ತದೆ. ೬-೮ ವಾರಗಳ ವರೆಗೆ ತಾಯಿ ಬಾವಲಿ ಮೊಲೆಯೂಡಿಸಿ ಮಾತೃವಾತ್ಸಲ್ಯ ಪೂಷಿಸಿ ಜೋಪಾನ ಮಾಡುತ್ತದೆ. ತಲೆ ಕೆಳಗಾಗಿ ಜೋತಾಡುತ್ತ!