"ಸ್ಟೇಟಸ್ ಕತೆಗಳು (ಭಾಗ ೫೬೨) - ಹೀಗೆ ಬದುಕು
"ಅಲ್ಲ ನೀವು ಅದು ಹೇಗೆ ಬದುಕ್ತೀರಾ? ಆಸೆಗಳು ಸಾವಿರ ಇರುತ್ತವೆ. ಎಲ್ಲವನ್ನು ತಡೆ ಹಿಡಿದು ಅದು ಹೇಗೆ ಬದುಕ್ತೀರಿ ಸ್ವಾಮಿ" "ನೋಡು ಮಾರಾಯ ಕಣ್ಣುಗಳು ಸಾವಿರ ಕೇಳ್ತವೆ. ಕಿವಿಗಳು ಏನನ್ನೋ ಬಯಸುತ್ತವೆ ನಾಲಿಗೆಗೆ ಇನ್ನೊಂದಷ್ಟು ಬೇಕು ಆದರೆ ಹೊಟ್ಟೆಗೆ ಏನು ಬೇಕು ಅನ್ನೋದರ ಅರಿವು ನಮಗೆ ಇರಬೇಕು . ಯಾವಾಗ ಹೊಟ್ಟ ಖಾಲಿ ಇಡಬೇಕು ಯಾವಾಗ ಹೊಟ್ಟೆಯನ್ನ ಪೂರ್ತಿ ತುಂಬಿಸಿಕೊಳ್ಳಬೇಕು ಯಾವಾಗ ಅರೆ ಹೊಟ್ಟೆ ಮಾಡಿಕೊಳ್ಳಬೇಕು ಎನ್ನುವ ಅರಿವಿರಬೇಕು. ಕಿಸೆಯೊಳಗೆ ಕೂತವನು ಹೊರಗೆ ಹೋಗಲು ಕಾಯುತ್ತಿರುತ್ತಾನೆ. ಆದರೆ ಅವನನ್ನ ತಡೆಹಿಡಿದು ನಮ್ಮಲ್ಲಿ ಸ್ಥಿರವಾಗಿ ನಿಲ್ಲಿಸುವುದು ನಾವು ಮಾಡಬೇಕಾಗಿರುವ ಮುಖ್ಯ ಕೆಲಸ. "
"ಸರಿ ಸರ್"
"ಸರ್, ಜೀವನದಲ್ಲಿ ಮತ್ತೆ ಮತ್ತೆ ಸೋಲುಗಳು ಎದುರಾಗ್ತಾ ಇದ್ದಾವೆ. ಗೆಲುವು ಅನ್ನೋದು ಕಾಣುತ್ತಾನೆ ಇಲ್ಲ ಹೀಗೆ ಮುಂದುವರಿತಾ ಹೋದರೆ, ಬದುಕಲ್ಲೇನು ರುಚಿ ಇದೆ ಸರ್? ಒಂದು ದಿನ ಗೆಲುವು ಸಿಗಬೇಕಲ್ಲ. ಜೀವನಪೂರ್ತಿ ಸೋಲನ್ನೇ ಕಾಣುತ್ತಾ ಹೋದರೆ ಬದುಕಿಗೆ ಅರ್ಥ ಹೇಗೆ ಸರ್? ಆಗ್ತಿಲ್ಲ ಸರ್."
"ಬದುಕೋದು ತುಂಬಾ ಕಷ್ಟ ಅಲ್ಲ ,ನಾವು ಬದುಕನ್ನ ನಡೆಸುವಾಗ ಅಲ್ಲಿ ಗೆಲ್ಲಬೇಕು, ಪ್ರಸಿದ್ಧಿಯಾಗಬೇಕು, ಹೆಚ್ಚು ಜನ ಪರಿಚಯ ಆಗಬೇಕು ,ದುಡ್ಡು ಸಂಪಾದಿಸಬೇಕು, ಶ್ರೀಮಂತನಾಗಬೇಕು ಬದುಕು ಮಿನುಗಬೇಕು, ಮಿಂಚಬೇಕು ಹೀಗೆಲ್ಲಾ ದೊಡ್ಡ ದೊಡ್ಡ ಪಟ್ಟಿಗಳನ್ನು ಮಾಡಿಕೊಂಡು ಹಾಗೆ ಬದುಕುವುದಕ್ಕೆ ಆರಂಭ ಮಾಡುತ್ತವೆ. ಒಂದು ದಿನವೂ ನಾವು ಬದುಕನ್ನ ಬದುಕಿನ ತರ ಬದುಕಬೇಕು ಅಂತ ಯೋಚನೆ ಮಾಡ್ಲಿಲ್ಲ. ನಿಜವಾಗಿ ಮಾನವನಿಗೆ ಅಗತ್ಯವಾಗಿ ಬೇಕಾಗಿರುವುದು ಅದು. ಬದುಕಿದ್ರೆ ಸಾಕು ಅದೇ ಬದುಕಿನ ಅದ್ಭುತ ಕ್ಷಣ .ಅದು ಬಿಟ್ಟು ಹೀಗಿರಬೇಕು ಹಾಗಿರಬೇಕು ಅಂದುಕೊಂಡರೆ ಅದು ಬದುಕಾಗಿರುವುದಿಲ್ಲ. ಆಸೆಗಳ ಮೂಟೆಯಾಗಿ ಬಿಡುತ್ತೆ.ಕನಸಿನ ಗೋರಿಯಾಗುತ್ತೆ, ಜೀವನದ ಚಿಗುರಾಗುವುದಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ