ಸ್ಟೇಟಸ್ ಕತೆಗಳು (ಭಾಗ ೪೬೧) - ಮನಸ್ಥಿತಿ
ಇಷ್ಟು ಹೊತ್ತಿಗೆ ಅಮ್ಮ ಬಂದು ಹಾಲು ಕೊಟ್ಟು ಹೊಟ್ಟೆ ತುಂಬಿಸಿ ಹೋಗಬೇಕಿತ್ತು. ಆದರೆ ತುಂಬಾ ಕಾದರೂ ಅವಳ ಸುಳಿವಿಲ್ಲ. ನನ್ನನ್ನ ಸಾಕಾಲಾಗುವುದಿಲ್ಲ ಅನ್ನೋ ಕಾರಣಕ್ಕೆ ಬಿಟ್ಟು ಹೋಗಿದ್ದಾಳೋ ಅಥವಾ ನಾನು ನನ್ನ ಕಾಲ ಮೇಲೆ ನಿಲ್ಲುವ ಅರ್ಹತೆ ಸಂಪಾದಿಸಿದ್ದೇನೆ ಅನ್ನೋದಕ್ಕೆ ಬಿಟ್ಟು ಹೋಗಿದ್ದಾಳೊ ಗೊತ್ತಿಲ್ಲ. ಹಸಿವು ಜೋರಾಗಿದೆ ಬಂದವರೆಲ್ಲರಲ್ಲೂ ಬೇಡುತ್ತಿದ್ದೇನೆ .ಯಾರೊಬ್ಬ ನಡೆದುಕೊಂಡು ಬಂದಿದ್ದ. ಅವನ ಬಳಿ ಹೋಗುವಾಗಲೇ ಆತ ದೂರದಿಂದಲೇ ನನ್ನನ್ನು ನೋಡಿಬಿಟ್ಟು...ಹಚ್ ಹಚ್....ಎಂದು ಜೋರು ಮಾತಿನಲ್ಲಿ ಬೈದುಬಿಟ್ಟ ಪಕ್ಕದಲ್ಲಿದ್ದ ಅಂಗಡಿಯ ಬಳಿ ತೆರಳಿದರೆ ಅಂಗಡಿಯವರು ವ್ಯಾಪಾರ ಹಾಳಾಗುತ್ತದೆ ಅನ್ನೋ ಕಾರಣಕ್ಕೆ ಇನ್ನೂ ಜೋರಾಗಿ ಬೈದುಬಿಟ್ಟರು. ರಸ್ತೆ ಬದಿ ನಿಂತಿದ್ದ ನನ್ನನ್ನು ಬೈದು ಅಲ್ಲಿಂದಲೂ ಓಡಿಸಿದರು ಹಸಿವು ಜೋರಾಗಿದೆ ಏನು ಮಾಡಬೇಕು ಗೊತ್ತಾಗ್ತಾ ಇಲ್ಲ ಮನುಷ್ಯರ ಹಾಗೆ ಸ್ವರವನ್ನು ಸೇರಿಸಿ ಹೇಳುವ ಶಕ್ತಿ ನನ್ನಲ್ಲಿಲ್ಲ ಹಾಗಾಗಿ ದೈನ್ಯತೆಯಿಂದ ಬೇಡುತ್ತಿದ್ದೆ ಆಗ ರಸ್ತೆ ಮುಂದೆ ಬಂದ ಅಜ್ಜ ಒಬ್ಬರು ಪ್ರೀತಿಯಿಂದ ನನ್ನ ಆರೋಗ್ಯವನ್ನು ನೋಡಿ ವಿಚಾರಿಸಿ ನನಗೆ ಒಂದೆರಡು ಬಿಸ್ಕಿಟ್ ಗಳನ್ನು ಹಾಕಿದರು. ಅವರ ಕಾಲ ಬುಡದಲ್ಲೇ ಪಾದನ್ನು ನೆಕ್ಕುತ್ತಾ ನಿಂತಿರುವಾಗ ಅವರು ಬಸ್ಸನ್ನೇರಿದರು. ನನಗೆ ಪ್ರೀತಿ ತುಂಬ ತುಂಬ ಸಮಯಗಳಿಂದ ದೊರೆತಿರಲಿಲ್ಲ ಹಾಗಾಗಿ ಅವರ ಬಳಿ ಹೋಗಿ ಶರಣಾಗತನಾದೆ. ಮನುಷ್ಯರೆಲ್ಲರೂ ಒಂದೇ ಆದರೂ ಮನಸ್ಥಿತಿಗಳು ಬೇರೆ. ಮನಸ್ಥಿತಿಗಳು ಬದುಕನ್ನ ಬೆಳಗಿಸಬಹುದು ಮುಳುಗಿಸಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ