ನಮ್ಮ ಮನೆಯಲೊಂದು ಗುಬ್ಬಚ್ಚಿ ಗೂಡು

ನಮ್ಮ ಮನೆಯಲೊಂದು ಗುಬ್ಬಚ್ಚಿ ಗೂಡು

ಬರಹ

ನಮ್ಮ ಮನೆಯ ಬಾತ್‌ರೂಮ್ ಚಿಕ್ಕದಾದರೂ ಅದಕ್ಕೊಂದು ವೆಂಟಿಲೇಶನ್ ಇದೆ. ವೆಂಟಿಲೇಶನ್ ಹೇಗಿದೆಯೆಂದರೆ, ಅದರ ಕಟ್ಟಿಗೆಯ ಮುಚ್ಚಳವನ್ನು ಕೊಂಡಿ ಹಾಕಿ ಯಾವಾಗಲೂ ತೆರೆದಿರುವಂತೆ ಮಾಡಿದ್ದೇವೆ. ಬಾತ್‌ರೂಮ್‌ನಲ್ಲಿ ಗಾಳಿಯಾಡಲೆಂದು. ಕಿಟಕಿಯ ಮೇಲ್ಭಾಗದಲ್ಲಿ ಮೇಲ್ಛಾವಣಿ ಇದೆ. ಹೀಗಾಗಿ ಅಲ್ಲಿ ಯಾವುದೆ ಪಕ್ಷಿಗಳು ಗೂಡು ಕಟ್ಟಲು ಅನುಕೂಲಕರವಾಗಿದೆ.
ಒಂದು ದಿನ ಗುಬ್ಬಿಗಳ ಗಲಾಟೆ ಬಹಳ ಕೇಳಿಸಿತು. ಎಲ್ಲಿಂದ ಈ ಗಲಾಟೆ ಎಂದು ಕುತೂಹಲದಿಂದ ಹುಡುಕಾಡಿದೆ. ಗಂಡು, ಹೆಣ್ಣು ಗುಬ್ಬಿಗಳೆರಡು ಸರದಿಯ ಪ್ರಕಾರ ಬಾಯಲ್ಲಿ ಒಣ ಹುಲ್ಲನ್ನು ಕಚ್ಚಿಕೊಂಡು ನಮ್ಮ ಬಾತ್‌ರೂಮ್‌ನ ವೆಂಟಿಲೇಟರ್‌ನ ಮೇಲ್ಭಾಗದಲ್ಲಿ ಹತ್ತಿ ಇಳಿಯುವುದು ಕಾಣಿಸಿತು. ನಮ್ಮ ಮನೆಯ ಯಾರಾದರೂ ಬಾತ್‌ರೂಮ್‌ಗೆ ಹೋದಾಕ್ಷಣ ಅವು ಪುರ್‌ನೆ ಹಾರಿ ಹೊರಗೆ ಹೋಗುತಿದ್ದವು. ನಾವು ಮನೆಯ ಬೇರೆ ಕೋಣೆಗೆ ಹೋದತಕ್ಷಣ ಅವುಗಳ ಗಲಾಟೆಯೋ ಗಲಾಟೆ. ಒಮ್ಮೆ ಕುತೂಹಲದಿಂದ ನನ್ನ ಮಗ ಆಕಾಶ್ ಅಪ್ಪ ಅವು ಅಲ್ಲಿ ಏನ್ ಮಾಡ್ಯಾವು ನೋಡೋಣೇನು? ಎಂದು ಕೇಳಿದ. ನನಗೂ ಕುತೂಹಲ ಉಂಟಾಗಿ, ಸ್ಟೂಲ್ ಇಟ್ಟುಕೊಂಡು ಹತ್ತಿ ವೆಂಟಿಲೇಟರ್‌ನ ಮೇಲ್ಭಾಗದಲ್ಲಿ ಇಣುಕಿದೆ. ಮೇಲೆ ಒಣಹುಲ್ಲಿನ ಒತ್ತಾದ ಗೂಡಿನಲ್ಲಿ ಪುಕ್ಕಗಳ ಮೆತ್ತನ ಹಾಸಿಗೆಯನ್ನೇ ಗುಬ್ಬಚ್ಚಿಗಳು ರೆಡಿ ಮಾಡಿದ್ದವು! ಮೆಲ್ಲನೆ ಅವುಗಳಿಗೆ ಅನುಮಾನವಾಗದಂತೆ ಫೋಟೊ ಕ್ಲಿಕ್ಕಿಸಿದೆ.

ಅವುಗಳಿಗೆ ಏನೂ ತೊಂದರೆಯಾಗದಂತೆ ನಾವು ನಮ್ಮ ಪಾಡಿಗಿದ್ದೆವು. ಪ್ರತಿ ದಿನವೂ ನನ್ನ ಮಗ ಕೇಳುತ್ತಿದ್ದ ಅಪ್ಪ ಮರಿ ಆಗ್ಯಾವೇನು ನೋಡೋಣ ಎಂದು. ಇಷ್ಟ್ ಜಲ್ದಿ ಎಲ್ಲಿ ಮರಿ ಆಕ್ಕಾವು ಸ್ವಲ್ಪ್ ತಡಿ ಎಂದೆ. ಅವನಿಗಿಂತಲೂ ನನಗೂ ಕುತೂಹಲ ಜಾಸ್ತಿ ಇತ್ತು ಎನ್ನಿ. ಕೆಲವು ದಿನಗಳ ನಂತರ, ನನ್ನ ಮನೆಯಾಕೆ ಯಾಕೋ ಗುಬ್ಬಿಗಳ ಗಲಾಟೆ ಭಾಳ ಆಗ್ಯದ ಮರಿ ಆಗ್ಯಾವೇನ್ರಿ? ಎಂದಳು. ನಾವೆಲ್ಲ ಸ್ವಲ್ಪ ಕಿವಿಗೊಟ್ಟು ಆಲಿಸಿದೆವು. ಮರಿಗಳ ಗಲಾಟೆಯಂತೇ ಕೇಳಿಸಿತು. ನಾವು ಮರಿಗಳನ್ನು ನೋಡಲು ಹೋದರೆ, ಗುಬ್ಬಚ್ಚಿಗಳು ತಮ್ಮ ಗೂಡಿಗೆ ಮರಳುವವೋ ಇಲವೋ ಎಂಬ ಭಯ ನಮಗೆ. ಏನಾದರಾಗಲಿ ಎಂದು ಮೆಲ್ಲನೆ ಗುಬ್ಬಚ್ಚಿಗಳು ಹೊರಹೋದಾಗ, ಸ್ಟೂಲ್ ಹತ್ತಿ ಸಾಹಸ ಮಾಡಿ ಗೂಡಲ್ಲಿ ಇಣುಕಿದೆ. ನಮ್ಮ ಸಪ್ಪಳಕ್ಕೋ ಏನೋ ಮರಿಗಳು ತೆಪ್ಪಗೆ ಕುಳಿತಿದ್ದವು. ಎಲಾ ಇವ್ನ ತಮ್ಮ ತಂದೆ ತಾಯಿ ಬಂದೊಡನೆ ಸಿಕ್ಕಾಪಟ್ಟೆ ಗಲಾಟೆ ಮಾಡುವ ಇವು ಹೇಗೆ ತೆಪ್ಪಗೆ ಬಿದ್ವು ಎಂಬುದೆ ಆಶ್ಚರ್ಯವಾಯಿತು. ಹಾಗೂ ಹೀಗೂ ಮಾಡಿ ಅವುಗಳಿಗೆ ತೊಂದರೆಯಾಗದಂತೆ, ಅವುಗಳ ಅಪ್ಪ ಅಮ್ಮನಿಗೂ ಗೊತ್ತಾಗದಂತೆ ಫೋಟೊಗಳನ್ನು ಕ್ಲಿಕ್ಕಿಸಿದೆ. ನನ್ನ ಮಗನಿಗೋ ಸಂಭ್ರಮ ಸಡಗರ. ಅಪ್ಪ ಅವು ದೊಡ್ಡವಾದಮ್ಯಾಲೆ ನಮ್ಮ ಮನ್ಯಾಗ ಇರ್ತಾವಲ್ಲ? ಎಂದು ಕೇಳಿದ. ಅವು ಸಾಕೋ ಪಕ್ಷಿಗಳಲ್ಲ, ಅವುಗಳಿಗೆ ಹೆಂಗ ಆಹಾರ ಕೊಡಬೇಕನ್ನೂದು ನಮಗ ತಿಳಿಯಂಗಿಲ್ಲ ಎಂದು ಅವನಿಗೆ ಸಮಾಧಾನಪಡಿಸಿ ಹೇಳಿದೆ. ಅಂತೂ ನಮ್ಮ ಮನೆಯಲ್ಲಿ ಗುಬ್ಬಿಗಳ, ಅವುಗಳ ಮರಿಗಳ ಬಗ್ಗೆ ಮಾತನಾಡುವುದೇ ದಿನದ ವಿಷಯವಾಯಿತು. ನಾನು ಕಾಲೇಜಿನಿಂದ ಬಂದಾಕ್ಷಣ ನನ್ನ ಮನೆಯಾಕೆ, ಮಗ ಇಬ್ಬರೂ ಸರದಿಯಂತೆ ಗುಬ್ಬಿಗಳ ದಿನಚರಿಯನ್ನು ವರ್ಣಿಸುತ್ತಿದ್ದರು. ಗುಬ್ಬಿ ದಂಪತಿಗಳೋ ಸರದಿಯಂತೆ ತಮ್ಮ iರಿಗಳಿಗೆ ವಿವಿಧ ಹುಳು, ಹುಪ್ಪಟೆಗಳನ್ನು ತಂದು ಕೊಡುತ್ತಿದ್ದವು. ಇವು ಹೊರಗೆ ಚಿಂವ್ ಎಂದೊಡನೆ ಒಳಗೆ ಗೂಡಿನಲ್ಲಿದ್ದ ಮರಿಗಳಿಗೆ ಬ್ರಹ್ಮಾಂಡದಷ್ಟು ಹಸಿವೆಯಾಗಿ ಇಡೀ ಮನೆಯೆಲ್ಲ ಗಲಾಟೆಯಾಗುವಂತೆ ಚಿಂವ್ ಚಿಂವ್ ಚಿಂವ್ ಎಂದು ಅರಚತೊಡಗುತ್ತಿದ್ದವು. ಮನೆಗೆ ಬಂದವರಿಗೆಲ್ಲ ಈ ವಿಷಯವನ್ನು ಹೇಳಿ ಸಂತೋಷಪಡುವುದೂ ನಮ್ಮ ದಿನಚರಿಯಲ್ಲಿ ಸೇರಿಹೋಯ್ತು.
ಕೆಲವು ದಿನಗಳ ನಂತರ ಅವುಗಳ ಗಲಾಟೆ ರೂಢಿಯಾಯಿತು. ನಮ್ಮ ದೈನಂದಿನ Uದ್ದಲಗಳಲ್ಲಿ ಅವುಗಳನ್ನು ಮರೆತೇಬಿಟ್ಟೆವು. ಒಂದು ದಿನ ನಾನು ಒಮ್ಮೆಲೆ ನನ್ನವಳನ್ನು ಕೇಳಿದೆ ಮರಿಗಳು ಎಲ್ಲಿ ಹೋದ್ವೇ? ಗೂಡು ನೋಡಿದೆ. ಖಾಲಿ! ಮಗ ಆಕಾಶ್ ಓಡೋಡಿ ಬಂದ. ಅಪ್ಪ ನಮ್ಮ ಮನ್ಯಾಗಿನ ಗುಬ್ಬಿ ಮರಿಗಳೆರಡೂ ಹಾರಾಕ ಕಲ್ಯಾಕತ್ತಾವ ಎಂದ. ಅವು ನಮ್ಮ ಗುಬ್ಬಿ ಮರೀನ ಅಂತ ಹೆಂಗ ಹೇಳ್ತಿಯಪಾ ಎಂದೆ. ಅವು ಹಾರಿ ಹಾರಿ ನಮ್ಮ ಮನಿ ಕಿಡಕ್ಯಾಗ ಬಂದ್ ಕೂಡ್ತಾವ ನೋಡಬಾ ಎಂದ ನಾನೂ ನೋಡಿದೆ. ನಿಜ ಇನ್ನೂ ರೆಕ್ಕೆ ಬಲಿಯದ ಎರಡು ಪುಟ್ಟ ಗುಬ್ಬಿಮರಿಗಳು ಹಾರುವದನ್ನು ಕಲಿಯುತ್ತ ನಮ್ಮ ಕಿಟಕಿಯಲ್ಲಿ ಕೂಡತೊಡಗಿದ್ದವು. ಹೇಗಾದರಾಗಲಿ ಹಾರುವುದನ್ನು ಕಲಿತವಲ್ಲ ಎಂದು ಸಂತಸಗೊಂಡೆ, ಜೊತೆಯಲ್ಲಿಯೇ ಮನೆಯ ಸದಸ್ಯರು ಮನೆ ಖಾಲಿ ಮಾಡಿದರಲ್ಲ ಎಂಬ ಬೇಸರವೂ ಇತ್ತು. ಅಂದು ರಾತ್ರಿ ಮರಿಗಳ ಗಲಾಟೆಯಿಲ್ಲದೆ ಹೇಗಪ್ಪ ಕಾಲ ಕಳೆಯುವುದು ಎಂದು ಚಿಂತಿಸತೊಡಗಿದೆ. ನನಗೇ ಆಶ್ಚರ್ಯವಾಯ್ತು. ಗುಬ್ಬಿಗಳ ಗಲಾಟೆಗೆ ನಾನು ಎಷ್ಟೊಂದು ಹೊಂದಿಕೊಂಡುಬಿಟ್ಟಿರುವೆನಲ್ಲ ಎಂದು. ಅಂದು ರಾತ್ರಿ ನನ್ನ ಮನೆಯಾಕೆ ನನ್ನನ್ನ, ನನ್ನ ಮಗನನ್ನ ಇಬ್ಬರನ್ನೂ ಕರೆದು ಮೆಲ್ಲನೆ ಪಿಸುಮಾತಿನಲ್ಲಿ ಹೇಳಿದಳು ಇಲ್ಲಿ ಬರ್ರಿ ನೋಡ್ರಿ ಗುಬ್ಬಿ ಮರಿ ಎಲ್ಲೂ ಹೋಗಿಲ್ಲ ಮನೆಯೊಳಗಿನ ಗೊಂಬಿ ಮ್ಯಾಲೆ ಕುಂತಾವ ಎಂದು. ನನಗೋ ಅತ್ಯಾಶ್ಚರ್ಯ! ಹೋಗಿ ನೋಡಿದೆ. ನಿಜ! ಪಾಪದ ಪುಟ್ಟ ಮರಿ ಮೊಳೆಗೆ ತೂಗು ಹಾಕಿದ ಗೊಂಬೆಯ ಮೇಲೆ ಪಿಳಿ ಪಿಳಿ ಕಣ್ಣುಬಿಡುತ್ತ ಕುಳಿತಿತ್ತು. ನಾವು ಅಂದಿನಿಂದ ಅದರ ಸಮೀಪಕ್ಕೂ ಸುಳಿಯದೆ ಗಲಾಟೆ ಮಾಡದಂತೆ ನೆಮ್ಮದಿಯಾಗಿ ಕುಳಿತಿರಲು ಬಿಟ್ಟೆವು. ನನ್ನ ಮಗನಂತೂ ಕುಣಿದಾಡಿಬಿಟ್ಟ. ಅಂದಿನಿಂದ ಗುಬ್ಬಿ ಮರಿಗಳು ಸಂಜೆ ೬ ಗಂಟೆಯದೊಡನೆ ನಡುಮನೆಯ ಕಿಟಕಿಯ ಮೂಲಕ ಮನೆಯೊಳಗೆ ಬಂದು ಗೊಂಬೆಯ ಮೇಲೆ ಸ್ಥಾಪಿತವಾಗುತ್ತವೆ. ಬೆಳಿಗ್ಗೆ ೫-೩೦ಕ್ಕೆ ಚಿಲಿಪಿಲಿ ಎಂದು ಗಲಾಟೆ ಮಾಡುತ್ತ ಕಿಟಕಿಯ ಮೂಲಕ ಹೊರಹೋಗಿಬಿಡುತ್ತವೆ. ಇದು ದಿನನಿತ್ಯದ ದೃಶ್ಯ. ನಮಗೂ ಅವುಗಳ ಇರುವಿಕೆಯಿಂದ ಎಷ್ಟೋ ನೆಮ್ಮದಿ. ಅವುಗಳಿಗಾಗಿ ಕಿಟಕಿಯಲ್ಲಿ ಪುಟ್ಟ ಗ್ಲ್ಲಾಸಿನಲ್ಲಿ ಕಾಳುಗಳನ್ನು ಹಾಕಿ ಇಟ್ಟಿದ್ದೇವೆ. ಅಂದ ಹಾಗೆ ಅವೆರಡೂ ಹೆಣ್ಣು ಗುಬ್ಬಿಗಳು. ಇದೀಗ ಇವುಗಳ ಜೊತೆಯಲ್ಲಿ ಗಂಡು ಗುಬ್ಬಿಯೊಂದು ಬಂದು ಮನೆಯಲ್ಲಿ ರಾತ್ರಿ ಕಾಲ ಕಳೆಯುತ್ತಿದೆ. ಹಗಲು ಹೊತ್ತಿನಲ್ಲಿ ಮೊದಲಿನ ಗೂಡನ್ನೇ ಮರಿ ಹಾಕಲು ಬಳಸಿಕೊಳ್ಳುತ್ತಿವೆ. ಇದಕ್ಕಿಂತ ಸಂತೋಷದ ಸಂಗತಿ ಯಾವುದಿದೆ? ಮಗ ಹೇಳಿದ ಅಪ್ಪ ಗೂಡು ಹಂಗೇ ಇರ್ಲಿ ಮನಿತುಂಬ ಗುಬ್ಬಿ ಆಗ್ತಾವ ಎಷ್ಟು ಛೊಲೋ ಅಲ್ಲ? ಎಂದ. ಮನೆಯಾಕೆ ನನ್ನ ನೋಡಿ ಮುಗುಳ್ನಕ್ಕಳು. ನಾನು ಗೂಡನ್ನೇ ಗಮನಿಸುತ್ತಿದ್ದೆ.

ಚಿತ್ರ ಲೇಖನ-ಸಿದ್ಧರಾಮ ಹಿರೇಮಠ. ಕೂಡ್ಲಿಗಿ