ನೀರೂಣಿಸದೇ ಫಲ ಬಿಟ್ಟ ಕ್ರೀಡಾಪಟುಗಳು..

ನೀರೂಣಿಸದೇ ಫಲ ಬಿಟ್ಟ ಕ್ರೀಡಾಪಟುಗಳು..

ಬರಹ

ಒಂದು ಕಥೆ ನೆನಪಾಗ್ತಾ ಇದೆ.
ಅಪ್ಪ ಪುಟ್ಟನಿಗೆ ಎರಡು ಬಾಳೆಹಣ್ಣು ತರಲು ಹೇಳುತ್ತಾರೆ. ಬಹಳ ತರಲೆ ಆದ ಪುಟ್ಟನಿಗೆ ಹಸಿವೂ ಜಾಸ್ತಿ.
ಬಾಳೆಹಣ್ಣು ತರುತಿದ್ದ ಪುಟ್ಟ ನಿಗೆ ಹೊಟ್ಟೆ ಚುರುಗುಟ್ಟಲು ತೊಡಗುತ್ತದೆ. ಮೆದುಳು ಚುರುಕಾಗುತ್ತದೆ.
ಅಪ್ಪನಿಗೆ ಎರಡು ಬಾಳೆಹಣ್ಣು ಯಾಕೆ? ಬಹುಶ ಒಂದು ಅವರಿಗೆ ಮತ್ತೊಂದು ನನಗೆ ಇರಬೇಕು .ಹೇಗೂ ಹಸಿಯುತ್ತಾ
ಇರುವುದರಿಂದ ಇಲ್ಲೇ ತಿಂದರೆ ಏನೂ ಅನ್ನಲ್ಲ ಅಂದುಕೊಂಡು ಒಂದನ್ನು ಒಳಗೆ ಸೇರಿಸಿಕೊಳ್ಳುತ್ತಾನೆ.
ಒಂದು ಬಾಳೆಹಣ್ಣು ಪುಟ್ಟನ ಹೊಟ್ಟೆಯ ಯಾವ ಮೂಲೆಗೆ ಸಾಕು ?
ಅಪ್ಪನಿಗೆ ಹೇಗಿದ್ದರೂ ನಾನೆಂದರೆ ತುಂಬಾ ಪ್ರೀತಿ. ಇನ್ನೊಂದು ನನಗೆ ಬೇಕೆಂದರೆ ಇಲ್ಲ ಅನ್ನಲಾರರು ಎಂದುಕೊಂಡು
ಇನ್ನೊಂದನ್ನೂ ಮೆಲ್ಲಗೆ ಒಳ ಸೇರಿಸಿಕೊಳ್ಳುತ್ತಾನೆ.
ಖಾಲಿ ಕೈಯ್ಯಲ್ಲಿ ಬಂದ ಪುಟ್ಟನ ವಿವರಣೆ ಕೇಳಿ ಅಪ್ಪ ಸುಸ್ತು..!
ಈ ಕತೆ ಯಾಕೆ ನೆನಪಾಯ್ತೆಂದರೆ ನೀವು ಎಲ್ಲ ಮಾಧ್ಯಮದಲ್ಲಿ ಓದಿರುತ್ತೀರ ಒಂದು ಸುದ್ದಿಯನ್ನು...
ಒಲಂಪಿಕ್ ಗಾಗಿ ಸರಕಾರ ಹರಿಬಿಟ್ಟ ೬೫ ಕೋಟಿ ಕ್ರೀಡಾಪಟುಗಳಿಗೆ ಸೇರುವ ಹೊತ್ತಿಗೆ ಆಗಿದ್ದು ೩ ಕೋಟಿ. ಇಂತಹ ಪವಾಡಗಳಿಗೆ ಯಾವ ಜಾದೂಗಾರರ
ಅಗತ್ಯ ಇಲ್ಲ ಬಿಡಿ ನಮ್ ಭಾರತದಲ್ಲಿ. ಅದಕ್ಕೆ ಇದ್ದಾರಲ್ವಾ ನಮ್ ರಾಜಕಾರಣಿಗಳು...

ಒಲಂಪಿಕ್ಸ್ ನಡೆಸಿದ ಚೀನ ತಾನೆ ಪದಕಪಟ್ಟಿಯಲ್ಲಿಯೂ ರಾರಾಜಿಸಿತು. ಚೀನದಂತಹ ದೇಶ ಒಲಿಂಪಿಕ್ಸ್ ಪಟ್ಟಿಯಲ್ಲಿ ಮುಂದಿರಲು ಅಲ್ಲಿನ ಸರಕಾರದ ಪ್ರಯತ್ನ ಕೂಡ ಬಹಳಷ್ಟಿದೆ.ಚಿಕ್ಕ ವಯಸ್ಸಿನಲ್ಲೆ ಅವರ
ಪ್ರತಿಭೆ ಗುರುತಿಸಿ ತಕ್ಕ ಕೋಚಿಂಗ್ ನೀಡಿ ಒಲಿಂಪಿಕ್ಸ್ ಗಾಗೇ ಸಿದ್ದ ಪಡಿಸಲಾಗುತದೆ.
(ಅದರಲ್ಲಿನ ಕ್ರೂರತನದ ಎಳೆಯೂ ಇದೆ ಅನ್ನುವುದು ಬೇರೆ ವಿಷಯ.ಪದಕ ಪಡೆಯಬೇಕೆಂಬ ತವಕದ ಕುರಿತಷ್ಟೇ ಇಲ್ಲಿನ ಪ್ರಸ್ತಾಪ.)
ನಮ್ಮಲ್ಲಿ ಭಾಗವಹಿಸಿದರೆ ಸಾಕು ಗೆಲ್ಲೋದು ಅಷ್ಟು ಮುಖ್ಯವಲ್ಲ ಎಂಬ ಮನಸ್ತತ್ವ ಬೇರೂರಿರೋದರಿಂದ ಹೋಗಿ
ಬರುವುದಷ್ಟೇ ಸಾಧನೆ ಅಂತ ಕೆಲವು ಆಟಗಾರರ ಜತೆ ರಾಜಕಾರಿಣಿಗಳೂ ಅಂದುಕೊಂಡಿದ್ದಾರನ್ನಿಸುತ್ತೆ.
ಮತ್ತೊಂದು ದುರದೃಷ್ಟಕರ ವಿಷಯ ಅಂದರೆ ಒಲಿಂಪಿಕ್ಸ್ ನಲ್ಲಿ ನಡೆಯುವ ಬಹಳಷ್ಟು ಕ್ರೀಡೆಗಳ ಹೆಸರೇ ಭಾರತದ ಯುವಕರಿಗೆ ತಿಳಿದಿರುವುದಿಲ್ಲ!
ಕ್ರೀಡೆ ಅಂದರೆ ಕ್ರಿಕೆಟ್ ಬಹಳಷ್ಟು ಜನರ ಪಾಲಿಗೆ.
ಯೋಗ, ಆಯುರ್ವೇದದ ತವರಾದರೂ, ವಿಶ್ವದಲ್ಲೇ ಏಳನೇ ದೊಡ್ಡ ದೇಶ ವಾದರೂ, ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ
ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಕೊನೆಯ ಸಾಲುಗಳಲ್ಲಿ ನಮ್ಮನ್ನು ನಾವು ಹುಡುಕಿಕೊಳ್ಳಬೇಕಾದ್ದು ವಿಪರ್ಯಾಸ ಮತ್ತು ದುಃಖಕರ.
ಇಂತಹ ಕಷ್ಟಕರ ಪರಿಸ್ಥಿತಿಯಲ್ಲೂ ,ಹೆಚ್ಚು ಸವಲತ್ತು, ಸೌಲಭ್ಯ ಏನಿಲ್ಲದೆ ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾಪಟುಗಳು ಅಭಿನಂದನಾರ್ಹರು.ಅವರ ಛಲ, ದೇಶಾಭಿಮಾನ ಶ್ಲಾಘನೀಯ.
ಹಣದ ಹೊಳೆಯಲ್ಲೇ ಮೀಯುವ ಕ್ರಿಕೆಟ್ ಆಟಗಾರರು ಇವರನ್ನು ಕಂಡು ಕಲಿಯಬೇಕು ಜತೆಗೆ ಆತ್ಮಸಾಕ್ಷಿಯ ಎದುರು ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು.