ಹತ್ತು ಮನಸುಗಳು ಹೆಣೆವ ಕಥೆ

ಹತ್ತು ಮನಸುಗಳು ಹೆಣೆವ ಕಥೆ

ಬರಹ

ಮೊದಲಷ್ಟು ಪೀಠಿಕೆ ಹಾಕ್ತೀನಿ. ನಾನು ಒಂದು ಟೋಸ್ಟ್ ಮಾಸ್ಟರ್ಸ್ ಕ್ಲಬ್ಬಿನ ಸದಸ್ಯ. ಪ್ರತೀ ಮೀಟಿಂಗ್ ನಲ್ಲೂ ಟೇಬಲ್ ಟಾಪಿಕ್ಸ್ ಇದ್ದೇ ಇರತ್ತೆ. ಟೇಬಲ್ ಟಾಪಿಕ್ಸ್ ಮಾಸ್ಟರ್ ಒಂದು ನಾಕೈದು ಜನಕ್ಕೆ ಯಾವುದಾದ್ರೂ ಒಂದು ಪ್ರಶ್ನೆ ಕೇಳ್ತಾನೆ (ಅಥ್ವಾ ಕೇಳ್ತಾಳೆ ಅಂದ್ಕೊಳಿ). ಅವರು ಅದಕ್ಕೆ ೧-೨ ನಿಮಿಷದಲ್ಲಿ ಉತ್ತರ ಕೊಡಬೇಕು. ಒಂದು ಸಲದ ಮೀಟಿಂಗ್ ನಲ್ಲಿ ಸ್ವಲ್ಪ ಬೇರೆ ರೀತಿ ಮಾಡಿದ್ವಿ. ಟೇಬಲ್ ಟಾಪಿಕ್ಸ್ ಮಾಸ್ಟರ್ ಒಂದು ಸಾಲನ್ನು ಹೇಳಿ, ಯಾರೋ ಒಬ್ಬರಿಗೆ ಆ ಸಾಲಿಂದ ಮುಂದುವರೆಸಲು ಹೇಳಿದ. ಅವರು ೧-೨ ನಿಮಿಷ ಮಾತಾಡಿ ಮತ್ತೊಬ್ಬರಿಗೆ ಖೋ ಕೊಟ್ಟರು. ಅವರು ಮೊದಲು ಮಾತಾಡಿದವರ ಮಾತಿಗೇ ಸೇರಿಸಿಕೊಂಡಂತಿರುವಂತೆ ಮುಂದೆ ಮಾತಾಡಿ ಮತ್ತೊಬ್ಬರಿಗೆ ಖೋ. ಒಟ್ಟು ೬-೭ ಜನ ಮಾತಾಡಿ ಮುಗಿಸುವ ಹೊತ್ತಿಗೆ ಒಂದು ಒಳ್ಳೇ ಹಾಸ್ಯಮಯವಾದ ಕಥೆ ಮೂಡಿಬಂದಿತ್ತು.

ಇವತ್ತು ಅದೇ ರೀತಿ  ಯಾಕೆ ಬರೀಬಾರದು ಅನ್ನಿಸಿತು. ಅದಕ್ಕೆ ಈ ಪ್ರಯತ್ನ.

ಈ ಕೆಲವು ನಿಯಮಗಳನ್ನ ಪಾಲಿಸಿದರೆ, ಒಳ್ಳೇದು ಅಂತ ತೋರುತ್ತೆ:

೧. ಯಾವ ಸಂಪದಿಗರು ಬೇಕಾದರೂ ಟಿಪ್ಪಣಿ ಹಾಕುವುದರ ಮೂಲಕ ಕಥೆ ಮುಂದುವರಿಸಬಹುದು

೨. ಬರೆಯೋರೆಲ್ಲ ಸುಮಾರು ಒಂದು-ಎರಡು ಪುಟಕ್ಕಿಂತ ಕಮ್ಮಿ ಬರೆದರೆ ಚೆನ್ನ. ತೀರಾ ದೊಡ್ಡದಾಗಿ ಗೋಜಲಾಗೋದಕ್ಕಿಂತ ವಾಸಿ ಅಲ್ವಾ? ಅಲ್ಲದೆ ಕೊನೆಕೊನೆಗೆ ಬಂದವರಿಗೆ ಬಹಳ ಕಷ್ಟ ಆಗುತ್ತಲ್ಲ ;)

೩. ಕಥೆಗೆ ನಾನು ’ಹತ್ತು ಮನಸುಗಳು ಹೆಣೆವ ಕಥೆ’ ಅಂತ ತಲೆಬರಹ ಕೊಟ್ಬಿಟ್ಟಿದ್ದೀನಿ. ಆದ್ದರಿಂದ ೧೦ನೇ ಟಿಪ್ಪಣಿ ಹಾಕೋರು ಅದನ್ನ ಒಂದು ಸರಿಯಾದ ನೆಲೆಯಲ್ಲಿ ನಿಲ್ಲಿಸಬೇಕಾಗತ್ತೆ. ಆಮೇಲೆ ಬರೆಯುವವರು, ಈ ಹತ್ತನೇ ಅಂತ್ಯದ ಬದಲು ಬೇರೊಂದು ಅಂತ್ಯ ಬೇಕಾದರೆ ಹಾಕಬಹುದು, ಆದರೆ ಅದಕ್ಕೂ ಮುಂದಕ್ಕೆ ಕಥೆ ಬೆಳಸುವುದು ಬೇಡ.

ಇಷ್ಟು ಸಾಕು ಅನ್ನಿಸುತ್ತೆ.

ಹಾ! ಒಂದು ವಿಷಯ ಮರೆತೆ. ಸ್ವಲ್ಪ ಏನಾದ್ರೂ ನಿಗೂಢತೆ ತುಂಬಿದ್ರೆ ಚೆನ್ನಾಗಿತ್ತು ಅನ್ಸತ್ತೆ ಅಲ್ವಾ? ಅದಕ್ಕೆ ಹೀಗೆ ಮಾಡಿದರೆ ಹೇಗೆ?

೪. ಪ್ರತಿ ಟಿಪ್ಪಣಿಗಾರರೂ (ಅಂದರೆ ಕಥೆ ಮುಂದುವರೆಸುವವರೂ) ಅವರವರ ಬರಹಗಳ ಕೊನೇ ಸಾಲಿನಲ್ಲಿ ಯಾವುದಾದರೂ ಒಂದು ಸದ್ದಿನ ಬಗ್ಗೆ ಬರೆಯಬೇಕು. (ಹೇಗೆ ಅನ್ನೋದಕ್ಕೆ ಮೊದಲ ಭಾಗದ ಕೊನೇ ಸಾಲು ನೋಡಿ :) ಮುಂದುವರೆಸುವವರು ಆ ಸದ್ದನ್ನು ತಾವು ಬರೆಯುವ ಭಾಗದಲ್ಲಿ ಹೇಗಾದರೂ ಜಾಣತನದಿಂದ ಉಪಯೋಗಿಸಿಕೊಳ್ಳಬಹುದು.ಕಥೆ ಮುಗಿಸುವರಿಗೆ ಈ ಪ್ರಶ್ನೆ ಬರೋದಿಲ್ಲ.

ಇಷ್ಟು ಸಾಕಿದ್ರೆ ಇನ್ನು ಕತೆಯ ಆರಂಭ ನಾನು ಮಾಡಿಬಿಡುವೆ -ಯಾಕಂದ್ರೆ ನನಗೆ ಚೆನ್ನಾಗಿ ಕಥೆ ಗಥೆ ಬರೆಯೋಕೆ ಬರಲ್ಲ. ಸಂಪದದಲ್ಲಿ ಒಳ್ಳೊಳ್ಳೆ ಕಥೆಗಾರರಿದಾರಲ್ಲ - ಅವರು ಇದಕ್ಕೆ ಒಳ್ಳೇ ಗತಿ ಕಾಣಿಸ್ತಾರೆ ಅನ್ನೋದು ನನಗೆ ಖಾತ್ರಿ.

ಇಲ್ಲಿಗೆ ಪೀಠಿಕೆ ಸಾಕು. ಕತೆ ಕೇಳೋಣ ಮತ್ತೆ.

*************************************************************************************

*************************************************************************************

ಹೊರಗಡೆ ಧೋ ಅಂತ ಮಳೆ ಸುರಿಯುತ್ತಿದೆ. ಗಡಿಯಾರ ನೋಡಿದಳು ಮಾಧವಿ. ಆಗಲೇ ಎಂಟೂವರೆ ಆಗುತ್ತಾ ಬಂದಿದೆ. ಸಂಜೆ ಕುರುಕಲು ತಿಂಡಿ ಒಂದಷ್ಟು ತಿಂದಿದ್ದರಿಂದ ಊಟ ಮಾಡೋದಕ್ಕೆ ಮನಸ್ಸಿಲ್ಲ. ಎರಡು ವಾರದಿಂದ ಒಬ್ಬಳೇ ಇದ್ದು ಬೇಜಾರಾಗಿ ಹೋಗಿದೆ. ತಿಂಗಳಲ್ಲಿ ಅರ್ಧವೆಲ್ಲ ಪರಊರೋ ಪರದೇಶವೋ ಎಲ್ಲಿ ಎಂದರಲ್ಲಿ ಕೆಲಸ ಎಂದು ತಿರುಗೋ ಗಂಡ. ಮದುವೆಯಾಗೋಕೆ ಮುಂಚೆ ಜೋಯಿಸರು ಒಂದು ಸಲ ಇವಳನ್ನು ನೋಡಿ "ನಿನ್ನ ಕಾಲಲ್ಲಿ ಚಕ್ರ ಇದೆ. ದೇಶಾಂತರ ಪ್ರಯಾಣ ಮಾಡೋದು ಬರೆದಿದೆ ನಿನ್ನ ಹಣೇಲಿ" ಅಂದಿದ್ದರು. ಆದರೆ ಹಾಗೇನೂ ಆಗಲಿಲ್ಲ. ಹೋದಕಡೆಗೆಲ್ಲ ಸುರೇಶ ಒಬ್ಬನೇ ಹೋಗುವುದೇ ರೂಢಿ. ಮೊದಮೊದಲು ಇವಳೂ ಒಮ್ಮೆಮ್ಮೆ ಅವನ ಜೊತೆ ಹೋಗುತ್ತಿದ್ದರೂ, ಮಕ್ಕಳ ಜವಾಬ್ದಾರಿ ಹೆಚ್ಚಿದ ಮೇಲೆ ಹಾಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದಳು.

ಮಕ್ಕಳಾದರೂ ಈಗ ಊರಲ್ಲಿ ಇದ್ದರೆ ಈ ಸಲ ಇಷ್ಟು ಬೇಜಾರಾಗುತ್ತಿರಲಿಲ್ಲ.  ಆದರೆ ಈ ಸಲ ಅವರೂ ಇಲ್ಲ! ತಾನು ಒಬ್ಬಳೇ ಇದ್ದದ್ದು ಯಾವತ್ತೂ ಇಲ್ಲ ಅಂತಿಲ್ಲವಾದರೂ ಇದೇ ಎರಡುವಾರ ಪೂರ್ತಿ ಹೀಗಿದ್ದಿದ್ದು ಅನ್ನುವುದು ಅವಳ ಹೊಳವಿಗೆ ಬಂತು. ತಕ್ಷಣ ತನ್ನ ಸಂಗೀತದ ಮೇಷ್ಟರ ನೆನಪಾಯಿತು. ಸಂಗೀತ ಬರುವವರಿಗೆ ಮತ್ತೆ ಪುಸ್ತಕ ಓದೋ ಆಸಕ್ತಿ ಇರುವವರಿಗೆ ಯಾವತ್ತೂ ಯಾವ ಕಾರಣಕ್ಕೂ ಬೇಸರ ಆಗೋದಿಲ್ಲ ಅಂತ ಅವರು ಹೇಳ್ತಿದ್ದರಲ್ಲ! ಸರಿ ಒಂದು ನಾಕು ಭಾವಗೀತೆಗಳನ್ನಾದರೂ ಹಾಡಿಕೊಳ್ಳಬಹುದು ಅಂತ ತಂಬೂರಿ ಶ್ರುತಿ ಮಾಡಿಕೊಂಡಳು. ಅದ್ಯಾಕೋ ತಂಬೂರಿಯನ್ನು ನುಡಿಸುತ್ತಿದ್ದ ಹಾಗೇ ನಾಂದಿ ಚಿತ್ರದಲ್ಲಿ ಕಲ್ಪನಾ ಹಾಗೇ ತಂಬೂರಿ ನುಡಿಸಿಕೊಳ್ಳುತ್ತ  ’ಉಡುಗೊರೆಯೊಂದ ತಂದ’ ಅಂತ ಹೇಳುವ ಹಾಡು ಮನಸ್ಸಿಗೆ ಬಂದು ಅದನ್ನೇ ಮೊದಲು ಹಾಡಿದಳು. ಎಷ್ಟೋ ವರ್ಷದ ಹಿಂದೆ ಕಾಲೇಜಿನಲ್ಲಿದ್ದಾಗ ಅವಳು ವೇದಿಕೆಯ ಮೇಲೆ ಈ ಹಾಡನ್ನು ಹಾಡುತ್ತಿದ್ದಾಗ ಕಾಲೇಜಿನ ಹುಡುಗರ ಕಣ್ಣೆಲ್ಲ ಅವಳ ಮೇಲೇ ನೆಟ್ಟಿರುತ್ತಿದ್ದಿದ್ದು ನೆನಪಾಗಿ ಒಂದು ಕ್ಷಣ ಮನಸ್ಸು ಹಗುರಾಯಿತು.

ಮತ್ತೆ ಮುಂದೆ ಯಾವ ಹಾಡು ಹಾಡಲೆಂದು ಸಂಗೀತ ಪಸ್ತಕದ ಪುಟಗಳನ್ನು ಸರಿಸಿದಳು ಮಾಧವಿ.’ಮಲಗೋ ಮಲಗೆನ್ನ ಮರಿಯೇ’ ಅನ್ನುವ ಹಾಡು ಕಂಡಿತು. ಅಯ್ಯೋ ಪಾಪ ಈ ಹಾಡನ್ನು ಹಾಡುತ್ತಿದ್ದ ಸುಲೋಚನಾ ಹೋಗಿಬಿಟ್ಟರಲ್ಲ ಈಗ ತಾನೇ ಕೆಲವು ದಿನಗಳ ಹಿಂದೆ ಅಂದುಕೊಂಡಳು. ಮುಂದಿನ ಪುಟದಲ್ಲಿದ್ದುದ್ದೂ ಸುಲೋಚನಾ ಹಾಡುತ್ತಿದ್ದ ಹಾಡೇ.

ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ

ಈ ಹಾಡನ್ನು ಒಂದು ಸಲ ಕಾಲೇಜಿನಲ್ಲಿ ಹಾಡಿದಾಗ  ಯಾರೋ ಒಬ್ಬ ಒಂದು ಕಾಗದದುಂಡೆಯನ್ನು ಇವಳ ಕಡೆಗೆ ಎಸೆದಿದ್ದ. ಕಾರ್ಯಕ್ರಮ ನಡೆಯುತ್ತಿದ್ದ ಆಡಿಟೋರಿಯಮ್ ನಲ್ಲಿ ಬೆಳಕಿರಲಿಲ್ಲವಾಗಿ, ಯಾರು ಅಂತ ಅವಳಿಗೆ ಗೊತ್ತಾಗಿರಲಿಲ್ಲ. ಹೆದರಿ ಹೋಗಿದ್ದಳು ಅವಳು.

ಆಮೇಲೆ ಆ ಕಾಗದದುಂಡೆಯನ್ನು ಬಿಚ್ಚಿನೋಡಿದರೆ, ಅದಲ್ಲಿ ಹೀಗೆ ಬರೆದಿತ್ತು.

ನಾನಾಗಬಹುದೇ ನಿನ್ನ ಗಂಡ?
ಆಣೆಯಿಡಲೇ? ನಾನಲ್ಲ ಪುಂಡ!

ಹಳೆಯ ನೆನಪುಗಳು ಯಾಕೆ ಹೀಗೆ ಕಾಡುತ್ತಿವೆಯಲ್ಲ ಎನ್ನಿಸಿತು ಮಾಧವಿಗೆ.

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ ರಾಡಿಗೊಳಿಸದಿರು ಮತ್ತೆ ಮಧುರ ನೆನಪೇ

ಪಲ್ಲವಿಯನ್ನೇ ಮತ್ತೆ ಮತ್ತೆ ಹಾಡಿಕೊಳ್ಳುತ್ತಿದ್ದಂತೆ, ಹೊರಗೆ ಬಾಗಿಲಿನ ಕರೆಗಂಟೆ ಡಿಂಗ್ ಡಾಂಗ್ ಎಂದು ಬಾರಿಸಿದ್ದು ಮಾಧವಿಗೆ ಕೇಳಿಸಿತು....

*******

*******

ಮೊದಲ ಟಿಪ್ಪಣಿ ಕಾರರು ಇನ್ನು ಕಥೆಯನ್ನು ಮುಂದುವರೆಸುವರು ......