ಭಾರತದ ಪ್ಯಾರಾ ದಿಗ್ವಿಜಯ - ಹೆಚ್ಚಿದ ಆತ್ಮವಿಶ್ವಾಸ
ಪ್ಯಾರಿಸ್ ನಲ್ಲಿ ೧೧ ದಿನಗಳ ಪ್ಯಾರಾಒಲಂಪಿಕ್ಸ್ ಕೂಟ ಮುಗಿದಿದೆ. ೧೭ನೇ ಪ್ಯಾರಾಒಲಂಪಿಕ್ಸ್ ಭಾರತದ ಪಾಲಿಗೆ ಅತ್ಯಂತ ಆಶಾದಾಯಕ, ಭಾರೀ ಭರವಸೆ ಹುಟ್ಟಿಸಿದ ಕೂಟ. ಒಟ್ಟು ೨೯ ಪದಕಗಳನ್ನು ಗೆದ್ದಿರುವ ಭಾರತೀಯ ದಿವ್ಯಾಂಗ ಕ್ರೀಡಾಪಟುಗಳು ಹಿಂದೆಂದೂ ಮಾಡದ ಸಾಧನೆ ಮಾಡಿದ್ದಾರೆ. ೨೦೧೬ರವರೆಗೆ ಹಿಂದಿನ ಅಷ್ಟೂ ಕೂಟಗಳಲ್ಲಿ ಭಾರತ ಗೆದ್ದಿದ್ದು ಕೇವಲ ೧೨ ಪದಕ. ಟೋಕಿಯೋದಲ್ಲಿ ಪದಕಗಳ ಸಂಖ್ಯೆ ೧೯ಕ್ಕೇರಿತು. ಈ ಬಾರಿಯಂತೂ ೨೯ ಪದಕಗಳನ್ನು ಭಾರತೀಯರು ಗೆದ್ದಿದ್ದಾರೆ. ಪ್ಯಾರಿಸ್ ಗೆ ತೆರಳುವ ಮುನ್ನ ಭಾರತೀಯರು ೨೫ ಪದಕಗಳನ್ನು ಗೆಲ್ಲುತ್ತಾರೆ ಎಂದು ಹೇಳಲಾಗಿತ್ತು. ಈ ನಿರೀಕ್ಷೆಯನ್ನೂ ಮೀರಿದ ಸಾಧನೆ ಮಾಡಿದ್ದು ಭವಿಷ್ಯದಲ್ಲಿ ದೇಶದ ಕ್ರೀಡಾಪಟುಗಳು ಅತ್ಯುನ್ನತ ಸಾಧನೆ ಮಾಡಲಿದ್ದಾರೆ ಎನ್ನುವುದೇ ಸಾಕ್ಷಿ.
ಈ ಬಾರಿ ಒಲಂಪಿಕ್ಸ್ ಗೆ ಹೋಲಿಸಿದರೆ ಪ್ಯಾರಾ ಒಲಂಪಿಕ್ಸ್ ನಲ್ಲಿ ಭಾರತದ್ದು ಅದ್ಭುತ ಸಾಧನೆ. ಒಲಂಪಿಕ್ಸ್ ನಲ್ಲಿ ಒಂದೂ ಚಿನ್ನ ಗೆಲ್ಲದ ಭಾರತ ೧ ಬೆಳ್ಳಿ, ೫ ಕಂಚಿನ ಪದಕಗಳೊಂದಿಗೆ ೬ ಪದಕಗಳನ್ನು ಗಳಿಸಿತ್ತು. ಹಿಂದಿನ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ೧ ಚಿನ್ನ, ೨ ಬೆಳ್ಳಿ, ೪ ಕಂಚುಗಳೊಂದಿಗೆ ೭ ಪದಕ ಗೆದ್ದಿತ್ತು. ಟೋಕಿಯೋಕ್ಕೆ ಹೋಲಿಸಿದರೆ ಪ್ಯಾರಿಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಒಲಂಪಿಕ್ಸ್ ನಲ್ಲಿ ಸಾಮಾನ್ಯ ಸಾಧನೆ ಮಾಡಿದ್ದಾರೆ. ಆದರೆ ಪ್ಯಾರಾಒಲಂಪಿಕ್ಸ್ ವಿಚಾರದಲ್ಲಿ ವಿಕಾಸದಿಂದ ಇನ್ನಷ್ಟು ವಿಕಾಸ ಎನ್ನುವಂತೆ ಸಾಧನೆ ದಾಖಲಾಗಿದೆ. ಅತ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಗರಿಷ್ಟ ೧೭ ಪದಕಗಳು ಬಂದಿವೆ. ಬ್ಯಾಡ್ಮಿಂಟನ್, ಶೋಟಿಂಗ್, ಬಿಲ್ಗಾರಿಕೆ, ಜೂಡೋ ಭಾರತ ಪದಕ ಗೆದ್ದಿರುವ ಇನ್ನಿತರ ಕ್ರೀಡೆಗಳು. ಇನ್ನೂ ಹಲವು ವಿಭಾಗಗಳಲ್ಲಿ ಭಾರತ ಪದಕ ಗೆಲ್ಲದಿದ್ದರೂ, ಗೆಲ್ಲುವ ಅಂಚಿಗೆ ತಲುಪಿದೆ.
ಈ ಎಲ್ಲ ಫಲಿತಾಂಶಗಳು ಕ್ರೀಡೆಯಲ್ಲಿ ದೇಶ ಸಾಧಿಸಿದ ಅಸಾಮಾನ್ಯ ಪ್ರಗತಿಯ ಸೂಚಕವಾಗಿದೆ. ಸರಿಯಾಗಿ ತರಬೇತಿ ನೀಡಿದರೆ, ಹಣ, ಸೌಲಭ್ಯ ನೀಡಿದರೆ ಭಾರತದ ಕ್ರೀಡಾಪಟುಗಳು ಜಾಗತಿಕ ವೇದಿಕೆಯಲ್ಲಿ ಮಿಂಚಬಲ್ಲರು ಎನ್ನುವುದು ಪ್ಯಾರಾ ಒಲಂಪಿಕ್ಸ್ ಕ್ರೀಡಾಪಟುಗಳು ಸಾಕ್ಷಿ ಸಮೇತ ಸಾಬೀತು ಮಾಡಿದ್ದಾರೆ. ಇದು ಮಾಮೂಲಿ ಕ್ರೀಡಾಪಟುಗಳಿಗೂ ಸ್ಪೂರ್ತಿ ನೀಡುವ ಸಂಗತಿ. ರಿಯೋ ಒಲಂಪಿಕ್ಸ್ ಪ್ಯಾರಾ ಒಲಂಪಿಕ್ಸ್ ವರೆಗೂ ಈ ವೇದಿಕೆಗಳಲ್ಲಿ ಭಾರತೀಯ ಸಾಧನೆ ತೀರಾ ಕಳಪೆಯಾಗಿತ್ತು. ಭಾರತೀಯರಿಗೆ ಇಂತಹ ವಿಶ್ವ ಕೂಟಗಳಲ್ಲಿ ಅದ್ಭುತ ಸಾಧನೆ ತೋರುವ ಸಾಮರ್ಥ್ಯವೇ ಇಲ್ಲವೇನೋ ಎಂಬ ಕೀಳರಿಮೆಯೂ ಉಂಟಾಗಿತ್ತು. ಟೋಕಿಯೋದಿಂದೀಚೆಗೆ ಮನೋಭಾವದಲ್ಲೇ ದೊಡ್ಡ ಬದಲಾವಣೆಯಾಗಿದೆ. ಭಾರತೀಯರು ಯಾವುದೇ ಕ್ರೀಡೆಗಳಲ್ಲಿ ಅಮೇರಿಕ, ಚೀನಕ್ಕೆ ಸರಿಸಾಟಿ ನಿಲ್ಲಬಲ್ಲರು ಎಂಬ ಆತ್ಮ ವಿಶ್ವಾಸ ಬಂದಿದೆ.
ಕೇಂದ್ರ ಸರಕಾರ ಮತ್ತು ವಿವಿಧ ರಾಜ್ಯಗಳು ತಮ್ಮದೇ ರೀತಿಯಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿವೆ. ಹಿಂದೆ ಪದಕ ಗೆದ್ದ ಮೇಲೆ ಹಣ ನೀಡುವ ಪದ್ಧತಿಯಿತ್ತು. ಈಗ ಸರಕಾರಗಳು ಪೂರ್ವದಲ್ಲೇ ಅತ್ಯುನ್ನತ ತರಬೇತಿ, ಸವಲತ್ತುಗಳಿಗಾಗಿ ಹಣ ವೆಚ್ಚ ಮಾಡುತ್ತಿವೆ. ಅದರ ಸ್ಪಷ್ಟ ಫಲಿತಾಂಶವೇ ಭಾರತೀಯರ ಪ್ಯಾರಾ ಒಲಂಪಿಕ್ಸ್ ಸಾಧನೆಯಲ್ಲಿ ಕಂಡುಬಂದಿದೆ. ಕೇಂದ್ರ ಸರಕಾರ ಟಾರ್ಗೆಟ್ ಒಲಂಪಿಕ್ಸ್ ಪೋಡಿಯಂ ಯೋಜನೆಯಡಿ ಹಲವು ವರ್ಷಗಳಿಂದ ತರಬೇತಿ ನೀಡುತ್ತಿದೆ. ಅತ್ಯುನ್ನತ ವಿದೇಶಿ ಕೋಚ್ ಗಳನ್ನು ಅತ್ಲೀಟ್ ಗಳಿಗೆ ಒದಗಿಸಿದೆ. ಹಲವಾರು ಸವಲತ್ತುಗಳನ್ನು ನೀಡಿದೆ. ಅದರ ಪರಿಣಾಮ ಪದಕ ಸಾಧನೆಯಲ್ಲಿ ವ್ಯಕ್ತವಾಗಿದೆ. ಇದೇ ಮಾದರಿಯನ್ನು ಹಲವು ರಾಜ್ಯ ಸರಕಾರಗಳೂ ಅನುಸರಿಸಿವೆ. ಈ ಬಾರಿ ಕೆಲವು ಕ್ರೀಡೆಗಳಲ್ಲಿ ಭಾರತ ಗೆದ್ದಿಲ್ಲ. ಇತ್ತ ಗಮನ ಹರಿಸಿದರೆ ಮುಂದಿನ ಕೂಟದಲ್ಲಿ ಭಾರತೀಯರ ಸಾಧನೆ ಅತ್ಯುತ್ತಮ ಗೊಳ್ಳುವುದರಲ್ಲಿ ಯಾವುದೇ ಅನುಮಾನವೂ ಇಲ್ಲ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೯-೦೯-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ