ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು…!
ತರಲೆಗಳಿಗೆ ಟೈಂಪಾಸ್ ಮಾಡುವ ಜಾಗ, ಪಡ್ಡೆಗಳಿಗೆ ಚಾಟಿಂಗ್ ಸೆಂಟರ್, ಯುವಕರಿಗೆ ಸ್ನೇಹ ಬೆಳೆಸುವ ಸ್ಥಳ, ಉತ್ಸಾಹಿಗಳಿಗೆ ಗುಂಪುಗಳನ್ನು ಸೇರುವ ಜಾಗ, ಭಾವನಾತ್ಮಕ ಜೀವಿಗಳಿಗೆ ಅನಿಸಿಕೆ - ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ, ಕವಿ ಹೃದಯಿಗಳಿಗೆ ಕಾವ್ಯ ರಚಿಸುವ - ಪ್ರಕಟಿಸುವ ಸ್ಥಳ, ಪ್ರೇಮಿಗಳಿಗೆ ತಮ್ಮ ಪ್ರೀತಿಯ ಸಂಭ್ರಮ ಹೇಳಿಕೊಳ್ಳುವ ಜಾಗ, ಬರಹಗಾರರಿಗೆ ತಮ್ಮತನ ವ್ಯಕ್ತಪಡಿಸುವ ವೇದಿಕೆ, ವಿಚಾರವಾದಿಗಳಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸುವ ಕೇಂದ್ರ, ಸಂಪ್ರದಾಯವಾದಿಗಳಿಗೆ ತಮ್ಮ ಸಂಸ್ಕೃತಿ ಪ್ರಚಾರ ಮಾಡುವ ಜಾಗ, ಗೃಹಿಣಿಯರಿಗೆ ತಮ್ಮ ಆಂತರ್ಯ ಹೇಳಿಕೊಳ್ಳುವ ಪ್ರಶಸ್ತ ಸ್ಥಳ, ನಿವೃತ್ತರಿಗೆ ತಮ್ಮ ನೆನಪು - ಅನುಭವ ಹಂಚಿಕೊಳ್ಳುವ ವೇದಿಕೆ, ನಿರುದ್ಯೋಗಿಗಳಿಗೆ ಹೊಸ ಸ್ನೇಹ - ಹೊಸ ಅವಕಾಶ ಸೃಷ್ಟಿಸುವ ಜಾಗ, ಜಗಳಗಂಟರಿಗೆ ಜಗಳವಾಡುವ ವಿಶಾಲ ಸುರಕ್ಷಿತ ಸ್ಥಳ, ಅಸೂಯಪರರಿಗೆ ತಮ್ಮ ಹೊಟ್ಟೆ ಕಿಚ್ಚು ತೋಡಿಕೊಳ್ಳುವ ವೇದಿಕೆ, ಸಹೃದಯದವರಿಗೆ ಅದ್ಭುತ ಅನುಭವ ಮಂಟಪ, ಅವಕಾಶ ವಂಚಿತರಿಗೆ ಸುವರ್ಣಾವಕಾಶದ ಹೆಬ್ಬಾಗಿಲು, ಆಸಕ್ತರಿಗೆ ಮಾಹಿತಿಗಳ ಕಣಜ, ಹಳೆಯ ಸ್ನೇಹಿತರಿಗೆ ಮತ್ತೊಮ್ಮೆ ಬೆಸುಗೆಯ ಸಂಪರ್ಕದ ಕೊಂಡಿ, ಕೆಲವರಿಗೆ ವಿಕೃತ ಮನಸ್ಥಿತಿಯ ಅನಾವರಣ ಕೇಂದ್ರ, ಹಲವರಿಗೆ ತಮ್ಮ ಅಸ್ತಿತ್ವ ಇಲ್ಲಿದೆ ಎಂಬ ಕನಿಷ್ಠ ಸಮಾಧಾನದ ವೇದಿಕೆ, ಒಂದೇ - ಎರಡೇ, ಸಾವಿರಾರು, ಲಕ್ಷಾಂತರ, ಭಾವಗಳ ಅವಿಭಕ್ತ ಕುಟುಂಬ, ಕೋಟ್ಯಾಂತರ ಅಭಿಪ್ರಾಯ, ಭಿನ್ನಾಭಿಪ್ರಾಯಗಳ ವೇದಿಕೆ, ಪರಿಚಿತ, ಅಪರಿಚಿತ, ಹತ್ತಿರದ, ದೂರದ ಸಂಬಂಧಗಳ ಬೆಸುಗೆ, ಒಂಟಿ ಜೀವಿಗಳಿಗೆ ಅದ್ಬುತ ಜೊತೆಗಾರ.
ಗೆಳೆಯ - ಗೆಳತಿಯರೇ, ಇದನ್ನು ಇನ್ನೊಂದಿಷ್ಟು ಸಹ್ಯವಾಗಿಸೋಣ, ಆತ್ಮೀಯವಾಗಿಸೋಣ, ಚಿಂತಕರ ಚಾವಡಿಯಾಗಿಸೋಣ, ಅನುಭವ ಮಂಟಪವಾಗಿಸೋಣ, ದ್ವೇಷ, ಅಸೂಯೆ, ತಿಕ್ಕಲುತನ, ಸಿನಿಕತನ, ಉಢಾಪೆ, ಕಡಿಮೆ ಮಾಡಿ, ಪ್ರೀತಿ, ವಿಶ್ವಾಸ, ಗೆಳೆತನ, ಒಳ್ಳೆಯತನಗಳ ಸುಖೀ ಕುಟುಂಬವಾಗಿಸೋಣ,......
***
ನಿನ್ನೆ 2/4/2023 ಭಾನುವಾರ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣ ತೀರ್ಥ ಎಂಬ ಗ್ರಾಮದಲ್ಲಿ ರಾಜ್ಯದ ಪ್ರಥಮ " ಶರಣ ಸಮಾಗಮ " ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಶರಣರಾದ ಶ್ರೀ ಬಸವ ಪ್ರಭು ಸ್ವಾಮಿಗಳು ಕಾರ್ಯಕ್ರಮ ಆಯೋಜಿಸಿದ್ದರು. ವಚನ ಸಂಸ್ಕೃತಿ ಮತ್ತು ಬಸವ ತತ್ವಗಳ ವಾಸ್ತವ ಅನುಷ್ಠಾನದ ಬಗ್ಗೆ ಚರ್ಚೆ ಸಂವಾದಗಳು ಪ್ರಾಜ್ಞರಿಂದ ಎರಡು ದಿನ ನಡೆದವು. ಅಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಿದೆನು. ಸರಳತೆ ಮತ್ತು ವೈಚಾರಿಕತೆಯ ಹಿನ್ನೆಲೆಯಲ್ಲಿ ಈ ಸಮ್ಮೇಳನ ತುಂಬಾ ಪರಿಣಾಮಕಾರಿಯಾಗಿತ್ತು. ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕ್ರಿಯಾಶೀಲವಾಗಲಿ ಎಂದು ಆಶಿಸುತ್ತಾ......
-ವಿವೇಕಾನಂದ ಎಚ್ ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ