ರಾರಾಜಿಸುತ್ತಿದೆ ಕನ್ನಡ ಚಿತ್ರ ಸಂಗೀತ !!!
ದೃಷ್ಯ -೧
ಸುಮಾರು ಎರಡು ಮೂರು ವರ್ಷಗಳ ಹಿಂದಿನ ಮಾತಿರಬೇಕು... ಆಫೀಸ್ ಬಸ್ಸಲ್ಲಿ ಕುಳಿತು ಮನೆಗೆ ಮರಳುತ್ತಾ ಇದ್ದೆ... ನಮ್ಮ ಬಸ್ಸಲ್ಲಿ ಕನ್ನಡಿಗರ ಜೊತೆ ಬಹಳಷ್ಟು ಕನ್ನಡೇತರರೂ ಪ್ರಯಾಣಿಸುತ್ತಿದ್ದರು.. ರೇಡಿಯೋ ಹಾಕಣ್ಣ ಅಂತ ನಮ್ಮ ಬಸ್ಸಿನ ಡ್ರೈವರ್ ಹತ್ತಿರ ಹೇಳಿದೆ... ಆವಾಗ ಇಷ್ಟೆಲ್ಲಾ ಎಫ್.ಎಂ ವಾಹಿನಿಗಳಿರಲಿಲ್ಲ. ಊರಿಗೆಲ್ಲ ತಾನೊಬ್ಬನೇ ಒಡೆಯ ಎಂಬಂತೆ ರೇಡಿಯೋ ಸಿಟಿ ೯೧ (ಈಗ ೯೧.೧) ನದ್ದೇ ಕಾರುಬಾರು! ಅಸಲಿಗೆ ಇದ್ದುದೇ ಎರಡು ಎಫ್.ಎಂ.ಗಳು - ಒಂದು ರೇಡಿಯೋ ಸಿಟಿ; ಇನ್ನೊಂದು ಸರ್ಕಾರೀ ಸ್ವಾಮ್ಯದ ರೈನ್ ಬೋ.
ರೇಡಿಯೋ ಹಾಕುತ್ತಲೇ ರೈನ್ಬೋನಲ್ಲಿ ವಾಣಿ ಜಯರಾಂರವರ ಸುಶ್ಯಾವ್ಯ ಕಂಠದಲ್ಲಿ "ಹಾಡು ಹಳೆಯದಾದರೇನು, ಭಾವ ನವ ನವೀನ..." ಎಂಬ ಹಾಡು ಬರುತ್ತಾ ಇತ್ತು.. ಆಹಾ ನಮ್ಮ ಹಳೆಯ ಹಾಡುಗಳು ಅದೆಷ್ಟು ಸುಮಧುರವಾಗಿರುತ್ತಿದ್ದವು, ಕೇಳ್ತಾ ಇದ್ರೆ ಹಾಗೇ ಮೈ ಮರೆತು ಹೋಗಬಹುದು, ದಿನವಿಡೀ ಅದೇ ಜಾವಾ, ಅದೇ ಮೈನ್ ಫ್ರೇಮ್ ಅಂತೆಲ್ಲ ಕೇಳಿ ಕೇಳಿ ಬೇಸತ್ತಿರುವ ಮನಸ್ಸಿಗೆ ಒಂದಿಷ್ಟು ಆಹ್ಲಾದವನ್ನು ತುಂಬುವ ಶಕ್ತಿ ಈ ರೀತಿಯ ಹಾಡುಗಳಲ್ಲಿವೆಯಲ್ಲ ಎಂದು ಸಂಭ್ರಮಿಸುತ್ತಿರುವಷ್ಟರಲ್ಲೇ ಆ ಹಾಡು ಮುಗಿದು ಇದ್ದಕ್ಕಿದ್ದಂತೆ ಇನ್ನೊಂದು ಯಾವುದೋ ಹೊಸ ಕನ್ನಡ ಚಿತ್ರದ ಹಾಡೊಂದು ಶುರುವಾಯಿತು... ಆಗಷ್ಟೇ ಸುಮಧುರವಾದ ಅರ್ಥ ಗರ್ಭಿತ ಹಾಡೊಂದನ್ನು ಕೇಳಿ ಪುಳಕಿತಗೊಂಡಿದ್ದ ಮನಕ್ಕೆ ಸಾಹಿತ್ಯ ಸಂಗೀತ ಎರಡೂ ಕನಿಷ್ಟಮಟ್ಟದಲ್ಲಿದ್ದ ಈ ಹಾಡನ್ನು ಅರಗಿಸಿಕೊಳ್ಳುವುದು ಕಷ್ಟವೆನಿಸತೊಡಗಿತು... ಅಷ್ಟರಲ್ಲೇ ಹಿಂಬದಿಯ ಸೀಟಿನಿಂದ "ಭಯ್ಯಾ, ರೇಡಿಯೋ ಸಿಟಿ ಲಗಾವೋ ನಾ, ಯೇ ಕ್ಯಾ ಸ್ಟೇಷನ್ ಲಗಾ ರಖಾ ಹೈ" ಅಂತ ಹಿಂದೀ ಭಾಷಿಕ ಮಿತ್ರನೋರ್ವನಿಂದ ಆರ್ಡರ್ ಬಂತು! ಕನ್ನಡ ನಾಡಲ್ಲಿ ಕನ್ನಡದ ಹಾಡೊಂದು ಬರುತ್ತಿರುವಾಗ ಅದನ್ನು ವಿರೋಧಿಸಿ ಸದಾ ಅನ್ಯ ಭಾಷೆಯಲ್ಲೇ ಸಂಪೂರ್ಣ ವ್ಯವಹರಿಸುವ, ಅನ್ಯ ಭಾಷೆಯ ಹಾಡುಗಳನ್ನೇ ಬಿತ್ತರಿಸುವ, ಸ್ಟೇಷನ್ ಇಡುವಂತೆ ಹೇಳಲು ಇವನಿಗೆಷ್ಟು ಸೊಕ್ಕು, ಇದನ್ನು ವಿರೋಧಿಸೋಣವೆಂದು ಒಂದು ಕ್ಷಣ ಅನಿಸಿತು... ಆದರೆ ಒಂದು ಕೂಡಲೇ ಮನಸ್ಸಿನಲ್ಲಿ ಉದ್ಭವವಾದ ಪ್ರಶ್ನೆ - "ಈಗ ಬರ್ತಾ ಇರೋ ಕನ್ನಡ ಹಾಡು ನಿಜಕ್ಕೂ ಕೇಳಲು ಯೋಗ್ಯವೇ? ಯಾವುದೋ ಭಾಷೆಯಿಂದ ಕದ್ದ ಸಂಗೀತ, ಮೇಲಿಂದ ಕೇಳಲಸಹ್ಯವಾದ ಸಾಹಿತ್ಯ. ಇದಕ್ಕೋಸ್ಕರ ನಾನು ದನಿಯೆತ್ತಬೇಕೇ ?"... ವಿರೋಧಿಸಲು ದನಿಯೇ ಹೊರಬರಲಿಲ್ಲ... ನಮ್ಮ ಕನ್ನಡದ ಹಲವು ಜನ ಕೂಡ ಆತನ ಕೋರಿಕೆಗೆ ದನಿಗೂಡಿಸಿದರು...
ಇದು ಕೇವಲ ಎಫ್. ಎಂ ವಾಹಿನಿಯ ಮಟ್ಟಿಗಷ್ಟೇ ಸೀಮಿತವಾಗಿರಲಿಲ್ಲ. ನಗರದ ಯಾವುದೇ ಮ್ಯೂಸಿಕ್ ಶಾಪ್ಗಳಿಗೆ ಭೇಟಿ ಕೊಟ್ಟರೂ ತಮಿಳು, ತೆಲುಗು, ಹಿಂದಿ ಚಿತ್ರಗಳ ಸಿ.ಡಿ. , ಧ್ವನಿ ಸುರುಳಿಗಳದ್ದೇ ಕಾರು ಬಾರು. ನಮ್ಮ ಕನ್ನಡ ಚಿತ್ರದ ಕ್ಯಾಸೆಟ್ಟುಗಳು ಕೇಳುವವರೇ ಇಲ್ಲದೇ ಯಾವುದೋ ಒಂದು ಮೂಲೆಯಲ್ಲಿ ಸೊರಗುತ್ತಿದ್ದವು. ಬ್ರಿಗೇಡ್ ರಸ್ತೆಯ ಕೊನೆಯಲ್ಲಿರುವ ಮ್ಯೊಸಿಕ್ ವರ್ಲ್ಡ್ ಗೆ ಹೋದಾಗಲೆಲ್ಲ ಅನ್ಯ ಭಾಷಾ ಸಿ.ಡಿ.ಗಳ ರಾಶಿಯಲ್ಲಿ ಮೂಲೆಗುಂಪಾಗಿ, ಹಿಂದೆ ಹೋಗಿದ್ದ ಕನ್ನಡ ಚಿತ್ರಗಳ ಸಿ.ಡಿ.ಗಳನ್ನು ಎದುರಿಗೆ ಎತ್ತಿಡುತ್ತಿದ್ದ ಅದೆಷ್ಟೋ ಉದಾಹರಣೆಗಳಿವೆ. ನಮ್ಮ ರಾಜ್ಯದಲ್ಲೇ ನಮ್ಮ ಕನ್ನಡದ ಹಾಡುಗಳನ್ನು ಈ ರೀತಿ ಮುಂದಕ್ಕೆ ಎತ್ತಿಡಬೇಕಾದ ಸ್ಥಿತಿ ನೆನೆಸಿಕೊಂಡರೆ ನಿಜಕ್ಕೂ ತುಂಬಾ ನೋವಾಗುತ್ತಿತ್ತು. ಇದನ್ನು ಮುಂದೇನೋ ಇಟ್ಟೆ ಸರಿ.. ಆದರೆ ಜನ ಇದನ್ನು ಕೊಂಡು ಕೊಳ್ಳುತ್ತಾರೆಯೇ?.. ಊಂ. ಹೂಂ.. ಇಲ್ಲ.. ನಮ್ಮನೇಲಿ ಹಳಸಲು ಅಡುಗೆ ಮಾಡಿ, ಪಕ್ಕದ ಮನೆಯ ಕಡೆ ನೋಡಬೇಡ, ಇದನ್ನೇ ಉಣ್ಣು ಎಂದು ನಮ್ಮನೆ ಮಕ್ಕಳಿಗೆ ಹೇಳಿದ ಹಾಗಾಯಿತು.. ಪಕ್ಕದ ಮನೆಯಿಂದ ಘಮ ಘಮ ಪರಿಮಳ ಈ ಕಡೆ ಬರ್ತಾ ಇರೋವಾಗ ಮಕ್ಕಳು ಹೇಗೆ ತಾನೇ ನಮ್ಮ ಮಾತು ಕೇಳಿಯಾರು? ನಮ್ಮಲ್ಲೇ ದೋಷವಿಟ್ಟುಕೊಂಡು ನಮ್ಮದನ್ನೇ ಪ್ರೋತ್ಸಾಹಿಸಿ ಎಂದರೆ ಅದಕ್ಕೆ ಕವಡೆ ಕಿಮ್ಮತ್ತೂ ಬರಲಾದದು.
ದೃಷ್ಯ -೨
ವರ್ಷಗಳುರುಳಿದವು... ಈ ಮೂರು ವರ್ಷಗಳಲ್ಲಿ ಆದ ಬದಲಾವಣೇಗಳೆಷ್ಟೋ.. ಕೆಲಸ ಮಾಡುತ್ತಿದ್ದ ಕಚೇರಿ ಕೂಡಾ ಬದಲಾಗಿತ್ತು...
ತೀರಾ ಇತ್ತೀಚಿನ ಮಾತು... ಈ ನಡುವೆ ಆಫೀಸ್ ವಾಹನದಲ್ಲಿ ಹೆಚ್ಚು ಸಂಚರಿಸುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ ಎಂದರೆ ತಪ್ಪಾಗಲಾರದು.. ಆದರೆ ಆ ದಿನ ಸಹೋದ್ಯೋಗಿಗಳೊಡನೆ "ಟೀಂ ಔಟಿಂಗ್" ನೆಪದಲ್ಲಿ ಹೊರಗಡೆ ಹೋಗಬೇಕಾದ ಸಂದರ್ಭ ಬಂತು.. ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದ ರೆಸಾರ್ಟ್ ಒಂದಕ್ಕೆ ಹೋಗ್ತಾ ಇದ್ದೆವು... ಜೇಬಿನಲ್ಲಿದ್ದ ಮೊಬೈಲ್ ಫೋನ್ ಕಡೆಗೆ ಒಮ್ಮೆ ಕಣ್ಣಾಯಿಸಿದಾಗ ಎರಡು ವಂಚಿತ ಕರೆಗಳಿದ್ದವು (missed call). ನನ್ನ ಹಳೆಯ ಕಚೇರಿಯ ಮಿತ್ರನಿಂದ. ಬಸ್ ಹತ್ತುವ ಭರದಲ್ಲಿ ಕರೆ ಬಂದದ್ದೇ ಗೊತ್ತಾಗಲಿಲ್ಲ ಅನ್ನಿಸುತ್ತೆ.. ಸರಿ ಫೋನ್ ಮಾಡೋಣ ಅಂತ ಅವನಿಗೆ ರಿಂಗಾಯಿಸಿದರೆ ಪರಮಾಶ್ಚರ್ಯವೊಂದು ಕಾದಿತ್ತು... "ಅನಿಸುತಿದೆ ಯಾಕೋ ಇಂದು.... ನೀನೇನೆ ನನ್ನವಳೆಂದು... ಮಾಯದಾ ಲೋಕದಿಂದ ನನಗಾಗಿ ಬಂದವಳೆಂದು.. ಆಹಾ ಎಂಥ ಮಧುರ ಯಾತನೆ.. ಕೊಲ್ಲು ಹುಡುಗಿ ಒಮ್ಮೆ ನನ್ನ.. ಹಾಗೇ ಸುಮ್ಮನೇ.." ಹಾಡು ಕೇಳಿಬಂತು!.. ಇದರಲ್ಲೇನು ಆಶ್ಚರ್ಯ ಅಂತೀರಾ? ಈತ ಆ ದಿನ "ರೇಡಿಯೋ ಸಿಟಿ ಲಗಾವೋ" ಎಂದು ಕನ್ನಡ ಹಾಡನ್ನು ಕೇಳಿಸಿಕೊಳ್ಳಲು ಬಯಸದ ದೆಹಲಿ ಮೂಲದ ಪುಣ್ಯಾತ್ಮ!! ಸದಾ ನೀಲೆ ನೀಲೆ ಅಂಬರ್ ಪರ್ ಕೇಳಿ ಬರ್ತಾ ಇದ್ದ ಫೋನಲ್ಲಿ ಇವತ್ತು "ಅನಿಸುತಿದೆ"!!!. ಮನಸ್ಸಿಗೆ ಏನೋ ನೆಮ್ಮದಿಯಾಯಿತು.. ಜೊತೆಗೇ ಕುತೂಹಲ ಕೂಡ!! ಮೊದಲು ಕೇಳಿದ್ದೇ ಇದನ್ನು.. ಅವನಿಗೆ ಈ ಹಾಡೆಂದರೆ ಪಂಚ ಪ್ರಾಣವಂತೆ.. ಅವನ ಐದು ವರ್ಷದ ಮಗಳಂತೂ ಈ ಹಾಡು ಬಂದರೆ ಊಟ ಮಾಡುವುದನ್ನೂ ಬಿಟ್ಟು ಕೇಳುತ್ತಾಳಂತೆ!!. ಅವಳಿಗೋಸ್ಕರವೇ ಎರಡೆರಡು ಸಲ ಸಿನಿಮಾ ನೋಡಿದ್ದೂ ಆಯ್ತಂತೆ!!!.. ಅಷ್ಟೇ ಅಲ್ಲ, ಈ ನಡುವೆ ಅವನಿಗೆ ಕನ್ನಡ ಹಾಡುಗಳೆಂದರೆ ತುಂಬಾ ಇಷ್ಟ ಆಗ್ತಾ ಇದೆಯಂತೆ... ಮುಂಗಾರು ಮಳೆಯ ಜೊತೆ, ಮಿಲನ, ಗಾಳಿಪಟ ಇನ್ನೂ ಹಲವಾರು ಸಿ.ಡಿ.ಗಳನ್ನು ಕೊಂಡುಕೊಂಡಿದ್ದಾನಂತೆ!! ಈಗ ಆಫೀಸ್ ಬಸ್ಸಿನಲ್ಲಿ ಸದಾ ಕನ್ನಡ ಹಾಡುಗಳೇ ರಾರಾಜಿಸುತ್ತವೆಯಂತೆ!
ಯಾಕೋ, ನಿನ್ನ ರೇಡಿಯೋ ಸಿಟಿ. ಕೇಳ್ತಾ ಇಲ್ವೇನೋ ಅಂದ್ರೆ, ರೇಡಿಯೋ ಸಿಟಿ, ರೇಡಿಯೋ ಮಿರ್ಚಿ, ಫಿವರ್, ಎಸ್. ಎಫ್. ಎಂ, ಎಲ್ಲಾ ಕೇಳ್ತೀವಿ, ಈಗ ಎಲ್ಲಾ ಕಡೆನೂ ಕನ್ನಡ ಹಾಡುಗಳೇ ಹೆಚ್ಚು ಬರ್ತಾ ಇವೆ ಅಂದ!! ಇದನ್ನು ಕೇಳಿ ಸ್ವರ್ಗಕ್ಕೆ ಮೂರೇ ಗೇಣು ಅನಿಸಿತು... ಇದೆಲ್ಲ ನಿಜಾನೇ? ನೋಡೋಣ ಎಂದು ಹೆಡ್ ಫೋನ್ ಕಿವಿಗಿಟ್ಟುಕೊಂಡು ಎಫ್. ಎಂ. ಶುರುಮಾಡಿದೆ.. ಏನಾಶ್ಚರ್ಯ!!!, ರೇಡಿಯೋ ಸಿಟಿ ಈಗ ಕನ್ನಡ ಮಯ!!!! ರೇಡಿಯೋ ಜಾಕಿಗಳ ಭಾಷೆಯೂ ಬದಲಾಗಿದೆ.. ಹಿಂದಿ, ಇಂಗ್ಲೀಷ್ ಬಿಟ್ಟು ತಪ್ಪಿಯೂ ಕನ್ನಡ ಮಾತಾಡದ ನಿರೂಪಕರ ಬಾಯಲ್ಲಿ ಬರೀ ಕನ್ನಡ! ಅಲ್ಲದೇ ಒಂದಾದ ಮೇಲೊಂದರಂತೆ ಕನ್ನಡದ ಹಾಡುಗಳು.. ಇನ್ನು ರೇಡಿಯೋ ಮಿರ್ಚಿಯಂತೂ ೧೦೦% ಕನ್ನಡ!! ಮೂರು ವರ್ಷಗಳ ಕೆಳಗೆ ಕನ್ನಡ ಹಾಡುಗಳ ಪ್ರಸಾರಕ್ಕಾಗಿ ಕ.ರ.ವೇ ದಾಳಿ ಮಾಡಿದ್ದು ಇವೇ ರೇಡಿಯೋ ಚಾನೆಲ್ಗಳ ಮೇಲೆಯೇ ಅನಿಸಿತು,... ಆ ರೀತಿಯ ದಾಳಿಯೂ ಏನೂ ಪರಿಣಾಮ ಬೀರಿರಲಿಲ್ಲ... ಆದರೆ ಈಗ ಯಾವ ದಾಳಿಯೂ ಇಲ್ಲ, ಯಾರ ಹಕ್ಕೊತ್ತಾಯವೂ ಇಲ್ಲ.. ಎಲ್ಲಾ ತಂತಾನೆಯೇ ಕನ್ನಡ ಹಾಡುಗಳ ಹಿಂದೆ ಬಿದ್ದಿವೆ..!!!
ಕನ್ನಡಿಗರಷ್ಟೇ ಅಲ್ಲ.. ಕನ್ನಡೇತರರಿಗೆಲ್ಲ ಈಗ ಕನ್ನಡ ಹಾಡುಗಳೆಂದರೆ ಅಚ್ಚು ಮೆಚ್ಚು. ಪ್ಲಾನೆಟ್ ಎಂ, ಮ್ಯೂಸಿಕ್ ವರ್ಲ್ಡ್, ಟೆಂಪ್ಟೇಶನ್, ಲ್ಯಾಂಡ್ ಮಾರ್ಕ್ ಎಲ್ಲಾ ಕಡೆ ಕನ್ನಡದ ಹಾಡುಗಳಿಗೆ ವಿಶೇಷ ಮನ್ನಣೆ!. ಎಲ್ಲೂ ಕನ್ನಡ ಸಿ.ಡಿ. ಮೇಲೆ ಎತ್ತಿಡುವ ದೌರ್ಭಾಗ್ಯ ಇಲ್ಲ!!!. ಇಂದಿರಾ ನಗರದ ಟೆಂಪ್ಟೇಶನ್ ಮಾಲೀಕ ಹೇಳುವಂತೆ ಅವನ ಶಾಪಿನಲ್ಲಿ ಮುಂಗಾರು ಮಳೆ ಮತ್ತು ಮಿಲನ ಚಿತ್ರದ ಆಡಿಯೋ ಮಾರಾಟವಾದಷ್ಟು ಬೇರೆ ಯಾವ ಭಾಷೆಯ ಯಾವ ಚಿತ್ರದ ಸಿ.ಡಿ. ಕ್ಯಾಸೆಟ್ಟುಗಳೂ ಮಾರಾಟವಾಗಿಲ್ಲವಂತೆ!! ಕನ್ನಡ ಹಾಡುಗಳ ಕೇಳುಗರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆಯಂತೆ.. ಮನೋ ಮೂರ್ತಿ, ಗುರುಕಿರಣ್, ಹರಿಕೃಷ್ಣರಂತಹ ಸಂಗೀತ ನಿರ್ದೇಶಕರ ಹಾಡುಗಳಿಗೆ ಎಲ್ಲಿಲ್ಲದ ಬೇಡಿಕೆಯಂತೆ!!!
ದೃಷ್ಯ ೧ ಕ್ಕೂ ದೃಷ್ಯ ೨ ಕ್ಕೂ ಅಜಗಜಾಂತರ ವ್ಯತ್ಯಾಸವಲ್ಲವೇ? ಈ ಎರಡು ಮೂರು ವರ್ಷಗಳಲ್ಲಿ ಕನ್ನಡ ಚಿತ್ರರಂಗ ಸಂಗೀತ ಕ್ಷೇತ್ರದಲ್ಲಿ ತುಂಬ ಸುಧಾರಿಸಿದೆ.. ಮನೋಮೂರ್ತಿ, ಗುರುಕಿರಣ್, ಹರಿಕೃಷ್ಣ, ಅರ್ಜುನ್, ರಘು ದೀಕ್ಷಿತ್ ಹೀಗೆ ಭರವಸೆಯ ಸಂಗೀತ ನಿರ್ದೇಶಕರಿಂದ ಹೊಸ ಹೊಸ ಬಗೆಯ ಗೀತೆಗಳು ಬರಲಾರಂಭಿಸಿವೆ.. ಇನ್ನೊಂದು ಅತ್ಯುತ್ತಮ ಬೆಳವಣಿಗೆಯೆಂದರೆ ಉತ್ತಮ ಗೀತ ಸಾಹಿತ್ಯ! ಜಯಂತ ಕಾಯ್ಕಿಣಿ, ಯೋಗರಜ ಭಟ್, ರಾಮ್ ನಾರಾಯಣ್ ಹೀಗೆ ಉತ್ತಮ ಸಾಹಿತ್ಯವನ್ನೊದಗಿಸುವ ಕವಿಗಳು ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿರುವುದರಿಂದ ಉತ್ತಮ ಸಂಗೀತದ ಜೊತೆಗೆ ಉತ್ತಮ ಸಾಹಿತ್ಯವೂ ಸಿಗುತ್ತಿದೆ.. ತೀರಾ ಸಾಧಾರಾಣವಾದ ಚಿತ್ರವಾದರೂ ಅದರ ಸಂಗೀತ ಉತ್ತಮವಾಗಿರುವುದು ಇನ್ನೊಂದು ವಿಶೇಷ!!. ಹಳೆಯ ಹಾಡುಗಳು ಇಂದಿಗೂ ಇಷ್ಟವಾಗಲು ಕಾರಣ ಅದರ ಅತ್ಯುತ್ತಮ ಸಾಹಿತ್ಯ!. ಬರ್ತಾ ಬರ್ತಾ ಒಳ್ಳೆಯ ಗೀತ ಸಾಹಿತ್ಯವಿಲ್ಲದೇ ಚಿತ್ರರಾಂಗ ಸೊರಗಿ ಹೋಗಿತ್ತು... ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಚಿತ್ರ ಸಂಗೀತ ಕ್ಷೇತ್ರದಲ್ಲಿ ಹಲವಾರು ಆಶಾದಾಯಕ ಬೆಳವಣಿಗೆಗಳಾಗುತ್ತಿವೆ.. ನಮ್ಮ ಕನ್ನಡ ಹಾಡು ಪ್ರಸಾರ ಮಾಡಿ / ಕೇಳಿ ಅಂತ ನಾವು ಕನ್ನಡಿಗರು ಎಲ್ಲಿಯೂ ಯಾರ ಮುಂದೆಯೂ ಗೋಗರೆಯುವ ದುಃಸ್ಥಿತಿ ಈಗಿಲ್ಲ. ಮುಂಗಾರು ಮಳೆ, ಗೆಳೆಯ, ಮಿಲನ ಹಾಡುಗಳನ್ನು ಕೇಳಿದ ನಮ್ಮ ಈಗಿನ ಕಚೇರಿಯ ಮಳಯಾಳಿ ಮಿತ್ರನೊಬ್ಬ ಮನೋಮೂರ್ತಿ ಸಾಹೇಬರ ಫಾನ್ ಆಗಿಬಿಟ್ಟಿದ್ದಾನೆ.. ದಿನವೂ ಮನೋಮೂರ್ತಿಯ ಹೊಸ ಅಲ್ಬಂ ಬಗ್ಗೆ ವಿಚಾರಿಸುತ್ತಿರುತ್ತಾನೆ..!!! ಕನ್ನಡ ಹಾಡುಗಳಿಗಿರುವ ಭಾರೀ ಬೇಡಿಕೆಯನ್ನರಿತ ಖಾಸಗೀ ರೇಡಿಯೋ ವಾಹಿನಿಗಳು ಒಮ್ಮೆಲೇ "ಕನ್ನಡಾಭಿಮಾನ" ತೋರುತ್ತಿವೆ... ಹೌದು.. ಕನ್ನಡ ಚಿತ್ರ ಸಂಗೀತ ರಾರಾಜಿಸುತ್ತಿದೆ !!ಇವೆಲ್ಲ ಕನ್ನಡಿಗರಾದ ನಮಗೆ ಸಂಭ್ರಮಿಸುವ ವಿಷಯವಲ್ಲವೇ??
ಆದರೆ.... ಈ ಯಶಸ್ಸು ಸದಾ ಹೀಗೆಯೇ ಮುಂದುವರಿಯ ಬೇಕೆಂದರೆ ಸಂಗೀತ ನಿರ್ದೇಶಕರು, ಸಾಹಿತಿಗಳು ಈಗ ತೋರುತ್ತಿರುವ ಶ್ರದ್ಧೆಯನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗಬೇಕು. ಅದಕ್ಕೆ ನಮ್ಮ ನಿರ್ಮಾಪಕ, ನಿರ್ದೇಶಕರ ಬೆಂಬಲವೂ ಬೇಕು. ಸಿನಿಮಾ ಹಾಡುಗಳೆಂದರೆ ಸಂತೆಯ ಹೊತ್ತಿಗೆ ಮೂರು ಮೊಳ ಸುತ್ತಿ ಮಾರುವಂತಿರಬಾರದು.
ಕೊನೆಯ ಮಾತು: ಸಂಗೀತ ಕ್ಷೇತ್ರದಲ್ಲಾದಷ್ಟೇ ಕ್ರಾಂತಿ, ಬೆಳವಣಿಗೆ ಚಿತ್ರರಂಗದ ಎಲ್ಲಾ ಕ್ಷೇತ್ರದಲ್ಲಿಯೂ ಆಗಬೇಕಿದೆ. ತೀರ ಅಲ್ಲೊಂದು ಇಲ್ಲೊಂದು ಮುಂಗಾರು ಮಳೆಯಂತಹ ಚಿತ್ರಗಳು ಬಂದರೆ ಸಾಲದು. ಚಿತ್ರ ನಿರ್ದೇಶನ, ಕಥೆ, ಚಿತ್ರಕಥೆಯಲ್ಲಿಯೂ ಶ್ರದ್ದೆ, ಪರಿಶ್ರಮ ಮಾಡಿದರೆ ಕನ್ನಡ ಚಿತ್ರರಂಗ ಮತ್ತೆ 70ರ ದಶಕದಂತೆ ಮತ್ತೆ ಎಲ್ಲೆಡೆ ರಾರಾಜಿಸಬಹುದು..
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಹಲವು ಪ್ರತಿಭಾವಂತರ ಆಗಮನವಾಗುತ್ತಿರುವುದೇನೋ ಸಮಾಧಾನದ ವಿಷಯ... ಈ ಖುಷಿ, ಸಮಾಧಾನ ಹೀಗೆಯೇ ಮುಂದುವರಿಯಲಿ ಎಂಬುದೇ ನಮ್ಮ ಹಾರೈಕೆ.