"ಮೋರಿಯೊಳಗೊಂದು ದಿನ‌'... (ಕೋಮುವಾದದ‌ ಕರಿ ನೆರಳು).. ಂಒ

"ಮೋರಿಯೊಳಗೊಂದು ದಿನ‌'... (ಕೋಮುವಾದದ‌ ಕರಿ ನೆರಳು).. ಂಒ

ಒಂದು ಕಡೆ ಮೈ ನಡುಗುವ ಚಳಿ, ಇನ್ನೊಂದು ಕಡೆ ಲೋಕವನ್ನೇ ಇಲ್ಲವಾಗಿಸುವ ಕತ್ತಲು. ತನ್ನಲ್ಲಿ ಬರುತ್ತಿದ್ದ ಕೋಪವನ್ನು ಮನಸ್ಸಿನಲ್ಲೇ ಸುರಿದುಕೊಂಡು ಹುಮ್ಮಳಿಸಿ ಕುಳಿತಿದ್ದ `ರಿಹಾನ್'. ಬೇಸರದ ಎಲ್ಲಾ ಛಾಯೆಗಳು ಅವನನ್ನು ಸುತ್ತುವರಿದಿತ್ತು. ಆದರೂ ಅತ್ತಿಂದಿತ್ತ ಸುತ್ತುತ್ತಿರುವ ವಾಹನಗಳ ಪ್ರಕಾಶಭರಿತ ಬೆಳಕುಗಳು ಅವನ ಮನಸ್ಸಿಗೆ ಒಂದು ರೀತಿಯ ಹಿತವನ್ನೇ ತಂದಿತ್ತು. ಸಂಕಟಗಳಿಂದ ಕೂಡಿದ ಆ ಭಾವನೆಗಳಿಗೆ ಆ ಸಮಯ ಎದುರಾಗಿ ನಿಂತಿತ್ತು. ತಾನು ಇದ್ದ ಗಳಿಗೆ ಸರಿಯಾಗಿಲ್ಲವೋ ಏನೋ ಎಂಬಂತೆ ವರ್ಣರಂಜಿತ ಚೀತ್ಕಾರಗಳೂ ಆಗ ದುಃಖದ ಕರಿಛಾಯೆಯನ್ನು ಅವನಲ್ಲಿ ಬಿಂಬಿಸುತಿತ್ತು. ರಸ್ತೆಯಲ್ಲಿ ಸುತ್ತಿ,ಬಳಲಿ ಬೆಂಡಾಗಿದ್ದ ತನಗೆ ಏಕಾತೀತವಾಗೆ ಬೀಸುತ್ತಿರುವ ಗಾಳಿ ಒಂದು ರೀತಿಯ ಮುದವನ್ನೇ ನೀಡಿದರೂ ದಿಕ್ಕೇ ಕಾಣದೇ, ಜನರ ಪರಿಚಯವೂ ಇಲ್ಲದ ಕತ್ತಲಿನ ಪ್ರದೇಶದಲ್ಲಿ ಭಯ-ಭಾತ್ರತ್ವಗಳು ಮುಗಿಲಿಗೇರಿ ಅವನಲ್ಲಿ ಒಂದು ಕರಿ ನೆರಳನ್ನೇ ಮೂಡಿಸಿತ್ತು.
 
ತನಗೆ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲು ಅಲ್ಲಿ ಯಾರೂ ಇಲ್ಲದಂತಾಯಿತು. ಎಲ್ಲರೂ ತಮ್ಮತಮ್ಮ ಮನೆಗಳೆಡೆಗೆ ಧಾವಿಸುತ್ತಿದ್ದರು. ಯಾವುದನ್ನೂ ಲೆಕ್ಕಿಸದೇ ರಿಹಾನ್ ಜೀವನವನ್ನೇ ಆಳವಾಗಿ ನೋಡುತ್ತಿದ್ದ. ಕಡುಬಡವಿಗಳಾದ, ದೈವಾತೀತವಾದ ಬಡಜೀವಗಳಿಂದಲೇ ಹೊಟ್ಟೆಹೊರೆಯುವ, ಮೈಯನ್ನು ಮುಚ್ಚುವ  ಕೆಲವು ಜೀವಗಳ ಹಂಬಲವೂ ಇರಬಹುದು, ಅಥವಾ ಎಲ್ಲೆಂದರಲ್ಲಿ ಚಲಿಸಿ ತನ್ನ ಯುಕ್ತಿಯನ್ನು ಪರೀಕ್ಷಿಸಿ ಭೆವರಿಳಿಸುವಂತೆ ಮಾಡುವ ದೈವೇಚ್ಹವೇ ಇರಬಹುದು ಅವನನ್ನು ಈ ಪರಿಸ್ಥಿತಿಗೆ ತಂದಿತ್ತು. ಒಟ್ಟಿನಲ್ಲಿ ಎಲ್ಲಾ ವಿಧಿಗಳಿಗೆ ಸಿಲುಕಿ ತಾನೂ ಈ ಸಂಧರ್ಭದಲ್ಲಿ ಯಾವ ದಿಕ್ಕಿಗೂ ಚಲಿಸಬಹುದಾದ ಗಾಳಿಪಟದಂತಾಗಿ ಹೋಗಿದ್ದ.
 
ತಾನಲ್ಲಿ ಕುಳಿತಿದ್ದರೆ ಜನವಾಹನ ಗಳೆಲ್ಲವೂ ತನ್ನನ್ನು ಕೇರು ಮಾಡದೇ ಹೋಗುತ್ತಿದ್ದವು. ಇಂತಹಾ ಹೀನ ಜೀವನವನ್ನು ನಡೆಸುವುದಕ್ಕಾಗಿ ಬದುಕಬೇಕಾ? ಎಂದು ತನ್ನ ಮನಸ್ಸಿನಲ್ಲೇ ಹೇಳಿಕೊಳ್ಳುತ್ತಿದ್ದ. ಕೈಯಲ್ಲಿ ಎರಡು ಹಳೆಯದಾದ ಬಟ್ಟೆಯ ಗಂಟುಗಳಿದ್ದವು. ತನ್ನ ಕುಟುಂಬದ ಎಲ್ಲಾ ದಾಹವನ್ನು ತೀರಿಸುವ ಸೊತ್ತಾಗಿತ್ತದು. ಕಣ್ಣಿನಿಂದ ಕಣ್ಣೀರ ಹನಿಗಳು ಬೇಸರದ ಮರೆಯಲ್ಲಿ ಭೂಮಿಗೆ ಬೀಳುತ್ತಿತ್ತು. ತನ್ನಂತ ಯುವಕರು ಯಾರೂ ಈ ರೀತಿಯ ಬದುಕನ್ನು ನಡೆಸಲಾರರು, ವಿಧಿ ತನ್ನನ್ನು ಹೇಗೆ ಆಡಿಸುತ್ತಿದೆ ಎಂದು ಪ್ರಶ್ನಿಸಿಕೊಂಡ. ಜೀವನದ ಬಗ್ಗೆ ಒಂದು ನಿಸ್ಸಾರವಾದ ಕೀಳರಿಮೆ  ಮನಸ್ಸಿನಲ್ಲಿ ಏಳುತ್ತಿತ್ತು. ತನ್ನ ಮನಸ್ಸಿನಲ್ಲಿ ಬರುತ್ತಿದ್ದ ನಿರುತ್ಸಾಹಿ, ಅಶಕ್ತ ಭಾವನೆಗಳು ತನ್ನ ಮನಸ್ಸಿಗೆ ಒಂದು ವೈರಾಗ್ಯದ ರೂಪವನ್ನೇ ತಾಳಿ ತನ್ನನ್ನು ಧೂಳೀಪಟ ಮಾಡುವಂತಿತ್ತು.
 
ಅದಾಗಳೇ ಹಿಂದಿನ ನೆನಪುಗಳೂ ತನ್ನನ್ನು ಕಾಡತೊಡಗಿದವು, ತಾನು ಜೀವನದಲ್ಲಿ ಕಂಡ ಸಂತೋಷ ಬಹಳ ಅಪರೂಪ. ಬಾಲ್ಯದಲ್ಲಿ ಎಷ್ಟು ಸುಂದರವಾಗಿದೆ ಈ ಪ್ರಪಂಚ! ಎಂದು ಅನಿಸಿದ್ದು, ಈಗ ಇದೇ ಪ್ರಪಂಚ ಇಷ್ಟು ನೀಚತನವನ್ನು ಅಡಗಿಸಿದೆಯಾ? ಎಂದು ಪ್ರಶ್ನಿಸುವಂತಾಯಿತು. ಇದೆಲ್ಲವೂ ತನ್ನ ಬಗೆಗಿನ ಒಂದು ಪರೀಕ್ಷೆ ಮಾತ್ರ ಎಂದು ಭಾವಿಸಿ ನೆಮ್ಮದಿ ಕಂಡುಕೊಳ್ಳುತ್ತಿದ್ದ. ನೋಡುವ ಜನರಿಗೆ ಅತ್ತಿಂದಿತ್ತ ಚಳಿಸುವ ವಾಹನಗಳ ಬೆಳಕುಶಬ್ದಗಳು ಮುದವನ್ನು ನೀಡುತ್ತಿದ್ದರೂ ತನ್ನ ಮನಸ್ಸಿನ ಉಸಿರೇ ಇಲ್ಲದ ಭಾವನೆಗಳು ಅದಕ್ಕೆ ಸ್ಪಂದಿಸದೇ ಕುಳಿತಿತ್ತು.
 
ಸಮಯ ಇನ್ನು ಮುನ್ನುಗ್ಗುತ್ತಲೇ ಇದೆ. ಸೂರ್ಯ ಅದಾಗಲೇ ಮರೆಯಾಗಿದ್ದಾನೆ. 'ರಿಹಾನ್' ತಮ್ಮ ಊರಿಗೆ ಹೋಗುವ ಬಸ್ ಗಾಗಿ ಕಾಯುತ್ತಿದ್ದಾನೆ. ಈ ರಾತ್ರಿಯಲ್ಲಿ ಅದೊಂದೇ ತಮ್ಮ ಊರಿಗೆ ಹೋಗುವ ಬಸ್. ಬಸ್ ನಿಲ್ದಾಣದಲ್ಲಿ ಅವನನ್ನು ಬಿಟ್ಟರೆ ಬೇರೆಲ್ಲವೂ ಭಣ-ಭಣಗುಟ್ಟುತ್ತಿದೆ.ಬಸ್ ಬರಲು ಇನ್ನೂ ಅರ್ಧ ತಾಸುಗಳ ಸಮಯವಿದೆ. ಹೊಟ್ಟೆ ಹಸುವಿನಿಂದ ತಳಮಳಗುಟ್ಟುತ್ತಿದೆ. ತನ್ನ ಜೀವನದ ಭಾರವನ್ನೆಲ್ಲಾ ಹೊತ್ತುಕೊಂಡ ಎರಡು ಬಟ್ಟೆಯ ಗಂಟುಗಳು ತನ್ನೊಂದಿಗೆ ಬೇಜಾರಾಗಿ ಕುಳಿತುಕೊಂಡವು.
 
 ಬೆಳಗ್ಗೆಯಿಂದ ಊರೂರು ಸುತ್ತಿದರೂ ಕೇವಲ ಎರಡೇ ಬಟ್ಟೆಗಳ ಮಾರಾಟವಾಗಿತ್ತು.ಅದೂ ಅನಿಸಿದಷ್ಟು ಬೆಲೆಯೂ ಸಿಗಲಿಲ್ಲ. ಇಷ್ಟೊಂದು ಬೆಲೆ ಕೊಟ್ಟು ನಿನ್ನೊಂದಿಗೆ ಕೊಳ್ಳಬೇಕಾಎಂಬಜನರ ಮಾತಿನ ವೈಖರಿಗಳು ತನ್ನನ್ನು ಗಪ್ಚುಪ್ ಎನ್ನಲು ಬಿಡಲಿಲ್ಲ.ಹಲವಾರು ಮಂದಿ ತನ್ನನ್ನು ಕರೆದು, ಬಟ್ಟೆಬರೆ ಗಳನ್ನು ನೋಡಿ ಕೊಳ್ಳದೇ ಕಳಿಸಿದಾಗ ಕೋಪ ಹುಮ್ಮಳಿಸಿ ಬರುತ್ತಿದ್ದರೂ, ತನ್ನ ಭಾಗ್ಯದ ಫಲ ಎಂದು ಮೌನಗೊಳ್ಳುತ್ತಿದ್ದೆ. ಪ್ರತೀ ಮನೆಯಲ್ಲಿ ಕರೆದಾಗ ನಗುಮುಖದೊಂದಿಗೆ ತೆರಳುತ್ತಿದ್ದ 'ರಿಹಾನ್' ಅವರು ಕೊಳ್ಳದೇ ಕಳಿಸಿದಾಗ ಮನಸ್ಸಿನಲ್ಲೇ ವ್ಯಥೆಪಡುತ್ತಿದ್ದ. ತನ್ನಯುಕ್ತಿಯನ್ನೂ, ಮಾತಿನ ಚತುರತೆಯನ್ನೂ ಕಳಚಿ ಬರೀಗೈಯಲ್ಲೇ ಕಳಿಸಿದಾಗ ಒಂದು ರೀತಿಯ ಕ್ರೋಧ ಅವನಿಗರಿವಿಲ್ಲದಂತೇ ಬಂದು ಬಿಡುತ್ತಿತ್ತು. ಅವನ ಪರಿಸ್ಥಿತಿಯನ್ನು ಅರ್ಥೈಸುವವರು ಯಾರೂ ಇರಲಿಲ್ಲ.
 
ತನ್ನ ತಂದೆಯ ಕೈಯ ನಂಟಸ್ಥಿಕೆಯನ್ನು ಬಳಸಿ, ಕಾರ್ಪಣ್ಯವನ್ನು ತೋರಿದ ಎರಡು ಹಳೆಯ ಬಟ್ಟೆಯ ಗಂಟುಗಳು ಅವನಿಗೆ ಉಡುಗೊರೆಯಾಗಿಯೇ ಬಂದಿತ್ತು. ತಂದೆ ದಿನನಿತ್ಯ ಮನೆಮನೆ ಗಳಿಗೆ ತೆರಳಿ ಬಟ್ಟೆಬರೆಗಳನ್ನು ಮಾರುತ್ತಾ ದಿನನಿತ್ಯದ ಖರ್ಚಿಗಾಗುವಷ್ಟು ಸಂಪಾದಿಸುತ್ತಿದ್ದ. ಅವನಿಗೆ ಹಲವು ಮನೆಯವರ ಪರಿಚಯವೂ ಇತ್ತು. ಉದ್ಯೋಗದಲ್ಲಿ ಬಹಳ ಚತುರರೆಯನ್ನು ಹೊಂದಿದ್ದ ಆಜೀವ ದೇವರ ಆಜ್ಣೆಗೆ ಮಣಿದು ಹಾಸಿಗೆಯನ್ನೇ ಹಿಡಿಯಬೇಕಾಗಿದ್ದರಿಂದ 'ರಿಹಾನ್' ತಂದೆಯ ಸ್ಥಾನದಲ್ಲಿ ಜಾಗ ಗಿಟ್ಟಿಸಿಕೊಂಡ. ತಂದೆಯ ಅನಾರೋಗ್ಯದ ಫಲವಾಗಿ ಅವರ ಕಸುಬನ್ನು ನೀನು ಮುಂದುವರೆಸಬೇಕು ಎಂದು ತಾಯಿ ಹೇಳಿದಾಗ ಇಲ್ಲ ಅಮ್ಮಾ, ನಾನು ಆ ಉದ್ಯೋಗ ಮಾಡಲ್ಲ, ಎಂದು ಹಟ ಹಿಡಿದಿದ್ದ. ಆದರೆ ಅವನಿಗಾಗಲೇ ತಿಳಿದಿತ್ತು. ತಾನು ಆ ಉದ್ಯೋಗ ಮಾಡದಿದ್ದರೆ ತಾವೆಲ್ಲಾ ಹಸಿವಿನಿಂದಲೇ ಇರಬೇಕಾಗುತ್ತದೆ. ಅದಕ್ಕಾಗಿಯೇ ತಾಯಿಯ ಮಾತನ್ನು ಪಾಲಿಸಿದ್ದ.
 
ತಂದೆಯಂತೆಯೇ ಚತುರನಾಗಿದ್ದ 'ರಿಹಾನ್' ಹೊಸ ಜೀವನಕ್ಕಾಗಿ ಹಲವಾರು ಕನಸನ್ನು ಕಂಡಿದ್ದ. ಅದಾಗಲೇ ಹತ್ತನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿಯೇ ತೇರ್ಗಡೆಯಾದಾಗ ಇಂಜಿನಿಯರ್ ಆಗಬೇಕೆಂಬ ಹಂಬಲ ಅವನಲ್ಲಿತ್ತು. ಅದಕ್ಕಾಗಿ ಬ್ಯಾಂಕ್ ಗಳನ್ನೇ ನಂಬಿ ಕುಳಿತಿದ್ದ. ತನ್ನ ಆಸೆಯ ಬಗ್ಗೆ ಎಲ್ಲರಲ್ಲಿಯೂ ಹೇಳಿದ್ದ. 'ನೋಡಪ್ಪಾ, ಬ್ಯಾಂಕ್ ಗಳು ಶೈಕ್ಷಣಿಕ ಸಾಲ ನೀಡುತ್ತವೆ. ಆದರೆ ನಮ್ಮ ದಿನನಿತ್ಯದ ಖರ್ಚನ್ನು ನಿಭಾಯಿಸುವವರಾರು? ನಿನ್ನ ಅಕ್ಕಂದಿರು'.. ಎಂದು ತಾಯಿ ಬಿಕ್ಕಳಿಸಲು ಶುರುಮಾಡಿದಾಗ ಅದರರ್ಥವನ್ನು ಅವನಾಗಲೇ ಮನಗಂಡಿದ್ದ. ಇಲ್ಲಮ್ಮಾ,ನಾನು ಇನ್ನು ಕಲಿಯುವುದಿಲ್ಲ.ತಂದೆಯ ಉದ್ಯೋಗದಲ್ಲಿಯೇ ಮುಂದುವರೆಯುತ್ತೇನೆ ಎಂದು ತನ್ನ ಕಲಿಕೆಯ ಆಸೆಗೆ ಅಂದೇ ಕೊಳ್ಳಿ ಹಾಕಿದ್ದ.
 
ತಾಯಿಯ ಮುಖದಲ್ಲಿ ಕಣ್ಣೀರಿನೊಂದಿಗೆ ಒಂದು ಪರಿತಾಪ ಅವನಿಗೆ ಅರಿವಾಗುತ್ತಿತ್ತು. ತನ್ನ ಅಕ್ಕಂದಿರ ಕರುಣೆಯ ಮಖಗಳು ಅವನನ್ನು ಕರಗುವಂತೆ ಮಾಡಿತ್ತು. ಅಕ್ಕಂದಿರ ಬಾಳಿಗಾಗಿ ಒಂದು ಒಳ್ಳೆಯ ಪ್ರಾರ್ಥನೆ ಅವನಲ್ಲಿತ್ತು. ತಾಯಿಯ ಬಾಗ್ಯದ ಕೂಸಾಗಿ ಮೊದಲನೆಯವಳಾಗಿ ಹುಟ್ಟಿದ 'ಹಾಜಿರಾ'ಳ ವಿಚ್ಚೇದನ ವಾಗಿ ಈಗ ಮನೆಯಲ್ಲೇ ಕುಳಿತುಕೊಂಡಿದ್ದಳು.ಮಗಳ ಮದುವೆಯನ್ನು ಮಾಡಲು ಅಶಕ್ತನಾಗಿದ್ದಾಗ ದೈವಲೀಲೆಯಾದಂತೆ ಸಿಕ್ಕಿದ ಓರ್ವನಿಗೆ ಹಾಜರಾಳನ್ನು ಮದುವೆಮಾಡಿಕೊಟ್ಟಿದ್ದರು. ವರದಕ್ಷಿಣೆ ಹಣ ಕೊಡಲು ಇನ್ನೂ ಬಾಕಿ ಇದ್ದರಿಂದ ಪತಿಯಿಂದ ಹಲವಿದ ಹಿಂಸೆಯನ್ನು ಅನುಭವಿಸಿದಳು. ಕೊನೆಗೆ ಅವನು ಅವಳನ್ನು ತ್ಯಜಿಸಿಬಿಟ್ಟ. ತನ್ನ ನೆನಪಿಗಾಗಿ ಒಂದು ಮಗುವನ್ನು ಕರುಣಿಸಿಬಿಟ್ಟ. ತಮ್ಮ ಒಂದು ಭಾರ ಮುಗಿಯಿತು ಎಂದು ಭಾವಿಸಿದ್ದ ಕುಟುಂಬ ಪುನಃ ಆ ಭಾರವನ್ನು ಮರಳಿ ಪಡೆದಿದ್ದರು. ಎರಡನೆಯವಳು 'ರಮ್ಲತ'. ಅವಳಿಗಾಗಲೇ ಮದುವೆಯ ವಯಸ್ಸು ಮೀರಿ ನಿಂತಿತ್ತು. ಮೂರನೆಯವಳು 'ತಾಹಿರಾ'. ಸುಂದರಳಾಗಿ ಮದುವೆಯ ವಯಸ್ಸಾಗಿತ್ತು.
 
ತಂದೆ ಅಬ್ದುಲ್ಲಾನಿಗೂ ಇದೇ ರೀತಿಯ ಜೀವನ ಎದುರಾಗಿತ್ತು. ಆದರೆ ಅವನಿಗೆ ಓದುವ ಆಸೆ ಇರಲಿಲ್ಲ. ಕೆಲವು ಕ್ಲಾಸು ಕಲಿತಿದ್ದರೆ ಇಷ್ಟೊತ್ತಿಗೆ ಒಳ್ಳೆಯ ಮರ್ಯಾದಸ್ಥ ಜೀವನವನ್ನು ನಡೆಸಬಹುದಿತ್ತು. ಕಲಿಕೆಯು ಕೇವಲ ಕಹಿ ಔಷಧಿ ಎಂದು ಭಾವಿಸಿದ್ದನೇ ಹೊರತು ಅದರೊಳಗೆ ಅಡಗಿರುವ ಔಷಧಿಯ ಗುಣವನ್ನು ಅರಿಯಲೇ ಇಲ್ಲ. ಶಾಲೆ ತ್ಯಜಿಸಿದವನೇ ತಂದೆಯೊಂದಿಗೆ ಕೂಲಿ ಕೆಲಸಕ್ಕೆ ಹಾಜರಾಗಿ ಬಿಟ್ಟಿದ್ದ. ಅಂದಿನ ಪರಿಸ್ಥಿತಿ ಇಂದಿಗಿಂತಲೂ ಶೋಚನೀಯ. ಸರಿಯಾಗಿ ಅನ್ನನೀರು ಯಾವ ಮನೆಯಲ್ಲಿಯೂ ದಕ್ಕುತ್ತಿರಲಿಲ್ಲ. ಹೀಗೆ ಅಬ್ದುಲ್ಲಾ ಕೊನೆಗೆ ಬಟ್ಟೆ ವ್ಯಾಪಾರಿಯಾಗಿ ಬದಲಾಗಿದ್ದ. ಬಟ್ಟೆ ಒಯ್ಯುವ ವ್ಯಾಪಾರಗಳಿಗೆ ಮೊದಮೊದಲು ಸ್ವಲ್ಪ ಬೇಡಿಕೆ ಇತ್ತಾದರೂ ಈ ಕಾಲದಲ್ಲಿ ತನ್ನ ವರ್ಚಸ್ಸನ್ನು ಸಂಪೂರ್ಣವಾಗಿ ಕಳೆದುಕೊಂಡಿತ್ತು.
 
'ರಿಹಾನ್' ಹುಟ್ಟಿದಾಗಲೇ ತಾಯಿಯ ಕಣ್ಣಿನಿಂದ ಆನಂದಬಾಷ್ಪವೊಂದು ಭೂಮಿಗೆ ಬಿತ್ತು. ತಮ್ಮ ಜವಬ್ದಾರಿಯ ಪೂರ್ತಿ ಹೊರೆಯ ಸಂಕೇತವಾಗಿ ಆ ಆನಂದಬಾಷ್ಪ  ಸಾರಿ ನಿಂತಿತ್ತು.ಓಜೀವ, ಹುಟ್ಟು ಕಣ್ಣೀರನ್ನೇ ಹೆಕ್ಕಿದೆಯಾ.. ಎಂದು ಆಜೀವ ಅದಾಗಲೇ ಅಂದಿರಬೇಕು. ಹೀಗೆ 'ರಿಹಾನ್' ಕುಟುಂಬದ ಜವಬ್ದಾರಿಯನ್ನು ಪೂರೈಸುವ ಏಕಾಂಗಿಯಾಗಿ ಬೆಳೆದುಬಿಟ್ಟ. ಓದಿದ ಎರಡಕ್ಷರವನ್ನು ಬಿಟ್ಟರೆ  ಉಳಿದೆಲ್ಲವೂ ದುಃಖದ ಛಾಯೆಗಲೇ ಅವನನ್ನು ಆವರಿಸಿಕೊಂಡಿತ್ತು. ಅಮ್ಮಾ,ನಾನು ಇಂಜಿನಿಯರ್ ಆಗ್ತೀನಿ.. ಎಂದು ಚಿಕ್ಕ ವಯಸ್ಸಿನಲ್ಲಿ ಹೇಳಿದಾಗ ಅಪಹಾಸ್ಯದ ನಗು ತಾಯಿಯ ಮುಖದಿಂದ ಬಂದಿತ್ತು. ಅದರ ಮರ್ಮ ಆಗ ಅವನಿಗೆ ಅರಿವಾಗಲೇ ಇಲ್ಲ.
 
ಬದುಕಿನ ಕಹಿಯುಂಡು ದೂರವಾಗಿದ್ದ ಹಾಜಿರಾಳ ನೆನಪುಗಳು ಒಂದೆಡೆಯಾದರೆ, ಉಳಿದಿಬ್ಬರ ಛಾಯೆ ಅವನ ಮನಸ್ಸಿನಲ್ಲಿ ಬರತೊಡಗಿತು. ಜೀವನವನ್ನು ಮೆಟ್ಟಿನಿಲ್ಲಬೇಕು, ಮೆಟ್ಟಿನಿಲ್ಲಬೇಕಾದರೆ ದುಡೀಬೇಕು ಎಂಬ ಛಲ ಅವನಲ್ಲಿ ಕಾಡಿತು. ನಮ್ಮಂತಹ ಬಡವರಿಗೆ ಯಾರಪ್ಪಾ ಒಳ್ಳೆ ಕೆಲಸ ಕೊಡುತ್ತಾರೆ? ನಮ್ಮ ಕೊರತೆಯ ಮೂತಿಗಳು ನಗು ಮುಖವನ್ನು ಹೇಗೆ ಚಿಮ್ಮೀತು'ಎಂಬ ಪ್ರಶ್ನೆಗಳು ಕೇಳಿಬಂದವು. ಒಟ್ಟಿನಲ್ಲಿ ಜೀವನವನ್ನು ಮರುಕಹುಟ್ಟಿಸುವಂತಹ ಭಾವನೆಗಳಿಗೆ `ರಿಹಾನ್' ಶರಣಾಗಿ ಹೋಗಿದ್ದ. ಅದಕ್ಕಾಗಿ ಕೂರಲೂ ಬಾರದು, ರಜೆ ಮಾಡಿ ಮಜಾ ಮಾಡಲೂ ಬಾರದು ಎಂಬಂತಿತ್ತು.
 
ಅವನು ಕುಳಿತ ಸ್ಟ್ಯಾಂಡಿನ ಹತ್ತಿರವೇ ಒಂದು ಮೋರಿಯಿತ್ತು.ಅದರ ಇಕ್ಕೆಲಗಳಿಗೆ ಸರಾಗವಾಗಿ ಚರಂಡಿ ವ್ಯವಸ್ಥೆ ಇತ್ತು.ಸಮಯ ಮುಂದುವರೆಯುತ್ತಲೇ ಇದೆ. ಇದ್ದಕ್ಕಿದ್ದಂತೆ ಹೊಸಲೋಕದಿಂದ ಎರಗಿ ಬಂದವನಂತೆ ಎಲ್ಲಾ ಚಿಂತೆಗಳು ಓಡಿಹೋಗಿ ಒಮ್ಮೆಲೇ ಎಚ್ಚರಗೊಂಡ.ಆ ಕತ್ತಲೆಯಲ್ಲಿ ತಾನು ಎಲ್ಲಿಗೆ ಮುಟ್ಟಿದ್ದೇನೆ? ಎಂದು ಅವನಿಗೆ ಅರಿವಾಗಲೇ ಇಲ್ಲ. ಒಂದೆರಡು ವಾಹನಗಳು ಬಿರುಗಾಳಿಯಂತೆ ಅತ್ತಿತ್ತ ಚಲಿಸುತ್ತಿದ್ದುದು ಬಿಟ್ಟರೆ ಬೇರೆ ಯಾವ ವಾಹನಗಳ ಸುಳಿವೂ ಕಾಣಲಿಲ್ಲ. ತಾನು ಹೋಗಬೇಕಾಗಿದ್ದ ಬಸ್ಸು ಇನ್ನೂ ಬಾರದೇ ಇರುವುದಕ್ಕಾಗಿ ಒಂದು ರೀತಿ ಆತಂಕಕ್ಕೊಳಗಾದ. ಸ್ವಲ್ಪ ಸಮಯದಲ್ಲೇ ಕೇಳಿಬಂದ ಪೋಲೀಸ್ ವಾಹನಗಳ ಸೈರನ್ ಶಬ್ದಗಳು ಯಾವುದೋ ಅಹಿತಕರ ಘಟನೆ ನಡೆದಿದೆ ಎಂಬುದಕ್ಕೆ ಸೂಚನೆ ನೀಡುವಂತಿತ್ತು.
 
 ಈಸಮಯ`ರಿಹಾನ್'ನನ್ನು ಬಿಟ್ಟು ಆ ಸ್ಥಳ ಏಕಾಂಗಿಯಾಗಿತ್ತು. ಕೇಳಿಬರುತ್ತಿರುವುದು ಪೋಲೀಸ್ ವಾಹನಗಳ ಸೈರನ್ ಶಬ್ದಗಳು ಮಾತ್ರವಾಗಿತ್ತು`ರಿಹಾನ್' ನಿಂತಲ್ಲಿಯೇ ಅಲುಗಲಾರಂಬಿಸಿದ.ಈ ಸಮಯದಲ್ಲಿ ಅವನು ಏನೂ ಅರಿಯದ ಮುಗ್ದ.ಸ್ವಲ್ಪದರಲ್ಲೇ ಸೆಕ್ಷನ್ ಶಬ್ದಗಳು ಕೇಳಿಬಂತು. ಕಫ್ರ್ಯೂ ಹೇರಿದಾಗ ಮತಿಭ್ರಮಣೆಯಾಯಿತು. ಒಂದು ತಾಸಿನಲ್ಲಿ ಎಂತಹಾ ಬದಲಾವಣೆ! ಎಂತಹವರೂ ಭ್ರಮಿತರಾಗುವಂತೆ ಮಾಡಿತ್ತು ಪರಿಸ್ಥಿತಿ. ಈಗಷ್ಟೇ ಓಡುತ್ತಿದ್ದ ಬಸ್ಸುಗಳು ಮಂಗರುಮಾಯ. ಅಷ್ಟರಲ್ಲಿಯೇ ಒಂದು ಭಯಂಕರ ಶಭ್ದ ತನ್ನನ್ನು ನಡುಗಿಸುವಂತೆ ಮಾಡಿತ್ತು. ಏನಿರಬಹುದು ಇದರ ಮರ್ಮ ಎಂದು ಕೇಳೋಣವೆಂದರೆ ಯಾರ ಸುಳಿವೂ ಇಲ್ಲ. ಕಾರು,ಬಸ್ಸುಗಳ ಓಡಾಟವೇ ನಿಂತುಹೋಗಿದೆ. ಈಗ ಇಡೀ ಊರಿನಲ್ಲಿ ಜೀವಂತವಾಗಿ ಉಳಿದಿರುವ ಒಂದು ಜೀವವಿದ್ದರೆ ಅದು`ರಿಹಾನ್'. ಅಮ್ಮಾ ಎಲ್ಲಾ ಕಷ್ಟಗಳು ತನ್ನನ್ನೇ ಹುಡುಕಿಕೊಂಡು ಬರಬೇಕಾ ? ಎಂಬ ಬಿಕ್ಕಳಿಕೆ ಶುರುವಾಯಿತು.
 
ಇಂತಹಾ ಪರಿಸ್ಥಿತಿಯಲ್ಲಿ ಎಂತಹಾ ಪ್ರಜ್ನೆ ಜನರನ್ನು ಎಚ್ಚರಿಸೀತು`ರಿಹಾನ್' ಅಪಾಯದ ಮುನ್ಸೂಚನೆಯಿಂದ ರೆಕ್ಕೆ ಕಿತ್ತ ಹಕ್ಕಿಯಂತಾಗಿದ್ದ. ತನ್ನ ಮನೆ, ತನ್ನ ನಿರೀಕ್ಷೆಯಲ್ಲಿಯೇ ನಿಂತಿರಬಹುದಾದ ತನ್ನ ತಾಯಿ, ತನ್ನ ತಂದೆ, ಆಕ್ಕಂದಿರು ? ತನ್ನನ್ನು ಕಾಣದೇ ಏನಾಗಿರಬಹುದು ಅವರ ಪರಿತಾಪ? ತನ್ನನ್ನು ಕಾಣದೇ ಎಲ್ಲರೊಂದಿಗೆ ತಾಯಿ ವಿಚಾರಿಸುತ್ತಿರಬಹುದೇ? ತಾನಿಲ್ಲದೇ ಅಕ್ಕಂದಿರು ಹೇಗೆ ಉಂಡಾರು ? ಹೇಗೆ ಮಲಗಿಯಾರು ? ಕಂದಮ್ಮನ ನಿರೀಕ್ಷೆಯಲ್ಲಿ ಹೇಗೆ ಧೈರ್ಯಗೆಟ್ಟಿರಬಹುದು ? ಎಂಬ ನಾನಾ ಪ್ರಶ್ನೆಗಳು ಉದ್ಬವಿಸಿತು.
 
ಸೈರನ್ ದ್ವನಿಗಳನ್ನು ಆರ್ಭಟಿಸುತ್ತಾ ಖಾಕಿ ಉಡುಪುದಾರರನ್ನು ಹೊತ್ತ ವಾಹನಗಳು ಇತ್ತಲೂ ಬರಲಾರಂಬಿಸಿತು. ತನ್ನನ್ನು ಕಂಡರೆ ಏನು ಮಾಡಿಯಾರು? ಕರುಣೆಯ ಕಣ್ಣೀರೇ ಇಲ್ಲದ ಆ ಕೈಗಳು ತನ್ನನ್ನು ಬಲಿತೆಗೆಯಬಹುದೇಅವರ ಗುಂಡಿಗೆ ನಾನು ಅನಾಥ ಕೋಳಿಯಂತೆ ಬಲಿಯಾಗಬಹುದೇ? ಅಥವಾ ನನ್ನನ್ನು ಹೊಡೆದು, ಬಟ್ಟೆಗಳನ್ನು ಚಿಂದಿಮಾಡಿ, ತನ್ನ ಆಸ್ಥಿಯಂತಿರುವ ಎರಡು ಗಂಟುಗಳನ್ನು ಎಸೆದು ನಿರ್ಜೀವವಾಗುವಂತೆ ಮಾಡಬಹುದೇ,ಅವರ ಹೊಡೆತಗಳನ್ನು ತಿಂದು ತಾನು ಕೈಕಾಲುಗಳನ್ನು ಕಳೆದುಕೊಂಡು ನಡೆಯಲೂ ತೀರದಂತೆ ಅಶಕ್ತನಾಗಬಹುದೇ? ಗತಿಯೇ ಇಲ್ಲದಂತೆ ನನ್ನ ದೇಹವನ್ನು ಚರಂಡಿಯಲ್ಲಿ ಎಸೆಯಬಹುದೇ,ಇಲ್ಲ.ಖಂಡಿತಾ ಇವರಿಂದ ಪಾರಾಗಲೇ ಬೇಕು. ಇಲ್ಲದಿದ್ದರೆ ನನ್ನನ್ನೇ ನಂಬಿರುವ ಕುಟುಂಬಸ್ಥರೆಲ್ಲ ಸಾವಿನ ಹಾದಿಯನ್ನೇ ಹಿಡಿಯಬೇಕಾದೀತೆಂಬ ವಿಚಾರ ಅವನಲ್ಲಿ ಬಂತು.
 
ನಿರಪರಾಧಿಯಾದ ತನ್ನ ಸೋದರ ಸಂಬಂಧಿಯೊಬ್ಬನನ್ನು ಇದೇ ರೀತಿ ಪೋಲೀಸರು ಯಾವುದೋ ನೆಪದಲ್ಲಿ ಕರೆದುಕೊಂಡುಹೋಗಿ ಅವನಿಗೆ ಚಿತ್ರೆ ಹಿಂಸೆನೀಡಿ ಅವನ ಕೈಕಾಲುಗಳನ್ನು ಮುರಿದಿದ್ದ ನೆನೆಪು ರಿಹಾನ್ ನ ಮನಸ್ಸಿನಿಂದ ಇನ್ನೂ ಮರೆಯಾಗಿರಲಿಲ್ಲ. ಊರಿನಲ್ಲಿ ಒಮ್ಮೆ ಕಳ್ಳತನವಾದಾಗ ಅಪರಾಧಿಯೆಂದು ಬಂಧಿಸಿ ಹಲವು ದಿನ ಚಿತ್ರೆ ಹಿಂಸೆ ನೀಡಿ ಕೊನೆಗೆ ನಿಜವಾದ ಅಪರಾಧಿಗಳು ಸಿಕ್ಕಿದಾಗ ಅವನನ್ನು ಬಿಡುಗಡೆಗೊಳಿಸಿ ಕೈ ತೋಡಿಕೊಂಡಿದ್ದರು. ತಾನು ಅಪರಾಧಿಯಲ್ಲ ಎಂದು ಯಾವ ರೀತಿ ಅಂಗಲಾಚಿದರೂ ಕೇಳಗೊಡದೇ ಬಂಧಿಸಿದ್ದರು. ಪೋಲೀಸರ ಹೊಡೆತದಿಂದ ಕ್ಷೀಣಿಸಿದ್ದ ಅವನ ಕಾಲುಗಳು ಇನ್ನೂ ನಡೆಯಲು ಸಾಧ್ಯವಾಗಿರಲಿಲ್ಲ.ಅವನ ಕುಟುಂಬದ ಪರಿಸ್ಥಿತಿ ರಿಹಾನ್ ನ ಮನಸ್ಸನ್ನು ತುಂಬಾ ನೋಯಿಸಿತ್ತು.
 
ಆಗ ಥಟ್ಟನೇ ನೆನಪಾದುದು ಹತ್ತಿರದಲ್ಲೇ ಇರುವ ನೀರು ಹರಿಯುವ ಮೋರಿ. ತನ್ನಲ್ಲಿದ್ದ ಎಲ್ಲಾ ಭಯಗಳನ್ನು ಅದುಮಿಟ್ಟುಕೊಂಡು ಒಳನುಗ್ಗಿದ `ರಿಹಾನ್' ಸ್ವಲ್ಪ ನಿಟ್ಟುಸಿರುಬಿಟ್ಟ.ಒಳಗೆ ನುಗ್ಗುವಾಗಲೇ ಜೇಡರ ಬಲೆಗಳು ಅಂಟಿಕೊಂಡವು. ಆಗಲೇ ಮನದಟ್ಟಾಯಿತು ಅವನಿಗೆ ಇದು ಯಾರೂ ಕಾಲಿಡದ ಜಾಗವೆಂದು. ಒಳಗೆ ಕುಳಿತುಕೊಳ್ಳುವಷ್ಟು ಜಾಗವಿದೆ. ಇಬ್ಬರು, ಮೂವರು ಸರಾಗವಾಗಿ ಮಲಗಬಹುದು. ಅದರೊಳಗೆ  ಏನಿದೆ ಎಂದು ನೋಡೋಣವೆಂದರೆ ಪೂರ್ತಿ ಕತ್ತಲು. ತಾನಾಗಿ ಎಲ್ಲಾ ಕಡೆ ಮುಟ್ಟಿನೋಡೋಣವೆಂದರೆ ಭಯ. ಬಹುಶ: ಬೆಕ್ಕುಗಳು ಕೂಗಿ ರಂಪ ಮಾಡಬಹುದೇ? ನಾಯಿಗಳು ಬೊಬ್ಬಿಡುತ್ತಾ ಮೇಲೆರಗಬಹುದೇ? ಹಾವುಗಳು ಹೆಡೆ ಎತ್ತಿ ಕಚ್ಚಬಹುದೇ? ಅಥವಾ ಪ್ರೇತಗಳಿದ್ದರೆ ತನ್ನನ್ನು ಕ್ರೂರಿಗಳಂತೆ ಹಿಂಸಿಸಬಹುದೇ? ಅದಕ್ಕೆ ಅವನ ಶರೀರ ಆಸ್ಪದ ನೀಡಲಿಲ್ಲ. ಮಲಗುವ ಯಾವುದೇ ಯೋಚನೆಯೂ ಅವನಲ್ಲಿ ಮೂಡಲಿಲ್ಲ.
 
`ರಿಹಾನ್' ಕಾಲುಗಳನ್ನು ಮಡಚಿ ಮೋರಿಯೊಳಗೆ ಬಗ್ಗಿ ಕುಳಿತ. ಅದರೊಳಗೆ ಏನೂ ಕಾಣದಂತಹ ಕತ್ತಲು. ಅವನಲ್ಲಿದ್ದ ಯೋಚನೆಯೊಂದೇ. ಪೋಲೀಸರಿಂದ ತನ್ನನ್ನು ರಕ್ಷಿಸಬೇಕು. ಅದಕ್ಕಾಗಿ ಈ ಪರದಾಟ. ಬಹುಷ ಚಳಿಗಾಲವಾದದ್ದು ಅವನ ಪುನ್ಯವೇ ಹೌದು. ಮಳೆಗಾಲವಾಗಿದ್ದರೆ ಆ ಮೋರಿಯೊಳಗೆ ನೀರು ಹರಿಯುತ್ತಿತ್ತು.ಆ ನೀರಿನಲ್ಲಿ ತಾನೂ ಕೊಚ್ಚಿ ಹೋಗುತ್ತಿದ್ದ. ಅದರೊಳಗೆ ಯಾರು ನುಗ್ಗಿದರೂ ಸಂಶಯವೇ ಬರಲಾರದು. ಅಲ್ಲಿಯ ಪ್ರಪಂಚವೇ ಬೇರೆ. ಒಂದು ರೀತಿಯ ಸ್ಮಶಾನವೇ ಹೌದು. ಈಗ ಅದೇ ಸ್ಮಶಾನ ತನಗೆ ಬೆಂಗಾವಲಾಗಿ ನಿಂತಿದೆ. ಸುತ್ತಲೂ ಕತ್ತಲೆ. ವಸ್ತುಗಳ ಪರಿಚಯವೂ ಇಲ್ಲ. ಮೋರಿಯ ಮೇಲೆ ಓಡಾಡುವ ವಾಹನಗಳ ಶಬ್ದವೂ ಕೇಳದು. ಸ್ವಲ್ಪ ಬೆಳಕು ತಂದು ಏನಿದೆಯೆಂದು ನೋಡಲು ಬೆಳಕಿನ ಯಾವುದೇ ಆಕರ ತನ್ನಲ್ಲಿಲ್ಲ. 'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದೂ ನೀ ಜೀವಂತವಾಗಿರು' ಎಂಬ ಒಲುಮೆಯ ನುಡಿಗಳು ಎದ್ದು ಬಂದು ತನ್ನ ಬೆನ್ನು ತಟ್ಟುತ್ತಿತ್ತು.
 
ಅಲ್ಲಿ ಬಂದು ಕುಳಿತರೂ ಮತ್ತೆ ಮನೆಯದೇ ನೆನಪು. ತಾಯಿ ನಿದ್ರೆ ಕಳೆದು ಊರಿನಲ್ಲೆಲ್ಲಾ ತನಗಾಗಿ ಹುಡುಕಾಡಬಹುದೇ? ತನ್ನ ಅಕ್ಕಂದಿರು ಏನು ಮಾಡಿಯಾರು,ಅದೇರಾಗ,ಅದೇತಾಳ. ಅದನ್ನೆಲ್ಲಾ ನೆನಪಿಸಿಕೊಂಡು ಒಂದು ಹನಿ ನೀರನ್ನೂ ಬೀಳಗೊಡದೇ ಎದೆಯನ್ನು ಗಟ್ಟಿಯಾಗಿಸಿದ. ಉಣ್ಣಲು ಹಿಟ್ಟಿಲ್ಲದಿದ್ದರೂ ಸಂತೋಷಕ್ಕೇನೂ ಕೊರತೆ ಇರಲಿಲ್ಲ. ಮುದ್ದುಮಾಡುವ ತಾಯಿ, ನಲುಮೆಯ ಮಾತನ್ನಾಡುವ ಅಕ್ಕಂದಿರು, ಸಮಾಧಾನದ ಹಿತನುಡಿ ನೀಡುವ ತಂದೆ , ಎತ್ತಿ ಮುದ್ದಾಡುವ ಅಕ್ಕನ ಚಿಕ್ಕ ಕಂದ ಎಲ್ಲರೂ ಉಲ್ಲಾಸವನ್ನು ದಿನನಿತ್ಯ ಹಂಚುತ್ತಿದ್ದರು.ಆ ಸಂತೋಷದಲ್ಲೇ ಮನೆಯೊಳಗಿರುವ ಕೊರತೆಗಳೂ ಮಾಯವಾಗುತ್ತಿದ್ದವು. ಎಲ್ಲವೂ ಪುಟಗಳಂತೆ ತೆರೆದುಕೊಂಡವು.
 
ಇತ್ತ ಹೊರಬರಲೂಬಾರದು, ಅತ್ತ ಮೋರಿಯೊಳಗೆ ಕೂರಲೂಬಾರದು ಎಂಬಂತಾಗಿಹೋಗಿತ್ತು. ಹೊರಗಿನ ಬೆಳಕಿನ ಪ್ರಪಂಚಕ್ಕಿಂತ ಕತ್ತಲೆಯ ಪ್ರಪಂಚವೇ ವಾಸಿ ಎಂದು ಅವನ ಮನ ನುಡಿಯುತ್ತಿತ್ತು. ಹೇಗೋ ರಾತ್ರಿಯೆಂಬುದು ವರ್ಷವೇ ಉರಿಳಿದಂತೆ ಭಾಸವಾಯಿತು. ಅವನಿಗೆ ನಿದ್ದೆ ಎಂಬುವುದು ತಟ್ಟಲೇ ಇಲ್ಲ.ನಿದ್ರೆಯೆಂಬ ಶಬ್ದ ತನ್ನ ದೇಹದಿಂದಲೇ ಮರೆಯಾದಂತಿತ್ತು.ಆ ಮೋರಿಯೊಳಗೆ ಬೆಳಗಿನ ಜಾವವೂ ಸರಿಯಾಗಿ ಗೋಚರಿಸುತ್ತಿರಲಿಲ್ಲ. ಅಲ್ಪಸ್ವಲ್ಪ ಬೆಳಕು ಮಾತ್ರ ಮೋರಿಯೊಳಗೆ ಹಾಯುತ್ತಿತ್ತು. ಕೈಗಳು ತನ್ನ ಆಸ್ತಿಯಾದ ಎರಡು ಗಂಟುಗಳನ್ನು ಬಲವಾಗಿ ಹಿಡಿದಿದ್ದವು. ಮೋರಿಯೊಳಗಿನಿಂದ ಹೊರಬರುವಾಗಲೇ ತನ್ನ ಕಾಲ ಬುಡದಿಂದ ಒಂದು ಹೆಗ್ಗಣ ಯಾರದೋ ಹೆದರಿಕೆಯಿಂದ ಹೊರದಬ್ಬಿ ಬಂತು. ಒಮ್ಮೆಲೇ ಹೆದರಿಕೊಂಡರೂ ತೋರಗೊಡಲಿಲ್ಲ.
 
ಅಲ್ಲಿಂದ ಎದ್ದು ಬಂದವ ಮೆಲ್ಲನೆ ಮೋರಿಯ ಮೇಲೆ ಕಣ್ಣಾಯಿಸಿದ. ಬಹುಷ ಯಾರೂ ಕಾಣಲಿಲ್ಲ.ಅವನ ಕಣ್ಣ ತುಂಬಾ ಆತಂಕದ ನೋಟವಿತ್ತು.ಮುಖ ಭೀತಿಯಿಂದ ಬಿಳುಚಿಕೊಂಡಿತ್ತು. ರಸ್ತೆಯೆಡೆಗೆ ಬಂದು ನೋಡಿದರೆ ಯಾರದೂ ಸುಳಿವಿರಲಿಲ್ಲ. ಹೇಗಿದೆ ಪರಿಸ್ಥಿತಿ ಎಂದು ನೋಡೋಣವೆಂದರೆ ಯಾರೂ ಕಾಣುತ್ತಿಲ್ಲ. ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಬಂದೆ. ಎರಡುಮೂರು ಮನೆಗಳು ಯಾರದೂ ಸುಳಿವಿಲ್ಲದಂತೆ ಮುಚ್ಚಿಕೊಂಡಿದ್ದವು. ಅಲ್ಲಿ ಯಾರೊಂದಿಗಾದರೂ ವಿಚಾರಿಸೋಣವೆಂದು ಅನಿಸುವಷ್ಟರಲ್ಲಿಯೇ ಒಂದು ಮನೆಯಿಂದ ಕೈಯೊಂದು ತನ್ನತ್ತಲೇ ಬೀಸುತ್ತಿತ್ತು.
 
`ರಿಹಾನ್'ನ ನೋಟಗಳು ಆಕಡೆ ವಾಲಿದವು. ಎದುರು ಮನೆಯ ಕಿಟಕಿಯಿಂದ ಕೈಯೊಂದು ತನ್ನತ್ತಲೇ ಬೀಸಿ ಕರೆಯುತ್ತಿತ್ತು.ಏನೋ ಆಲೋಚಿಸಿ ಆಮನೆಕಡೆ ನಡೆದ. ಆಗ ಸುಮಾರು ಬೆಳಗ್ಗಿನ ಜಾವ7 ಗಂಟೆಯಾಗಿರಬಹುದು. ಎದುರು ಮನೆಯಿಂದ ಬಾಗಿಲು ತೆರೆದು ಆಜೀವ ತನ್ನನ್ನೇ ನಿರೀಕ್ಷಿಸುತ್ತಿತ್ತು.ಆ ಮುದಿ ಹೆಣ್ಣು ಜೀವ ಕರೆದಾಗ ಅವರ ಕರೆಗೆ ಓಗೊಟ್ಟು `ರಿಹಾನ್' ಒಳಹೊಕ್ಕ. ನಿನ್ನ ಹೆಸರೇನು? ನೀನು ಯಾವ ಊರಿನವ? ಇಷ್ಟು ಮುಂಜಾನೆ ಎಲ್ಲಿಂದ ಎದ್ದು ಬಂದೆ? ಎಂದು ಆ ಮುದುಕಿ ವಿಚಾರಿಸಿದಳು. ನೋಡಾಪ್ಪಾ, ನೀನು ಹೊರ ಹೋಗಬೇಡ. ಇಲ್ಲಿ ಕರ್ಫೂ ಹೇರಿದ್ದಾರೆ. ನಿನ್ನೆ ಪೋಲೀಸರ ಗುಂಡಿಗೆ ಒಬ್ಬ ಬಲಿಯಾಗಿದ್ದಾನೆ. ಯಾರೋ ದುಷ್ಕರ್ಮಿಗಳು ಅನ್ಯ ಧರ್ಮೀಯನೊಬ್ಬನನ್ನು ಕೊಂದು ಪರಾರಿಯಾಗಿದ್ದಾರೆ. ಕೋಮುಗಲಭೆಯಾಗುವ ಸಾಧ್ಯತೆ ಇದೆ. ಅದನ್ನು ತಡೆಯಲು ಕರ್ಫೂ ಹೇರಿದ್ದಾರೆ. ಹೊರಗಡೆ ಪೋಲೀಸ್ ಪಹರೆಯವರು ಸಾಗುತ್ತಿದ್ದಾರೆ. ಎಂದು ತನ್ನ ಕೈಗೆ ಚಹಾದ ಗ್ಲಾಸನ್ನಿತ್ತು ಮುದುಕಿ 'ಲಕ್ಷ್ಮೀ' ನುಡಿದಾಗಲೇ ಪರಿಸ್ಥಿತಿಯ ಸತ್ಯಾಂಶ ಅವನಿಗೆ ಅರಿವಾಗಿದ್ದು. ತನ್ನ ಮನ ಒಳಗೊಳಗೇ ಥ್ರಿಲ್ ಎಂದಿತು.
 
ಆಸೆಯೆಂದರೆ ತನ್ನ ಮನೆಯನ್ನೊಮ್ಮೆ ಮುಟ್ಟಬೇಕು. ಎಂದಿನಂತೆ ಬಟ್ಟೆ ವ್ಯಾಪಾರ ಮಾಡಬೇಕು. ತಾಯಿತಂದೆ ಅಕ್ಕಂದಿರೊಂದಿಗೆ ಒಟ್ಟಿಗೆ ಉಣ್ಣಬೇಕು. ದಯವಿಟ್ಟು ತನಗೊಂದು ಅವಕಾಶವನ್ನು ಕೊಡಿ. ಎಂದು ಯಾರನ್ನು ಕೇಳುವುದು,ಎಂಬ ವಿಚಾರ ಬರತೊಡಗಿತು.ಅವನ ಪರಿತಾಪವನ್ನು ಕಂಡು ಆ ಮುದುಕಿಗೆ ಅದಾಗಲೇ ಹೊಳೆದಿರಬೇಕು. ಅದಕ್ಕಾಗಿ ಅವನನ್ನು ಎಚ್ಚರಿಸುವ ಪ್ರಜ್ನೆ ಮಾಡಿದಳು. ನೋಡಪ್ಪಾ, ಜೀವವಿದ್ದರೆಮುಂದೆಯಾದರೂ ಸಂಪಾದಿಸಬಹುದು. ನೀನಿನ್ನೂ ಬಾಲಕ.ಹೊರ ನಡೆದರೆ ಅಪಾಯ ತಪ್ಪಿದ್ದಲ್ಲ.ಈ ಪರಿಸ್ಥಿತಿ ಸರಿಯಾಗುವವರೆಗೆ ಇಲ್ಲಿಯೇ ಇರು ಎಂದು ತನ್ನಿಬ್ಬರು ಮಕ್ಕಳನ್ನು ನನಗೆ ಪರಿಚಯಿಸಿದಳು.
 
ನಮಗೆ ನಾಲ್ಕು ಮಕ್ಕಳು. ನಾನೇ ಕಿರಿಯವ. ಉಳಿದ ಮೂವರು ಅಕ್ಕಂದಿರು. ಒಬ್ಬಳಿಗೆ ಮದುವೆಯಾಗಿ ಮನೆಯಲ್ಲಿಯೇ ಇದ್ದಾಳೆ. ಇನ್ನಿಬ್ಬರು ಮದುವೆಯ ಪ್ರಾಯದಲ್ಲಿದ್ದಾರೆ. ನನ್ನ ತಂದೆ ಖಾಯಿಲೆಯಿಂದ ಬಳಲುತ್ತಿದ್ದಾರೆ. ತಾಯಿ ಮನೆಗೆಲಸ ಮಾಡುತ್ತಾಳೆ. ಅವರಿಗೆಲ್ಲಾ ನಾನೇ ಆಸರೆ. ನನ್ನ ಸಂಪಾದನೆ ಇಲ್ಲದೇ ಅವರ ಹೊಟ್ಟೆಗೆ ಏನೂ ಇಲ್ಲ. ತಮ್ಮ ಆಸ್ಥಿಯೆಂದರೆ ಇವೆರಡೇ, ಎಂದು ತನ್ನ ಕೈಲಿದ್ದ ಎರಡು ಬಟ್ಟೆಯ ಗಂಟುಗಳನ್ನು ಅವಳಿಗೆ ತೋರಿಸಿ ತಮ್ಮ ಭಾಗ್ಯದ ಫಲವನ್ನು ಅತೀ ನೋವಿನಿಂದ ನುಡಿದ `ರಿಹಾನ್'. ಅವನ ಒಂದೊಂದು ಮಾತುಗಳೂ ನೋವಿನ ಕಹಿ ಸತ್ಯವನ್ನು ನುಡಿಯುತ್ತಿತ್ತು. ಆ ಮಾತಿಗೆ 'ಲಕ್ಷೀ' ಮೌನವಾದಳು. ಅವನ ಮಾತುಗಳು ಜೀವನದ ಅಶಕ್ತತೆಯನ್ನು ಸಾರಿ ನಿಂತಿತ್ತು. ಅವನ ಜೀವನದ ನೋವಿನಲ್ಲಿ ತಾನೂ ಪಾಲುದಾರನಾಗಲು ಬಯಸಿದ್ದಳು. ಮಾನವೀಯತೆಯ ಮನೋಹರತೆ ಅವಳನ್ನು ತುಂಬಾ ಆವರಿಸಿತ್ತು.
 
ಈ ಪ್ರಪಂಚದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವುದಾದರೂ ಹೇಗೆ? ಯಾರೋ ಮಾಡುವ ತಪ್ಪಿನಿಂದಾಗಿ ಬಡವರು, ಕೂಲಿಗಳು ಜೀವನ ನಡೆಸದಂತೆ ಮಾಡುತ್ತಾರೆ.ಈ ಭ್ರಷ್ಟಾಚಾರವನ್ನು ನಿಲ್ಲಿಸುವವರಾರು? ನಮ್ಮ ಹೊಟ್ಟೆಯನ್ನು ತಣಿಸುವವರಾರು?ಎಂಬ ಪ್ರಶ್ನಾರ್ಥಕವಾದ ನೋವು ಅವನನ್ನು ತುಂಬಾ ಸಂಕಟಕ್ಕೀಡು ಮಾಡಿತು.ಈ ಪ್ರಪಂಚ ಎಷ್ಟೊಂದು ಕೊಳಚೆ? ಶಾಂತಿನೆಮ್ಮದಿಯಿಂದ ಯಾರನ್ನೂ ಬದುಕಲು ಬಿಡುವುದಿಲ್ಲ. ಎಂತಹಾ ಪ್ರಪಂಚವಯ್ಯಾ? ಎನ್ನುವಂತಾಯಿತು. ಇತ್ತೀಚಿನ ಕೋಮುಗಲಭೆಗಳು ಅಷ್ಟೊಂದು ಭೀಭತ್ಸ್ಯವಾಗಿದ್ದವು. ನನ್ನನ್ನು ಕಾಣದೇ ಮನೆಯವರ ಪಾಡು ಎಂತಾದೀತು? ಎಂಬ ಚಿಂತೆ ಅವನನ್ನು ಮುತ್ತಿಕೊಂಡಿತು.
 
ನನ್ನ ತಾಯಿ ನನ್ನ ಬರುವನ್ನು ಕಾಣದೇ ಕಂಗಾಲಾಗಿರಬಹುದೇ? ಎಲ್ಲೆಂದರಲ್ಲಿ ತನ್ನನ್ನು ಹುಡುಕುತ್ತಿರಬಹುದೇ? ಅಥವಾ ಇದ್ದ ಒಬ್ಬ ಮಗನೂ ಪರಾರಿಯಾದ ಎಂದು ಎದೆಯೊಡೆದುಕೊಂಡು ಆಳುತ್ತಿರಬಹುದೇ,ಅದರ ಕೊರಗಿನಲ್ಲೇ ನನ್ನ ಅಸ್ವಸ್ಥ ತಂದೆ ಕೊನೆಯುಸಿರೆಳೆಯಬಹುದೇ? ತಮ್ಮ ಜೀವನವನ್ನೇ ಎದುರು ನೋಡದ ಅಕ್ಕಂದಿರು ಏನು ಮಾಡಿಯಾರು? ಮದುವೆಯ ಭಾಗ್ಯವೇ ಇಲ್ಲದೇ ಜೀವನವಿಡೀ ಅವಿವಾಹಿತರಾಗಿಯೇ ಉಳಿಯಬಹುದೇ? ಇಲ್ಲ.ಖಂಡಿತಾ ಹಾಗಾಗಾಬಾರದು. ಎಂದು ಕುಟುಂಬವನ್ನು ಸೇರಲು ಹವನಿಸುತ್ತಿದ್ದ `ರಿಹಾನ್'.
 
ಈಗ ಅವನ ಮನದ ತುಂಬಾ ದುಃಖದ ಛಾಯೆಯಿದೆ. ಮನೆಯ ನಾನಾ ವಿಧದ ಚಿತ್ರಣಗಳು ಅವನಲ್ಲಿ ಬರತೊಡಗಿದವು. ಆ ದಿನ ಪೂರ್ತಿಯಾಗಿ 'ಲಕ್ಷೀ' ಯ ಮನೆಯಲ್ಲಿಯೇ ಕುಳಿತ 'ರಿಹಾನ್' ಏನೋ ಒಂದು ರೀತಿ ಚಟಪಡಿಸುತ್ತಿದ್ದ. ಅವನ ಕಣ್ಣುಗಳ ತುಂಬಾ ಗಾಬರಿಯ ನೋಟವಿತ್ತು. ಅವಳ ಮನೆಯಲ್ಲಿ ಅವನಿಗೆ ಒಳ್ಳೆಯ ಉಪಚಾರವೂ ಸಿಕ್ಕಿತು. ಆದರೆ ಅದೆಲ್ಲದರ ರುಚಿಯನ್ನು ಆಸ್ವಾದಿಸಲು ಅವನು ಅಶಕ್ತನಾದ. ಮರುದಿನ ಕರ್ಫೂ ಸ್ವಲ್ಪ ಸಡಿಲಿಸಿದಾಗ ಪ್ರಪಂಚವೇ ತನ್ನ ಕೈಗೆ ಸಿಕ್ಕಂತ ಸಂತೋಷವಾಯಿತು.
 
ಲಕ್ಷೀಯ ಮಗ ತನ್ನ ಬೈಕ್ ನಲ್ಲಿ `ರಿಹಾನ್' ನನ್ನು ಮನೆ ಮುಟ್ಟಿಸುವ ಜವಬ್ದಾರಿ ಹೊತ್ತ. ಅಲ್ಲಿಂದ ಬೀಳ್ಕೊಡುವಾಗ `ರಿಹಾನ್'ನ ಮುಖದಲ್ಲಿ ಅವಳ ಕಡೆಗೊಂದು ಕರುಣೆಯ ಕ್ರತಜ್ನತೆ ಇತ್ತು.ಅವನ ಮನಸ್ಥಿತಿಗೆ ಸಂಪೂರ್ಣವಾಗಿ ದುಃಖಿತಳಾಗಿದ್ದಳು. ಹೀಗೆ `ರಿಹಾನ್' ಮನೆಯನ್ನು ತಲುಪಿದ. ವರಾಂಡದಲ್ಲಿ ಕೆಲವು ಜನರು ಸೇರಿದ್ದರು. ತಾಯಿ ಮಗನ ನೆನಪನ್ನು ತಂದುಕೊಂಡು ಕಾಯುತ್ತಿದ್ದಳು. ಅಕ್ಕಂದಿರ ಕಣ್ಣುಗಳು ಕಣಲಿ ಕೆಂಪಗಾಗಿದ್ದವು.ಒಲೆ ಬೆಂಕಿ ಕಾಣದೇ ಕುಳಿತಿತ್ತು.ಮಗನ ಬರವನ್ನು ಕಂಡಾಗ ತಾಯಿ ಸರಾಗವಾಗಿ ಅವನೆಡೆಗೆ ಚಲಿಸುತ್ತಾ.. ಮಗನೇ ಬಂದೆಯಾ. ಬಂದೆಯಾ.. ಎಂದು ಮುತ್ತಿಕ್ಕಳು ಶುರುಮಾಡಿದಳು. 'ಲಕ್ಷೀ' ಕೊಟ್ಟ ತಿಂಡಿಯ ಗಂಟು ಅಕ್ಕಂದಿರ ಕೈ ಸೇರಿಕೊಂಡವು. ತಂದೆಯ ಬಗ್ಗೆ ವಿಚಾರಿಸಿದಾಗ ಯಾರೂ ತುಟಿ ಪಿಟಿಕ್ ಎನ್ನಲಿಲ್ಲ. ಹಸಿವಿನಿಂಗ ಬರಿದಾಗಿದ್ದ ಆ ಜೀವಗಳು ಅದನ್ನು ತಿನ್ನಲು ಶುರುವಿಟ್ಟವು. ಆದರೆ ಒಳಗಿನಿಂದ ತಂದೆ ಮಾತ್ರ ಏಳುವ ಗೋಜಿಗೆ ಹೋಗಿರಲಿಲ್ಲ.